ಮೂರನೇ ಕಣ್ಣು
ಕುರುಬರ ಹೆಮ್ಮೆಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕೊಡುಗೆಯ ಬೆಲೆಕಟ್ಟಲಾಗದು

ಮುಕ್ಕಣ್ಣ ಕರಿಗಾರ
‘ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಲಾಭ ಪಡೆಯುವ ಕುರುಬರ ಕವಿ- ಸಾಹಿತಿ ,ಚಿಂತಕರುಗಳು ಸಿದ್ಧರಾಮಯ್ಯನವರನ್ನು ಬೆಂಬಲಿಸಿ ಬರೆಯುವುದಿಲ್ಲ; ಮಾತನಾಡುವುದಿಲ್ಲ,ಕುರುಬರ ಹೆಮ್ಮೆಯಾಗಿರುವ ಸಿದ್ಧರಾಮಯ್ಯನವರಿಂದ ಪ್ರಯೋಜನ ಪಡೆಯುವ ಕುರುಬರ ಬುದ್ಧಿಜೀವಿಗಳು ಸಿದ್ಧರಾಮಯ್ಯನವರ ಬಗ್ಗೆ ಬರೆದರೆ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬಂತೆ ವರ್ತಿಸುತ್ತಾರೆ’ ಎನ್ನುವ ಮಾತನ್ನು ನಾನು ಆಗಾಗ ಹೇಳುತ್ತಲೇ ಇದ್ದೇನೆ. ಈಗ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ” ನನ್ನ ಕೊಡುಗೆ ಬಗ್ಗೆ ಗೊತ್ತಿರುವವರು ಯಾರೂ ಮಾತನಾಡುತ್ತಿಲ್ಲ,ಹಾಗಾಗೇ ನಾನೇ ಹೇಳಿಕೊಳ್ಳಬೇಕಾಗಿದೆ” ಎಂದು ತಮ್ಮ ಮನಸ್ಸಿನ ನೋವನ್ನು ತೋಡಿಕೊಂಡಿದ್ದಾರೆ ( ಕನ್ನಡಪ್ರಭ,ಗುರುವಾರ13,11.2025 ಪುಟ 07 ರಾಜ್ಯ).ಬೆಂಗಳೂರಿನ ಗಾಂಧಿನಗರದಲ್ಲಿ 36 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ’ ಕುರುಬರ ಸಂಘಕ್ಕೆ ಸಿದ್ಧರಾಮಯ್ಯ ಕೊಡುಗೆ ಇಲ್ಲ ಎಂದು ಕೆಲವರು ಮಾತನಾಡುತ್ತಾರೆ’ ಎಂದು ಕುರುಬರಿಗೆ ತಮ್ಮ ಕೊಡುಗೆಯ ಬಗ್ಗೆ ಸ್ಪಷ್ಟೀಕರಣ ಕೊಡುತ್ತ ಸಿದ್ಧರಾಮಯ್ಯನವರು ಬಹಳಷ್ಟು ವಿಷಯ ಮಾತನಾಡಿದ್ದಾರೆ.’ತಿಳಿದವರು ನಿಷ್ಠುರವಾದಿಗಳಾಗಬಾರದು ಎಂದು ಮಾತನಾಡುತ್ತಿಲ್ಲ,ಒಂದು ರೀತಿ ‘ ಅಂದರಕಿ ಮಂಚಿವಾಡು’ ಎನ್ನುವಂತಿದ್ದಾರೆ.ಹೀಗಾಗಿ ಸಂಘ,ಸಮುದಾಯಕ್ಕೆ ನನ್ನ ಕೊಡುಗೆ ಅನಿವಾರ್ಯವಾಗಿ ನಾನೇ ಹೇಳಬೇಕಿದೆ’ ಎನ್ನುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮನಸ್ಸಿನ ನೋವನ್ನು ಈಗಲಾದರೂ ಕುರುಬರ ಬುದ್ಧಿಜೀವಿಗಳು, ಸಾಹಿತಿಗಳು ಅರ್ಥೈಸಿಕೊಳ್ಳಬೇಕಿದೆ,ಸಮುದಾಯ ಮತ್ತು ಕರ್ನಾಟಕಕ್ಕೆ ಸಿದ್ಧರಾಮಯ್ಯನವರ ಅನನ್ಯ ಕೊಡುಗೆಯ ಕುರಿತು ಬರೆಯಬೇಕಿದೆ.
ಕುರುಬರಲ್ಲಿ ಕುವೆಂಪು, ಬೇಂದ್ರೆ, ಕಾರಂತರಂತಹ ಮಹಾನ್ ಪ್ರತಿಭಾವಂತ ಸಾಹಿತಿಗಳಿಲ್ಲ.ಆದರೆ ಇರುವ ಕೆಲವರು ನಾವು ‘ ಕುವೆಂಪು ಅವರಿಗಿಂತ ಕಡಿಮೆ ಇಲ್ಲ’ ಎಂದು ಬೀಗುತ್ತಿದ್ದಾರೆ.ವೈಯಕ್ತಿಕವಾಗಿ ಯಾರನ್ನೂ ದೂರಲಾರೆನಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಉಪಕೃತರಾಗಿ ಹಲವು ಹತ್ತು ಉನ್ನತ ಹುದ್ದೆ,ಪದವಿ- ಪ್ರಶಸ್ತಿಗಳನ್ನು ಪಡೆದಿರುವವರು,ಇಂದಿಗೂ ಅನುಭವಿಸುತ್ತಿರುವವರು ಸಿದ್ಧರಾಮಯ್ಯನವರ ಬಗ್ಗೆ ಬರೆಯಲು ಹಿಂಜರಿಯುತ್ತಿರುವುದೇಕೆ? ‘ಸಿದ್ಧರಾಮಯ್ಯನವರ ಬಗ್ಗೆ ಬರೆದರೆ ಜಾತಿ ಎತ್ತಿ ಹಿಡಿದ ಹಾಗೆ ಆಗುತ್ತದೆ’ ಎನ್ನುವ ಅಳುಕು ಇವರನ್ನು ಕಾಡುತ್ತಿದೆಯೋ? ಭಾರತ ಜಾತ್ಯಾತೀತ ರಾಷ್ಟ್ರವೇನೋ ನಿಜ,ಆದರೆ ಜಾತಿಯೇ ಇಲ್ಲಿ ಎಲ್ಲದರ ಮೂಲ ಎನ್ನುವುದು ಸತ್ಯ.ಜಾತಿ ಎನ್ನುವುದು ನಿರಾಕರಿಸಲಾಗದ ವಾಸ್ತವ. ಸಿದ್ಧರಾಮಯ್ಯನವರು ಕುರುಬಕುಲದಿಂದ ಮುಖ್ಯಮಂತ್ರಿಯಾದ ಹೆಮ್ಮೆಯ ಬಗ್ಗೆ ಬರೆದರೆ ತಪ್ಪೇನು? ಅಹಿಂದ ಸಮುದಾಯಗಳಿಗೆ ಶಕ್ತಿತುಂಬಿದ ಸಿದ್ಧರಾಮಯ್ಯನವರ ಬಗ್ಗೆ ಬರೆಯುವುದಕ್ಕೆ ಅಳುಕು ಏಕೆ? ಮುಖ್ಯಮಂತ್ರಿ ಹುದ್ದೆಯ ಮೊದಲ ಅವಧಿಯಲ್ಲಿ ಹಲವು ಭಾಗ್ಯಗಳ ಮೂಲಕ ‘ ಬಡವರ ಭಾಗ್ಯವಿಧಾತ’ ರೆನ್ನಿಸಿಕೊಂಡ ,ಎರಡನೇ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ‘ಬಡವರು,ಮಹಿಳೆಯರು,ಶೋಷಿತರು ಗೌರವದ ಬದುಕನ್ನು ಬದುಕುವಂತೆ ಶೋಷಿತರ ಬದುಕುಗಳಲ್ಲಿ ಸ್ವಾಭಿಮಾನವನ್ನುಂಟು ಮಾಡಿದ ಸಿದ್ಧರಾಮಯ್ಯನವರ ‘ಬಡವರ ಬಂಧು’ ವ್ಯಕ್ತಿತ್ವದ ಬಗ್ಗೆ ಬರೆಯಲು ಅಡ್ಡಿ ಏನು? ದಲಿತರ ಪರ ಪ್ರಾಮಾಣಿಕ ಕಾಳಜಿ ಕಳಕಳಿಗಳಿಂದ ಬಜೆಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗೆ ಅನುದಾನ ಮೀಸಲಿರಿಸಿದ,ದಲಿತರಿಗೆ ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಒಂದು ಕೋಟಿ ರೂಪಾಯಿಗಳವರೆಗೆ ಮೀಸಲಿರಿಸುವ ಮೂಲಕ ಅವಕಾಶಕಲ್ಪಿಸಿದ ದಲಿತೋದ್ಧಾರದ ನಿಜಬದ್ಧತೆಯ ನಾಯಕರನ್ನು ಮೆಚ್ಚಿ ಬರೆದರೆ ತಪ್ಪೇನು? ಮುತ್ಸದ್ದಿ ರಾಜಕಾರಣಿಯಾಗಿ,ಕರ್ನಾಟಕ ಕಂಡ ಅಪರೂಪದ ಜನಪ್ರಿಯ,ಮಾಸ್ ಲೀಡರ್ ಆಗಿರುವ ಸಿದ್ಧರಾಮಯ್ಯನವರ ಸಂವಿಧಾನ ಬದ್ಧ ರಾಜಕೀಯ ನಡೆ ನುಡಿಗಳ ಬಗ್ಗೆ ಬರೆಯಲು ಇರುವ ತೊಡಕು ಆದರೂ ಏನು? ಕುರುಬರ ಸಾಹಿತಿಗಳು, ಬುದ್ಧಿಜೀವಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿಗಳಿವು.
ಸ್ವಾತಂತ್ರ್ಯ ಭಾರತದಲ್ಲಿ ಕುರುಬ ಸಮುದಾಯದಿಂದ ಬಂದ ಏಕೈಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ದೇವರಾಜ ಅರಸು ಅವರ ನಂತರ ಎರಡು ಬಾರಿ,ದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿರುವ ಅನನ್ಯತೆ ಸಿದ್ಧರಾಮಯ್ಯನವರದು ಎನ್ನುವ ಸಂಗತಿ ಕುರುಬರ ಬುದ್ಧಿಜೀವಿಗಳ ಹೆಮ್ಮೆ, ಅಭಿಮಾನಕ್ಕೆ ಕಾರಣವಾಗಬಾರದೆ? ಸಿದ್ಧರಾಮಯ್ಯನವರ ನಾಮದ ಬಲದಿಂದಲೇ ಕೆಲವು ಜನ ಸರಕಾರಿ ಅಧಿಕಾರಿಗಳು ಉನ್ನತಿಕೆ ಕಂಡಿದ್ದಾರೆ,ನೆಮ್ಮದಿಯಿಂದ ಇದ್ದಾರೆ ಎನ್ನುವುದು ಸುಳ್ಳೇನಲ್ಲವಲ್ಲ! ಜಾತಿನಾಯಕ ಸಿದ್ಧರಾಮಯ್ಯನವರ ಬಗ್ಗೆ ಬರೆಯಲು ಅಳುಕು,ಅಂಜಿಕೆಗಳಿರಬಹುದು ‘ ‘ಜಾತ್ಯಾತೀತ ಜನನಾಯಕ ಸಿದ್ಧರಾಮಯ್ಯನವರ’ ಬಗ್ಗೆ ಬರೆಯಲು ಅಳುಕು- ಆತಂಕಗಳ ಕಾರಣವಿಲ್ಲ.ವ್ಯಕ್ತಿಚಿತ್ರಣ,ಜೀವನ ಚರಿತ್ರೆಗಳು ಕೂಡ ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಪ್ರಕಾರವೆ! ಜನಸಾಮಾನ್ಯ ಕುರುಬರು ಸಿದ್ಧರಾಮಯ್ಯನವರಿಗೆ ಜೀವಕೊಡಲು ಸಿದ್ಧರಿರುವಷ್ಟು ಸಿದ್ಧರಾಮಯ್ಯನವರನ್ನು ಹಚ್ಚಿಕೊಂಡಿದ್ದಾರೆ.ಅದು ಸಿದ್ಧರಾಮಯ್ಯನವರ ವಿಶೇಷತೆ,ದೈವಾನುಗ್ರಹ.ಸಿದ್ಧರಾಮಯ್ಯನವರು ಹಳೆಯ ಕಾರಿನಲ್ಲಿ ರಾಜ್ಯಸುತ್ತಿ ಕುರುಬರನ್ನು ಸಂಘಟಿಸಿದಂತೆಯೇ ತಮ್ಮ ಸ್ವಂತ ಖರ್ಚಿನಲ್ಲಿ ಸಿದ್ಧರಾಮಯ್ಯನವರ ಸಭೆ ಸಮಾರಂಭಗಳಿಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಾಜರಾಗಿ ಕರ್ನಾಟಕದ ಕುರುಬರು ಸಿದ್ಧರಾಮಯ್ಯನವರನ್ನು ಬೆಂಬಲಿಸಿದ್ದಾರೆ.ಸಿದ್ಧರಾಮಯ್ಯನವರು ಕುರುಬರ ಅತ್ಯಂತ ಜನಪ್ರಿಯ ನಾಯಕರು ಮಾತ್ರವಲ್ಲ, ಕುರುಬರ ಪ್ರಶ್ನಾತೀತ ನಾಯಕರೂ ಹೌದು.ಅತ್ಯಂತ ಹಿಂದುಳಿದ ಕುಲವಾದ ಕುರುಬರ ಕುಲದಿಂದ ,ಎಲ್ಲ ಪ್ರತಿರೋಧ ಅಡೆ ತಡೆಗಳನ್ನು ಹಿಮ್ಮೆಟ್ಟಿ ರಾಜಕೀಯದಲ್ಲಿ ಯಶಸ್ವಿಯಾಗಿ ತ್ರಿವಿಕ್ರಮನಂತೆ ಬೆಳೆದುನಿಂತಿರುವ,ಹೈಮಾಚಲೋಪಮ ವ್ಯಕ್ತಿತ್ವದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಬರೆಯಲು ಕುರುಬರ ಕವಿ ಸಾಹಿತಿಗಳಿಗೆ ಹೆಮ್ಮೆ, ಅಭಿಮಾನಗಳುಂಟಾಗಬೇಕು.ಸಿದ್ಧರಾಮಯ್ಯನವರು ಕುರುಬರಾಗಿಯೂ ಇತರ ಜಾತಿ, ಸಮುದಾಯಗಳನ್ನು ಕೈಬಿಡದೆ,ಕುರುಬರನ್ನು ಎತ್ತಿಹಿಡಿದ ‘ಸರ್ವಜನಬಂಧುತ್ವ’ ವ್ಯಕ್ತಿತ್ವದ ಬಗ್ಗೆ ಬರೆಯುವುದು ಸಂತಸದ ಸಂಗತಿಯಾಗಬೇಕು.
ಬಸವಣ್ಣನವರ ಮೇರುವ್ಯಕ್ತಿತ್ವದಿಂದ ಪ್ರಭಾವಿತರಾಗಿ ಕರ್ನಾಟಕದಲ್ಲಿ ಸರ್ವೋದಯ ಸಂಸ್ಕೃತಿಯನ್ನು ಪೊರೆದು ಪೋಷಿಸುತ್ತಿರುವ,ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾನ್ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಸಂವಿಧಾನದ ಆಶಯಗಳನ್ನು ತಮ್ಮ ರಾಜಕೀಯ ಆದರ್ಶವನ್ನಾಗಿ ಸ್ವೀಕರಿಸಿ,ಸಂವಿಧಾನದ ಮೌಲ್ಯಗಳಿಗೆ ಜೀವತುಂಬಿದ ‘ಸಂವಿಧಾನಬದ್ಧ ಸಾಧನೆಯ ಸಿದ್ಧವ್ಯಕ್ತಿತ್ವ’ ದ ಬಗ್ಗೆ ಬರೆಯುವುದು ಕೂಡ ಕಾಲಮಾನದ ಅವಶ್ಯಕತೆಯೆ !
ನನ್ನ ವ್ಯಕ್ತಿತ್ವದ ಪರಿಚಯ ಇಲ್ಲದ ಕೆಲವರು ಸಿದ್ಧರಾಮಯ್ಯನವರ ಬಗ್ಗೆ ನೀವು ಏನು ಬರೆದಿದ್ದೀರಿ ಎಂದು ಪ್ರಶ್ನಿಸುವ ಸಾಧ್ಯತೆ ಇದ್ದುದರಿಂದ ನನ್ನ ಬಗ್ಗೆ ನಾನೇ ಸ್ವಲ್ಪ ಹೇಳಿಕೊಳ್ಳಬೇಕಿದೆ.ಸಿದ್ಧರಾಮಯ್ಯನವರು ಅಹಿಂದ ಸಂಘಟನೆಯ ಪ್ರಾರಂಭಿಸಿದ ಮೊದಲ ದಿನಗಳಲ್ಲಿ ಸಿದ್ಧರಾಮಯ್ಯನವರನ್ನು ಕುರಿತು ‘ ಅಹಿಂದ ಕೇಸರಿ’ ಎನ್ನುವ ಕವನ ಬರೆದಿದ್ದೆ.( ಅದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸ್ವತಃ ಕೊಟ್ಟಿದ್ದೆ) ಅದಾದ ಬಳಿಕ ಸಿದ್ಧರಾಮಯ್ಯನವರ ಅಹಿಂದ ವ್ಯಕ್ತಿತ್ವ, ಸಂವಿಧಾನ ಬದ್ಧ ಸರ್ವೋದಯ ಸಿದ್ಧಾಂತದ ವ್ಯಕ್ತಿತ್ವದ ಬಗ್ಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದೇನೆ.ಈ ಹಿಂದೆ ನಾನು ರಾಯಚೂರು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಲ್ಲಿ ಇದ್ದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮಾಜಿಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ‘ ಅನಿಷ್ಟ’ ಎಂದು ಟೀಕಿಸಿದ್ದನ್ನು ಖಂಡಿಸಿ ” ಕಾಲೋಚಿತ” ಅಂಕಣಶೀರ್ಷಿಕೆಯಡಿ ನಾನು ಅಂಕಣಲೇಖನಗಳನ್ನು ಬರೆಯುತ್ತಿದ್ದ ರಾಯಚೂರಿನ ಸುದ್ದಿಮೂಲ ದಿನಪತ್ರಿಕೆಗೆ ‘ ಇಷ್ಟವೋ ಅನಿಷ್ಟವೋ ಸಿದ್ಧರಾಮಯ್ಯನವರು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರು’ ಎನ್ನುವ ಲೇಖನ ಬರೆದಿದ್ದೆ.ಆ ಲೇಖನದಲ್ಲಿ ನಾನು ‘ಸಿದ್ಧರಾಮಯ್ಯನವರು ಸಂವಿಧಾನದಂತೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ ಅವರನ್ನು ‘ಅನಿಷ್ಟ ‘ಎನ್ನುವುದು ಸಂವಿಧಾನಕ್ಕೆ ಎಸಗುವ ಅಪಚಾರ’ ಎಂದು ಹೇಳಿದ್ದೆನೇ ಹೊರತು ಮತ್ತಾವ ವಿಷಯ ಪ್ರಸ್ತಾಪಿಸಿರಲಿಲ್ಲ.ನಾನು ರಾಯಚೂರು ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ಅವಧಿಯಲ್ಲಿ ನನ್ನ ನಾಮದಬಲದಿಂದಲೇ ಬೆಳೆದ ,ನನ್ನನ್ನು ಸದಾ ಸ್ಮರಿಸಬೇಕಿದ್ದ ಒಬ್ಬ ಮಹಾನುಭಾವರು ನನ್ನ ವಿರುದ್ಧ ಸಿದ್ಧರಾಮಯ್ಯನವರ ಬಗ್ಗೆ ಬರೆದು ಜಾತಿಗಳಲ್ಲಿ ವೈಷಮ್ಯ ಉಂಟು ಮಾಡುತ್ತಿದ್ದಾರೆ’ ಎಂದು ರಾಯಚೂರು ಪಶ್ಚಿಮ ಪೋಲಿಸ್ ಠಾಣೆಯಲ್ಲಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು! ಈ ಪ್ರಕರಣವನ್ನು ಆಧರಿಸಿ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನನ್ನ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿತ್ತು! ರಾಯಚೂರಿನ ನ್ಯಾಯಾಲಯವು ನನ್ನ ಸಂವಿಧಾನ ಬದ್ಧ ನಡೆಯನ್ನು ಎತ್ತಿಹಿಡಿದು ನಾನು ನಿರಪರಾಧಿ ಎಂದು ಘೋಷಿಸಿದ್ದರಿಂದ ನಾನು ಬಚಾವ್ ಆದೆ.ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲವರು ನಾನು ಸಿದ್ಧರಾಮಯ್ಯನವರ ಬಗ್ಗೆ ಬರೆಯುವುದನ್ನು ಸಹಿಸದೆ ನನಗೆ ಎಲ್ಲಿಲ್ಲದ ಕಾಟ ಕೊಟ್ಟರು.ಆದರೂ ನಾನು ಸಿದ್ಧರಾಮಯ್ಯನವರವನ್ನು ಬೆಂಬಲಿಸಿ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದೇನೆ.’ ಸಿದ್ಧರಾಮಯ್ಯನವರ ಸಮರ್ಥನೆ’ ಮತ್ತು ‘ ಸಾಂವಿಧಾನಿಕ ಮೌಲ್ಯಗಳಿಗೆ ಜೀವತುಂಬಿದ ಬಸವಭೂಷಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು’ ಎನ್ನುವ ಈ ಎರಡು ಪುಸ್ತಕಗಳಲ್ಲಿ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಾಂವಿಧಾನಿಕ ಬದ್ಧತೆಯ ಹಿರಿಯ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಿದ್ದೇನೆಯೇ ಹೊರತು ಅಂಧಾಭಿಮಾನದಿಂದ ಬರೆದಿಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಪರೂಪದ ವ್ಯಕ್ತಿತ್ವದ ಬಗ್ಗೆ,ಅವರ ಸಂವಿಧಾನ ಬದ್ಧ ರಾಜಕೀಯ ಜೀವನದ ಇದುವರೆಗೂ ಐವತ್ತಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದೇನೆ.
ಇಂಗ್ಲಿಷ್ ಕವಿ ಪಿ.ಬಿ ಷೆಲ್ಲಿಯವರ ಮಾತಿನಂತೆ ‘ ಜಗತ್ತಿನ ಅನಭಿಷಿಕ್ತ ಚಕ್ರವರ್ತಿಗಳು’ ಆಗಿರುವ ಸಾಹಿತಿಗಳನ್ನು ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಬರೆಯಿರಿ ಎಂದು ಆಗ್ರಹಿಸಲಾರೆನಾದರೂ ಸಂವಿಧಾನದ ಮೌಲ್ಯಗಳ ಸಾಕಾರರೂಪವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಬರೆಯಲು ಮುಜುಗರ ಪಡುವಂತಹದ್ದು ಏನೂ ಇಲ್ಲ ಎಂದು ಹೇಳಬಯಸುವೆ.
೧೩.೧೧.೨೦೨೫