ಮೂರನೇ ಕಣ್ಣು
ಸಭ್ಯತೆಯ ಎಲ್ಲೆ ಮೀರುತ್ತಿರುವ ಕನ್ಹೇರಿ ಶ್ರೀಗಳು
ಮುಕ್ಕಣ್ಣ ಕರಿಗಾರ
ಇತ್ತೀಚೆಗಷ್ಟೇ ಹೈಕೋರ್ಟ್ ನಿಂದ ರಿಲೀಫ್ ಪಡೆದಿದ್ದ ಕನ್ಹೇರಿ ಶ್ರೀಗಳು ಬುದ್ಧಿ ಕಲಿತಂತೆ ಕಾಣುತ್ತಿಲ್ಲ.ಬಹುಶಃ ಅವರ ವಿರುದ್ಧ ಕಾನೂನಿನ ಕಠಿಣಕ್ರಮವಾಗದ ಹೊರತು ಕನ್ಹೇರಿ ಶ್ರೀಗಳು ಪಾಠ ಕಲಿಯುವ ಲಕ್ಷಣ ಇಲ್ಲ.ಬಸವತತ್ತ್ವದ ಪರ ಇರುವ ಲಿಂಗಾಯತ ಸ್ವಾಮಿಗಳನ್ನು’ ಬಸವ ತಾಲಿಬಾನಿಗಳು’ ಎಂದು ಕರೆಯುವ ಮೂಲಕ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರು.
ಬೆಳಗಾವಿ ಜಿಲ್ಲೆಯ ರಾಯಭಾಗದದಲ್ಲಿ ನಿನ್ನೆ ನಡೆದ ಹನುಮ ಮಾಲಾದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಹನುಮಮಾಲಾ ಧಾರಣೆಯನ್ನು ಲಿಂಗಾಯತ ಸ್ವಾಮಿಗಳು ವಿರೋಧಿಸಬಹುದು ಎಂದು ತರ್ಕಿಸಿ ‘ ಕಾವಿಧಾರಿ ತಾಲಿಬಾನಿಗಳು,ಮಾರ್ಕಿಸ್ಟರು ಇದನ್ನು ವಿರೋಧಿಸಬಹುದು’ ಎಂದಿದ್ದಾರೆ. ಇದು ಅವರಾಗಿಯೇ ಮಾಡಿಕೊಂಡ ಎಡವಟ್ಟು,ಆಹ್ವಾನಿಸಿಕೊಂಡ ಆಪತ್ತು.ಹನುಮಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಹನುಮ ಮಾಲೆಯ ಮಹತ್ವದ ಬಗ್ಗೆ ಅವರು ಒತ್ತಿಹೇಳಬಹುದಿತ್ತು,ಹನುಮ ಭಕ್ತರಲ್ಲಿ ಹನುಮಭಕ್ತಿ ತತ್ತ್ವವನ್ನು ಉಪದೇಶಿಸಬೇಕಿತ್ತು.ವಿನಾ ಕಾರಣ ಲಿಂಗಾಯತ ಸ್ವಾಮಿಗಳನ್ನು ಎಳೆತರುವ ಅಗತ್ಯ ಇರಲಿಲ್ಲ. ಬಹುಶಃ ಪ್ರಚಾರದ ಹುಚ್ಚು ಹಿಡಿದಿರಬೇಕು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳಿಗೆ. ಒಬ್ಬ ಮಹಾನ್ ಶರಣರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಒಂದು ‘ಸಿದ್ಧಮಠ’ ದ ಪೀಠಾಧಿಪತಿಯ ಹುದ್ದೆಯಲ್ಲಿ ಕುಳಿತಿದ್ದೇನೆ ಎನ್ನುವ ಪ್ರಜ್ಞೆಯೂ ಕಾಡಸಿದ್ಧೇಶ್ವರ ಸ್ವಾಮಿಗಳಿಗೆ ಇರದೆ ಇರುವುದು ವಿಷಾದನೀಯ. ಟಿ ವಿ ವಾಹಿನಿಯಲ್ಲಿ ನಾನು ಆ ಕಾರ್ಯಕ್ರಮವನ್ನು ನೋಡಿ ಅವರಾಡಿದ ಮಾತುಗಳನ್ನು ಕೇಳಿದೆ .ಲಿಂಗಾಯತ ಸ್ವಾಮಿಗಳ ಬಗೆಗಷ್ಟೇ ಅಲ್ಲ ಅವರು ದೇಶದ ಸಂವಿಧಾನ, ಕಾನೂನನ್ನು ಗಾಳಿಗೆ ತೂರಿ ಮಾತನಾಡಿದರು.ಮುಸ್ಲಿಂ ಸಮುದಾಯದ ಬಗೆಗಿನ ಅವರ ಅಸಹನೆ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.
ಲಿಂಗಾಯತ ಸ್ವಾಮಿಗಳನ್ನು ‘ ಬಸವ ತಾಲಿಬಾನಿಗಳು’ ಎಂದು ಕರೆದು ತಾವೇನೋ ಘನಕಾರ್ಯ ಮಾಡಿದವರಂತೆ ಬೀಗುತ್ತಿರಬಹುದು ಕನ್ಹೇರಿ ಶ್ರೀಗಳು. ಆದರೆ ಜನರ ದೃಷ್ಟಿಯಲ್ಲಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರೇ ಸಣ್ಣವರು ಆಗಿದ್ದಾರೆ.ಕಾವಿಧಾರಿಗಳಿಗೆ ಗೌರವ ಸಿಗುವುದು ಅವರು ಸುಸಂಸ್ಕೃತರಾಗಿದ್ದರೆ ಮಾತ್ರ.ಅಸಂಸ್ಕೃತ ಕಾವಿಧಾರಿಗಳನ್ನು ಪ್ರಬುದ್ಧ ಜನಸಮುದಾಯ ಎಂದೋ ತಿರಸ್ಕರಿಸಿ ಆಗಿದೆ.ಸಂನ್ಯಾಸಿಗಳು ನಿರ್ಲಿಪ್ತ ಮನೋಭಾವನೆ ಹೊಂದಿರಬೇಕು,ನಡೆ ನುಡಿಗಳಿಂದ ಆದರ್ಶರಾಗಿರಬೇಕು.ಸರ್ವಜನಹಿತ ಚಿಂತನೆಯು ಸಂನ್ಯಾಸಧರ್ಮದ ಮೂಲಮೌಲ್ಯ.ಸಂನ್ಯಾಸ ಧರ್ಮದ ಓನಾಮವೇ ಗೊತ್ತಿರದ ಕಾಡಸಿದ್ಧೇಶ್ವರ ಸ್ವಾಮಿಯವರು ಸಂನ್ಯಾಸಾಶ್ರಮಕ್ಕೂ ಅಪಚಾರ ಎಸಗುತ್ತಿದ್ದಾರೆ.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರು ಎಂದು ಕರ್ನಾಟಕ ಸರಕಾರವೇ ಘೋಷಿಸಿದೆ.ಅಂದರೆ ಕರ್ನಾಟಕ ಸರಕಾರವು ಬಸವ ತತ್ತ್ವವನ್ನು ಒಪ್ಪಿದೆ ಎಂದರ್ಥ.ಬಸವಣ್ಣನವರ ಶಿವಸಮಾಜ ನಿರ್ಮಾಣದ ಕನಸು ಮನುವಾದಿಗಳಿಗೆ ಅರ್ಥವಾಗುವುದಿಲ್ಲ.ಸರ್ವೋದಯ ಸಮಾಜ ನಿರ್ಮಾಣದ ಕನಸುಣಿಯಾಗಿದ್ದ ಬಸವಣ್ಣನವರನ್ನು ನಾಡು,ದೇಶವನ್ನು ಶಿಲಾಯುಗಕ್ಕೆ ಕೊಂಡೊಯ್ಯ ಬಯಸುವ ಮತಿವಿಕಲರು ಇಷ್ಟಪಡುವುದಿಲ್ಲ. ಬಸವಣ್ಣನವರ ವಿಚಾರಗಳನ್ನು ಕೆಲವು ಲಿಂಗಾಯತ ಸ್ವಾಮಿಗಳು ಅಪಾರ್ಥ ಮಾಡಿಕೊಂಡಿರುವುದನ್ನು ನಾನೂ ಆಗಾಗ ಪ್ರಸ್ತಾಪಿಸಿದ್ದೇನೆ,ಬರೆದಿದ್ದೇನೆ.ಆದರೆ ಲಿಂಗಾಯತ ಮಠಾಧೀಶರುಗಳು ಹೋರಾಟ,ಅವಿರತ ಪ್ರಯತ್ನದ ಫಲವಾಗಿ ಸರಕಾರವು ಬಸವಣ್ಣನವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಿದೆ.ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳಿಗೆ.ಲಿಂಗಾಯತ ಸ್ವಾಮಿಗಳು ಬಸವತತ್ತ್ವವನ್ನು ಪ್ರಚಾರ ಮಾಡುತ್ತಿದ್ದಾರೆಯೇ ಹೊರತು ಅವರೇನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಲ್ಲ ಅವರನ್ನು’ ಬಸವ ತಾಲಿಬಾನಿಗಳು” ಎಂದು ಕರೆಯಲು.ಸಂವಿಧಾನದ ಆಶಯಗಳೇ ಬಸವ ತತ್ತ್ವದಲ್ಲಿವೆ.ಸಂವಿಧಾನ ಬದ್ಧವಾಗಿ ನಡೆಯುತ್ತಿರುವ ಲಿಂಗಾಯತ ಸ್ವಾಮಿಗಳನ್ನು ಬಸವ ತಾಲಿಬಾನಿಗಳು ಎಂದು ನಿಂದಿಸುವುದು ಸರಿಯಲ್ಲ.
ಕನ್ಹೇರಿ ಶ್ರೀಗಳು ಸಂವಿಧಾನಕ್ಕಿಂತ ದೊಡ್ಡವರಲ್ಲ.ಸಂವಿಧಾನದ ಜಾತ್ಯಾತೀತ, ಧರ್ಮನಿರಪೇಕ್ಷ ಪದಗಳನ್ನು ಅವರು ಗೌರವಿಸಬೇಕು.ಸಂವಿಧಾನದ ಪೀಠಿಕೆಯ ” ಭಾರತದ ಪ್ರಜೆಗಳಾದ ನಾವು” ಪದಪುಂಜಗಳಲ್ಲಿ ಮುಸ್ಲಿಮರು ಒಳಗೊಳ್ಳುತ್ತಾರೆ ಎನ್ನುವುದು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರ ಲಕ್ಷ್ಯದಲ್ಲಿ ಇರಬೇಕು.ಭಾರತದಲ್ಲಿ ವಾಸಿಸುತ್ತಿರುವ 140 ಕೋಟಿ ಜನರೂ ಸಹ ಸಂವಿಧಾನದ ಪೀಠಿಕೆಯ ” ನಾವು” ಪದದಲ್ಲಿ ಸಮಾವೇಶಗೊಳ್ಳುತ್ತಾರೆ.
ತಮ್ಮ ಮತ ಸಿದ್ಧಾಂತವೇ ಶ್ರೇಷ್ಠವೆಂದು ಭ್ರಮಿಸಿರುವ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರಿಗೆ ಬಸವಣ್ಣನವರ
‘ ಇವನಾರವ ಇವನಾರವ ಇವನಾರವ ಎನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಇವ ನಮ್ಮವ ಎನಿಸಯ್ಯ
ಕೂಡಲಸಂಗಮದೇವರ ಮನೆಯ ಮಗನೆನಿಸಯ್ಯ
ವಚನಾರ್ಥ ಅರ್ಥವಾಗುವುದಿಲ್ಲ.ಇವನಾರವನೆನಿಸದೆ,ಇವ ನಮ್ಮವನೆನಿಸುವ ಬಸವ ಸಮಷ್ಟಿ ತತ್ತ್ವವೇ ಸಂವಿಧಾನದ ” ನಾವು” ಪದದ ಅಂತರ್ಗತ ತತ್ತ್ವ ಎನ್ನುವುದು ಸಂನ್ಯಾಸಧರ್ಮಕ್ಕೆ ವಿರುದ್ಧವಾಗಿ ‘ ನನ್ನವರು’ ‘ ಅನ್ಯರು’ ಎಂದು ಬಗೆಯುವ ಕನ್ಹೇರಿ ಸ್ವಾಮಿಗಳಿಗೆ ಅರ್ಥವಾಗುವುದಾದರೂ ಹೇಗೆ?
೦೧.೧೨.೨೦೨೫