ಪಠ್ಯಪುಸ್ತಕಗಳ ವಿವಾದ– ಪ್ರತಿಷ್ಠೆಬೇಡ:ಮುಕ್ಕಣ್ಣ ಕರಿಗಾರ

ನಿಷ್ಠುರವಾಕ್ಕು

ಪಠ್ಯಪುಸ್ತಕಗಳ ವಿವಾದ– ಪ್ರತಿಷ್ಠೆಬೇಡ

ಮುಕ್ಕಣ್ಣ ಕರಿಗಾರ

ಕರ್ನಾಟಕದಲ್ಲಿ ಪಠ್ಯಪುಸ್ತಕಗಳ ವಿವಾದ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆಯಲ್ಲದೆ ಸುಸೂತ್ರವಾಗಿ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಿತರಾಗಿದ್ದಾರೆ.ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ದೂರಮಾಡಬೇಕಿದ್ದ ಶಿಕ್ಷಣ ಸಚಿವರು ಅವರಿವರನ್ನು ಭೇಟಿ ಮಾಡಿ,ಮನ ಒಲಿಸುವ ಪ್ರಯತ್ನ ಮಾಡುತ್ತಿದ್ದಾರೆ.ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿಯ ವಿರುದ್ಧ ರಾಜ್ಯದಾದ್ಯಂತ ಸಾಹಿತಿಗಳು,ವಿಚಾರವಂತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಶಿಕ್ಷಣ ತಜ್ಞರು ಮಾಡಬೇಕಿದ್ದ ಕೆಲಸವನ್ನು ಬೋಧನಾನುಭವವಿಲ್ಲದ,ಶಿಕ್ಷಣತಜ್ಞನೂ ಅಲ್ಲದ ಒಬ್ಬ ಬಿ ಎಸ್ ಸಿ ಪದವಿಧರ ಮಾಡಿದ್ದರ ಔಚಿತ್ಯವನ್ನು ಪ್ರಶ್ನಿಸಲಾಗುತ್ತಿದೆ.ಅಲ್ಲದೆ ರೋಹಿತ್ ಚಕ್ರತೀರ್ಥ ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನಮಾಡಿ,ನಾಡಗೀತೆಯನ್ನು ತಿರುಚಿ ನಾಡಿನ ಸಂಸ್ಕೃತಿಯನ್ನೇ ಧಿಕ್ಕರಿಸಿದ ಮನುಷ್ಯ.ಕುವೆಂಪು ಅವರ ಪಾದಧೂಳಿಗೂ ಸಮನಲ್ಲದ ಈ ಮನುಷ್ಯನನ್ನು ಬೆಂಬಲಿಸುತ್ತಿರುವುದೇಕೆ ? ತಲೆಯ ಮೇಲೆ ಕೂಡಿಸಿಕೊಂಡಿರುವುದೇಕೆ ? ನಾಡಿನ ಹೆಮ್ಮೆ,ಮಹಾಕವಿ ಕುವೆಂಪು ಅವರನ್ನು ಅವಹೇಳನ ಮಾಡುವುದು ವಿಕೃತಮನಸ್ಕರ ಲಕ್ಷಣ.ಸರಕಾರ ಅದನ್ನು ಸಹಿಸಬಾರದು.ಒಕ್ಕಲಿಗರ ಗುರುಪೀಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಕುವೆಂಪು ಅವರಿಗೆ ಅವಹೇಳನಮಾಡಿದ್ದನ್ನು ಕೇಳಿ ಬೇಸರಿಸಿ,ಮುಖ್ಯಮಂತ್ರಿಗಳಿಗೆ ಪತ್ರಬರೆದ ಬಳಿಕವಷ್ಟೇ ಸರ್ಕಾರದಿಂದ ಸಮಾಲೋಚನಾ ಪ್ರಕ್ರಿಯೆಗಳು ನಡೆಯುತ್ತಿವೆ.ನಿರ್ಮಲಾನಂದನಾಥ ಸ್ವಾಮೀಜಿಯವರು ಪತ್ರ ಬರೆಯುವವರೆಗೆ ಕಾಯಬೇಕಿತ್ತೆ? ಕುವೆಂಪು ಅವರು ಸಾಹಿತಿಯಾಗಿ ಪ್ರಸಿದ್ಧರಾಗುತ್ತಿದ್ದ ಅವಧಿಯಲ್ಲಿ,ಅವರು ಬ್ರಾಹ್ಮಣರಲ್ಲ;ಶೂದ್ರರು ,ಒಕ್ಕಲಿಗರು ಎನ್ನುವ ಕಾರಣದಿಂದ ಕುವೆಂಪು ಅವರ ಮಹಾನ್ ಪ್ರತಿಭೆಯನ್ನು ಸಹಿಸದೆ ಅವರ ವಿರುದ್ಧ ಟೀಕಾಪ್ರಹಾರ,ಟೀಕೆಗಳ ಸುರಿಮಳೆ ಕರೆಯುತ್ತಿದ್ದ ಒಂದು ವರ್ಗದ ಜನ ಇದ್ದರು.ಅದೇ ವರ್ಗಕ್ಕೆ ಸೇರಿದ ಜನ ಇಂದು ಕುವೆಂಪು ಅವರ ಅವಹೇಳನದ ಕುಕೃತ್ಯಕ್ಕೆ ಕೈ ಹಾಕಿದ್ದಾರೆ.ಇಂಥಹ ದುರ್ಮತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಜರುಗಿಸಬೇಕು.

ಕುವೆಂಪು ಅವರ ಅವಹೇಳನ ಮತ್ತು ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ನಡೆದ ಸಮರ್ಥನೀಯವಲ್ಲದ ಸೇರಿಸುವಿಕೆಗಳ ವಿರುದ್ಧ ಹಿರಿಯ ಚೇತನ ದೇವನೂರು ಮಹಾದೇವ ಅವರು ತಮ್ಮ ‘ ಎದೆಗೆ ಬಿದ್ದ ಅಕ್ಷರ’ ಪಠ್ಯವನ್ನು ಪಠ್ಯಪುಸ್ತಕದಿಂದ ಕೈಬಿಡುವಂತೆ ಆಗ್ರಹಿಸಿ,ಶಿಕ್ಷಣ ಸಚಿವರಿಗೆ ಎರಡು ಪತ್ರಬರೆದಿದ್ದಾರೆ.ದೇವನೂರು ಮಹಾದೇವ ಅವರು ನಾಡಿನ ಹೆಮ್ಮೆ.ಅವರನ್ನು ಹಗುರವಾಗಿ ಪರಿಗಣಿಸುವುದು,ಅವರ ಪ್ರತಿಭೆಯ ಬಗ್ಗೆ ಅಪಹಾಸ್ಯ ಮಾಡುವುದು ಕೂಡ ಸುಸಂಸ್ಕೃತರ ಲಕ್ಷಣವಲ್ಲ.ದೇವನೂರು ಮಹಾದೇವ ಅವರು ಸೇರಿದಂತೆ ಕನ್ನಡದ ಮಹತ್ವದ ಲೇಖಕರುಗಳು ಪಠ್ಯಪುಸ್ತಕಗಳಿಂದ ತಮ್ಮ ಪಠ್ಯಗಳನ್ನು ಕೈಬಿಡುವಂತೆ ಆಗ್ರಹಿಸಿ,ಪತ್ರಬರೆದಿದ್ದಾರೆ.ಕೆಲವರು ವಿವಿಧ ಸಾಹಿತ್ಯಕ- ಸಾಂಸ್ಕೃತಿಕ ಸಮಿತಿಗಳ ಅಧ್ಯಕ್ಷ,ಸದಸ್ಯಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.ಇಷ್ಟಾದರೂ ಅದು ತನಗೆ ಸಂಬಂಧಿಸಿದ ಸಂಗತಿಯೇ ಅಲ್ಲ ಎನ್ನುವಷ್ಟು ನಿರ್ಲಿಪ್ತ ಧೋರಣೆಯನ್ನು ಪ್ರದರ್ಶಿಸುವುದು ಸಲ್ಲದು.ತಮ್ಮ ಪಠ್ಯಗಳನ್ನು ಕೈಬಿಡಬೇಕೆಂದು ಆಗ್ರಹಿಸುತ್ತಿರುವ ಮತ್ತು ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಕವಿ- ಸಾಹಿತಿಗಳು ಕನ್ನಡ ಸಾಹಿತ್ಯ ಕ್ಷೇತ್ರದ ಬಹುಮುಖ್ಯಬರಹಗಾರರು.ಅವರು ಯಾವುದೇ ಸಿದ್ಧಾಂತದ ಪ್ರತಿಪಾದಕರಾಗಲಿ,ಯಾವುದೇ ಸೈದ್ಧಾಂತಿಕ ನಿಲುವಿನ ಬಗ್ಗೆ ಒಲವು ಹೊಂದಿರಲಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಕಡೆಗಣಿಸಬಾರದು.ಶಿಕ್ಷಣ ಇಲಾಖೆಗೆ ಮೂಲ ಆಸರೆ ಸಾಹಿತಿಗಳೆ.ಸಾಹಿತಿಗಳನ್ನೇ ಗೌರವಿಸದಷ್ಟು ಕಾಠಿಣ್ಯ ಪ್ರದರ್ಶಿಸಬಾರದು.

ಪಠ್ಯಪುಸ್ತಕಗಳಲ್ಲಿ ಬಸವಣ್ಣನವರ ಕುರಿತು ತಪ್ಪು ಮಾಹಿತಿ ಇದೆ.ಬಸವಣ್ಣನವರು ಅವರ ಅಕ್ಕನಿಗೆ ಉಪನಯನ ನಿರಾಕರಿಸಿದ್ದರಿಂದ ‘ಅಕ್ಕನಿಗೆ ಜನಿವಾರ ಹಾಕಿಕೊಳ್ಳುವ ಹಕ್ಕು ಇಲ್ಲದಿದ್ದರೆ ನನಗೂ ಬೇಡ ಉಪನಯನ ಮತ್ತು ಜನಿವಾರ’ ಎಂದು ತಿರಸ್ಕರಿಸಿ ಮನೆಬಿಟ್ಟು ಹೊರಡುತ್ತಾರೆ.ಅಂತಹ “ಬಸವಣ್ಣನವರು ಉಪನಯನ ಮಾಡಿಕೊಂಡಿದ್ದರು” ಎನ್ನುವ ಹಸಿಸುಳ್ಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ್ದು ಬಸವಣ್ಣನವರ ವಿಶ್ವವಿಭೂತಿ ವ್ಯಕ್ತಿತ್ವಕ್ಕೆ ತೋರಿಸುವ ಅಗೌರವ ಮಾತ್ರವಲ್ಲ,ಪೌರೋಹಿತ್ಯದ ಬಲವಂತ ಹೇರಿಕೆಕೂಡ.ಬಸವಣ್ಣನವರ ಕ್ರಾಂತಿಕಾರಿ ವ್ಯಕ್ತಿತ್ವ ಪ್ರಾರಂಭವಾಗುವುದೇ ತನ್ನ ಅಕ್ಕನಿಗೆ ಇಲ್ಲದ ಉಪನಯನ ತನಗೂ ಬೇಡ ಎಂದು ಧಿಕ್ಕರಿಸಿ ನಡೆಯುವುದರಿಂದ.ಆ ಚಾರಿತ್ರಿಕ ಘಟನೆ ಬಾಲಕ ಬಸವಣ್ಣನವರು ಮುಂದೆ ಲೋಕೋದ್ಧಾರಕ ವ್ಯಕ್ತಿತ್ವದ ಮಹಾತ್ಮರಾಗುತ್ತಾರೆ ಎನ್ನುವುದರ ಮುನ್ಸೂಚನೆ ಮತ್ತು ಬಸವಣ್ಣನವರ ಜೀವನದ ಮಹತ್ತರ ತಿರುವು.ಬಸವಣ್ಣನವರನ್ನು ರೂಪಿಸಿದ ಇಂತಹ ಅನಾಚಾರಖಂಡನೆಯ ಐತಿಹಾಸಿಕ ಘಟನೆಯನ್ನು ತಿರುಚಿ ಬರೆದು ಮಕ್ಕಳಿಗೆ ಅಸತ್ಯವನ್ನು ಬೋಧಿಸಬಯಸುವುದು ಯಾಕೆ ?

ಕುವೆಂಪು,ಬಸವಣ್ಣನವರ ವಿವಾದಗಳ ಜೊತೆಗೆ ದಲಿತಬರಹಗಾರರ ಪಠ್ಯಗಳನ್ನು ಕೈಬಿಟ್ಟು ಆ ಬರಹಗಳ ಬದಲಿಗೆ ಬ್ರಾಹ್ಮಣ ಲೇಖಕರ ಪಠ್ಯಗಳನ್ನು ಸೇರಿಸಲಾಗಿದೆ ಎನ್ನುವ ಗಂಭೀರ ಆರೋಪ ಬಂದಿದೆ. ‘ ಪ್ರಜಾವಾಣಿ’ ದಿನಪತ್ರಿಕೆಯ 04.06.2022 ರ ಶನಿವಾರದ ಸಂಚಿಕೆಯ ಪುಟ 5 ರ ರಾಜ್ಯ ಆವೃತ್ತಿಯಲ್ಲಿ ಹನ್ನೆರಡು ಜನ ದಲಿತ ಬರಹಗಾರರ ಪಠ್ಯವನ್ನು ಕೈ ಬಿಟ್ಟು ಅದರ ಬದಲಿಗೆ ಬ್ರಾಹ್ಮಣ ಲೇಖಕರ ಪಠ್ಯಗಳನ್ನು ಸೇರಿಸಿದ್ದನ್ನು ವಿವರವಾಗಿ ಪ್ರಕಟಿಸಲಾಗಿದೆ.ಇದು ಗಂಭೀರವಾದ ದೋಷ.ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕಿದ್ದ ಶಿಕ್ಷಣ ಇಲಾಖೆ ಇಂತಹ ದಲಿತವಿರೋಧಿ ನೀತಿ ಅನುಸರಿಸುವುದು ಸಲ್ಲದು.ಅಸ್ಪೃಶ್ಯತೆಯನ್ನು ವಿರೋಧಿಸಬೇಕಾದ ಸರಕಾರವೇ ದಲಿತಬರಹಗಾರರ ಪಠ್ಯವನ್ನು ಕೈಬಿಟ್ಟು ಆ ಪಠ್ಯಗಳ ಬದಲು ಬ್ರಾಹ್ಮಣ ಲೇಖಕರ ಪಠ್ಯಗಳನ್ನು ಸೇರಿಸುವ ‘ ಮಡಿವಂತಿಕೆ’ ಪ್ರದರ್ಶಿಸಿದ್ದು ಸಂವಿಧಾನ ವಿರೋಧಿ ನಿಲುವು.ವಿದ್ಯಾರ್ಥಿಗಳು ಕೇವಲ ಬ್ರಾಹ್ಮಣ ಬರಹಗಾರರನ್ನೇ ಓದಬೇಕೆ? ಸಂವಿಧಾನದ ಜಾತ್ಯತೀತ ಮೌಲ್ಯಗಳಿಗನುಗುಣವಾದ ಪಠ್ಯವನ್ನು ವಿದ್ಯಾರ್ಥಿಗಳು ಓದಬಾರದೆ? ಕೇವಲ ಬ್ರಾಹ್ಮಣರು ಮಾತ್ರ ಬುದ್ಧಿವಂತರು,ಹಿಂದುಳಿದ ವರ್ಗದವರು,ಅಲ್ಪಸಂಖ್ಯಾತರು ಮತ್ತು ದಲಿತರು ದಡ್ಡರು ಎನ್ನುವುದನ್ನು ಸಾರಹೊರಟಿದೆಯೆ ಶಿಕ್ಷಣ ಇಲಾಖೆ? ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಇಂತಹ ಹತ್ತು ಹಲವು ಅವಾಂತರ,ಗೊಂದಲಗಳ ಕಾರಣದಿಂದ ವಿವಾದದಲ್ಲಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿಯು ಪರಿಷ್ಕರಿಸಿದ ಪಠ್ಯಗಳ ಬದಲು ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ 27 ವಿವಿಧ ಸಮಿತಿಗಳು ಸುದೀರ್ಘವಾಗಿ ಚರ್ಚಿಸಿ,ಅಳವಡಿಸಿದ ಪಠ್ಯಪುಸ್ತಕಗಳನ್ನೇ ಪ್ರಸ್ತುತ ಶೈಕ್ಷಣಿಕ ವರ್ಷದ ಬೋಧನೆಗೆ ಆಯ್ಕೆ ಮಾಡಬೇಕು.ಈಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿರುವುದರಿಂದ ಶಿಕ್ಷಣ ಇಲಾಖೆಗೆ ಮಕ್ಕಳ ಹಿತಾಸಕ್ತಿ ಕಾಯುವುದಕ್ಕಿಂತ ಮತ್ತಾವ ಕಾರ್ಯವು ದೊಡ್ಡದಲ್ಲ.ಅಲ್ಲದೆ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಸಮಿತಿಯು ಆಯ್ಕೆ ಮಾಡಿ,ನಿಗದಿ ಪಡಿಸಿದ ಪಠ್ಯಪುಸ್ತಕಗಳನ್ನೇ CBSC ಯು ಪ್ರಸ್ತುತ ವರ್ಷದ ಪಠ್ಯಪುಸ್ತಕಗಳನ್ನಾಗಿ ನಿಗದಿ ಪಡಿಸಿರುವಾಗ ರಾಜ್ಯದ ಶಿಕ್ಷಣ ಇಲಾಖೆಗೆ ಯಾಕೆ ಇದು ಪ್ರತಿಷ್ಠೆಯ ವಿಷಯವಾಗಬೇಕು ?

About The Author