ಶಹಾಪುರ,,
ವಿದ್ಯಾರ್ಥಿ ಜೀವನವು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಗುರಿನಿಷ್ಠೆಯಿಂದ ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪತ್ರಕರ್ತ ವಿಶಾಲ್ ಶಿಂಧೆ ಹೇಳಿದರು. ತಾಲೂಕಿನ ದೋರನಹಳ್ಳಿ ಪಟ್ಟಣದ ಡಿ.ಡಿ.ಯು ಸೆಂಟ್ರಲ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಹಾಗೂ ನೈತಿಕತೆಗಳೂ ಕೂಡ ಅತ್ಯಗತ್ಯವೆಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನವನ್ನು ಸದಾ ಗೌರವಿಸಿ, ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಬೇಕು ಎಂದು ಕರೆ ನೀಡಿದರು.ಬಿಆರ್‌ಪಿ ರವಿ ಪವಾರ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧನೆ ಮಾಡಲು ಪರಿಶ್ರಮ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಲೆಯಲ್ಲಿ ಪಡೆದ ಶಿಕ್ಷಣ, ಶಿಸ್ತು ಮತ್ತು ಸಂಸ್ಕಾರಗಳು ಮುಂದಿನ ಜೀವನದ ಮಾರ್ಗದಲ್ಲಿ ಬೆಳಕಾಗುತ್ತವೆ ಎಂದು ಹೇಳಿದರು. ಹತ್ತನೇ ತರಗತಿ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರಮುಖ ಹಂತವಾಗಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ಗಳಿಸಬೇಕು ಎಂದು ಶುಭಾಶಯ ಕೋರಹೇಳಿದರು.ಶಾಲೆಯ ಪ್ರಾಂಶುಪಾಲ ಪ್ರಕಾಶ ಬಳ್ಳಾರಿ ಅವರು ಮಾತನಾಡಿ, ಹತ್ತನೇ ತರಗತಿ ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಅವಧಿಯಲ್ಲಿ ತೋರಿದ ಶ್ರಮ, ಶಿಸ್ತು ಮತ್ತು ಸಾಧನೆಯನ್ನು ಪ್ರಶಂಸಿಸಿದರು. ಮುಂದಿನ ದಿನಗಳಲ್ಲಿ ಅವರು ಉತ್ತಮ ಫಲಿತಾಂಶ ಗಳಿಸಿ ಶಾಲೆಗೆ ಹಾಗೂ ತಮ್ಮ ಪೋಷಕರಿಗೆ ಕೀರ್ತಿ ತಂದುಕೊಡಲಿ ಎಂದು ಆಶಿಸಿದರು. ವಿದ್ಯಾರ್ಥಿಗಳು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಸತ್ಯನಿಷ್ಠೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಹೇಳಿದರು.ಡಿ.ಡಿ.ಯು ಪಿಯು ಕಾಲೇಜಿನ ಪ್ರಾಂಶುಪಾಲ ಮಹೇಶ್ ಪತ್ತಾರ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊAಡು ಶಾಲೆಯೊಂದಿಗೆ ಹೊಂದಿರುವ ನೆನಪುಗಳನ್ನು ಸ್ಮರಿಸಿದರುಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಖಲೀಲ್ ಪಾಶ,ಸುನೀತಾ ಡಿ ಪಾಟೀಲ್,ಶಾರದಾ ಹೂಗಾರ್,ಲಕ್ಷ್ಮಿ ದೊಡ್ಮನೆ ,ಲಕ್ಷ್ಮಿ ಕುಂಬಾರ್ ,ಶಂಕರಬಾಯಿ,ಸಕ್ಕುಬಾಯಿ ,ಸಂಗಮ್ಮ ಮಲಗೊಂಡ,,ವಿಜಯಲಕ್ಷ್ಮಿ ಕೆ ,ಶೃತಿ ಎನ್ ,ಸುಪ್ರಭಾ,ಶಿವಮಾಳಪ್ಪ,ಬಸವರಾಜ್, ಮಹದೇವ್ ,ಜಾನ್ ಮತಾಯಿ,ವಿಜಯಲಕ್ಷ್ಮಿ ಎನ್ ,ಗೌರಮ್ಮ ,ಪ್ರೇಮ ಮುಂತಾದ ಶಿಕ್ಷಕರಿದ್ದರು.ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದು, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ವಿದ್ಯಾರ್ಥಿನಿ ಸನ್ನಿಧಿ ಮತ್ತು ಭಾಗ್ಯಶ್ರೀ ನಿರೂಪಿಸಿದರು.