ಸಂವಿಧಾನದ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡುವುದೇ ಗಣರಾಜ್ಯೋತ್ಸವಕ್ಕೆ ಸಲ್ಲಿಸುವ ಗೌರವ : ಮುಕ್ಕಣ್ಣ ಕರಿಗಾರ

 

ಕಾಗಿನೆಲೆ, ಹಾವೇರಿ (ಕಾಗಿನೆಲೆ) :  ಜನೆವರಿ26,2026 ಒಕ್ಕೂಟ ವ್ಯವಸ್ಥೆಯ ಗಣತಂತ್ರ ಭಾರತವನ್ನು ನಿರ್ದೇಶಿಸಿ,ನಿಯಂತ್ರಿಸುವ ನಮ್ಮ ಸಂವಿಧಾನವು ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಡೆದಿದೆ.ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದರ್ಶಿತ್ವದಲ್ಲಿ ಮೂಡಿದ ಭಾರತದ ಸಂವಿಧಾನವು ಸಮಾನತೆ,ಸಹೋದರತೆ ಮತ್ತು ಸರ್ವೋದಯ ತತ್ತ್ವಗಳನ್ನು ಪ್ರತಿಪಾದಿಸುತ್ತದೆ.ನಮ್ಮ ಸಂವಿಧಾನವು ಈ ದೇಶದಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಘನತೆಯಿಂದ ಬಾಳುವ ಹಕ್ಕನ್ನು ನೀಡಿದ್ದು ಜಾತಿ,ಮತ,ಧರ್ಮಗಳ ಆಧಾರದ ಮೇಲೆ ಭೇದ,ತಾರತಮ್ಯ ಮಾಡಲು ಅವಕಾಶವಿಲ್ಲ.ಸಾರ್ವಜನಿಕ ಬದುಕಿನಲ್ಲಿ ಹಕ್ಕು ಅವಕಾಶಗಳನ್ನು ಪಡೆಯಲು ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂದು  ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಹೇಳಿದರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಕಛೇರಿಯ ಆವರಣದಲ್ಲಿ ಏರ್ಪಡಿಸಲಾಗಿದ್ದ 77 ನೆಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಭಾರತದ ಸಂವಿಧಾನವು ದೇಶದ ಆಡಳಿತ ಪದ್ಧತಿಯನ್ನು ರಾಜ್ಯಗಳ ಒಕ್ಕೂಟದ ಗಣತಂತ್ರವ್ಯವಸ್ಥೆ ಎಂದು ಕರೆದಿದ್ದು ಕೇಂದ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಕೇಂದ್ರಸರಕಾರ ಮತ್ತು ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆ ಮತ್ತು ಭಾವನೆಗಳನ್ನು ಪ್ರತಿನಿಧಿಸುವ ರಾಜ್ಯ ಸರಕಾರಗಳ ಸಮ್ಮಿಳಿತ ಒಕ್ಕೂಟ ವ್ಯವಸ್ಥೆಯು ಭಾರತದ ರಾಜ್ಯಾಡಳಿತ ವ್ಯವಸ್ಥೆಯಾಗಿದೆ.ಕೇಂದ್ರ ಮತ್ತು ರಾಜ್ಯಸರಕಾರಗಳು ದೇಶದ ಏಕತೆ,ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಜವಾಬ್ದಾರಿಯನ್ನು ಹೊಂದಿವೆ.ಭಾರತದ ಸಂವಿಧಾನದ ಪೀಠಿಕೆಯು ಸಂವಿಧಾನದ ಹೃದಯದಂತಿದ್ದು ಅದು ಭಾರತದ ಜನತೆಯೇ ಭಾರತದ ಶಕ್ತಿ,ಸಂವಿಧಾನದ ಸತ್ತ್ವ ಎನ್ನುತ್ತದೆ.ಪೀಠಿಕೆಯ” ಭಾರತದ ಪ್ರಜೆಗಳಾದ ನಾವು” ಎನ್ನುವ ಪ್ರಾರಂಭಿಕ ವಾಕ್ಯಗಳು ದೇಶದ ಪ್ರಜಾ ಸಮಷ್ಟಿಯು ಸಂವಿಧಾನಕ್ಕೆ ಸಮರ್ಪಣಾಭಾವದಿಂದ ಅರ್ಪಿಸಿಕೊಂಡುದುದನ್ನು ಒತ್ತಿ ಹೇಳುತ್ತಿದ್ದು ಗಣರಾಜ್ಯೋತ್ಸವದ ಈ ಶುಭಸಂದರ್ಭದಲ್ಲಿ ನಾವು ಭಾರತದ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಸಂಕಲ್ಪ ಮಾಡಬೇಕಿದೆ.ಸಂವಿಧಾನದ ಜಾತ್ಯಾತೀತ ,ಸಮಾನತೆ ಮತ್ತು ಸರ್ವೋನ್ನತಿಯ ಆಶಯಗಳನ್ನು ಅರ್ಥಮಾಡಿಕೊಂಡು ಸಮಾನತೆಯ ಆಧಾರದ ಸರ್ವೋದಯ ಭಾರತವನ್ನು ಕಟ್ಟುವ ಸಂಕಲ್ಪ ಮಾಡೋಣ ಎಂದರು.

ಪ್ರಾಧಿಕಾರದ ಸಂಶೋಧಕ ಡಾ.ಜಗನ್ನಾಥ ಗೇನಣ್ಣನವರ್, ಲೆಕ್ಕಾಧೀಕ್ಷಕರಾದ ಸಿ ಬಿ ಸಪ್ಪಿನ್, ಗ್ರಾಮ ಪಂಚಾಯತಿಗಳ ಸದಸ್ಯರು, ಪುರಪ್ರಮುಖರು ಪ್ರಾಧಿಕಾರದ ಅಧಿಕಾರಿಗಳು,ಕಾಗಿನೆಲೆ ಮತ್ತು ಬಾಡದ ಸಿಬ್ಬಂದಿಯವರು, ಕನಕದಾಸ ಸರಕಾರಿ ಪ್ರೌಢಶಾಲೆಯ ಶಿಕ್ಷಕರುಗಳು,ವಿದ್ಯಾರ್ಥಿ,ವಿದ್ಯಾರ್ಥಿನಿಯರುಗಳು ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.