ವಿಶ್ವೇಶ್ವರ ಮಹಾತ್ಮೆ : ವಿಶ್ವೇಶ್ವರನಣುಗನ ನುಡಿ ನಿಜವಾಯಿತು,ಕಸಿದುಕೊಳ್ಳಲಿಲ್ಲ ಯಾರೂ ಸಿದ್ಧರಾಮಯ್ಯನವರಿಂದ ಮುಖ್ಯಮಂತ್ರಿ ಪದವಿಯನ್ನು ಶ್ರೀ ಮುಕ್ಕಣ್ಣ ಕರಿಗಾರ
ಪೀಠಾಧ್ಯಕ್ಷರು
ಮಹಾಶೈವ ಧರ್ಮಪೀಠ, ಶ್ರೀಕ್ಷೇತ್ರ ಕೈಲಾಸ,ಗಬ್ಬೂರು 584113
********†***************†**************
ಸಿದ್ಧರಾಮಯ್ಯನವರ ಮುಖ್ಯಮಂತ್ರಿ ಪದವಿಗೆ ಕವಿದಿದ್ದ ಕಾರ್ಮೋಡವು ಕರಗಿ ‘ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ’ ಎನ್ನುವ ಭರವಸೆಯ ನಿಚ್ಚಳ ಬೆಳಕು ಮೂಡಿದೆ. ನಾವು ಇದನ್ನು 14.07.2025 ರಂದು ಬರೆದಿದ್ದ ಕಾಲಜ್ಞಾನ ವಿಶ್ಲೇಷಣೆಯ ಲೇಖನದಲ್ಲಿಯೇ ಸ್ಪಷ್ಟಪಡಿಸಿದ್ದೆವು ‘ ಈ ಸದ್ಯಕ್ಕೆ ಸಿದ್ಧರಾಮಯ್ಯನವರ ಮುಖ್ಯಮಂತ್ರಿ ಪದವಿಗೆ ಯಾವುದೇ ಗಂಡಾಂತರ ಇಲ್ಲ’ ಎಂದು. ಈಗ ಅದು ನಿಜವಾಗಿದೆ.ವಿಶ್ವೇಶ್ವರ ಶಿವನ ಕಾಲಜ್ಞಾನ ನುಡಿ ಹುಸಿಯಾಗದು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು ‘ನವೆಂಬರ್ ಕ್ರಾಂತಿ’ ಎಂದು ಘೋಷಿಸಿದ್ದರು.ಹೊಟ್ಟೆಪಾಡಿಗಾಗಿ ನೂರೆಂಟು ಗಳಹುವ ಜ್ಯೋತಿಷಿಗಳು ಸಿದ್ಧರಾಮಯ್ಯನವರ ಅಧಿಕಾರ ಹೋಗಿಯೇ ಬಿಡುತ್ತದೆ ಎನ್ನುವಂತೆ ಬೊಗಳುತ್ತಿದ್ದರು.ಒಬ್ಬ ಜ್ಯೋತಿಷಿಯಂತೂ ಇನ್ನೆರಡು ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ,ದೇವಿ ಬಲಗಡೆ ಹೂವು ಪ್ರಸಾದಿಸಿದ್ದಾಳೆ’ ಎಂದು ಬೊಗಳೆ ಹೊಡೆದಿದ್ದ.ದೇವಿ ಹುಲಿಗೆಮ್ಮನ ಭಕ್ತಳೆನ್ನುವ ಹುಬ್ಬಳ್ಳಿಯ ಮಹಿಳೆಯೊಬ್ಬಳು ‘ಸಿದ್ಧರಾಮಯ್ಯನವರು ಅಧಿಕಾರ ಬಿಟ್ಟುಕೊಡುತ್ತಾರೆ’ ಎಂದು ದೇವರ ಹೇಳಿಕೆ ಹೇಳಿದ್ದಳು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದ ಅರ್ಚಕ ( ಪೀಠಾಧಿಪತಿಗಳಲ್ಲ) ಕೂಡ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಆಗುತ್ತಾರೆ ಅಂತ ಶಾಸ್ತ್ರನುಡಿದಿದ್ದರು !ಗಿಳಿಶಾಸ್ತ್ರ,ಬಣಗುದೈವಗಳು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧಿಕಾರವನ್ನು ಕಿತ್ತುಕೊಡಲಿಲ್ಲ ಡಿ.ಕೆ.ಶಿವಕುಮಾರ್ ಅವರಿಗೆ ! ವಿಶ್ವನಿಯಾಮಕನಾಗಿರುವ ವಿಶ್ವೇಶ್ವರ ಶಿವನ ಸಂಕಲ್ಪವೇ ‘ನಿಯತಿ’ ಯಾಗಿ ಜಗತ್ತನ್ನು ನಿಯಂತ್ರಿಸುತ್ತದೆ.
ಈ ವರ್ಷದ ಮೈಲಾರನ ‘ ತುಂಬಿದ ಕೊಡ ತುಳುಕಿತಲೇ ಪರಾಕ್ ‘ ನುಡಿಯನ್ನು ಡಿ .ಕೆ ಶಿವಕುಮಾರ್ ಅವರ ಪರವಾಗಿ ತಪ್ಪಾಗಿ ಅರ್ಥೈಸಿ,ವ್ಯಾಖ್ಯಾನಿಸಿದ್ದ ಮೈಲಾರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ಅಪಾರ್ಥ ವ್ಯಾಖ್ಯಾನವನ್ನು ಖಂಡಿಸಿ ನಾವು 14.07.2025 ರಂದು ” ಹೂವಿನಹಡಗಲಿ ಮೈಲಾರನ ಹೇಳಿಕೆ: ‘ ತುಂಬಿದ ಕೊಡ ತುಳುಕಿತಲೇ ಪರಾಕ್’; ಕಾರಣಿಕ ನುಡಿಯನ್ನು ತಪ್ಪಾಗಿ ಅರ್ಥೈಸಿದ ವೆಂಕಪ್ಪಯ್ಯ ಒಡೆಯರ್ ” ಎನ್ನುವ ಲೇಖನವನ್ನು ಬರೆದಿದ್ದೆವು.ಆ ಲೇಖನದಲ್ಲಿ ಈ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧಿಕಾರಕ್ಕೆ ಗಂಡಾಂತರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆವು.ಆ ಲೇಖನದಲ್ಲಿ ನಾವು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಕಾಲ ಪಕ್ವವಾಗುವವರೆಗೆ ‘ ಕಾಯಬೇಕು’ ಎಂದು ಹೇಳಿದ್ದೆವು.ಈಗ ಕಾಂಗ್ರೆಸ್ ಹೈಕಮಾಂಡ್ ಕೂಡ ‘ ಕಾಯಬೇಕು’ ಎನ್ನುವ ಸಂದೇಶವನ್ನೇ ರವಾನಿಸಿದೆ ಡಿ.ಕೆ.ಶಿವಕುಮಾರ್ ಅವರಿಗೆ. ನಮ್ಮ ಕಾಲಜ್ಞಾನ ವಿಶ್ಲೇಷಣೆಯ ಲೇಖನವು ‘ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ ಯು ಪ್ರಕಟಿಸಿದ ” ಸಂವಿಧಾನದ ಮೌಲ್ಯಗಳಿಗೆ ಜೀವತುಂಬಿದ ಬಸವಭೂಷಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ” ಎನ್ನುವ ಪುಸ್ತಕದಲ್ಲಿ 09 ನೆಯ ಲೇಖನವಾಗಿ ಪ್ರಕಟಗೊಂಡಿದೆ. ನಮ್ಮ ಆತ್ಮೀಯರೊಬ್ಬರು ಇತ್ತೀಚೆಗೆ ಆ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತಲುಪಿಸಿದ್ದಾರೆ.ಡಿ.ಕೆ.ಶಿವಕುಮಾರ್ ಅವರ ಪರವಾಗಿ ಮೈಲಾರನ ಕಾರಣಿಕವನ್ನು ಅರ್ಥೈಸಿದ ವೆಂಕಪ್ಪಯ್ಯ ಒಡೆಯರ್ ಅವರ ಸಲ್ಲದ ದುರ್ನತೆಯನ್ನು ಕೆಡೆನುಡಿದು 14.07.2025 ರಂದು ನಾವು ಬರೆದಿದ್ದ ‘ಹೂವಿನ ಹಡಗಲಿ ಮೈಲಾರನ ಹೇಳಿಕೆ: ‘”ತುಂಬಿದ ಕೊಡ ತುಳುಕಿತಲೇ ಪರಾಕ್ “; ಕಾರಣಿಕ ನುಡಿಯನ್ನು ತಪ್ಪಾಗಿ ಅರ್ಥೈಸಿದ ವೆಂಕಪ್ಪಯ್ಯ ಒಡೆಯರ್’ ಕಾಲಜ್ಞಾನ ವಿಶ್ಲೇಷಣೆಯ ಲೇಖನದ ಎರಡು ಪ್ಯಾರಾಗಳನ್ನು ಮಹಾಶೈವ ಧರ್ಮಪೀಠದ ಓದುಗರ ಬಳಗಕ್ಕಾಗಿ ಇಲ್ಲಿ ಉದ್ಧರಿಸುತ್ತಿದ್ದೇವೆ .
” ಒಂದು ಸಂಗತಿ ಎಲ್ಲರ ಗಮನದಲ್ಲಿರಬೇಕು,ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆದದ್ದು ಕಾಂಗ್ರೆಸ್ ಪಕ್ಷದ ಶಾಸಕರ ಬಲದಿಂದ ಮತ್ತು ದೈವಾನುಗ್ರಹದಿಂದ.ದೇವರನ್ನು ನಂಬದ,ಪೂಜಿಸದ ಸಿದ್ಧರಾಮಯ್ಯನವರು ಹಿಂದಣ ಜನ್ಮಗಳ ಸತ್ಕರ್ಮಗಳ ಫಲವಾಗಿ ಮುಖ್ಯಮಂತ್ರಿ ಪದವಿಯನ್ನು ಅನುಭವಿಸುತ್ತಿದ್ದಾರೆ.ಅವರ ಮುಖ್ಯವಾಗಿ ಪದವಿ ಹೋಗಬೇಕು ಎಂದರೆ ದೈವ ಅವರ ವಿರುದ್ಧ ಮುನಿಸಿಕೊಳ್ಳಬೇಕು.ಆದರೆ ಪರಮಾತ್ಮನ ಅನುಗ್ರಹಬಲ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗಿದೆ.ವಿಶ್ವನಿಯಾಮಕನಾದ ವಿಶ್ವೇಶ್ವರ ಶಿವನ ಹೊರತು ಯಾವ ದೈವವೂ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸದು ”
” ಯೌಗಿಕ ಬಲದಿಂದ ಆರೈದು ಹೇಳುವುದಾದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾರದೇ ಒತ್ತಡ,ಯಾವುದೇ ತಂತ್ರಕ್ಕೆ ಮಣಿದು ತಮ್ಮ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಲಾರರು.ಆದಾಗ್ಯೂ ಅವರು ಐದುವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಲಾಗದು.ಅವರ ಆರೋಗ್ಯ ಕೈಕೊಡಬಹುದು,ದೇಹಾರೋಗ್ಯ ವಿಷಮಸ್ಥಿತಿಗೆ ತಲುಪಬಹುದು. ಆಗ ಅವರಾಗಿಯೇ ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಡಬಹುದು.ಅಲ್ಲದೆ ಡಿ.ಕೆ.ಶಿವಕುಮಾರ್ ಅವರಿಗೆ ಇರುವ ಮುಖ್ಯಮಂತ್ರಿ ಯೋಗ ದೀರ್ಘಕಾಲದ ಯೋಗವಲ್ಲ.ಹಾಗಾಗಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಅಧಿಕಾರದ ಕೊನೆಯ ಭಾಗದಲ್ಲಿ ಮುಖ್ಯಮಂತ್ರಿ ಆಗಬಹುದು. ಆದರೂ ಅದಕ್ಕೂ ಸಾಕಷ್ಟು ಅಡ್ಡಿ ಆತಂಕಗಳಿವೆ ಎನ್ನುವುದನ್ನು ಅವರು ಮರೆಯಬಾರದು.ಪರಿವರ್ತನಾ ಶೀಲವಾದ ಕಾಲಗತಿಯಲ್ಲಿ ಪರಿವರ್ತನೆಯೊಂದೇ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಇರುವ ಏಕೈಕ ಆಸರೆ.ಮನಸ್ಸುಗಳ ಪರಿವರ್ತನೆ ಆಗಬೇಕು. ಅದರಲ್ಲೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮನಸ್ಸು ಪರಿವರ್ತನೆ ಆಗಬೇಕು. ಡಿ.ಕೆ.ಶಿವಕುಮಾರ್ ಅವರು ಸಿದ್ಧರಾಮಯ್ಯನವರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿದರೆ ಅವರು ಸುಲಭವಾಗಿ ಮುಖ್ಯಮಂತ್ರಿ ಆಗುತ್ತಾರೆ ”
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಂದ ನಿನ್ನೆ ಬಂದ ಸಂದೇಶ,ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದರೆ ನಾವು 14.07.2025 ರಂದೇ ಬರೆದಿದ್ದ ಲೇಖನಾಂತರ್ಗತ ಸತ್ಯವು ಅಕ್ಷರಶಃ ನಿಜವಾಗಿದೆ ಎನ್ನುವುದು ಸರ್ವವೇದ್ಯ.ಕಾಸಿನಾಸೆಗಾಗಿ ಹೋಮ -ಹವನಗಳನ್ನು ಮಾಡುವ ಶಾಸ್ತ್ರಿಗಳು ಹಣೆಬರಹವನ್ನು ಬದಲಿಸಲಾರರು.ತಮ್ಮ ಭವಿಷ್ಯವನ್ನೇ ಅರಿಯದ ಗಿಳಿಶಾಸ್ತ್ರ,ಪಂಚಾಂಗಗಳ ಜ್ಯೋತಿಷಿಗಳು ಯಾರ ಭವಿಷ್ಯವನ್ನೂ ನಿರ್ಧರಿಸಲಾರರು.ಪರಶಿವನ ಅನುಗ್ರಹದಿಂದ ದೇವರು, ದೈವಗಳಾಗಿ ಪೂಜೆಗೊಳ್ಳುವ ದೈವಗಳು ಸರ್ವಶಕ್ತರಲ್ಲ ಎನ್ನುವುದು ಈಗ ದೃಢಪಟ್ಟಿದೆ.ಪರಮಾತ್ಮನ ನಿಯತಿ ನಿಯಮದಂತೆ ನಡೆಯುವ ಜಗತ್ತಿನಲ್ಲಿ ಪರಮಾತ್ಮನ ಸಂಕಲ್ಪದ ಆಚೆ ಏನೂ ನಡೆಯದು.ಪೂರ್ವನಿರ್ಧಾರಿತವಾದ ಬದುಕಿನಲ್ಲಿ ಕಾಲವು ಮಹತ್ವದ ಪಾತ್ರವನ್ನು ವಹಿಸುತ್ತಿದ್ದು ಎಲ್ಲರೂ ಅವರವರ ಅಧಿಕಾರ ಯೋಗದ ಕಾಲ ಬರುವವರೆಗೆ ಕಾಯಲೇಬೇಕು.
೨೯.೧೧.೨೦೨೫