ಸಂವಿಧಾನವೊಂದೇ ತಮ್ಮನ್ನು ರಕ್ಷಿಸುವ ಮಹಾನ್ ಅಸ್ತ್ರ ಎಂದು ದೇಶದ ದುರ್ಬಲವರ್ಗದವರೆಲ್ಲ ತಿಳಿದುಕೊಳ್ಳಬೇಕಿದೆ.

ಸಂವಿಧಾನವೊಂದೇ ತಮ್ಮನ್ನು ರಕ್ಷಿಸುವ ಮಹಾನ್ ಅಸ್ತ್ರ ಎಂದು ದೇಶದ ದುರ್ಬಲವರ್ಗದವರೆಲ್ಲ ತಿಳಿದುಕೊಳ್ಳಬೇಕಿದೆ.

 ಮುಕ್ಕಣ್ಣ ಕರಿಗಾರ

 

ನಾಳೆ,ನವೆಂಬರ್ 26 ರಂದು ದೇಶದಾದ್ಯಂತ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ನಮ್ಮ ಸಂವಿಧಾನ ರಚನಾ ಸಭೆಯು ನವೆಂಬರ್ 26,1949 ರಂದು ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ.ಸಂವಿಧಾನವು ಜಾರಿಗೆ ಬಂದಿದ್ದು 1950 ರ ಜನೆವರಿ 26 ರಂದು. ಆ ದಿನವನ್ನು ಗಣರಾಜ್ಯೋತ್ಸವ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಭಾರತದ ಸಂವಿಧಾನವು ಅಖಂಡತೆಯನ್ನು,ಏಕತೆಯನ್ನು ಎತ್ತಿಹಿಡಿಯುವ ಸಾರ್ವಭೌಮತೆಯ ಸಂಕೇತ ಎನ್ನುವ ಭಾವನೆಯನ್ನು ಪ್ರಜಾಸಮಸ್ತರಲ್ಲಿ ಬಿತ್ತಲಾಗುತ್ತಿದೆ.ನವೆಂಬರ್ 26,2014 ರಿಂದ ಸಂವಿಧಾನ ದಿನಾಚರಣೆ ಎಂದು ಆಚರಿಸಲ್ಪಡುವ ಈ ರಾಷ್ಟ್ರೀಯ ದಿನಾಚರಣೆಯನ್ನು ಅದಕ್ಕೂ ಪೂರ್ವದಲ್ಲಿ ‘ ರಾಷ್ಟ್ರೀಯ ಕಾನೂನು ದಿನ’ ವನ್ನಾಗಿ ಆಚರಿಸಲಾಗುತ್ತಿತ್ತು.

 

ಸಂವಿಧಾನ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಸಂವಿಧಾನದ ಮಹತ್ವ ಮತ್ತು ಪ್ರಸ್ತುತತೆಯ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ. ಭಾರತವು ಇಂದು ಜಗತ್ತಿನ ಪ್ರಗತಿಶೀಲ ರಾಷ್ಟ್ರಗಳಲ್ಲಿ ಒಂದಾಗಿ ಎದ್ದು ಬರಲು,ವಿಶ್ವಗುರು ಎನ್ನುವ ಹೆಮ್ಮೆಯನ್ನು ಪಡೆಯಲು ಕಾರಣವಾದದ್ದು ಬಾಬಾಸಾಹೇಬ್ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ದೂರದರ್ಶಿತ್ವದ ದಾರ್ಶನಿಕ ನೋಟದಲ್ಲಿ ಹೊರಹೊಮ್ಮಿದ ನಮ್ಮ ಹೆಮ್ಮೆಯ ಸಂವಿಧಾನವು ಕಾರಣ ಎನ್ನುವುದನ್ನು ಮರೆಯಲಾಗದು.ಸಂವಿಧಾನದ ಸತ್ತ್ವ ತತ್ತ್ವಗಳ ಕಾರಣದಿಂದಾಗಿ ಭಾರತವು ಪ್ರಪಂಚದ ಬಹುದೊಡ್ಡ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.ರಾಷ್ಟ್ರನಿರ್ಮಾಣ,ರಾಷ್ಟ್ರದ ಪ್ರಗತಿಯ ಮೂಲಕಾರಣ ಸಂವಿಧಾನವೇ ಆಗಿದೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಸಂವಿಧಾನವನ್ನು ಕಡೆಗಣಿಸುವ,ಸಂವಿಧಾನವನ್ನು ಅಪ್ರಸ್ತುತ ಎನ್ನುವಂತೆ ಕಾಣುವ ಅಸಡ್ಡೆ ಮನೋಭಾವನೆ ಹೆಚ್ಚುತ್ತಿದೆ.ಇದು ಕಳವಳಕಾರಿಯಾದ ಸಂಗತಿ.

 

ನಮ್ಮ ಸಂವಿಧಾನವು ಭಾರತದ 140 ಕೋಟಿ ಜನರ ಬದುಕು ಭವಿಷ್ಯಗಳ ಗತಿಸೂಚಕ ಗ್ರಂಥವಾಗಿದೆ.ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಯಾವುದೇ ಒಂದು ರಾಷ್ಟ್ರೀಯ ಧರ್ಮ ಇಲ್ಲ,ಒಂದು ರಾಷ್ಟ್ರೀಯ ಧರ್ಮಗ್ರಂಥ ಇಲ್ಲ.ಆದರೆ ಇತ್ತೀಚೆಗೆ ಕೆಲವರು ಹಿಂದೂ ಧರ್ಮವನ್ನು ಭಾರತದ ರಾಷ್ಟ್ರೀಯ ಧರ್ಮವೆಂದೂ ಭಗವದ್ಗೀತೆಯು ಭಾರತದ ರಾಷ್ಟ್ರಗ್ರಂಥ ಎನ್ನುವ ಹುಸಿಯನ್ನು ವೈಭವೀಕರಿಸುತ್ತಿದ್ದಾರೆ.ಇದು ಸಂವಿಧಾನಕ್ಕೆ ಎಸಗುವ ಅಪಚಾರ ಮಾತ್ರವಲ್ಲ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಹೈಜಾಕ್ ಮಾಡಿಕೊಳ್ಳುವ,ಸಂವಿಧಾನ ನಿರ್ಮಾತೃಗಳು ಕಂಡ ಸರ್ವಧರ್ಮಸಮನ್ವಯಭಾವ ಭಾರತದ ಆಶಯದ ಮರಕ್ಕೆ ನೀಡುತ್ತಿರುವ ಕೊಡಲಿಪೆಟ್ಟು.ಸಂವಿಧಾನವೇ ಭಾರತದ ರಾಷ್ಟ್ರೀಯ ಗ್ರಂಥ,ಸಂವಿಧಾನದ ಆಚೆಗೆ ಮತ್ತೊಂದು ರಾಷ್ಟ್ರೀಯ ಗ್ರಂಥ ಇಲ್ಲ ಎನ್ನುವ ಪ್ರಜ್ಞೆ ಬೆಳೆಯಬೇಕಿದೆ.

 

ಸಂವಿಧಾನದ ಪ್ರಜ್ಞೆ ಬೆಳೆಯಬೇಕು ಎಂದರೆ ಸಂವಿಧಾನದ ಆಸರೆಯಲ್ಲಿ ಬದುಕುಗಳನ್ನು ಕಟ್ಟಿಕೊಳ್ಳುತ್ತಿರುವ,ಭವಿಷ್ಯ ಗಟ್ಟಿಗೊಳಿಸಿಕೊಳ್ಳುತ್ತಿರುವ ದಲಿತರು,ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಜನತೆಯಲ್ಲಿ ಸಂವಿಧಾನದ ಜಾಗೃತಿ ಮೂಡಬೇಕು.ಸಂವಿಧಾನದ ಮೌಲ್ಯಗಳನ್ನು ಧಿಕ್ಕರಿಸಿ ನಡೆಯುವ ಜನತೆಯನ್ನು ಪ್ರಶ್ನಿಸುವ ಮನೋಭಾವ ದುರ್ಬಲವರ್ಗಗಳಲ್ಲಿ ಮೂಡಬೇಕು.ಸಂವಿಧಾನದ ಪ್ರಜ್ಞೆ ಎಂದರೆ ಕೇವಲ ದಲಿತರ ಪ್ರಜ್ಞೆ ಎಂಬ ಸಂಕುಚಿತ ಮನೋಭಾವಕ್ಕೆ ತುತ್ತಾಗದೆ ಸಂವಿಧಾನ ಪ್ರಜ್ಞೆ ಎಂದರೆ ಅದು ಭಾರತದ ರಾಷ್ಟ್ರೀಯ ಪ್ರಜ್ಞೆ, ಪದದುಳಿತರು,ಶೋಷಿತರು,ದೀನದುರ್ಬಲರೆಲ್ಲರ ಬೆಳಕು,ಭರವಸೆಯ ಪ್ರಜ್ಞೆ ಎನ್ನುವ ಭಾವನೆ ಮೂಡಬೇಕು.ಸಮಷ್ಟಿ ಜನಸಮುದಾಯವು ಡಾಕ್ಟರ್ ಬಿ. ಆರ್ .ಅಂಬೇಡ್ಕರ್ ಅವರನ್ನು ತಮ್ಮ ಬಂಧು,ಹಿತೈಷಿಭಾವದಿಂದ ಕಂಡು ಗೌರವಿಸಬೇಕು,ಸಂವಿಧಾನವು ಶೋಷಿತವರ್ಗಗಳ ಅಸ್ತ್ರವಾಗಬೇಕು,ಆಯುಧವಾಗಬೇಕು.ಸಂವಿಧಾನ ವಿರೋಧಿ ಮನಸ್ಸುಗಳಿಗೆ ಸಂವಿಧಾನಪ್ರಿಯ ಮನಸ್ಸುಗಳ ಸಮರ್ಪಣಾಭಾವದ ಗಟ್ಟಿ ಧ್ವನಿಯ ಉತ್ತರ ಈಗ ಕಾಲಮಾನದ ಅವಶ್ಯಕತೆಯಾಗಿದೆ.

 

ಭಾರತ ಎನ್ನುವ ಮಹಾನ್ ಸಾರ್ವಭೌಮ,ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಿಂದುಗಳಂತೆ ಮುಸ್ಲಿಮರು,ಕ್ರಿಶ್ಚಿಯನ್ನರು, ಬೌದ್ಧರು- ಸಿಖ್ಖರಾದಿ ಸರ್ವಮತಧರ್ಮೀಯರು ಗೌರವದಿಂದ ಬದುಕುವ ಹಕ್ಕು ಅವಕಾಶಗಳನ್ನು ಪಡೆದಿದ್ದಾರೆ.ಭಾರತದ ರಾಷ್ಟ್ರಜೀವನ ಸಂವಿಧಾನದ ವಿಧಿ – ನಿಯಮಗಳಂತೆ ನಡೆಯುತ್ತಿದೆಯೋ ಹೊರತು ಯಾವುದೇ ಧರ್ಮಗ್ರಂಥದ ಶ್ಲೋಕ,ಮಂತ್ರಗಳಂತೆ ನಡೆಯುತ್ತಿಲ್ಲ‌.ವೈಯಕ್ತಿಕ ಜೀವನದಲ್ಲಿ ಯಾರು ಯಾರನ್ನಾದರೂ ಪೂಜಿಸಲಿ,ಉಪಾಸಿಸಲಿ ಆದರೆ ಸಾರ್ವಜನಿಕ ಜೀವನದಲ್ಲಿ ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ವರ್ತಿಸಬೇಕು ಎನ್ನುವ ಸಾಂವಿಧಾನಿಕ ಅರಿವನ್ನು ಹೊಂದಿರಬೇಕು.ಸಾಂವಿಧಾನಿಕ ಅರಿವೇ ರಾಷ್ಟ್ರವಿನಯ,ರಾಷ್ಟ್ರನಿಷ್ಠೆ.ದೇಶದ ಪ್ರಜೆಗಳಲ್ಲಿ ಮತ ಧರ್ಮಗಳ ಆಧಾರದ ಮೇಲೆ ಭೇದ ಭಾವ ಕಲ್ಪಿಸುತ್ತ ಸಾಮಾಜಿಕ ಸಾಮರಸ್ಯ ಹಾಳುಮಾಡಬಾರದು.ಮತಧರ್ಮಗಳಾಚೆಯೂ ಪರಸ್ಪರ ಸಹೋದರರಂತೆ ಬದುಕುತ್ತಿರುವ ಗ್ರಾಮೀಣ ಮುಗ್ಧಜನತೆಯಲ್ಲಿ ಧರ್ಮದ ವಿಷಬೀಜಗಳನ್ನು ಬಿತ್ತಿ ವಿಷಮ ಇಲ್ಲವೆ ಪ್ರಕ್ಷುಬ್ಧತೆಯ ಫಸಲು ತೆಗೆಯಲು ಪ್ರಯತ್ನಿಸಬಾರದು.ಜಗತ್ತಿಗೆ ಆದರ್ಶವಾದ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಘನಮಾನ್ಯರು ಎನ್ನುವವರಿಗೆ ಇರುವವರಿಗೆ ಹಕ್ಕು ಅವಕಾಶಗಳು ಜನಸಾಮಾನ್ಯರಿಗೂ ಇವೆ.ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು.ಹುಸಿಪೊಗರು,ವ್ಯರ್ಥಪ್ರತಿಷ್ಠೆ,ಅರ್ಥಹೀನ ವ್ಯಕ್ತಿಪೂಜೆಗಳಿಗೆ ಅವಕಾಶವಿಲ್ಲ ಸಂವಿಧಾನದಲ್ಲಿ ಎನ್ನುವ ಸರ್ವಸಮತೆಯ ಸಂವಿಧಾನ ಪ್ರಜ್ಞೆ ಜನಸಾಮಾನ್ಯರಲ್ಲಿ ಮೂಡಬೇಕಿದೆ.ಇಲ್ಲಿ ಯಾರೂ ಪ್ರಶ್ನಾತೀತರಿಲ್ಲ,ಯಾರೂ ಪರಿಪೂರ್ಣರಿಲ್ಲ ಎನ್ನುವ ವಿವೇಕೋದಯ ಜನಕೋಟಿಯಲ್ಲಿ ಜಾಗೃತವಾಗಬೇಕು.ಸಂವಿಧಾನ ದಿನಾಚರಣೆಯು ಜನಸಾಮಾನ್ಯರ ಗೌರವಯುತ ಬದುಕಿನ ಬಗ್ಗೆ ಜಾಗೃತಿ ಮೂಡಿಸುವ,ಸಂವಿಧಾನವು ನೀಡಿದ ಸಮಾನತೆ,ಆತ್ಮಗೌರವ,ಉನ್ನತಿಯ ಹಕ್ಕು ಅವಕಾಶಗಳನ್ನು ಅರ್ಥೈಸಿಕೊಂಡು ಮುನ್ನಡೆಯಲು ಸ್ಫೂರ್ತಿ, ಪ್ರೇರಣೆ ಆಗಬೇಕು.

 

        ‌ ೨೫.೧೧.೨೦೨೫