‘ದ್ವಿಜ’ ಎನ್ನುವುದು ಸಂಸ್ಕಾರ ಸೂಚಕ ಪದ:ಮುಕ್ಕಣ್ಣ ಕರಿಗಾರ

ನಿಜಾರ್ಥ

‘ದ್ವಿಜ’ ಎನ್ನುವುದು ಸಂಸ್ಕಾರ ಸೂಚಕ ಪದ:ಮುಕ್ಕಣ್ಣ ಕರಿಗಾರ

     ಬ್ರಾಹ್ಮಣರು ತಮ್ಮನ್ನು ‘ ದ್ವಿಜರು’ ಎಂದು ಕರೆದುಕೊಳ್ಳುತ್ತಾರೆ.ಎರಡುಬಾರಿ ಹುಟ್ಟಿದವರು ಎನ್ನುವುದು ದ್ವಿಜ ಶಬ್ದದ ಅರ್ಥ.ಎಲ್ಲರೂ ಒಮ್ಮೆ ಮಾತ್ರ ತಾಯಿಯ ಗರ್ಭದಿಂದ ಹೊರಬಂದಿರುತ್ತೇವೆ.ಎಲ್ಲಿಯಾದರೂ ಎರಡು ಬಾರಿ ಹುಟ್ಟಿದವರುಂಟೆ? ದ್ವಿಜ ಎನ್ನುವುದು ವಾಚ್ಯಾರ್ಥದಲ್ಲಿ ಅಲ್ಲ,ಲಕ್ಷ್ಯಾರ್ಥದಲ್ಲಿ ಇಲ್ಲವೇ ತತ್ತ್ವಾರ್ಥದಲ್ಲಿ ಮಾತ್ರ ಸಾಧ್ಯ.ಬ್ರಾಹ್ಮಣರು ಉಪನಯನ ಮಾಡಿಸಿಕೊಳ್ಳುವ ಮೂಲಕ’ ದ್ವಿಜರು’ ಎನ್ನಿಸಿಕೊಳ್ಳುತ್ತಾರೆ.ಜನಿವಾರವನ್ನು ಧರಿಸುವುದೇ ದ್ವಿಜತ್ವದ ಕುರುಹು ಎನ್ನುತ್ತಾರೆ ಬ್ರಾಹ್ಮಣರು.ಗಾಯತ್ರಿಮಂತ್ರೋಪದೇಶ ಮತ್ತು ಜನಿವಾರಧಾರಣೆಯಿಂದ ದ್ವಿಜತ್ವಪ್ರಾಪ್ತಿಯಾಯಿತು ಎನ್ನುವುದು ಬ್ರಾಹ್ಮಣರ ಭಾವನೆ.ಬ್ರಾಹ್ಮಣ ಸ್ತ್ರೀಯರಿಗೆ ಉಪನಯನದ ಹಕ್ಕು ಇಲ್ಲವಾದ್ದರಿಂದ ಅವರು ದ್ವಿಜರಲ್ಲ!ಬ್ರಾಹ್ಮಣನ ಹೆಂಡತಿ ಆಗಿಯೂ ಬ್ರಾಹ್ಮಣತಿಯು ದ್ವಿಜೆಯಾಗಳು!

ಉಪನಯನ ಎನ್ನುವುದು ಒಂದು ಸಂಸ್ಕಾರವಷ್ಟೆ.ಅದರಿಂದಲೇ ದ್ವಿಜತ್ವ ಇಲ್ಲವೆ ಬ್ರಾಹ್ಮಣತ್ವ ಪ್ರಾಪ್ತಿಯಾಗದು.ಲೋಕಕ್ಕೆ ತೋರಿಸಲು ಏನಾದರೂ ಒಂದು ಬೇಕಲ್ಲ ಹಿರಿಮೆಯನ್ನು ಪ್ರತಿಷ್ಠಾಪಿಸಲು? ಹಾಗಾಗಿ ಜನಿವಾರ ಧರಿಸುವ ಮೂಲಕ ನಾವು ದ್ವಿಜರಾದೆವು ಎನ್ನುತ್ತಾರೆ ಬ್ರಾಹ್ಮಣರು.ದ್ವಿಜತ್ವ ಎನ್ನುವುದು ಎರಡನೇ ಹುಟ್ಟು.ಗುರುದೀಕ್ಷೆ ಪಡೆಯುವವರಿಗೆ ಅಥವಾ ಗುರುಬೋಧೆ ಪಡೆದವರಿಗೆ ಅನ್ವಯಿಸುವ ಪದವಿದು,ತತ್ತ್ವವಿದು.ತಂದೆ ತಾಯಿಯರಿಂದ ಹುಟ್ಟಿದುದು ಭವಿ ಇಲ್ಲವೆ ನರಜನ್ಮವಾದರೆ ಗುರೂಪದೇಶಪಡೆದು ಭವವನ್ನು ಕಳಚಿಕೊಂಡು ಹರಜನ್ಮವಾಗುವುದೇ ಎರಡನೇ ಹುಟ್ಟು,ಅದೇ ದ್ವಿಜತ್ವ.ನಮ್ಮ ಜನ್ಮಕ್ಕೆ ಕಾರಣರಾಗುವ ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಶಿಕ್ಷಣಕೊಡಿಸಬಹುದು,ಉದ್ಯೋಗಕೊಡಿಸಬಹುದು,ಹಣ- ಅಂತಸ್ತನ್ನು ನೀಡಬಹುದು,ಆದರೆ ಮೋಕ್ಷವನ್ನು ಕೊಡಲಾರರು.ಮೋಕ್ಷದ ಮಾರ್ಗವನ್ನು ತೋರುವವನು ಗುರು.ಮೋಕ್ಷವನ್ನು ಗುರುವಲ್ಲದೆ ಮತ್ತಾರೂ ಕರುಣಿಸಲಾರರು ಆದ್ದರಿಂದ ‘ ನ ಗುರೋರಧಿಕಂ’- ಗುರುವಿಗಿಂತ ಹಿರಿಯರಿಲ್ಲ.ಇಂತಹ ಹಿರಿದಪ್ಪ ಗುರುವಿನಿಂದ ಉಪದೇಶಪಡೆದು ಶಿಷ್ಯ ಎರಡನೇ ಹುಟ್ಟು ಪಡೆಯುತ್ತಾನೆ,ಆ ಎರಡನೇ ಹುಟ್ಟೇ ದ್ವಿಜತ್ವ.ಇಲ್ಲಿ ಒಂದು ಸಂಗತಿ ಗಮನಾರ್ಹ, ಶಿಷ್ಯ ಗುರುವಿನಿಂದ ಪಡೆಯುವುದೇ ಎರಡನೇ ಹುಟ್ಟೇ ಹೊರತು ಮರುಹುಟ್ಟು ಅಲ್ಲ.ಸತ್ತವರು ಪುನಃ ಬದುಕಿದರದು ಮರುಹುಟ್ಟು.ಶರಣರು,ಸಂತರುಗಳಿಂದ ಪವಾಡವಾಗಿ ಬಹುಅಪರೂಪಕ್ಕೊಮ್ಮೆ ಘಟಿಸುವ ಘಟನೆ ಪುನರ್ಜನ್ಮ ಇಲ್ಲವೇ ಮರುಹುಟ್ಟು.ಇದ್ದ ಬದುಕಿಗೆ ಭವ್ಯತೆಯನ್ನು,ದಿವ್ಯತೆಯನ್ನು ಕರುಣಿಸಿವುದೇ ಎರಡನೇ ಹುಟ್ಟು.ತಂದೆತಾಯಿಗಳಿತ್ತ ಜನ್ಮವನ್ನು ತೊಡೆದು ಗುರು ನೀಡುವ ಶಿವಸಂಸ್ಕಾರವೇ ಹರಜನ್ಮ.

ಸಂನ್ಯಾಸಿಗಳು ತಮ್ಮನ್ನು ‘ ಶ್ರೀಗುರು ಕರಕಮಲ ಸಂಜಾತ’ ಎನ್ನುವ ವಿಶೇಷಣದಿಂದ ಗುರುತಿಸಿಕೊಳ್ಳುತ್ತಾರೆ.ಶ್ರೀಗುರುವಿನ ಕೈಗಳೆಂಬ ಕಮಲದಲ್ಲಿ ಹುಟ್ಟಿದವನು ಎಂದು ಅದರರ್ಥ.ಯಾರಾದರೂ ಕೈಯಲ್ಲಿ ಹುಟ್ಟಲು ಸಾಧ್ಯವೆ ? ಕೈಗಳು ಕಮಲವಾಗಲು ಸಾಧ್ಯವೆ ? ತನ್ನನರಜನ್ಮವನ್ನು ತೊಡೆದುಕೊಂಡು ಹರಜನ್ಮವಾದಾತನೇ ಗುರು.ಅಂತಹ ಗುರುವು ಅನುಗ್ರಹಸಮರ್ಥನಿರುವುದರಿಂದ ಆತನ ಕೈಯ್ಗಳು ಕಮಲವಾಗಿರುತ್ತವೆ.ಕಮಲವು ಲಕ್ಷ್ಮೀಯ ನಿವಾಸ.ಅಂತೆಯೇ ಗುರುವನ್ನು ‘ ಶ್ರೀಗುರು’ ಎನ್ನುವ ವಿಶೇಷಣದಿಂದ ಗೌರವಿಸುವುದು.ಶ್ರೀ ಎಂದರೆ ಸಂಪತ್ತು.ಗುರುವಿನಲ್ಲಿ ಇರುವ ಸಂಪತ್ತು ಆದರೂ ಯಾವುದು ? ಅದು ಧನ- ಕನಕಗಳ ಲೌಕಿಕ ಸಂಪತ್ತು ಅಲ್ಲ.ಮೋಕ್ಷವೆಂಬ ಅಲೌಕಿಕ ಇಲ್ಲವೆ ಪಾರಲೌಕಿಕ ಸಂಪತ್ತು ಗುರುವಿನಲ್ಲಿರುತ್ತದೆ.ಅಂತಹ ಗುರುವು ತನ್ನ ಶಿಷ್ಯನ ಭವಬಂಧನವನ್ನು ಕಳೆಯುವನಾದ್ದರಿಂದ ಅವನ ಹಸ್ತಗಳು ಅಭಯ ಹಸ್ತ.ಶಿಷ್ಯನ ಭವವನ್ನು ಕಳೆಯುತ್ತೇನೆ ಎಂದು ಶ್ರೀಗುರುವು ಸಂಕಲ್ಪಿಸುತ್ತಾನೆ,ಅಭಯನೀಡುತ್ತಾನೆ.ಅಂತಪ್ಪ ಮೋಕ್ಷಸಂಪತ್ತಿನ ಒಡೆಯನಾದ ಶ್ರೀಗುರುವಿನ ಅಭಯಹಸ್ತವೆಂಬ ಕರಕಮಲದಲ್ಲಿ ಹುಟ್ಟುವವರೇ ‘ಶ್ರೀಗುರುಕರಕಮಲಸಂಜಾತರು’.ಇದು ಹಚ್ಚಿಕೊಳ್ಳಬಹುದಾದ ಬರಿಯ ವಿಶೇಷಣವಷ್ಟೆ.ಅಂತಹ ಶ್ರೀಗುರುಗಳು ಆದ ಗುರುಗಳು,ನರಜನ್ಮವನ್ನು ತೊಡೆದುಕೊಂಡು ಹರಜನ್ಮಿಗಳಾಗಬಯಸುವ ಶಿಷ್ಯರೂ ತೀರ ಅಪರೂಪ.ಆದರೂ ಸಾಮಾನ್ಯವಾಗಿ ಬಳಸುತ್ತಾರೆ ಸಂನ್ಯಾಸಿ,ಸ್ವಾಮಿಗಳು ಆದವರು ಈ ವಿಶೇಷಣವನ್ನು.ಸಾಮಾನ್ಯಾರ್ಥದಲ್ಲಿ ಗುರೂಪದೇಶ ಪಡೆದ ಎಲ್ಲರೂ ‘ ಗುರುಕರಕಮಲಸಂಜಾತರೆ’ ,ದ್ವಿಜರೆ.

 

About The Author