ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೦::”ಪರಶಿವನು ನಮ್ಮಲ್ಲಿಯೇ ಇದ್ದಾನೆ; ನಮ್ಮನ್ನು ಬಿಟ್ಟು ಹೊರಗಿಲ್ಲ”::ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೦

ಪರಶಿವನು ನಮ್ಮಲ್ಲಿಯೇ ಇದ್ದಾನೆ; ನಮ್ಮನ್ನು ಬಿಟ್ಟು ಹೊರಗಿಲ್ಲ”

ಮುಕ್ಕಣ್ಣ ಕರಿಗಾರ

” ಪರಶಿವನು ತನ್ನ ಬಿಟ್ಟು ಬೇರಿಲ್ಲ,ತನ್ನ ಬಿಟ್ಟು ಬೇರೆಡೆಗೆ ಅವನನ್ನು ಹುಡುಕಿದರೂ ಅವನು ನಿಲುಕುವಂತಿಲ್ಲ.ತನ್ನೊಳಗೆ ಅವನಿಹನು.ಅದೇಕೆ ತಾನೇ ಅವನು ” ಎಂದು ಪರಶಿವನನ್ನು ಕಾಣುವ ಬೆಡಗನ್ನು ವಿವರಿಸಿದ್ದಾರೆ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು.ಪರಶಿವನನ್ನು ಯೋಗಬಲದಿಂದ ನಮ್ಮಲ್ಲಿಯೇ,ನಮ್ಮೊಳಗೇ ಕಾಣಬೇಕು.ಹೊರಗೆ ಹುಡುಕಿದರೆ ಸಿಗನು. ನಮ್ಮ ಒಳಗೆ ಇರುವ ಪರಶಿವನನ್ನು ಅಂತರಂಗದಿ ಕಾಣಬೇಕಲ್ಲದೆ ಬಹಿರಂಗದ ಗುಡಿ- ಗುಂಡಾರ,ತೀರ್ಥ- ಕ್ಷೇತ್ರಗಳಲ್ಲಿ ಹುಡುಕಿದರೆ ಸಿಗನು.

ಪರಶಿವನಿಂದ ಹೊರಹೊಮ್ಮಿದ ಸೃಷ್ಟಿಯು ಸತ್ಯವಾಗಿರುವಂತೆ ಪರಶಿವನ ಸಂಕಲ್ಪದಂತೆ ದೇಹಧಾರಿಗಳಾದ ನಮ್ಮಲ್ಲಿಯೇ ಇದ್ದಾನೆ ಪರಶಿವನು.ಮನುಷ್ಯರಾದ ನಾವೆಲ್ಲರೂ ಶಿವನ ಅಂಶಿಕರು,ಶಿವನ ವಂಶಿಕರು.ಹೀಗಿದ್ದೂ ನಾವು ಶಿವನಿಂದ ಭಿನ್ನರು ಎನ್ನುವ ಭ್ರಮೆಗೆ ಒಳಗಾಗಿ ಬಳಲುತ್ತಿದ್ದೇವೆ.ಶಿವ ನಮ್ಮಿಂದ ಭಿನ್ನನಲ್ಲ,ನಾವೂ ಶಿವನಿಗೆ ಅನ್ಯರಲ್ಲ.ಮಾಯೆಯ ಆವರಣ ನಮ್ಮನ್ನು ಶಿವನಿಂದ ದೂರಮಾಡಿದೆಯಷ್ಟೆ.ಮಾಯೆಯ ಆವರಣವನ್ನು ಸರಿಸಿಕೊಂಡು ನಮ್ಮ ನಿಜಸ್ವರೂಪವನ್ನು ಅರಿತದ್ದಾದರೆ ನಾವೇ ಶಿವರು ಎನ್ನುವುದು ಗೊತ್ತಾಗುತ್ತದೆ,ನಾವು ಶಿವಸ್ವರೂಪಿಗಳು ಎನ್ನುವುದು ದಿಟವಾಗುತ್ತದೆ.

ನಮ್ಮನ್ನು ನಾವು ದೇಹಿಗಳು ಎಂದು ಭ್ರಮಿಸಿದ್ದೇವೆ.ದೇಹದೊಳಗಣ ಜೀವವೇ ನಾವು ಎನ್ನುವ ವಿಭ್ರಮೆ ನಮ್ಮದು.ನಾನು ದೇಹವೂ ಅಲ್ಲ,ಜೀವನೂ ಅಲ್ಲ; ನಾನು ಆತ್ಮನು,ನಾನೇ ದೇವನು ಎನ್ನುವ ಭಾವ ಗಟ್ಟಿಗೊಳ್ಳಬೇಕು.ದೇಹಕ್ಕೆ ಅಂಟಿದ ಮಾಯೆಯ ಸೆರಗನ್ನು ಹರಿದೊಗೆದಾಗಲೇ ಆತ್ಮನ ದರ್ಶನಸಾಧ್ಯ.ಆತ್ಮದರ್ಶನದಿಂದಲೇ ಪರಮಾತ್ಮ ತತ್ತ್ವವು ಮೈದಳೆಯುವುದು.ದೇಹ ಮತ್ತು ಜೀವ ನಾನಲ್ಲ; ನಾನು ಆತ್ಮನಿದ್ದೇನೆ ಎಂದು ತಿಳಿದುಕೊಂಡಾಗ ನಮ್ಮಲ್ಲಿ ಪರಶಿವಭಾವ ಜಾಗ್ರತವಾಗುತ್ತದೆ.ಪರಶಿವನ ಅಂಶವೇ ಆತ್ಮನು.ಆತ್ಮನನ್ನು ಜಾಗ್ರತಗೊಳಿಸಿಕೊಂಡು ಮುನ್ನಡೆಯುವುದೇ ಪರಶಿವ ಸಾಕ್ಷಾತ್ಕಾರದ ರಹಸ್ಯ.

ಜೀವರುಗಳ ಎದೆಯಲ್ಲಿ ಪರಶಿವನಿದ್ದಾನೆ.ಇಂತಹ ಪರಶಿವನ ಸಾಕ್ಷಾತ್ಕಾರಕ್ಕೆ ಅಂತರ್ಮುಖಿಗಳಾಗಬೇಕು.ಇಳಿಯಬೇಕು ಆಳಕ್ಕೆ,ಆಳಕ್ಕೆ.ಆಳಕ್ಕಿಳಿದು ಭೂಮ್ಯಾಕಾಶಗಳ ಸೀಮೆಯನ್ನು ಮೀರಿ ನಡೆದಾಗ ತೊಳಗಿಬೆಳಗುತ್ತದೆ ಪರಶಿವನ ಚಿತ್ ಪ್ರಕಾಶ.ಸ್ವಯಂಪ್ರಕಾಶನಾದ ಪರಶಿವನನ್ನು ಕಾಣಬೇಕು ಅಂತರಂಗದಿ.ಅಂತರಾತ್ಮನೇ ಪರಶಿವನು ಎಂದರಿಯುವ ಮೂಲಕ ಜೀವನೇ ಪರಶಿವನಾಗುತ್ತಾನೆ.ತನ್ನ ತಾನರಿತರೆ ತಾನೇ ಪರಶಿವನಾಗುತ್ತಾನೆ.ತನ್ನಲ್ಲಿ ಇರುವ ಪರಶಿವನನ್ನು ಹೊರಗೆ ಹುಡುಕಿ ಬಳಲುವುದು ವ್ಯರ್ಥಸಾಹಸವಾದರೆ; ತಾನೇ ಪರಶಿವನೆಂದರಿಯದೆ ತೊಳಲುವುದು ಅಜ್ಞಾನ.ಚರ್ಮಚಕ್ಷುಗಳು ಕಾಣಲಾರವು ಕೋಟಿಸೂರ್ಯರ ಪ್ರಭೆಯನ್ನು ಮೀರಿದ ಸ್ವಯಂಪ್ರಕಾಶನಪ್ಪ ಪರಶಿವನನ್ನು; ಅಂತರಂಗದ ಕಣ್ಣು ತೆರೆದುಕೊಂಡೇ ಕಾಣಬೇಕು ಆ ಪರಿಪೂರ್ಣ ವಸ್ತು,ಪರಶಿವನನ್ನು.ಇಂದ್ರಿಯಗಳು ಅನುಭವಿಸಲಾರವು ಪರಶಿವನ ದರ್ಶನಾನುಭವವನ್ನು; ಇಂದ್ರಿಯಾತೀತ ಅತೀಂದ್ರಿಯ ನೆಲೆಯಲ್ಲಿಯೇ ಪರಶಿವನ ಸಾಕ್ಷಾತ್ಕಾರವಾಗುವುದು.ಅಂತರಂಗಕ್ಕೆ ಇಳಿದಷ್ಟು ಬಹಿರ್ ಪ್ರಪಂಚದಿಂದ ಮುಕ್ತನಾಗಿ ಪರಮಾತ್ಮನಿಗೆ ಸಮೀಪನಾಗುತ್ತಾನೆ ಆತ್ಮನು.ಆತ್ಮಭಾವವು ಜಾಗ್ರತಗೊಂಡು ವಿಕಸಿಸುತ್ತ,ವರ್ಧಿಸುತ್ತ ವಿರಾಟ್ ರೂಪ ತಳೆದಾಗಲೇ ವಿಶ್ವಾತೀತನಾದ ವಿರಾಟ್ ಸ್ವರೂಪಿ ಪರಶಿವನ ದರ್ಶನವಾಗುತ್ತದೆ.

About The Author