ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೭–ಜೀವನವು ದಿವ್ಯಶಕ್ತಿಯ ನಿರಂತರ ಪ್ರೇರಣೆಯಿಂದ ಬೆರೆತಿದೆ–ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೭

ಜೀವನವು ದಿವ್ಯಶಕ್ತಿಯ ನಿರಂತರ ಪ್ರೇರಣೆಯಿಂದ ಬೆರೆತಿದೆ”

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಮರ್ತ್ಯದ ಮಾನವರ ಬಾಳು ಪಾವನವಾದುದು,ಪವಿತ್ರವಾದುದು ಎನ್ನುತ್ತಿದ್ದರು.ಪ್ರಾಣಿ- ಪಕ್ಷಿಗಳಿಗೆ ಇಲ್ಲದ ವಿಶೇಷ ಒಂದು ಮನುಷ್ಯರಿಗೆ ಭಗವಂತನು ಕೊಡುಗೆ ನೀಡಿದ್ದಾನೆ.ಆ ಕೊಡುಗೆಯೇ ಪರಮಾತ್ಮನ ಸಂಕಲ್ಪವನ್ನರಿಯುವ ಸಿದ್ಧಿ,ಪರಮಾತ್ಮನ ಸಂದೇಶವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ.ಪರಮಾತ್ಮನ ದಿವ್ಯಶಕ್ತಿಯ ಅನುಭವವನ್ನು ಯೋಗಿಗಳು,ಸಾಧಕರು ಅನುಭವಿಸಬಲ್ಲರು.ಅದನ್ನು ಗುರುದೇವರ ಮಾತಿನಲ್ಲಿಯೇ ಕೇಳೋಣ–” ಜೀವನವು ದಿವ್ಯಶಕ್ತಿಯ ನಿರಂತರ ಪ್ರೇರಣೆಯಿಂದ ಬೆರೆತಿದೆ”.

ಪರಮಾತ್ಮನು ಮನುಷ್ಯರ ಜೀವನದಲ್ಲಿ ನೆರವಾಗಲು ತನ್ನ ದಿವ್ಯಶಕ್ತಿಯನ್ನು ನಿಯೋಜಿಸಿದ್ದಾನೆ.ನಾವು ಪರಮಾತ್ಮನನ್ನು ಪ್ರಾರ್ಥಿಸುವ ಮೂಲಕ ನಮ್ಮ ಬದುಕಿನಲ್ಲಿ ಬಂದೊದಗಿದ ಕಷ್ಟಗಳನ್ನು ಪರಿಹರಿಸಿಕೊಂಡು ಇಷ್ಟಾರ್ಥಸಿದ್ಧಿಯನ್ನು ಪಡೆಯಬಹುದು.ದೇವಸ್ಥಾನಗಳಲ್ಲಿ ಇಲ್ಲವೆ ಏಕಾಂತ ಸ್ಥಾನದಲ್ಲಿ ನಾವು ಮಾಡುವ ಪ್ರಾರ್ಥನೆಯು ಪರಮಾತ್ಮನನ್ನು ತಲುಪುತ್ತದೆ.ಪ್ರಕೃತಿಯಲ್ಲಿ ಪರಮಾತ್ಮನ ದಿವ್ಯಶಕ್ತಿ ತರಂಗಗಳಿವೆ.ಪರಮಾತ್ಮನು ಆ ದಿವ್ಯ ಶಕ್ತಿ ತರಂಗಗಳ ಮಾಧ್ಯಮದ ಮೂಲಕ ಭಕ್ತರ ಭಾವನೆಗಳನ್ನು ಅರ್ಥಮಾಡಿಕೊಂಡು ಸ್ಪಂದಿಸುತ್ತಾನೆ.ಈ ಸ್ಪಂದನವೇ ಶಿವಕಾರುಣ್ಯ ಇಲ್ಲವೆ ಪರಮಾತ್ಮನ ಅನುಗ್ರಹ.

ಸಿದ್ಧರು (Adepts) ಪರಮಾತ್ಮನ ಸಂಕಲ್ಪವನ್ನು ಅರಿಯಬಲ್ಲರು.ಅಲ್ಲದೆ ಸಿದ್ಧರು ಪರಮಾತ್ಮನ ಸೃಷ್ಟಿಯಲ್ಲಿ ತಮಗಿಷ್ಟ ಬಂದ ಕಾರ್ಯವನ್ನು ಸಾಧಿಸಬಲ್ಲರು.ಸಿದ್ಧರು ಪರಮಾತ್ಮನ ವಿಶ್ವನಿಯಾಮಕ ಸೂತ್ರಗಳನ್ನು ಅರಿತುಕೊಳ್ಳುತ್ತಾರೆ,ಪರಮಾತ್ಮನೊಂದಿಗೆ ಸಂಭಾಷಿಸುತ್ತಾರೆ.ಸಾಮಾನ್ಯ ಸಾಧಕರಿಗೆ ಇದು ಸಾಧ್ಯವಿಲ್ಲವಾದರೂ ಯೋಗಸಾಮರ್ಥ್ಯದ ಬಲದಿಂದ ಅಂತಃಸ್ಫುರಣೆ ( Intution )ಯ ಮೂಲಕ ಪರಮಾತ್ಮನ ಸಂದೇಶವನ್ನು ಆಲಿಸುತ್ತಾರೆ.ಕವಿಗಳಲ್ಲಿ ಸ್ಫೂರ್ತಿಯಾಗಿ ತೋರುವ ಭಾವನಾ ವಿಶೇಷವೇ ಯೋಗಿಗಳ ಅಂತಃಸ್ಫುರಣ.ಸ್ಫೂರ್ತಿಯು ಬೌದ್ಧಿಕ ನೆಲೆಯಲ್ಲಿ ಅನುಭವಿಸುವ ಸ್ಥಿತಿಯಾದರೆ ಅಂತಃಸ್ಫುರಣವು ಅಂತರಂಗದ ಆಳದಲ್ಲಿ ಸ್ಫುರಣಗೊಳ್ಳುವ ಭಾವನಾ ವಿಶೇಷವು.ಅಂತರಾತ್ಮನ ಭಾಷೆಯೇ ಅಂತಃಸ್ಫುರಣವು.ಯೋಗಿ ಏನು ಮಾಡಬೇಕು,ಎತ್ತ ನಡೆಯಬೇಕು ಎನ್ನುವುದನ್ನು ಅಂತಃಸ್ಫುರಣವು ನಿರ್ದೇಶಿಸುತ್ತದೆ.

ಪ್ರಪಂಚದಲ್ಲಿ ಪರಮಾತ್ಮನ ಶಕ್ತಿತರಂಗಗಳು ಮತ್ತು ಶಕ್ತಿಕಣಗಳು ವ್ಯಾಪಿಸಿದ್ದು ಅವು ನಿರಂತರವಾಗಿ ಸಂಚರಿಸುತ್ತ ಜಗದ ಆಗು- ಹೋಗುಗಳನ್ನು ನಿರ್ದೇಶಿಸುತ್ತವೆ,ನಿರ್ಧರಿಸುತ್ತವೆ.ಸೂರ್ಯನ ಕಿರಣಗಳಲ್ಲಿ ಪರಮಾತ್ಮನ ಶಕ್ತಿತರಂಗಗಳಿವೆ,ಗಾಳಿಯಲ್ಲಿ ಪರಮಾತ್ಮನ ಶಕ್ತಿತರಂಗಗಳಿವೆ,ನೀರಿನಲ್ಲಿ ಪರಮಾತ್ಮನ ಶಕ್ತಿ ತರಂಗಗಳಿವೆ.ಆರ್ತರಾಗಿ ಪ್ರಾರ್ಥಿಸುವ ಮೂಲಕ ನಾವು ಈ ದಿವ್ಯಸ್ಪಂದನಕಾರಿ ಶಕ್ತಿತರಂಗಗಳ ನರೆವು,ಮಾರ್ಗದರ್ಶನ ಪಡೆಯಬಹುದು.ಒಮ್ಮೊಮ್ಮೆ ನಮ್ಮ ಬಾಳಿನಲ್ಲಿ ತೀರ ಅನಿರೀಕ್ಷಿತವಾದ ನೆರವು ಲಭಿಸುವುದುಂಟು.ಕೆಲವೊಮ್ಮೆ ನಮ್ಮ ಬಯಕೆಗಳು ಆಶ್ವರ್ಯಕರವಾಗಿ ಕೈಗೂಡುವುದುಂಟು.ನಮ್ಮ ಆಸೆ,ಆಕಾಂಕ್ಷೆ,ಭಾವನೆಗಳು ತೀವ್ರವಾಗಿದ್ದಾಗ ಅವು ಪರಮಾತ್ಮನ ದಿವ್ಯಶಕ್ತಿಯ ಪ್ರಭಾವಲಯಕ್ಕೆ ಅಪ್ಪಳಿಸಿ ತಮ್ಮ ಕಾರ್ಯಸಾಧಿಸುತ್ತವೆ.ಪರಮಾತ್ಮನ ಶಕ್ತಿತರಂಗಗಳು ಪ್ರಕೃತಿನಿಯಮಕ್ಕನುಗುಣವಾಗಿ ಜೀವರುಗಳನ್ನು ಪ್ರೇರಣೆಗೊಳಿಸಿ ಅವರುಗಳಿಂದ ಆಯಾಕಾಲಕ್ಕೆ ಆಗಬೇಕಾದ ಕಾರ್ಯಗಳನ್ನು ಮಾಡಿಸುತ್ತವೆ.ಪರಮಾತ್ಮನು ಪ್ರಪಂಚ ವ್ಯವಹಾರದಲ್ಲಿ ನಿರ್ಲಿಪ್ತನಿದ್ದರೂ ತನ್ನ ದಿವ್ಯಶಕ್ತಿಯ ಸ್ಪಂದನದ ಮೂಲಕ ಪ್ರಪಂಚವ್ಯವಹಾರವನ್ನು ನಿರ್ವಹಿಸುವನು.ಜೀವರುಗಳು ಸ್ಫೂರ್ತಿ,ಪ್ರೇರಣೆ,ಕನಸು- ಸಂದೇಶಗಳ ಮೂಲಕ ಪರಮಾತ್ಮನ ಅನುಗ್ರಹವನ್ನು ಪಡೆಯುತ್ತಾರೆ.ವಿದ್ಯುತ್ ಕಂಬದ ಲೈನ್ ಗಳ ಮೂಲಕ ವಿದ್ಯುತ್ ಶಕ್ತಿಯು ಹಾಯ್ದುಹೋಗುತ್ತಿದ್ದರೂ ಅದು ನಮ್ಮ ಕಣ್ಣಿಗೆ ಕಾಣಿಸದು.ಮನೆ,ಮಠ,ಕಛೇರಿಗಳಲ್ಲಿ ನಾವು ಸ್ವಿಚ್ ಅನ್ನು ಆನ್ ಮಾಡಿ,ಬಟನ್ ಒತ್ತಿದಾಗ ಜಗ್ಗನೆ ಹೊತ್ತಿಕೊಳ್ಳುತ್ತವೆ ವಿದ್ಯುತ್ ದೀಪಗಳು.ಹಾಗೆಯೇ ಪರಮಾತ್ಮನ ದಿವ್ಯ ಶಕ್ತಿತರಂಗಗಳು ಪ್ರಕೃತಿಯಲ್ಲಿ ಪ್ರವಹಿಸುತ್ತಿರುತ್ತವೆ ನಮಗರಿವೆ ಇಲ್ಲದಂತೆ.ನಾವು ಕರೆದಾಗ ನಮ್ಮ ಮೊರೆಕೇಳಿ ನೆರವು ನೀಡುತ್ತವೆ ದಿವ್ಯಶಕ್ತಿ ತರಂಗಗಳು.

About The Author