ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೬–ಅಖಂಡ ಪರಿಪೂರ್ಣನೂ ವಿಶ್ವನಿಯಾಮಕನು ಆಗಿರುವ ಶಿವನು ವಿಶ್ವೇಶ್ವರ ಲೀಲೆಯನ್ನೆಸಗಿಹನು–ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೬

ಅಖಂಡ ಪರಿಪೂರ್ಣನೂ ವಿಶ್ವನಿಯಾಮಕನು ಆಗಿರುವ ಶಿವನು ವಿಶ್ವೇಶ್ವರ ಲೀಲೆಯನ್ನೆಸಗಿಹನು”

ಮುಕ್ಕಣ್ಣ ಕರಿಗಾರ

ಶಿವನು ವಿಶ್ವನಿಯಾಮಕನು,ವಿಶ್ವೇಶ್ವರನು ಎನ್ನುತ್ತಿದ್ದ ಗುರುದೇವಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಶಿವನು ತನ್ನ ದಿವ್ಯನೆನಹು ಎಂದು ಕರೆಯಲ್ಪಡುವ ಚಿತ್ ಶಕ್ತಿಯ ಮೂಲಕ ಪ್ರಪಂಚ ಲೀಲೆಯನ್ನಾಡುವನು ಎಂದು ಹೇಳುತ್ತಿದ್ದರು.” ಪರಮಾತ್ಮನಿಗೆ ಪರಿಪೂರ್ಣವೂ ಅಖಂಡವೂ ಆದ ಅರುಹು- ಚಿತ್ ಶಕ್ತಿಯು ಒಂದಿದೆ ; ಈ ವಿಶ್ವವು ಶಿವನ ಅಂಕಿತದಲ್ಲಿ ಶಿವನ ನೆನಹಿಂದ ಶಕ್ತಿಯ ಮುಖಾಂತರ ಹೊರಹೊಮ್ಮುವುದು”

ಪರಮಾತ್ಮನು ವಿಶ್ವನಿಯಾಮಕನಿರುವನು.ಪರಶಿವನ ಸಂಕಲ್ಪದಂತೆ ಸೃಷ್ಟಿಯು ಹೊರಹೊಮ್ಮಿದರೂ ಪರಶಿವನು ಸೃಷ್ಟಿಯ ಬಗೆಗೆ ನಿರ್ಲಿಪ್ತನಿಹನು; ಸೃಷ್ಟಿಯ ಆಗು- ಹೋಗುಗಳನ್ನು ತನ್ನ ದಿವ್ಯಶಕ್ತಿಯಾದ ಚಿತ್ ಶಕ್ತಿಯ ಮೂಲಕ ನಿರ್ವಹಿಸುತ್ತಿಹನು.ಶಿವನಂತೆಯೇ ಶಿವನ ಚಿತ್ ಶಕ್ತಿಯು ಅಖಂಡವಾದುದು,ಪರಿಪೂರ್ಣವಾದುದು.ಶಿವ ಮತ್ತು ಶಿವನ ಚಿತ್ ಶಕ್ತಿಯಲ್ಲಿ ಭೇದವಿಲ್ಲ.ಶಿವನ ಈ ಚಿತ್ ಶಕ್ತಿಯೇ ಅವನ ಅರ್ಧಾಂಗಿನಿ ಎನ್ನಿಸಿದ ಪಾರ್ವತಿ,ಉಮಾ ಮತ್ತು ದುರ್ಗಾದೇವಿಯಾದಿ ಸಹಸ್ರನಾಮ,ರೂಪಗಳಿಂದ ಪೂಜೆಗೊಳ್ಳುತ್ತಿಹ ಪರಾಶಕ್ತಿ,ಪರಬ್ರಹ್ಮೆ.ಶಿವನು ಪರಬ್ರಹ್ಮನಾದರೆ,ಶಿವನ ಚಿತ್ ಶಕ್ತಿಯು ಪರಬ್ರಹ್ಮೆ; ಶಿವನು ಪರಶಿವನಾದರೆ ಶಿವನ ಚಿತ್ ಶಕ್ತಿಯು ಪರಾಶಕ್ತಿ.ಶಿವನು ಪರಬ್ರಹ್ಮನಾದರೂ ತನ್ನ ಚಿತ್ ಶಕ್ತಿಯ ನೆರವಿಲ್ಲದೆ ಸೃಷ್ಟಿಯ ವ್ಯವಹಾರವನ್ನು ನಡೆಸಲಾರನು.

‌ವಿಶ್ವವು ಶಿವನ ಸಂಕಲ್ಪದಂತೆ ಹೊರಹೊಮ್ಮಿ ,ಶಿವನ ಆಣತಿಯಂತೆ ಕಾರ್ಯಗೈಯುತ್ತಿರುವುದು.ವಿಶ್ವವು ಶಿವನ ಆಧೀನದಲ್ಲಿರುವುದು.ಶಿವನ ದಿವ್ಯ ಶಕ್ತಿಯ ಮೂಲಕ ಹೊರಹೊಮ್ಮಿ,ಶಿವನ ಶಕ್ತಿಯ ಮೂಲಕವು ವಿಶ್ವವು ನಿಯಂತ್ರಿಸಲ್ಪಡುತ್ತಿರುವುದು.ವಿಶ್ವನಿಯಾಮಕನಾದ ಶಿವನು ‘ ವಿಶ್ವೇಶ್ವರ’ ನಾದರೆ ಶಿವನ ಸಂಕಲ್ಪವನ್ನನುಸರಿಸಿ ವಿಶ್ವಲೀಲೆಯನ್ನಾಡುತ್ತಿರುವ ಶಿವನ ಶಕ್ತಿಯು ‘ ವಿಶ್ವೇಶ್ವರಿಯು’. ಇದೇ ಶಿವಸೃಷ್ಟಿಮಹಾತತ್ತ್ವವು ನಮ್ಮ ಮಹಾಶೈವಧರ್ಮಪೀಠದಲ್ಲಿ ಪ್ರಕಟಗೊಂಡಿದೆ.ಮಹಾಶೈವ ಧರ್ಮಪೀಠದ ಶ್ರೀ ಕ್ಷೇತ್ರ ಕೈಲಾಸದಲ್ಲಿ ಪರಶಿವನು ವಿಶ್ವನಿಯಾಮಕನಾದ ‘ ವಿಶ್ವೇಶ್ವರ’ ನಾದರೆ ಪರಶಿವನ ಸಂಕಲ್ಪದಂತೆ ವಿಶ್ವಲೀಲೆಯನ್ನಾಡುತ್ತಿರುವ ಶಿವಶಕ್ತಿಯು ‘ ವಿಶ್ವೇಶ್ವರಿ ದುರ್ಗಾದೇವಿ’ ಯ ರೂಪದಲ್ಲಿ ಪ್ರಕಟಗೊಂಡಿದ್ದಾಳೆ.ಶಿವನು ಪ್ರಪಂಚ ನಿಯಾಮಕನಾಗಿಯೂ ಲೋಕವ್ಯವಹಾರದಲ್ಲಿ ನಿರ್ಲಿಪ್ತನಿರುವುದರಿಂದ ಶಿವನ ಚಿತ್ ಶಕ್ತಿಯಾದ ವಿಶ್ವೇಶ್ವರಿ ದುರ್ಗಾದೇವಿಯು ವಿಶ್ವೇಶ್ವರನ ಸಂಕಲ್ಪವನ್ನನುಸರಿಸಿ,ಜಗತ್ತನ್ನು ನಿಯಂತ್ರಿಸುತ್ತಿದ್ದಾಳೆ,ಜಗತ್ತಿನ ಆಗು- ಹೋಗುಗಳನ್ನು ನಿರ್ಧರಿಸುತ್ತಿದ್ದಾಳೆ.ಶ್ರೀಕ್ಷೇತ್ರಕೈಲಾಸದಲ್ಲಿ ಪರಶಿವನ ವಿಶ್ವನಿಯಾಮಕ ಪರಮೇಶ್ವರ ತತ್ತ್ವವು ಪ್ರಕಟಗೊಂಡಿದೆ.

ಶಿವ ವಿಶ್ವೇಶ್ವರ ತತ್ತ್ವದ ಪ್ರಕಟರೂಪವಾಗಿರುವ ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರನ್ನು ಜಗದಾದಿ ಮೂಲತತ್ತ್ವದ ರೂಪದಲ್ಲಿ ಆರಾಧಿಸಲಾಗುತ್ತದೆ.ಇಲ್ಲಿ ಶಿವನನ್ನು ” ಓಂ ನಮೋ ಭಗವತೇ ವಿಶ್ವೇಶ್ವರಾಯ” ಎನ್ನುವ ಮಂತ್ರದಿಂದಲೂ ದುರ್ಗಾದೇವಿಯನ್ನು ” ಓಂ ನಮೋ ಭಗವತಿ ವಿಶ್ವೇಶ್ವರಿ ದುರ್ಗಾಯೈ” ಎನ್ನುವ ಮಂತ್ರದಿಂದ ಧ್ಯಾನಿಸಲಾಗುತ್ತಿದೆಯಲ್ಲದೆ ಮಹಾಶೈವ ಧರ್ಮಪೀಠವು ಶಿವನು ತನ್ನ ಶಕ್ತಿಯ ಮೂಲಕ ವಿಶ್ವಲೀಲೆಯನ್ನೆಸಗುತ್ತಿಹನು ಎನ್ನುವದರ ಕುರುಹಾಗಿ,ಶಿವಶಕ್ತ್ಯಾದ್ವೈತ ತತ್ತ್ವದ ಮಹಾಮಂತ್ರವಾದ ” ಓಂ ನಮಃ ಶಿವಾಯೈ ಓಂ ನಮಃ ಶಿವಾಯ” ಎನ್ನುವ ಮಂತ್ರದಿಂದ ಪರಶಿವ ಪರಾಶಕ್ತಿಯನ್ನು ಅರ್ಚಿಸಿ,ಆರಾಧಿಸಲಾಗುತ್ತಿದೆ.ಶಿವಪೂರ್ಣಬ್ರಹ್ಮನಿಹನು,ಪರಬ್ರಹ್ಮನಿಹನು,ಶಿವನು ತನ್ನ ಶಕ್ತಿಯಿಂದ ಅಭಿನ್ನನಿಹನು; ಶಿವನನ್ನು ಬಿಟ್ಟು ಶಕ್ತಿಯಿಲ್ಲ,ಶಕ್ತಿಯನ್ನು ಬಿಟ್ಟು ಶಿವನಿಲ್ಲ ಎನ್ನುವ ಶಿವಶಕ್ತ್ಯಾದ್ವೈತದ ಪರಶಿವಲೀಲಾತತ್ತ್ವದ ಪ್ರಕಟರೂಪವೇ ಮಹಾಶೈವ ಧರ್ಮಪೀಠ.

About The Author