ಜ್ಞಾನಗಂಗೋತ್ರಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ  : ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ದೇಶಮುಖ

ಶಹಾಪುರ,,
ಶಿಕ್ಷಣದಿಂದ ಮಾತ್ರ ಪ್ರಗತಿಯನ್ನು ಕಾಣಲು ಸಾಧ್ಯ. ಶಿಕ್ಷಕರು, ಪಾಲಕರು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಎಸ್.ಬಿ.ದೇಶಮುಖ ಕಾಲೇಜಿನ ಮುಖ್ಯಸ್ಥ ಡಾ.ಶಿವರಾಜ ದೇಶಮುಖ ತಿಳಿಸಿದರು.ನಗರದ ಹಳಪೇಟೆಯ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಆರ್.ಚೆನ್ನಬಸ್ಸು ವನದುರ್ಗ ಅವರು ಮಾತನಾಡಿ, ೨೪ ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸುತ್ತಾ, ಮೌಲ್ಯಯುಕ್ತ ಶಿಕ್ಷಣಕ್ಕೆ ಮಹತ್ವ ನೀಡಿ ಹಳೇಪೇಟೆಯಲ್ಲಿ ಜ್ಞಾನಗಂಗೋತ್ರಿ ಶಾಲೆಯು ವಿಶ್ವಾಸ ಮೂಡಿಸಿದೆ, ಪಾಲಕ ಬಂಧುಗಳು ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಶಾಲೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
          ವೀರಯೋಧರಾದ ದುರ್ಗಪ್ಪ ನಾಯಕ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ಉತ್ತಮ ಅಭ್ಯಾಸದ ಜೊತೆಗೆ, ಭಾರತದ ಗೌರವವನ್ನು ಹೆಚ್ಚಿಸಬೇಕು ಎಂದು ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿ ಉತ್ಸಾಹ ತುಂಬಿದರು.
      ವೇದಿಕೆ ಮೇಲೆ ವಿಠ್ಠಲಾಚಾರ್ಯ ಪ್ರತಿನಿಧಿ, ಸಣ್ಣ ಮಾನಯ್ಯ ಹಾದಿಮನಿ, ಮಲ್ಲೇಶಪ್ಪ ಮಮದಾಪುರ, ಸಂಸ್ಥೆಯ ಅಧ್ಯಕ್ಷ ಮುರುಳಿಧರ ಕುಲ್ಕರ್ಣಿ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರ, ಸಂಪಾದಕ ಈರಣ್ಣ ಹಾದಿಮನಿ, ಲಾಲಅಹ್ಮದ ಖುರೇಶಿ, ಶಿಕ್ಷಣ ಸಂಸ್ಥೆಯ ರಾಮಚಂದ್ರ ಸಗರ, ಅಶೋಕ ಘನಾತೆ ಉಪಸ್ಥಿತರಿದ್ದರು.
 ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗೃಹರಕ್ಷಕದಳದ ಪ್ಲಾಟೂನ್ ಕಮಾಂಡರ್ ಮಲ್ಲಪ್ಪ ಕೊಂಬಿನ್, ಡೊಳ್ಳುಪದದ ಕಲಾವಿದ ಶರಣಪ್ಪ ನಗನೂರ, ಖ್ಯಾತ ಉದ್ಯಮಿ ಅಲ್ಲಾವುದ್ದೀನ ನೆಲೋಗಿ, ಶಹನಾಯಿ ವಾದಕ ದೇವಿಂದ್ರಪ್ಪ ರಸ್ತಾಪುರ, ಮೊಹರಂ ಪದದ ರಹೀಂಸಾಬ್, ಮೌನೇಶ ಬಾದ್ಯಾಪುರ ಅವರನ್ನು ಸನ್ಮಾನಿಸಿ ಗೌರವಿಸಿದರು.  ತಪ್ಪಣ್ಣ ಖ್ಯಾತನಾಳ ನಿರೂಪಿಸಿದರು, ನಾರಾಯಣಾಚಾರ್ಯ ಸಗರ ಸ್ವಾಗತಿಸಿದರು, ಶ್ರೀದೇವಿ.ಎನ್.ಸಗರ ವಂದಿಸಿದರು, ಸಂಗೀತ ಕಲಾವಿದೆ ಸ್ವಾತಿ ಪ್ರಾರ್ಥಿಸಿದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರೈತ ಗೀತೆ, ಕಿತ್ತೂರ ಚೆನ್ನಮ್ಮ ನಾಟಕ, ದೇಶಭಕ್ತಿ, ಜಾನಪದ ಮತ್ತು ಚಿತ್ರಗೀತೆಗಳು, ಏಕಪಾತ್ರ ಅಭಿನಯ ಗಮನ ಸೆಳೆದವು, ಶಾಲೆಯ ಶಿಕ್ಷಕರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು, ಪೋಷಕರು, ಶಾಲೆಯ ಹಳೆವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.