ಸ್ವಗತ
ಕನಕದಾಸರ ಪ್ರೇರಣೆ,ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತನಾದ
ಮುಕ್ಕಣ್ಣ ಕರಿಗಾರ
ನಮ್ಮಲ್ಲಿ ಪ್ರತಿಭೆ,ಪ್ರಾಮಾಣಿಕತೆ,ಪರಿಶ್ರಮಗುಣಗಳಿದ್ದರೆ ಅವಕಾಶಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ.ನಾನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತನಾಗಿ ನೇಮಕಗೊಂಡುದುದೇ ಇದಕ್ಕೆ ಉತ್ತಮ ಉದಾಹರಣೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಯ ಅವಕಾಶ ಒದಗಿ ಬರುವ ಬಗ್ಗೆ ನಾನು ನಿರೀಕ್ಷಿಸಿರಲಿಲ್ಲ.ನನ್ನ ತಾಯಿ ಜಗದಂಬೆ ವಿಶ್ವೇಶ್ವರಿ ದುರ್ಗಾದೇವಿಯ ಸಂಕಲ್ಪ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸದಿಚ್ಛೆ ಮತ್ತು ಸತ್ ಸಂಕಲ್ಪಗಳು ನನ್ನನ್ನು ಕಾಗಿನೆಲೆಯತ್ತ ಕರೆದೊಯ್ದಿವೆ.ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯಾಗಿ ತುಂಬ ಖುಷಿಯಿಂದ ಕಾರ್ಯನಿರ್ವಹಿಸುತ್ತಿದ್ದೆ,ನನ್ನ ಅವಧಿಯೂ ಮುಗಿದಿರಲಿಲ್ಲ.ಆದರೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಬೇಕು ಎನ್ನುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹಂಬಲ,ಸದಿಚ್ಛೆ ಮತ್ತು ಸಂಕಲ್ಪಕ್ಕನುಸರಿಸಿ ‘ ಕಲ್ಯಾಣದಿಂದ ಕಾಗಿನೆಲೆಗೆ’ ಹೊರಟೆ.
ನಾನು ನನ್ನ ಸರಕಾರಿ ಸೇವೆಯಲ್ಲಿ ಉತ್ತರಕನ್ನಡ ( ಕಾರವಾರ) ಜಿಲ್ಲೆಯ ಉಪಕಾರ್ಯದರ್ಶಿ ಹುದ್ದೆಯನ್ನು ಬಿಟ್ಟರೆ ಆ ಹುದ್ದೆಯಲ್ಲಿ ಅತಿಹೆಚ್ಚು ಆನಂದಿಸಿದ ಜಿಲ್ಲೆ ಎಂದರೆ ಅದು ಬೀದರ ಜಿಲ್ಲೆ.ಕಾರವಾರದಂತೆಯೇ ಬೀದರಿನಲ್ಲಿ ಪ್ರಕೃತಿಸೌಂದರ್ಯ ಮನಸೂರೆಗೊಳ್ಳುತ್ತಿದ್ದುದರಿಂದ ಪುಳಕಗೊಂಡಿತ್ತು ನನ್ನ ಕವಿಹೃದಯ.ಬಸವಣ್ಣನವರ ಪಾವನಪಾದಸ್ಪರ್ಶದಿಂದ ಪುನೀತಗೊಂಡ ನೆಲ ಎನ್ನುವ ಕಾರಣದಿಂದಲೂ ನನಗೆ ಬೀದರಪ್ರಿಯವಾಗಿತ್ತು.ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರ ಗುಣಗ್ರಾಹಿವ್ಯಕ್ತಿತ್ವ,ಸಮರ್ಥ ಅಧಿಕಾರಿಗಳನ್ನು ಬೆಂಬಲಿಸುವ ಅನನ್ಯತೆಗಳು ನನ್ನನ್ನು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಲ್ಲಿ ಉತ್ಸುಕತೆಯಿಂದ ಕಾರ್ಯನಿರ್ವಹಿಸಲು ಪ್ರೇರೇಪಿಸಿದ್ದವು.ಅಪರೂಪದ ಐಎಎಸ್ ಅಧಿಕಾರಿಗಳು, ಸುಸಂಸ್ಕೃತ ಮನಸ್ಸಿನ ಸಿಇಒ ಮತ್ತು ಸಮರ್ಥ ಅಧಿಕಾರಿಗಳನ್ನು ಮುಕ್ತಮನಸ್ಸಿನಿಂದ ಬೆಂಬಲಿಸುವ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರ ಜೊತೆ ಕೆಲಸ ಮಾಡಿದ ಅನುಭವ ಅವಿಸ್ಮರಣೀಯ. ನನ್ನ ಮಾತೃ ಇಲಾಖೆಯಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರುಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನನ್ನಲ್ಲಿ ಬರಿ ಉಪಕಾರ್ಯದರ್ಶಿ ಆದ ಒಬ್ಬ ಅಧಿಕಾರಿಯನ್ನು ಮಾತ್ರ ಕಾಣದೆ ನನ್ನಲ್ಲಿ ಒಬ್ಬ ‘ ಗುರು’ ವನ್ನು, ಒಬ್ಬ ಮಾರ್ಗದರ್ಶಕನನ್ನು ಕಂಡು ಪ್ರೀತಿ,ಅಭಿಮಾನಗಳಿಂದ ಗೌರವಿಸಿ,ಬೆಂಬಲಿಸಿದ್ದು ನನ್ನ ಅದೃಷ್ಟ ವಿಶೇಷ.ಬೀದರ ಜಿಲ್ಲೆಯ ಎಲ್ಲ ಅಧಿಕಾರಿಗಳು ನನ್ನೊಂದಿಗೆ ಪ್ರೀತಿ,ವಿಶ್ವಾಸಗಳಿಂದ ನಡೆದುಕೊಂಡಿದ್ದಾರೆ.
‘ಕರ್ನಾಟಕದ ಮುಕುಟ’ ಎನ್ನುವ ಹೆಸರನ್ನು ಸಾರ್ಥಕಗೊಳಿಸುವಂತಿದೆ ಬೀದರ ಜಿಲ್ಲೆಯ ಜನತೆಯ ಹೃದಯವಂತಿಕೆ. ಬೀದರ ಜಿಲ್ಲೆಯ ಸಾಹಿತ್ಯಕ ಸಾಂಸ್ಕೃತಿಕ ಚಟುವಟಿಕೆಗಳ ಚಾಲಕಶಕ್ತಿಯಾಗಿರುವ,ಬೀದರ ಜಿಲ್ಲೆಯ ಸಾಹಿತ್ಯಕ ಶ್ರೀಮಂತಿಕೆಯನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿಗೆ ಭಾಜನರಾದ ಸಾಹಿತಿ,ಸಂಘಟಕ ಪ್ರೊ.ಜಗನ್ನಾಥ ಹೆಬ್ಬಾಳೆಯವರು ನನ್ನ ಸಾಹಿತ್ಯಕ ಪ್ರತಿಭೆಯನ್ನು ಗುರುತಿಸಿ, ಗೌರವಿಸಿದ್ದಾರೆ.ಪ್ರಜಾವಾಣಿಯ ಜಿಲ್ಲಾ ವರದಿಗಾರ ಶಶಿಕಾಂತ ಶೆಂಬೆಳ್ಳಿಯವರು ನನ್ನ ಆಡಳಿತವೈಖರಿಯನ್ನು ಮುಕ್ತಮನಸ್ಸಿನಿಂದ ಬೆಂಬಲಿಸುತ್ತ ನನ್ನ ಸಾಹಿತ್ಯದ ಸತ್ತ್ವ- ತತ್ತ್ವವನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ್ದಾರೆ.ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಹಿರಿಯ ವರದಿಗಾರರಾದ ಮಾರುತಿಯವರು ನನ್ನ ವಿಚಾರಗಳಿಗೆ ಸಹಮತ ವ್ಯಕ್ತಪಡಿಸುತ್ತ ಬೆಂಬಲಿಸಿದ್ದಾರೆ.ಬೀದರ ಜಿಲ್ಲೆಯ ಮಾಧ್ಯಮಮಿತ್ರರುಗಳು ಪ್ರೀತಿ,ವಿಶ್ವಾಸಪೂರ್ವಕವಾಗಿ ಕಂಡು ಪ್ರೋತ್ಸಾಹಿಸಿದ್ದಾರೆ.ಬೀದರ ಜಿಲ್ಲೆಯ ಜನಪ್ರತಿನಿಧಿಗಳು ನನ್ನಲ್ಲಿ ಜನಪರಕಾಳಜಿಯ ಒಬ್ಬ ಒಳ್ಳೆಯ ಅಧಿಕಾರಿಯನ್ನು ಕಂಡು ಪ್ರಶಂಸಿಸಿ ,ಬೆಂಬಲಿಸಿ ಪ್ರೋತ್ಸಾಹಿಸಿದ್ದಾರೆ. ನನ್ನ ಸಂಪರ್ಕಕ್ಕೆ ಬಂದ ಬೀದರ ಜಿಲ್ಲೆಯ ಜನತೆಯ ಮುಗ್ಧತೆ,ಹೃದಯವಂತಿಕೆಗಳು ನನ್ನಲ್ಲಿ ಬೆರಗನ್ನುಂಟು ಮಾಡಿವೆ.ನನ್ನ ಸ್ಮೃತಿಪಟಲದಲ್ಲಿ ಬೀದರ ಜಿಲ್ಲೆಯ ಹದಿನಾಲ್ಕು ತಿಂಗಳುಗಳ ನೆನಪು ಸದಾ ಹಸಿರಾಗಿರುತ್ತದೆ.
ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯಾಗಿ ಪರಮಸಂತುಷ್ಟನಾಗಿದ್ದರೂ ನನ್ನ ಮಠ ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ನಡೆಯುತ್ತಿದ್ದ ‘ ಶಿವೋಪಶಮನ ಕಾರ್ಯ’ ಕ್ಕೆ ಅಡ್ಡಿಯಾಗಿದ್ದ ಒಂದೇ ಕೊರಗು ನನಗಿತ್ತು.ಮಹಾಶೈವ ಧರ್ಮಪೀಠದಲ್ಲಿ ನಾನು ‘ ಶಿವೋಪಶಮನ ಕಾರ್ಯ’ ಪ್ರಾರಂಭಿಸಿ ಕೇವಲ ಎರಡೇ ವರ್ಷಗಳಾಗಿದ್ದರೂ ಈ ಅಲ್ಪ ಅವಧಿಯಲ್ಲಿ ಮಹಾಶೈವ ಧರ್ಮಪೀಠವು ರಾಜ್ಯದಾದ್ಯಂತ ಪರಿಚಯವಾಗಿದ್ದಲ್ಲದೆ ನೆರೆಯ ಆಂಧ್ರ,ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಭಕ್ತರುಗಳನ್ನು ತನ್ನತ್ತ ಆಕರ್ಷಿಸಿತ್ತು.ಹೀಗಾಗಿ ಪ್ರತಿ ರವಿವಾರ ನಮ್ಮ ಮಹಾಶೈವ ಧರ್ಮಪೀಠಕ್ಕೆ ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಭಕ್ತರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಿತ್ತು.ಇಂತಹ ಸಂದರ್ಭದಲ್ಲಿ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಗೆ ನನ್ನ ವರ್ಗಾವಣೆ ಆಯಿತು.ಬೀದರಿನಿಂದ ಗಬ್ಬೂರಿಗೆ ಕಾರಿನಲ್ಲಿ ಐದು ತಾಸುಗಳ ಪ್ರಯಾಣ.ಅಲ್ಲದೆ ತಮ್ಮ ಕ್ಷೇತ್ರದ ಜನರ ಕಾಳಜಿ ಮತ್ತು ಜಿಲ್ಲೆಯ ಅಭಿವೃದ್ಧಿಪರ ಚಿಂತನೆ, ಕಾರ್ಯಕ್ರಮಗಳಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ಸರಕಾರಿ ರಜಾದಿನಗಳಲ್ಲಿ ಬೀದರಿನಲ್ಲಿ ಇರುತ್ತಿದ್ದುದರಿಂದ ಮತ್ತು ಅವರು ಜಿಲ್ಲಾ ಪಂಚಾಯತಿಯ ಕೆಲಸ ಕಾರ್ಯಗಳಿಗಾಗಿ ನನ್ನನ್ನು ಕರೆಯುತ್ತಿದ್ದುದರಿಂದ,ಕರೆ ಮಾಡುತ್ತಿದ್ದುದರಿಂದ ನನಗೆ ನಿಯತವಾಗಿ’ ಶಿವೋಪಶಮನ ಕಾರ್ಯ’ ದಲ್ಲಿ ಪಾಲ್ಗೊಳ್ಳಲು ಆಗುತ್ತಿರಲಿಲ್ಲ. ಮಠಕ್ಕೆ ಬಂದು ಭಕ್ತಜನತೆ ನಿರಾಶೆಯಿಂದ ಹಿಂದಿರುಗುತ್ತಿದ್ದರು.ನಮ್ಮ ಮಠದ ವಿವಿಧ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತವೇಗದಲ್ಲಿ ಸಾಗುತ್ತಿರಲಿಲ್ಲ.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ಅಳಿಯ ತ್ರಯಂಬಕೇಶ ಮಠದ ನಿತ್ಯ ನೈಮಿತ್ತಿಕ ಪೂಜಾದಿ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರೂ ಪೀಠಾಧಿಪತಿಯ ಅನುಪಸ್ಥಿತಿ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನಿಗೆ ಬೇಸರವನ್ನುಂಟು ಮಾಡಿರಬೇಕು.ಮಹಾಶೈವ ಧರ್ಮಪೀಠದ ಬೆಳವಣಿಗೆಯ ದೃಷ್ಟಿಯಿಂದ ನನಗೂ ಬೇರೊಂದು ಹುದ್ದೆಯು ಅಗತ್ತವಿತ್ತು.2025 ರ ನನ್ನ ನವರಾತ್ರ್ಯಾನುಷ್ಠಾನದ ಅವಧಿಯಲ್ಲಿ ‘ ಶಿವೋಪಶಮನ ಕಾರ್ಯ ಸೇರಿದಂತೆ ಮಠದ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಮತ್ತು ನನ್ನ ವ್ಯಕ್ತಿತ್ವವು ಸರ್ವಂಕಷವಾಗಿ ಪ್ರವರ್ಧಿಸಲು ಸಾಕಷ್ಟು ಅಧಿಕಾರ- ಅವಕಾಶಗಳಿರುವಬೇರೊಂದು ಸ್ವತಂತ್ರ ಹುದ್ದೆಯನ್ನು ಅನುಗ್ರಹಿಸು ತಾಯಿ’ ಎಂದು ಪ್ರಾರ್ಥಿಸಿದ್ದೆ.ತಾಯಿ ಜಗನ್ಮಾತೆ ದುರ್ಗಾದೇವಿಯು ಮಗನಬೇಡಿಕೆಗೆ ‘ ತಥಾಸ್ತು’ ಅಂದಳು.ನಾನು ನವರಾತ್ರಿ ರಜೆ ಮುಗಿಸಿಕೊಂಡು ನವೆಂಬರ್ ಆರನೇ ತಾರೀಖಿನಂದು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯ ಕರ್ತವ್ಯಕ್ಕೆ ಹಾಜರಾದೆ.ಅದೇ ದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನನ್ನನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ನೇಮಿಸಲು ನನ್ನ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ವಶಕ್ಕೆ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಟಿಪ್ಪಣಿ ನೀಡಿದ್ದರು! ಇದಲ್ಲವೆ ತಾಯಿ ಜಗದಂಬೆ ದುರ್ಗಾದೇವಿಯ ಜಗದೋದ್ಧಾರ ಲೀಲೆ.’ ಇನ್ನೂ ಕೆಲವು ತಿಂಗಳುಗಳ ಕಾಲ ಇಲ್ಲಿಯೇ ಇದ್ದರೆ ಒಳ್ಳೆಯದಿತ್ತು ‘ ಎನ್ನುವ ಮಾತುಗಳೊಂದಿಗೆ ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟರು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು. ನವೆಂಬರ್ ಮೂರನೇ ತಾರೀಖಿನಂದು ಬೀದರ ಜಿಲ್ಲಾ ಪಂಚಾಯತಿಯಿಂದ ಹೊರಟು ನವೆಂಬರ್ ನಾಲ್ಕನೇ ತಾರೀಖಿನಂದು ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಂಡೆ.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಕಂದಾಯ ಇಲಾಖೆಯಡಿ ಬರುತ್ತಿದ್ದರಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸ್ಥಳನಿಯುಕ್ತಿಗಾಗಿ ಪ್ರಸ್ತಾವನೆಯನ್ನು ಕಂದಾಯ ಇಲಾಖೆಗೆ ಕಳಿಸಿತು.ನಿನ್ನೆ ಅಂತಿಮವಾಗಿ ಕಂದಾಯ ಇಲಾಖೆಯು ನನ್ನನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ನೇಮಿಸಿತು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳು ಸುಗಮವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಪ್ರಾಧಿಕಾರಕ್ಕೆ ನನ್ನ ಅಗತ್ಯವಿದೆ ಎಂದು ಮನಗಂಡು ಬ್ಯಾಡಗಿ ಶಾಸಕರಾದ ಬಸವರಾಜ ನೀಲಪ್ಪ ಶಿವಣ್ಣನವರ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಳಿ ಪ್ರಸ್ತಾಪಿಸುತ್ತಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಕ್ಷಣ ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತಾರೆ. ನಾನು ಬೇಗನೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ಬರಬೇಕು ಎನ್ನುವ ಉದ್ದೇಶದಿಂದ ಬ್ಯಾಡಗಿ ಶಾಸಕರಾದ ಬಸವರಾಜ ನೀಲಪ್ಪ ಶಿವಣ್ಣನವರ್ ಅವರುಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಹಾಗೂ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರನ್ನು ಕಂಡು ಫಾಲೋಅಪ್ ಮಾಡಿದ್ದಾರೆ.ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು 2006 ರಲ್ಲಿ ಸ್ಥಾಪನೆಗೊಂಡಿದ್ದು ಇಲ್ಲಿಯವರೆಗೆ ಹಲವಾರು ಜನ ಹಿರಿಯ ಶ್ರೇಣಿಯ ಅಧಿಕಾರಿಗಳು ಆಯುಕ್ತರಾಗಿ ನೇಮಕಗೊಂಡು ಪ್ರಾಧಿಕಾರವನ್ನು ಕಟ್ಟಿ ಬೆಳೆಸಿದ್ದಾರೆ.ಆದರೂ ಕನಕದಾಸರಿಗೆ ನನ್ನ ಸೇವೆ ಬೇಕು ಎನ್ನಿಸಿದೆ.ನವರಾತ್ರಿಯ ಅನುಷ್ಠಾನದ ದಿನಗಳಲ್ಲಿ ನಾನು ತಾಯಿ ಜಗದಂಬೆ ದುರ್ಗಾಮಾತೆಯನ್ನು ಪ್ರಾರ್ಥಿಸಿದ್ದೆ ಬೇರೊಂದು ಸ್ವತಂತ್ರ ಅಧಿಕಾರದ ಹುದ್ದೆಗಾಗಿ.ನನ್ನ ತಾಯಿ ದುರ್ಗಾದೇವಿಯು ನನಗಾಗಿ ಒಳ್ಳೆಯ ಹುದ್ದೆ ನೋಡುತ್ತಿರುವಾಗ ಕನಕದಾಸರು ನನ್ನ ತಾಯಿ ದುರ್ಗಾದೇವಿಯಲ್ಲಿ ‘ ನಿನ್ನ ಮಗನನ್ನು ನನ್ನ ಬಳಿ ಕಳಿಸು ತಾಯಿ’ ಎಂದು ಪ್ರಾರ್ಥಿಸಿದ್ದಾರೆ.ವಿಶ್ವೇಶ್ವರಿ ದುರ್ಗಾದೇವಿ ಒಪ್ಪಿದ್ದಾಳೆ.ಫಲವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮನಸ್ಸಿನಲ್ಲಿ ಈ ವಿಚಾರ ಹೊಳೆದಿದೆ,ಬಸವರಾಜ ನೀಲಪ್ಪ ಶಿವಣ್ಣನವರ್ ಅವರಲ್ಲಿ ಸ್ಫೂರ್ತಿ ತುಂಬಿದೆ.
ನಾನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ಹೋಗುತ್ತಿರುವುದು ಸಂತ ಕನಕದಾಸರ ಪ್ರೇರಣೆ ಎಂದೇ ಭಾವಿಸಿದ್ದೇನೆ.ತಮ್ಮ ತತ್ತ್ವಾದರ್ಶಗಳು ಬೆಳಕಿಗೆ ಬರಲು ನನ್ನ ಸೇವೆ ಅಗತ್ಯವಿದೆ ಎಂದು ಕನಕದಾಸರಿಗೆ ಕಂಡಿರಬೇಕು.ಅದಕ್ಕಾಗಿ ಅವರನ್ನು ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರ ಹುದ್ದೆಗೆ ಕನಕದಾಸರ ಪ್ರೇರಣೆಯಿಂದಲೇ ಹೋಗುತ್ತಿದ್ದೇನೆ ಎನ್ನುವುದು ನನಗೆ ಈ ಹತ್ತಾರು ದಿನಗಳಲ್ಲಿ ಅನುಭವಕ್ಕೆ ಬಂದಿದೆ.ಪವಾಡ ಸದೃಶವಾಗಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ನನ್ನ ನೇಮಕ ಆಗಿದೆ.ಈ ಹಿಂದೆ ಒಂದೆರಡು ಬಾರಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ಹೋಗಬಯಸಿದ್ದೆನಾದರೂ ಸಾಧ್ಯವಾಗಿರಲಿಲ್ಲ.ಈಗ ನನ್ನ ಪ್ರಯತ್ನವೇ ಇಲ್ಲದೆ ಅಲ್ಲಿಗೆ ಹೋಗುತ್ತಿದ್ದೇನೆ. ನನ್ನ ಮೇಲೆ ವಿಶ್ವಾಸವಿರಿಸಿ ಟಿಪ್ಪಣಿ ನೀಡಿ ಸೂಚಿಸಿದ್ದಲ್ಲದೆ ತ್ವರಿತವಾಗಿ ನಾನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತನಾಗಲು ಕಾರಣರಾದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನನ್ನಲ್ಲಿ ಇಟ್ಟ ಭರವಸೆಯನ್ನು ಹುಸಿಗೊಳಿಸದೆ ಅದನ್ನೊಂದು ಮಹತ್ವದ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವ ಸಂಕಲ್ಪದೊಂದಿಗೆ ನಾನು ಕಾಗಿನೆಲೆಗೆ ಹೋಗುತ್ತಿದ್ದೇನೆ. ಕನಕದಾಸರ ಭವ್ಯೋಜ್ವಲ ವ್ಯಕ್ತಿತ್ವ ಮತ್ತು ಅವರ ಯೋಗಸಾಧನೆ,ಪಡೆದ ಸಿದ್ಧಿ,ಜಗತ್ತಿಗೆ ನೀಡಿದ ಸಂದೇಶಗಳ ದಾರ್ಶನಿಕ ವ್ಯಕ್ತಿತ್ವವನ್ನು ರಾಜ್ಯ,ದೇಶದಾದ್ಯಂತ ಪಸರಿಸುವ ಸಂಕಲ್ಪ ನನ್ನದು. ಕಾಗಿನೆಲೆಯಲ್ಲಿ ಕನಕದಾಸರ ಸ್ಥಾವರವ್ಯಕ್ತಿತ್ವವನ್ನು ಬೆಳಕಿಗೆ ತರುವ ಪ್ರಾಮಾಣಿಕ ಮತ್ತು ಶ್ಲಾಘನೀಯ ಕಾರ್ಯ ಆಗಿದೆ ಇಲ್ಲಿಯವರೆಗೆ.ಈಗ ನನ್ನಿಂದ ಕನಕದಾಸರ ಜಂಗಮವ್ಯಕ್ತಿತ್ವ ಬೆಳಕಿಗೆ ಬರಬೇಕಿದೆ ಎನ್ನಿಸುತ್ತಿದೆ.’ ಆಲಯವು ಬಯಲೊಳಗೆ,ಬಯಲು ಆಲಯದೊಳಗೊ’ ಎಂದು ಹಾಡಿದ ಕನಕದಾಸರ ಆಲಯವ್ಯಕ್ತಿತ್ವ ಇಲ್ಲಿಯವರೆಗೆ ಬೆಳಕಿಗೆ ಬಂದಿದೆ.ಈಗ ನನ್ನಿಂದ ಕನಕದಾಸರ ಸಂತ,ದಾರ್ಶನಿಕ ವ್ಯಕ್ತಿತ್ವದ ‘ಬಯಲಬೆಡಗು’ ಪ್ರಕಟಗೊಳ್ಳಬೇಕಿದೆ.ಅವಲಂಬನೆ,ಆಸರೆ,ಹಂಗು- ಅಭಿಮಾನಗಳಾಚೆಯ ಕನಕದಾಸರ ಬಯಲ,ನಿರಂಜನ ವ್ಯಕ್ತಿತ್ವವನ್ನು ಪ್ರಕಟಿಸಿ, ಪರಿಚಯಿಸುವ ಸಂಕಲ್ಪದೊಂದಿಗೆ ಕಾಗಿನೆಲೆಯತ್ತ ಹೊರಟಿದ್ದೇನೆ.
೧೪.೧೧.೨೦೨೫