ಸಂಭ್ರಮದಿಂದ ಜರುಗಿದ ಶರಣಬಸವೇಶ್ವರರ ರಥೋತ್ಸವ

ಶಹಾಪುರ,,

ನಗರದಲ್ಲಿ ಶರಣಬಸವೇಶ್ವರರ ರಥೋತ್ಸವ ರವಿವಾರದಂದು ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತರ ಮಧ್ಯ ಸಂಭ್ರಮದಿಂದ ಜರುಗಿತು.ದಿಗ್ಗಿ ಬೇಸ್‌ ಹತ್ತಿರವಿರುವ ಪಂಚಕಂತಿ ಮಠದಿಂದ ಪ್ರತಿವರ್ಷ ರಥೋತ್ಸವ ನಡೆಯುತ್ತದೆ. ಚರಬಸವ ತಾತನವರ ಗುರುಗಳಾದ ಬಾಡಿಯಾಲ ಮೂಲ ಮಠದ ಚನ್ನವೀರ ಶಿವಾಚಾರ್ಯರಿಂದ ರಥೋತ್ಸವಕ್ಕೆ ಚಾಲನೆ ದೊರೆಯಿತು.

ನಗರದ ಗದ್ದುಗೆಯ ಶ್ರೀಚರಬಸವೇಶ್ವರರು ಸ್ಥಾಪಿಸಿದ ಪಂಚಕಂತಿ ಮಠಕ್ಕೆ ಕಲಬುರಗಿ ದಾಸೋಹಿ ಶರಣಬಸವೇಶ್ವರರು ಭೇಟಿ ನೀಡಿದ್ದರಂತೆ. ಅವರ, ಸ್ಮರಾರ್ಣಾಥವಾಗಿ ಪ್ರತಿ ವರ್ಷ ಕಲಬುರಗಿಯಲ್ಲಿ ನಡೆಯುವ ಶರಣಬಸವೇಶ್ವರ ರಥೋತ್ಸವದಂದೇ ನಗರದಲ್ಲಿಯೂ ಅದ್ಧೂರಿಯ ರಥೋತ್ಸವ ಜರುಗುತ್ತದೆ ಎಂದು ಶ್ರೀ ಮಠದ ಶರಣು ಬಿ.ಗದ್ದುಗೆ ತಿಳಿಸಿದರು.

ನಗರದ ಶ್ರೀಮಠದಿಂದ ದಿಗ್ಗಿಬೇಸ್ ರಸ್ತೆ ಮೂಲಕ ಗಾಂಧಿ ಚೌಕ ಹತ್ತಿರದ ಗುಗ್ಗಳ ಬಸವೇಶ್ವರ ದೇವಸ್ಥಾನದವರೆಗೂ ತೆರಳಿ ಮತ್ತೆ ವಾಪಸ್ ಮೂಲ ಮಠಕ್ಕೆ ಬಂದು ನಿಂತಿತು. ಈ ಸಂದರ್ಭದಲ್ಲಿ ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿಗಳನ್ನು ಎಸೆದು ಭಕ್ತಿ ಸರ್ಮಿಪಿಸಿದರು. ಇನ್ನೂ ಕೆಲವು ಭಕ್ತರು ರಥೋತ್ಸವದ ಮುಂಚಿತವಾಗಿ ಶ್ರೀಮಠದ ಗದ್ದುಗೆಗೆ ಕಾಯಿ, ಕರ್ಪೂರ ನೈವೇದ್ಯ ಅರ್ಪಿಸಿ ದರ್ಶನ ಪಡೆದು ಕೃತಾರ್ಥರಾದರು.

ರಥೋತ್ಸವದಲ್ಲಿ ನಗರದ ಪ್ರಮುಖರು ಸೇರಿದಂತೆ ಚರಬಸವೇಶ್ವರ ಸಂಸ್ಥಾನದ ಶರಣು ಬಿ.ಗದ್ದುಗೆ, ರಾಚಯ್ಯಸ್ವಾಮಿ ಗದ್ದುಗೆ, ವಿಶ್ವನಾಥ ಗದ್ದುಗೆ, ಶಿವಕುಮಾರ ಗದ್ದುಗೆ,‌ ಸಿದ್ದು ಆರಬೋಳ, ರಾಜೂ ಮಡ್ನಾಳ, ಅರವಿಂದ ಉಪ್ಪಿನ್ ಮತ್ತು ಡಾ.ಜಗದೀಶ ಉಪ್ಪಿನ್ ಸೇರಿದಂತೆ ಸಹಸ್ರಾರು ಜನ ಭಕ್ತರು ಪಾಲ್ಗೊಂಡಿದ್ದರು.