ಕನಕದಾಸರ’ ಜಂಗಮ ‘ ವ್ಯಕ್ತಿತ್ವ ಪ್ರಕಟಗೊಳ್ಳಬೇಕಿದೆ

ವಿಚಾರ

ಕನಕದಾಸರ’ ಜಂಗಮ ‘ ವ್ಯಕ್ತಿತ್ವ ಪ್ರಕಟಗೊಳ್ಳಬೇಕಿದೆ           ಮುಕ್ಕಣ್ಣ ಕರಿಗಾರ

 

ಅನಿರೀಕ್ಷಿತವಾಗಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಯ ಅವಕಾಶ ಒದಗಿಬಂದಾಗ ನಾನೂ ಬೆರಗುಗೊಂಡಿದ್ದೆ.ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಬಸವರಾಜ ನೀಲಪ್ಪ ಶಿವಣ್ಣನವರ್ ಅವರಲ್ಲಿದ್ದ ಕಾಗಿನೆಲೆಯ ಅಭಿವೃದ್ಧಿಯ ಕಾಳಜಿ- ಕಳಕಳಿಗಳು ಮತ್ತು ಮುಖ್ಯಮಂತ್ರಿ ಸನ್ಮಾನ್ಯ ಸಿದ್ಧರಾಮಯ್ಯನವರ ಕನಕದಾಸರ ಮೇಲಣ ಗೌರವಾಭಿಮಾನಗಳು, ಕಾಗಿನೆಲೆಯನ್ನು ಒಂದು ವಿಶ್ವಬಂಧುತ್ವದ ನೆಲೆಯ ಮಹಾನ್ ಕೇಂದ್ರವನ್ನಾಗಿ ರೂಪಿಸಬೇಕು ಎನ್ನುವ ಸಂಕಲ್ಪದ ಫಲವಾಗಿ ನಾನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತನಾಗಿ ನೇಮಿಸಲ್ಪಟ್ಟೆ.ಮೊನ್ನೆ ನವೆಂಬರ್ ಹದಿನಾಲ್ಕರ ಶುಕ್ರವಾರದಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಯ ಅಧಿಕಾರ ವಹಿಸಿಕೊಂಡೆ.

 

ಕನಕದಾಸರ ಸಮಾಧಿಮಂದಿರ ಸೇರಿದಂತೆ ಕಾಗಿನೆಲೆ,ಬಾಡ ಗ್ರಾಮಗಳಿಗೆ ಸುತ್ತಾಡಿದ ಬಳಿಕ ಕನಕದಾಸರ ಪ್ರೇರಣೆಯೇ ನನ್ನನ್ನು ಇಲ್ಲಿಗೆ ಕರೆ ತಂದಿದೆ ಎಂದು ಮನದಟ್ಟಾಯಿತು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದು ಹದಿನೆಂಟು ವರ್ಷಗಳಾಗಿವೆ.ಸರಕಾರದ ಇಚ್ಛಾಶಕ್ತಿಯ ಫಲವಾಗಿ ಅತ್ಯದ್ಭುತವಾದ ಕಟ್ಟಡಗಳು,ರಚನೆಗಳು,ಉದ್ಯಾನವನಗಳು ,ಸಮುದಾಯ ಭವನಗಳು ಇವೇ ಮೊದಲಾದವುಗಳಿಂದ ಪ್ರಾಧಿಕಾರವು ಬೃಹದಾಕಾರವಾಗಿ ಬೆಳೆದು ನಾಡಿನ ಗಮನಸೆಳೆದಿದೆ.ಕನಕದಾಸರೇ ತಮ್ಮ ಜೀವನದ ಸರ್ವಸ್ವ ಎಂಬಂತೆ ಕನಕದಾಸರಿಗೆ ತಮ್ಮ ಜೀವನವನ್ನೇ ಮುಡಿಪಿಟ್ಟು ಸಮರ್ಪಣಾಭಾವದಿಂದ ದುಡಿಯುತ್ತಿರುವ ಸಂಶೋಧಕ ಡಾಕ್ಟರ್ ಜಗನ್ನಾಥ ಗೇನಣ್ಣನವರ್ ಅವರ ಸಾಹಿತ್ಯಕ ಸಾಂಸ್ಕೃತಿಕ ಕೊಡುಗೆಗಳಿಂದ ಪ್ರಾಧಿಕಾರದಿಂದ ಕನಕದಾಸರ ವ್ಯಕ್ತಿತ್ವ ಪ್ರಭೆಯು ಪ್ರಕಟಗೊಂಡಿದೆ.

 

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದ ಹದಿನೆಂಟು ವರ್ಷಗಳ ಅವಧಿಯಲ್ಲಿ ಕನಕದಾಸರ ಋಷಿವ್ಯಕ್ತಿತ್ವವನ್ನು ಪರಿಚಯಿಸುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆದಿಲ್ಲ.’ ಬಯಲು ಆಲಯದೊಳಗೊ,ಆಲಯವು ಬಯಲೊಳಗೊ’ ಎಂದು ಹಾಡಿ ಬಯಲಾದ ಕನಕದಾಸರ ನಿರಂಜನಸ್ವರೂಪಿ ಜಂಗಮವ್ಯಕ್ತಿತ್ವದ ಪ್ರಚಾರಕಾರ್ಯ ನಡೆದಿಲ್ಲ.ತಮ್ಮನ್ನು’ ಆಲಯ’ ಕ್ಕೆ ಸೀಮಿತಗೊಳಿಸಿ ‘ ಸ್ಥಾವರ’ ಮಾಡುತ್ತಿದ್ದಾರೆ ಎಂದೆನ್ನಿಸಿ ಕನಕದಾಸರು ನನ್ನನ್ನು ಕರೆಸಿದ್ದಾರೆ ಎನ್ನಿಸಿತು.ಕನಕದಾಸರ ಜಂಗಮವ್ಯಕ್ತಿತ್ವ ಪ್ರಕಟಣೆ ನನ್ನ ಮೊದಲ ಆದ್ಯತೆಯಾಗಿದೆ.

 

ಪ್ರಾಧಿಕಾರದ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಕನಕದಾಸರನ್ನು ಜನಮಾನಸದತ್ತ ಕರೆದೊಯ್ಯಲು ಏನೇನು ಮಾಡಬಹುದು ಎಂದು ಯೋಚಿಸುತ್ತಿದ್ದೇನೆ.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ಕಾಗಿನೆಲೆ ಬಾಡ ಗ್ರಾಮಗಳ ಭೌತಿಕ ಪರಿಮಿತಿಗಳಾಚೆ ಅಖಂಡ ಕರ್ನಾಟಕದಾದ್ಯಂತ ಪರಿಚಯಿಸಲು ಮಾಡಬಹುದಾದ ಕಾರ್ಯತಂತ್ರದ ಬಗ್ಗೆ ಆಲೋಚಿಸುತ್ತಿದ್ದೇನೆ.

 

ಕನಕದಾಸರು ಕರ್ನಾಟಕ ಕಂಡ ಅಪರೂಪದ ಸಂತರು,ದಾರ್ಶನಿಕರು.ಆದರೆ ಅವರನ್ನು ಕುರುಬರಿಗೆ ಮಾತ್ರ ಸೀಮಿತಗೊಳಿಸಿ ಅರ್ಥೈಸಲಾಗಿದೆ.’ ಕುಲಕುಲವೆಂದು ಬಡಿದಾಡುವಿರಿ,ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎಂದು ಹಾಡಿ,ಪ್ರಶ್ನಿಸಿ ಜನತೆಯಲ್ಲಿ ಮನುಷ್ಯತ್ವವನ್ನು ಪ್ರಚೋದಿಸಿ,ವಿಶ್ವಬಂಧುತ್ವವನ್ನು ಪ್ರತಿಪಾದಿಸಿದ ಕನಕದಾಸರು ಕೇವಲ ಕುರುಬರು ಎಂದು ಬಗೆಯುವುದು ಕನಕದಾಸರ ಮಹೋನ್ನತ ವ್ಯಕ್ತಿತ್ವಕ್ಕೆ ಎಸಗುವ ಅಪಚಾರವಾಗುತ್ತದೆ.ಕಲಿಯಾಗಿ,ಕವಿಯಾಗಿ,ಸಂತರಾಗಿ ನಾಡು ನುಡಿ ಬೆಳಗಿದ ಕನಕದಾಸರು ಮಾನವಜನಾಂಗಕ್ಕೆ ಆದರ್ಶರಾದ ಪರಮಾತ್ಮನ ವಿಭೂತಿಗಳು.ಕನಕದಾಸರ ವಿಭೂತಿವ್ಯಕ್ತಿತ್ವದ ಪ್ರಕಟಣೆಗೆ ನಾನೀಗ ಕೈ ಹಾಕಿದ್ದೇನೆ.

 

ಕನಕದಾಸರ ಬದುಕು ಬರಹ ಸಂದೇಶಗಳ ಕುರಿತು ಕನ್ನಡದ ಖ್ಯಾತನಾಮ ಸಾಹಿತಿಗಳಿಂದ ಪುಸ್ತಕಗಳನ್ನು ಬರೆಯಿಸಿ,ಪ್ರಕಟಿಸಲು ಆಲೋಚಿಸಿದ್ದೇನೆ.ಕನ್ನಡದ ಹಿರಿಯ ಸಾಹಿತಿಗಳು ಬರೆದ ಪುಸ್ತಕಗಳನ್ನು ಓದುಗರು ಪ್ರೀತಿಯಿಂದ ಓದುತ್ತಾರೆ.’ ಹಿರಿಯರು ಕಂಡ ಕನಕ’ ಎನ್ನುವ ಪುಸ್ತಕ ಮಾಲಿಕೆಯಲ್ಲಿ ಕನ್ನಡದ ಖ್ಯಾತಸಾಹಿತಿಗಳಿಂದ ಪುಸ್ತಕಗಳನ್ನು ಬರೆಯಿಸಲು ಆಲೋಚಿಸಿ ಬಾನುಮುಷ್ತಾಕ್ ,ಎಚ್ ಎಸ್ ಶಿವಪ್ರಕಾಶ್ ಮತ್ತು ಜಯಂತ್ ಕಾಯ್ಕಿಣಿ ಅವರುಗಳೊಂದಿಗೆ ಮಾತನಾಡಿದೆ.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ಸೇರಿದಂತೆ ಇತರ ಹಿರಿಯ ಕವಿ ಸಾಹಿತಿಗಳನ್ನು ಸಂಪರ್ಕಿಸಿ ಕನಕದಾಸರ ಮಹೋನ್ನತ ವ್ಯಕ್ತಿತ್ವದ ಕುರಿತು ಪುಸ್ತಕ ಬರೆಯಿಸಿ,ಪ್ರಕಟಿಸಲಿದ್ದೇನೆ.

 

ಕಾಗಿನೆಯನ್ನು ಕನಕದಾಸರ ಸ್ಮರಣೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಲು ಪ್ರತಿ ತಿಂಗಳು ವಿದ್ವಜ್ಜನರನ್ನು ಕಾಗಿನೆಲೆಗೆ ಆಹ್ವಾನಿಸಿ ಕನಕದಾಸರ ಬಗ್ಗೆ ವಿಚಾರಗೋಷ್ಠಿಗಳನ್ನು ಆಯೋಜಿಸಲಿದ್ದೇನೆ.ಕನಕದಾಸರ ಬಗ್ಗೆ ನಿರಂತರ ಚಿಂತನ ಮಂಥನಗಳನ್ನು ನಡೆಸಲು ಉದ್ದೇಶಿಸಿ ‘ಕನಕ ಮಂಟಪ’ ದ ಕನಸು ಕಂಡಿದ್ದೇನೆ.ಯುವಜನಾಂಗಕ್ಕೆ ಕನಕದಾಸರ ಜೀವನ ಸಂದೇಶಗಳನ್ನು ತಲುಪಿಸುವ ಉದ್ದೇಶದಿಂದ ಕನಕದಾಸರ ಜೀವನ,ಸಾಹಿತ್ಯ,ಸಾಧನೆ- ಸಿದ್ಧಿಗಳ ಕುರಿತು ಕಿರುಹೊತ್ತಗೆಗಳನ್ನು ಪ್ರಕಟಿಸಿ ತರುಣರ ಮನಸ್ಸುಗಳಲ್ಲಿ ಕನಕದಾಸರ ತರಣಿಕಿರಣಗಳನ್ನು ಪ್ರವೇಶಿಸುವಂತೆ ಮಾಡುವ ಬಯಕೆ ಹೊಂದಿದ್ದೇನೆ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ’ ಕನಕ ಸಾಹಿತ್ಯ ದರ್ಶನ’ ಕಾರ್ಯಕ್ರಮ ಏರ್ಪಡಿಸಿ ಆ ಭಾಗದ ಕವಿ ಸಾಹಿತಿಗಳು, ಕನಕ ಸಾಹಿತ್ಯಾಸಕ್ತರಿಂದ ಉಪನ್ಯಾಸ,ವಿಚಾರ,ಸಂವಾದ ಕಾರ್ಯಗಳನ್ನು ಹಮ್ಮಿಕೊಳ್ಳಬಯಸಿದ್ದೇನೆ.ಕನಕದಾಸರ ಸಾಹಿತ್ಯಪ್ರೇಮಿಗಳು,ಅಭಿಮಾನಿಗಳು, ಅನುಯಾಯಿಗಳು ಇರುವೆಡೆ ‘ ಕನಕ ಓದುಗರ ಬಳಗ’ ಸ್ಥಾಪಿಸಬೇಕು ಎಂದುಕೊಂಡಿದ್ದೇನೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಕನಕದಾಸರ ವಿಶ್ವವಿಭೂತಿ ವ್ಯಕ್ತಿತ್ವವನ್ನು ನಾಡಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ಕನಕದಾಸರ ಕುರಿತು ಒಂದು ಮಾಸಪತ್ರಿಕೆಯನ್ನು ಹೊರತರುವ ಆಲೋಚನೆಯೂ ಇದೆ ಬಸವಪಥ,ಕರ್ನಾಟಕ ವಿಕಾಸ,ಜನಪದ ಪತ್ರಿಕೆಗಳ ಮಾದರಿಯಲ್ಲಿ. ಕನಕದಾಸರ ಮಹೋಜ್ವಲವ್ಯಕ್ತಿತ್ವದ ಪರಿಚಯ- ಪ್ರಸಾರದ ಕಾರ್ಯ ಮಾಸಪತ್ರಿಕೆಯಿಂದ ಸಾಧ್ಯ ಎನ್ನುವ ನಂಬಿಕೆ ನನ್ನದು.ಇನ್ನೂ ಹತ್ತಾರು ಕನಸುಗಳಿವೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ಕನ್ನಡಿಗರ ಮನೆಬಾಗಿಲುಗಳಿಗೆ ಕೊಂಡೊಯ್ಯುವ ಕೈಂಕರ್ಯ ನಿರ್ವಹಣೆಯ ಭಾಗವಾಗಿ.

 

             ೧೯.೧೧.೨೦೨೫