‘ಖೀರ್ ಭವಾನಿ’– ಹಾಲುಮತದ ಮೂಲಮಾತೆ ಪಾರ್ವತಿಯೆ ?–ಮುಕ್ಕಣ್ಣ ಕರಿಗಾರ

ವಿಚಾರ

‘ಖೀರ್ ಭವಾನಿ’– ಹಾಲುಮತದ ಮೂಲಮಾತೆ ಪಾರ್ವತಿಯೆ ?

ಮುಕ್ಕಣ್ಣ ಕರಿಗಾರ

ಇಂದು ( ಜೂನ್ 08 ಬುಧವಾರ) ಕಾಶ್ಮೀರದ ಗಂಧರಬಾಲ್ ಜಿಲ್ಲೆಯಲ್ಲಿ ಪ್ರಸಿದ್ಧ ‘ ಖೀರ್ ಭವಾನಿ ಮೇಳ’ ನಡೆಯಲಿದೆ.ಜಮ್ಮು ಕಾಶ್ಮೀರದ ಶ್ರೀನಗರದ ಈಶಾನ್ಯಕ್ಕೆ 25 ಕಿಲೋಮೀಟರ್ ಗಳ ದೂರದಲ್ಲಿರುವ ತುಲಮೂಲ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ‘ಖೀರಭವಾನಿ’ ಮಂದಿರವಿದೆ.ಕಾಶ್ಮೀರಿ ಪಂಡಿತರು ಪ್ರತಿವರ್ಷ ಇಲ್ಲಿ ನಡೆಯುವ ಖೀರಭವಾನಿ ಮೇಳದಲ್ಲಿ ‘ ಕ್ಷೀರಭವಾನಿ ಮಾತೆ’ ಯನ್ನು ತಮ್ಮ ರಕ್ಷಕಳಾದ ದುರ್ಗಾದೇವಿ ಎಂದು ಪೂಜಿಸುತ್ತಾರೆ. ‘ ಖೀರ್ ಭವಾನಿ’ ಕ್ಷೇತ್ರವು ಹಾಲುಮತದ ಮೂಲಮಾತೆಯಾದ ಪಾರ್ವತಿಯ ಮಂದಿರವಿರಬಹುದು. ಆ ಬಗ್ಗೆ ಸಂಶೋಧನಾಸಕ್ತರು ಅಧ್ಯಯನ ನಡೆಸಲಿ ಎನ್ನುವ ಕಾರಣದಿಂದ ನಾನು ಈ ಲೇಖನ ಬರೆಯುತ್ತಿದ್ದೇನೆ.

‘ ಖೀರ್ ಭವಾನಿ’ ಯ ಮೂಲರೂಪ ‘ ಕ್ಷೀರಭವಾನಿ’.ಹಾಲಮ್ಮ,ಹಾಲಾಂಬಾ ಎನ್ನುವ ಪರ್ಯಾಯನಾಮಗಳದೇವಿ.ಹಾಲಮ್ಮ ಎನ್ನುವ ದೇವಿಯ ದೇಶೀಯ ಹೆಸರು ಸಂಸ್ಕೃತೀಕರಣಗೊಳ್ಳುತ್ತ ಹಾಲಾಂಬಾ- ಕ್ಷೀರಾಂಬಾ-ಕ್ಷೀರಭವಾನಿ ರೂಪತಳೆದಿದೆ.’ ‘ಕ್ಷೀರಭವಾನಿಯ’ ಅಪಭ್ರಂಶರೂಪವೇ ‘ ಖೀರ್ ಭವಾನಿ’. ‘ಭವಾನಿ’ ಎಂದರೆ ರಕ್ಷಕದೇವಿಯಾದ ದುರ್ಗೆ.ಎದೆಯಲ್ಲಿ ಹಾಲುಳ್ಳವಳು ಕ್ಷೀರಭವಾನಿ.ಕುರುಬರ ಹಾಲುಮತ ಪುರಾಣ ಮತ್ತು ಇತರ ಜನಪದ ಕಾವ್ಯ,ಕಥೆಗಳಂತೆ ಕುರುಬರು ಪಾರ್ವತಿಯ ಎದೆಹಾಲಿನಿಂದ ಹುಟ್ಟಿದವರಾದ್ದರಿಂದ ಕುರುಬರ ಮತವು ಹಾಲುಮತವು.ಶಿವ ಪಾರ್ವತಿಯರೊಮ್ಮೆ ಭೂ ಪರ್ಯಟನೆಗೆ ಬಂದ ಸಂದರ್ಭದಲ್ಲಿ ಗೊಂಡಾರಣ್ಯದಲ್ಲಿ ಕೆಲಕಾಲ ವಿರಮಿಸುತ್ತಾರೆ.ಅಲ್ಲಿ ಇದ್ದಕ್ಕಿದ್ದಂತೆ ಪಾರ್ವತಿಯ ಎದೆಯಿಂದ ಹಾಲು ಉಕ್ಕಿ ನೆಲದ ಮೇಲೆ ಬೀಳುತ್ತದೆ.ದೇವಿ ಪಾರ್ವತಿಯ ಎದೆಯಿಂದ ಉಕ್ಕಿದ ಹಾಲು ವ್ಯರ್ಥವಾಗಬಾರದೆಂದು ಶಿವನು ಪಾರ್ವತಿಯ ಎದೆಹಾಲು ಬಿದ್ದ ಮಣ್ಣನ್ನು ಕಲಿಸಿ ಎರಡು ಮಣ್ಣಿನ ಬೊಂಬೆಗಳನ್ನು ಮಾಡುತ್ತಾನೆ.ಅದರಲ್ಲಿ ಒಂದು ಹೆಣ್ಣಿನ ಬೊಂಬೆಯಾದರೆ ಮತ್ತೊಂದು ಗಂಡು ಬೊಂಬೆ.ಆ ಮಣ್ಣಿನ ಗೊಂಬೆಗಳಿಗೆ ಜೀವತುಂಬುತ್ತಾನೆ ಶಿವ.ಎರಡು ಶಿಶುಗಳು ಅಳಲಾರಂಭಿಸಿ,ಬೆಳೆಯತೊಡಗುವವು.’ಅಳುವ ಮಕ್ಕಳಿಗೆ ಹೆಸರಿಡಿ’ ಎಂದು ಪಾರ್ವತಿಯು ಬೆಸಗೊಳ್ಳೆ ಇವರಿಬ್ಬರು ಪಾರ್ವತಿಯ ಎದೆಹಾಲಿನಿಂದ ಅಂದರೆ ದೇವಿಯ ಮಾತೃವಾತ್ಸಲ್ಯದ ಪ್ರತೀಕವಾದ ಎದೆಯ ಹಾಲಿನಿಂದ ಹುಟ್ಟಿದ ಪ್ರೀತಿಯ ಮಕ್ಕಳಾದ್ದರಿಂದ ಗಂಡುಶಿಶುವನ್ನು ‘ ಮುದ್ದುಗೊಂಡ’ ಎಂದು ಹೆಣ್ಣುಶಿಶುವನ್ನು ‘ ಮುದ್ದವ್ವೆ’ ಎಂದು ಹೆಸರಿಟ್ಟು ಕರೆಯುವನು ಶಿವ.ಶಿವಪಾರ್ವತಿಯರ ಪ್ರೀತಿ,ಇಲ್ಲವೆ ಮುದ್ದನ್ನು ಗಳಿಸಿದವನು,ಕೊಂಡವನು ‘ ಮುದ್ದುಗೊಂಡ’ ನಾದರೆ ಶಿವಪಾರ್ವತಿಯರ ಮುದ್ದಿನ ಮಗಳೇ ‘ ಮುದ್ದವ್ವ’. ಮುದ್ದುಗೊಂಡ ಮುದ್ದವ್ವೆಯರೇ ಹಾಲುಮತದ ಮೂಲಪುರುಷ ಮತ್ತು ಆದಿಮಾತೆಯಾಗಿದ್ದು ಅವರಿಬ್ಬರಿಂದ ಕುರುಬ ಜನಾಂಗವು ವಿಕಸನಗೊಂಡಿತು ಎನ್ನುವುದು ಕುರುಬರ ನಂಬಿಕೆ.ಕುರುಬರು ಮೂಲತಃ ಬುಡಕಟ್ಟು ಜನಾಂಗವಾಗಿದ್ದು ದಕ್ಷಿಣಭಾರತದಲ್ಲಿ ಗೊಂಡಾರಣ್ಯವು ಅವರ ನೆಲೆಯಾಗಿತ್ತು.ಗೊಂಡಾರಣ್ಯವಾಸಿಗಳಾದ ಕುರುಬರನ್ನು ‘ ಗೊಂಡರು’ ಎಂದುಕರೆಯುತ್ತಾರೆ.ಕುರುಬರಲ್ಲಿ ‘ಗೊಂಡರು’ ಪರಿಶಿಷ್ಟವರ್ಗದ ಪಟ್ಟಿಯಲ್ಲಿರುವುದು ಅವರು ಮೂಲತಃ ಬುಡಕಟ್ಟು ಜನಾಂಗ,ಅರಣ್ಯವಾಸಿಗಳಾಗಿದ್ದ ಆದಿವಾಸಿಗಳು ಎನ್ನುವುದನ್ನು ಸೂಚಿಸುತ್ತದೆ.

ಭಾರತದ ಮೂಲನಿವಾಸಿಗಳಾದ ಕುರುಬರು ಅಖಂಡ ಭಾರತವ್ಯಾಪಿಯಾಗಿ ನೆಲೆಸಿದ್ದ ಅತ್ಯಂತ ಪ್ರಾಚೀನ ಇತಿಹಾಸ,ಪರಂಪರೆಗಳುಳ್ಳ ಜನಾಂಗ.ದಕ್ಷಿಣದಲ್ಲಿ ಗೊಂಡಾರಣ್ಯವು ಕುರುಬರ ನೆಲೆಯಾಗಿದ್ದರೆ ಉತ್ತರದಲ್ಲಿ ನೇಪಾಳವು ಕುರುಬರ ಮೂಲನೆಲೆ.ನೇಪಾಳದ ಪಶುಪತಿ ನಾಥ ಮೂಲತಃ ಗೊರವಕುರುಬ ದೇವರು. ಸಿಂಧು ನಾಗರಿಕತೆಯಲ್ಲಿ ದೊರೆತ ಪಶುಪತಿ ಶಿವನ ವಿಗ್ರಹವು ಟಗರುತಲೆಯ ಶಿವ ಮತ್ತು ಅವನ ಸುತ್ತ ಕುರಿಗಳು ಇರುವ ಕುರುಹುಗಳುಳ್ಳ ವಿಗ್ರಹವಾಗಿರುವುದರಿಂದ ಭಾರತದ ಮೂಲಧರ್ಮವು ಶೈವಧರ್ಮವಾಗಿದ್ದು ಕುರುಬರು ಭಾರತದ ಮೂಲನಿವಾಸಿಗಳು ಎನ್ನುವ ಐತಿಹಾಸಿಕ ಸತ್ಯವನ್ನು ಸಾರುತ್ತದೆ.ಶಿವೋಪಾಸಕರಾದ ಕುರುಬರು ಪಶುಪತಿಯ ರೂಪದಲ್ಲಿ ಶಿವನನ್ನು ಪೂಜಿಸುತ್ತಿದ್ದರು.ನಂತರ ಆಹಾರಾನ್ವೇಷಣೆಗಾಗಿ ಕಾಶ್ಮೀರಕೊಳ್ಳ,ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಕುರುಬರು ತಮ್ಮ ನೆಲೆಕಂಡುಕೊಂಡರು.ಪಾಶುಪತ ಶೈವವೆಂದರೆ ಕುರುಬರ ಹಾಲುಮತವೆ ! ಪಶು,ಪಾಶ,ಪತಿ ಎನ್ನುವ ತತ್ತ್ವತ್ರಯಗಳ ಸಂಗಮವೇ ‘ ಪಾಶುಪತಶೈವ’. ಕುರಿಯು ಪಶುವಾದರೆ ಕುರಿಯ ಹಟ್ಟಿ ಇಲ್ಲವೆ ಬಲೆಯು ಪಾಶ. ಕುರಿಗಳನ್ನು ಕಾಯುವ ರಕ್ಷಕನಾದ ಕುರುಬನು ಪತಿ ತತ್ತ್ವದ ಪ್ರತಿನಿಧಿ.ಶಿವನು ಪ್ರಪಂಚದಲ್ಲಿ ಮೊದಲು ಪ್ರಕಟಗೊಂಡಿದ್ದು ಕುರಿಕಾಯುವ ಕುರುಬನ ರೂಪದಲ್ಲಿ.ಆದಿಕುರುಬನ ರೂಪವೇ ಬೆಳೆದು ಗೊರವನ ರೂಪವಾಯಿತು. ಜೀವ, ಜಗತ್ತು ಮತ್ತು ಶಿವತತ್ತ್ವಗಳೇ ಪಾಶುಪತಶೈವ,ಹಾಲುಮತಕುರುಬರ ಶೈವಮತ.ಕುರಿಯು ಜೀವರುಗಳನ್ನು ಪ್ರತಿನಿಧಿಸಿದರೆ ಶಿವನು ಪತಿತತ್ತ್ವದ ಪ್ರತೀಕ.ಕುರಿಕಾಯುವ ಕುರುಬನು ಹಟ್ಟಿ ಇಲ್ಲವೆ ಪಾಶದ ರಕ್ಷಕ ತತ್ತ್ವದ ಪ್ರತಿನಿಧಿ.

ಋಗ್ವೇದದಲ್ಲಿ ಕುರುಬರ ಉಲ್ಲೇಖಗಳಿವೆ,ಐತಿಹ್ಯಗಳಿವೆ.ಋಗ್ವೇದದ ಊರ್ವಸಿಯ ವಂಶಸ್ಥರು ಕುರಿಗಾಹಿಗಳಾಗಿದ್ದರು.ಆಡಿನ ಮರಿಯೊಂದನ್ನು ಕದ್ದ ಕಾರಣದಿಂದ ವೈರತ್ವ ಘಟಿಸಿ,ಯುದ್ಧಸಂಭವಿಸುವ ಪ್ರಸಂಗ ಒಂದು ಋಗ್ವೇದದಲ್ಲಿದೆ.ಋಗ್ವೇದದ ದಸ್ಯುಗಳು ಪಶುಪಾಲಕರಾದ ಕುರುಬರು.ಋಗ್ವೇದವು ಗಂಗಾನದಿ ತೀರದ ಮೂಲನಿವಾಸಿಗಳ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದ್ದು ಅದರಲ್ಲಿ ಕುರುಬರು ಭಾರತದ ಮೂಲನಿವಾಸಿಗಳಾದ ಆದಿವಾಸಿಗಳು ಎನ್ನುವ ಉಲ್ಲೇಖಗಳಿವೆ.

ಕ್ಷೀರಭವಾನಿ ಮಂದಿರ ಇರುವ ತುಲಮೂಲವು ಗಂದೇರಬಾಲ್ ಜಿಲ್ಲೆಯಲ್ಲಿದೆ.ಈ ಗಂದೇರಬಾಲವು ಗೊಂಡರನಿವಾಸವೆ.ಪಾರ್ವತಿ- ಪರಮೇಶ್ವರರು ಮೊದಲು ಇಲ್ಲಿಯೇ ಇಳಿದಿರಬೇಕು,ಪಾರ್ವತಿಯ ಎದೆಹಾಲಿನಿಂದ ಹುಟ್ಟಿದ ಕುರುಬರ ಮೂಲ ನೆಲೆ ಇದೇ ಕ್ಷೀರಭವಾನಿ ಕ್ಷೇತ್ರವಾಗಿರಬಹುದು.ಕ್ಷೀರಭವಾನಿ ದೇವಿಗೆ ಹಾಲು ಅನ್ನದ ನೈವೇದ್ಯ ಸಮರ್ಪಿಸಲಾಗುತ್ತದೆ.ಕುರಿಕಾಯುವವರು ತಮ್ಮ ಬುತ್ತಿ ನುಚ್ಚನ್ನ ಮತ್ತು ಹಾಲನ್ನು ಮೊದಲು ಪಾರ್ವತಿಗೆ ಅರ್ಪಿಸಿ, ಸೇವಿಸುತ್ತಾರೆ.ಈ ಸಂಪ್ರದಾಯವೇ ಖೀರ್ ಭವಾನಿ ಮಂದಿರದ ದೇವಿ ನೈವೇದ್ಯ ಹಾಲು ಅನ್ನ ಸಮರ್ಪಣೆಯ ಮೂಲ,ಹಿನ್ನೆಲೆ.

ಈ ಬಗ್ಗೆ ಅಧ್ಯಯನ ಕೈಗೊಂಡರೆ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.ಆಸಕ್ತರು ಆ ನಿಟ್ಟಿನಲ್ಲಿ ಪ್ರಯತ್ನಿಸಲಿ ಎನ್ನುವುದು ಈ ಲೇಖನದ ಆಶಯ.

About The Author