ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೦೭::ಭೀತಿಮುಕ್ತನೇ ನಿಜ ಶರಣ:ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೦೭

ಭೀತಿಮುಕ್ತನೇ ನಿಜ ಶರಣ

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಶರಣರ ಲಕ್ಷಣವನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ–” ತಾನು ತನ್ನನ್ನು ಮರೆದು ಧ್ಯಾನಗಾನದಿ ಬೆರೆದ,ಭೀತಿಯ ಬೀಜವ ಹುರಿದು,ಭವದ ಬೇರನು ಕೊರೆದ ಯೋಗಿಯು ಅಚ್ಚ ಶರಣನು” .ಗುರುದೇವನ ಈ ಮಾತಿನಲ್ಲಿ ನಿಜವಾದ ಶರಣ ಯಾರು ಎನ್ನುವುದರ ಸೂಚನೆ ಇದೆ.’ನಾನು ಶರಣ’, ‘ ನೀನು ಶರಣ’ ಎಂದುಕೊಂಡರೆ ಸಾಲದು, ಶರಣತ್ವದ ಲಕ್ಷಣಗಳನ್ನು ಮೈಗೂಡಿಸಿಕೊಳ್ಳಬೇಕು.ಕರಣೇಂದ್ರಿಯದ ಅವಗುಣಗಳು ಮತ್ತದರ ಫಲವಾಗಿ ಹುಟ್ಟುವ ಭಯ,ಭ್ರಾಂತಿಗಳಿಂದ ಮುಕ್ತನಾದವನೇ ಶರಣ.

‘ಶರಣ’ ಎಂದರೆ ತನ್ನನ್ನು ತಾನು ಮರೆತು,ಪರಮಾತ್ಮನಲ್ಲಿ ಅನನ್ಯಭಾವದಿಂದ ಮೊರೆಹೋದವನು,ಶರಣು ಹೋದವನು.ಪರಮಾತ್ಮನಲ್ಲಿ ತಾನು ಶರಣಾಗುವ ಮೂಲಕ ಶರಣರನು ಲೋಕರಕ್ಷಕನಾಗುತ್ತಾನೆ.ಪರಮಾತ್ಮನ ಧ್ಯಾನದಲ್ಲಿ ಸಂಪೂರ್ಣವಾಗಿ ತನ್ಮಯನಾಗಬೇಕು.ತನ್ನದೇಹವನ್ನು ಸಂಪೂರ್ಣವಾಗಿ ಮರೆತು ಪರಶಿವನ ಧ್ಯಾನದಲ್ಲಿ ಮಗ್ನನಾಗಿ ಯೋಗಧ್ಯಾನಗಳಿಂದುತ್ಪನ್ನವಾಗುವ ದಶವಿಧ ನಾದಗಳನ್ನು ಆಲಿಸುವುದಲ್ಲದೆ ಅದರಾಚೆಯ ಪರಬ್ರಹ್ಮನ ಸಾಮಗಾನದಲ್ಲಿ ಮನೋರ್ಲಯಗೊಳಿಸಬೇಕು.ಧ್ಯಾನದಲ್ಲಿ ಪೂರ್ಣವಾಗಿ ಮೈಮರೆತಯೋಗಿಯ ಅಂತರಂಗದಿ ಪರಮಾತ್ಮನ ಸುಮಧುರಕಂಠದಿಂದ ಹೊರಸೂಸುವ ದಿವ್ಯಧ್ವನಿ,ದಿವ್ಯನಾದವು ಅನುರಣಿತಗೊಳ್ಳುತ್ತದೆ.ಪರಮಾತ್ಮನ ದಿವ್ಯಗಾನವನ್ನು ಆಲಿಸುವವನೇ ಶರಣನು.ಶರಣನು ಪರಮಾತ್ಮನ ದಿವ್ಯಗಾನವನ್ನು ಆಲಿಸಲು ಸಮರ್ಥನಾಗಬೇಕಾದರೆ ಅವನು ತಾನು ದೇಹ ಎಂಬುದನ್ನು ಮರೆತಿರಬೇಕು ಮತ್ತು ಭವದ ಭೀತಿಯಿಂದ ಮುಕ್ತನಾಗಿರಬೇಕು.

ಭವದ ಭಾವ ಇರುವವರೆಗೆ ಭಯ ಇರುತ್ತದೆ.ಭವದ ಭಾವವನ್ನು ಮೀರಿನಿಂತಾಗಲೇ ಭಯಮುಕ್ತರಾಗುವುದು.ಭಯ ಇದ್ದರೆ ಭಗವದ್ದರ್ಶನ ಸಾಧ್ಯವಿಲ್ಲ.ನಾನು ದೇಹ ಎನ್ನುವ ಭಾವ ಇರುವವರೆಗೆ ರೋಗ,ಮುಪ್ಪು,ಮರಣಗಳ ಭಯ ಇರುತ್ತದೆ.ನಾನು ದೇಹಿಯಲ್ಲ ದೇವನು ಎನ್ನುವ ಭಾವ ಮೊಳೆಯೆ ಭಯದೂರನಾಗಿ ಶಿವಸ್ವರೂಪರಾಗಬಹುದು,ಶಿವನೇ ಆಗಬಹುದು.ಅಜ್ಞಾನವು ಭಯದ ಕಾರಣ.ಅಜ್ಞಾನವೇ ಸಂಸಾರದ ತೊಡಕಿನ ಕಾರಣ.ಅಜ್ಞಾನದಿಂದ ಭಯ,ಭಯದಿಂದ ಭವ.ರಾಗ- ದ್ವೇಷಗಳು,ಮೋಹ- ಮಮಕಾರಗಳು ಅಜ್ಞಾನದಿಂದ ಹುಟ್ಟುತ್ತವೆ.ಅಜ್ಞಾನವನ್ನು ಸುಟ್ಟರೆ ಭವದ ಬೀಜವೂ ಸುಟ್ಟುಹೋಗುತ್ತದೆ.ಸಾವಿನ ಭಯ ಇರುವವರೆಗೆ ದೇವನ ಸಾನ್ನಿಧ್ಯವನ್ನೈದುವುದು ಸಾಧ್ಯವಿಲ್ಲ.

ಯೋಗಿಯು ಯೋಗಸಾಧನೆಯಲ್ಲಿ ತೊಡಗಿದಾಗ ಹಲವು ಭಯ,ಹಲವು ಅಡ್ಡಿ- ಆತಂಕಗಳು ಎದುರಾಗುತ್ತವೆ.ಯೋಗಿಯು ಪರಮಾತ್ಮನಲ್ಲಿ ಅನನ್ಯಭಾವದಿಂದ ಮೊರೆಹೋಗಿ ಕಾಡುವ ಭಯಭೀತಿಯಿಂದ ಮುಕ್ತನಾಗಬೇಕು.ಯೋಗಸಾಧನೆಯಿಂದ ವಿಮುಖನನ್ನಾಗಿಸಲು ಮಾಯೆಯು ಯೋಗಿಯನ್ನು ಕಾಡಿಸುವುದುಂಟು,ಪೀಡಿಸುವುದುಂಟು.ಮಾಯೆಯಿಂದುತ್ಪನ್ನವಾಗುವ ಭಯ,ಭೀತಿಗಳಿಗೆ ಯೋಗಿಯು ಅಂಜದೆ ಪರಮಾತ್ಮನ ಪಥದಲ್ಲಿ ಮುನ್ನಡೆಯಬೇಕು.ಯೋಗಸಿದ್ಧಿಯು ಒಮ್ಮೆಲೆ ಸಿದ್ಧಿಸುವುದಿಲ್ಲ.ಯೋಗಿಯು ತನ್ನ ಸಾಧನೆಯ ಬಲದಿಂದ ತಾನುದೇಹವಲ್ಲ ಎನ್ನುವುದನ್ನು ಸಾಧಿಸಬೇಕು,ತಾನು ಪ್ರಪಂಚಿಕನಲ್ಲ ಎನ್ನುವುದನ್ನು ನಿರ್ಣಯಿಸಬೇಕು,ತನಗೆ ಹುಟ್ಟು ಸಾವುಗಳಿಲ್ಲ,ಜರಾ- ಮರಣಗಳಿಲ್ಲ,ರೋಗ- ಬಾಧೆಗಳಿಲ್ಲ,ತಾನು ಶಿವಸ್ವರೂಪನು ಎನ್ನುವ ಶಿವಭಾವವನ್ನು ಅಳವಡಿಸಿಕೊಳ್ಳಬೇಕು.ಶಿವಭಾವವು ಅಳವಟ್ಟುದುದಾದರೆ ಭಯವಿಲ್ಲ,ಭವವಿಲ್ಲ.ಅಜ್ಞಾನವು ಭವದ ಮೂಲವೆಂದರಿತು,ಆಸೆಯು ಭವದ ಕಾರಣವೆಂದರಿತು ಅಜ್ಞಾನ- ಆಸೆಗಳ ಮೂಲಕ್ಕಿಳಿದು ಜ್ಞಾನಬಲದಿಂದ ಅವುಗಳನ್ನು ಸುಟ್ಟುರುಹಬೇಕು.ಭವದ ಬೇರನ್ನು ತುಂಡರಿಸಿ,ಭವಮುಕ್ತನಾಗಬೇಕು.ಇಂತಹ ಭಯಮುಕ್ತ,ಭವಮುಕ್ತ ಯೋಗಿಯೇ ನಿಜಶರಣನು.

About The Author