ಲೇಖನ : ಶಿವಕುಮಾರ.ಬಿ.ಮುದಕಪ್ಪನವರ್.
ಸ್ವಾತಂತ್ರ್ಯ ನಂತರ ದೇಶದ ಆಡಳಿತಕ್ಕೆ ಹಿಂದಿನ ಬ್ರಿಟಿಷ್ ಆಡಳಿತದ ಹಲವು ಕಾಯ್ದೆ, ಕಾನೂನು, ಇತರೆ ದೇಶದಲ್ಲಿ ಜಾರಿಯಲ್ಲಿರುವ ಸಂವಿಧಾನಗಳನ್ನು ಅಧ್ಯಾಯನ ಮಾಡಿರುವ ಜ್ಞಾನ ಸಂಕೇತ ಎಂದು ಗುರುತಿಸಿಕೊಂಡಿರುವ ಭಾರತೀಯ ಸಂವಿಧಾನದ ತಜ್ಞ ಭಾರತ ರತ್ನ ಡಾ|| ಬಿ.ಆರ್, ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿಸಿದ ಸಂವಿಧಾನವನ್ನು ನಮ್ಮಷ್ಟಕ್ಕೆ ನಾವೇ ಅರ್ಪಿಸಿಕೊಂಡು ಪಾಲನೆ ಪೋಷಣೆ ಮತ್ತು ಸಂರಕ್ಷಣೆ ಮಾಡುತ್ತಾ ಬಂದಿದ್ದೇವೆ. ಇಂದಿಗೆ ಭಾರತಿಯ ಸಂವಿಧಾನ ಅರ್ಪಸಿಕೊಂಡು 75 ವರ್ಷಗಳು ತುಂಬಿವೆ. ಸಂವಿಧಾನ ದಿನಾಚರಣೆ ಅಂದ ಮೇಲೆ ನಮಗೆ ನೀಡಿರುವ ಹಕ್ಕುಗಳು ಕರ್ತವ್ಯಗಳು ಜವಾಬ್ದಾರಿಗಳು ವಿಶೇಷ ಅವಕಾಶಗಳನ್ನು ಇಲ್ಲಿಯವರೆಗೆ ನಾವು ನೆನಪಿಸಿಕೊಂಡು ಉಪನ್ಯಾಸಮಾಡುತ್ತಾ ಮಕ್ಕಳಿಗೆ ಶಾಲಾ ಶಿಕ್ಷಣದ ಪಠ್ಯದಲ್ಲಿ ಭೋದನೆ ಮಾಡುತ್ತಾ ಬಂದಿದ್ದೇವೆ.
ಪ್ರಸ್ತುತದಲ್ಲಿ ನಾವು ಸಂವಿಧಾನದ ಪ್ರಾಮುಖ್ಯತೆ ಮತ್ತು ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬ್ರಿಟಿಷ್ ರಿಂದ ಸ್ವಾತಂತ್ರ್ಯಗೊಂಡ ನಂತರ ಕೆಲವು ಪ್ರಾಂತಗಳು ನಿಜಾಮಶಾಹಿ, ಅರಸರ ಪಾಳೆಗಾರಿಕೆಯಲ್ಲಿ ಹಂಚಿಹೊಗಿರುವಂತಹ ಸುಮಾರು 565 ಸಂಸ್ಥಾನಗಳನ್ನು ಒಗ್ಗೂಡಿಸಿ ಎಲ್ಲಾ ಧರ್ಮದ ಜನರಿಗೆ ಹಲವು ಭಾಷಿಕರಿಗೆ, ಬುಡಕಟ್ಟು ವಾಸಿಗಳಿಗೆ, ಶೋಷಿತರಿಗೆ, ಶ್ರೀಮಂತ ವರ್ಗ, ಆಡಳಿತ, ಪುರೋಹಿತಶಾಹಿವರ್ಗ, ತೀರಾ ತಳಮಟ್ಟದಲ್ಲಿರುವ ಜನರಿಗೆ ಸಮಾನ ಅವಕಾಶ ಸೌಲತ್ತುಗಳನ್ನು ಕಲ್ಪಿಸುವುದು ಮಹಿಳೆಯಿರಿಗೆ ಮಹತ್ವದ ಹಕ್ಕುಗಳನ್ನು ನೀಡಿ,ಸಮಗ್ರ ಅಭಿವೃದ್ಧಿ, ಭಾವೈಕ್ಯತೆಯೊಂದಿಗೆ ಬಾಳುವ ಅವಕಾಶ ನೀಡಿರುವ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಗ್ರಂಥವೇ ಭಾರತಿಯ ಸಂವಿಧಾನ.
ಭಾರತದಲ್ಲಿ ಹಿಂದೂ, ಭೌದ್ಧ, ಜೈನ್, ಕ್ರಿಶ್ಚಿಯನ್, ಇಸ್ಲಾಂ, ಸಿಖ್ ಧರ್ಮಗಳಿವೆ. ಹಲವು ಧರ್ಮಹೊಂದಿರುವ ಭಾರತದಲ್ಲಿ ಆಯಾ ಧರ್ಮಪಾಲನೆ ಮಾಡುವವರಿಗೆ ಅದುವೇ ಪವಿತ್ರ ಶ್ರೇಷ್ಠ ಧರ್ಮವಾಗಿರುತ್ತದೆ. ಈ ಎಲ್ಲಾ ಧರ್ಮಗಳಿಗೆ ಪಾಲನೆ, ರಕ್ಷಣೆ ಆಯಾ ಜನರಿಗೆ ಅವರ ಇಚ್ಚಾನುಸಾರ ಧರ್ಮಗಳ ಪಾಲನೆ ಮಾಡಲು ಹಾಗೂ ತ್ಯಜಿಸಲು ಸ್ವತಂತ್ರರು ಎಂದು ಹೇಳಿದೆ.
ಆಯಾ ಧರ್ಮದ ದೃಷ್ಟಿಯಲ್ಲಿ ನೋಡಿದಾಗ ಆಚರಣೆ, ಸಂಪ್ರದಾಯ, ಸಂಸ್ಕೃತಿ ಆಯಾ ಧರ್ಮದವರಿಗೆ ಧರ್ಮ ಗ್ರಂಥ ಮುಖ್ಯವಾಗಿದೆ. ದೇಶವೆಂದು ನೋಡಿದರೆ ಧರ್ಮಗ್ರಂಥಕ್ಕಿಂತ ದೇಶದ ಗ್ರಂಥ ಸಂವಿಧಾನ ದೊಡ್ಡದು. ಸಂವಿಧಾನದ ಸಂರಕ್ಷಣೆಯಾದರೆ ಎಲ್ಲಾ ಧರ್ಮಗಳು ಉಳಿಯುತ್ತವೆ. ಇಲ್ಲದಿದ್ಧಲ್ಲಿ ಧರ್ಮ-ಧರ್ಮಗಳ ನಡುವೆ ದಂಗಲ್ ಅಥವಾ ವಿರೋದಿಸುವ ಮನೋಭಾವ ಬೆಳೆದು ಸಾಮಾರಸ್ಯತೆ ಹಾಳಾಗುವ ಸಂದರ್ಭವಿರುತ್ತದೆ.ಎಲ್ಲಾ ಧರ್ಮದ ತಿರಳು ಒಂದೇ ಆಗಿರುತ್ತದೆ. ಆದರೆ ಆಚರಣೆ, ಧಾರ್ಮಿಕ ವಿಧಿ-ವಿಧಾನಗಳಲ್ಲಿ ವಿಭಿನ್ನತೆ ಕಂಡರೂ ನಮ್ಮ ದೇಶ ವಿವಿಧತೆಯಲ್ಲಿ ಐಕ್ಯತೆ ಹೊಂದಿದೆ. ಧರ್ಮಗಳ ಪಾಲನೆ ಮಾಡುವ ನಾಯಕರು ಸಂವಿಧಾನದ ಗ್ರಂಥದಡಿಯಲ್ಲಿ ಎಲ್ಲಾ ಧರ್ಮವನ್ನು ಗೌರವಿಸಬೇಕು. ಜನರ ಭಾವನೆಗೆ, ಸ್ವಾತಂತ್ರ್ಯಕ್ಕೆ ಅವರ ಹಕ್ಕುಗಳಿಗೆ ದಕ್ಕೆಯಾಗದ ರೀತಿಯಲ್ಲಿ ಪರಸ್ಪರ ಸಹಕಾರ ಸಹಭಾಳ್ವೆಯಿಂದ ನಡೆದರೆ ಎಲ್ಲಾ ಧರ್ಮಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತವೆ. ಇದಕ್ಕೆ ಪೂರಕವಾಗಿ ಸಂವಿಧಾನವು ಉಳಿಯುತ್ತದೆ. ಹಾಗಾಗಿ ಧರ್ಮಗ್ರಂಥಕ್ಕಿಂತ ಸಂವಿಧಾನ ಗ್ರಂಥ ದೊಡ್ಡದು ಎಂದು ಭಾವಿಸೋಣ. ಸರ್ವರಿಗೂ ಸಂವಿಧಾನ ದಿನದ ಶುಭಾಷಯಗಳು.