ಮಹರ್ಷಿ ಭಗೀರಥರ ನಿಸ್ವಾರ್ಥ ಸೇವೆ ನಮಗೆ ದಾರಿದೀಪ : ಸಲಾದಪುರ

ಶಹಾಪುರ,,

ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಇಳಿಸಿ, ಭೂಲೋಕದ ಸಕಲ ಜೀವರಾಶಿಗಳ ದಾಹ ತಣಿಸಿದ ಮಹಾತ್ಮ. ತನಗಾಗಿ ಏನನ್ನು ಬಯಸದೆ ಸಮಾಜದ ಹಿತಕ್ಕಾಗಿ ತಪಸ್ಸು ಮಾಡಿದ ಮಹರ್ಷಿ ಭಗೀರಥರ ನಿಸ್ವಾರ್ಥ ಸೇವೆ ನಮಗೆ ದಾರಿದೀಪವಾಗಿದೆ ಎಂದು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು.

ನಗರದ ತಾ.ಪಂ. ಕಚೇರಿ ಸಭಾಂಗಣದಲ್ಲಿ ತಾಲೂಕ ಆಡಳಿತ ಹಾಗೂ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಭಗೀರಥ ಮಹರ್ಷಿಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಘೋರ ತಪಸ್ಸಿನ ಮೂಲಕ ಗಂಗಾನದಿಯನ್ನು ಭೂಮಿಗೆ ತಂದು, ಪೂರ್ವಜರ ಆತ್ಮಕ್ಕೆ ಶಾಂತಿ ಮತ್ತು ಮಾನವಕುಲದ ಕಲ್ಯಾಣಕ್ಕೆ ಕಾರಣರಾದ ಭಗೀರಥ ಮಹರ್ಷಿಯ ತ್ಯಾಗ ಮತ್ತು ಪರಿಶ್ರಮವನ್ನು ನಾವು ಸದಾ ಸ್ಮರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಸಿದ್ದಾರೂಡ ಬನ್ನಿಕೊಪ್ಪ,ಸಹಾಯಕ ಖಜಾನೆ ಅಧಿಕಾರಿ ಡಾ.ಮೋನಪ್ಪ ಎಸ್ ಶಿರವಾಳ ಮಾತನಾಡಿದರು. ಈಶ್ವರ ಶಹಪುರಕರ ವಿಶೇಷ ಉಪನ್ಯಾಸ ನೀಡಿದರು. ಪೌರಾಯುಕ್ತ ಜೀವನ್ ಕಟ್ಟಿಮನಿ, ಭಗೀರಥ ಜಯಂತ್ಯುತ್ಸವ ಸಮಿತಿ ಅಧ್ಯಕ್ಷರಾದ ಎಂ ನಾರಾಯಣ ದೋರನಹಳ್ಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಭಾಗವಹಿಸಿದ್ದರು.