ಮೂರನೇ ಕಣ್ಣು
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕೆ.ಡಿ.ಪಿ ಸಭೆ ಇತರರಿಗೂ ಮಾದರಿ ಆಗಲಿ
ಮುಕ್ಕಣ್ಣ ಕರಿಗಾರ
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೈಸೂರಿನಲ್ಲಿ ನವೆಂಬರ್ 10 ರಂದು 10 ತಾಸುಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ( ಕೆಡಿಪಿ) ಅನುಷ್ಠಾನದ ಸಭೆ ಜರುಗಿಸಿ ,ಅಧಿಕಾರಿಗಳ ಬೆವರು ಇಳಿಸಿದ್ದಾರೆ.( ಪ್ರಜಾವಾಣಿ ನವೆಂಬರ್ 11,2025 ಪುಟ 5 ರಾಜ್ಯ) ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಮುಖ್ಯಮಂತ್ರಿಗಳವರು.ಈ ಹಿಂದೆಯೂ ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಸುದೀರ್ಘ ಅವಧಿಯ ಕೆಡಿಪಿ ಸಭೆ ಜರುಗಿಸಿದ್ದರು.
ರಾಜ್ಯದ ಆಡಳಿತ ಯಂತ್ರದ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹತ್ತುತಾಸುಗಳ ಸುದೀರ್ಘ ಪ್ರಗತಿಪರಿಶೀಲನೆ ನಡೆಸಿದ್ದು ಅವರ ಮುತ್ಸದ್ದಿ ನಾಯಕತ್ವ ಮತ್ತು ಕಾರ್ಯನೀತಿ ಅನುಷ್ಠಾನ ಬದ್ಧತೆಯ ಪ್ರಾಮಾಣಿಕತೆಯ ನಿದರ್ಶನ.ತಮ್ಮ ಬ್ಯುಸಿ ಕಾರ್ಯದೊತ್ತಡಗಳ ನಡುವೆಯೂ ಮುಖ್ಯಮಂತ್ರಿಯವರು ಹತ್ತು ತಾಸುಗಳ ಕೆಡಿಪಿ ಸಭೆ ಮಾಡುವ ಮೂಲಕ ಅಧಿಕಾರಿಗಳಿಗೆ ಜನಸೇವಾಬದ್ಧತೆಯಿಂದ ಕಾರ್ಯನಿರ್ವಹಿಸುವ ಆಡಳಿತದ ಪಾಠಗಳನ್ನು ಹೇಳಿಕೊಟ್ಟಿದ್ದಾರೆ.
ರಾಜ್ಯಸರಕಾರದ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಯೋಜನೆ,ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಮುಗಿಸುವಲ್ಲಿ ಕೆಡಿಪಿ ಸಭೆಗಳು ಮಹತ್ವದ ಪಾತ್ರವಹಿಸುತ್ತಿವೆ.ಮೊದಲು ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತಿಗಳಲ್ಲಷ್ಟೇ ಇದ್ದ ಕೆಡಿಪಿ ಸಭೆಗಳು ಈಗ ಗ್ರಾಮ ಪಂಚಾಯತಿಗಳವರೆಗೂ ಬಂದಿವೆ.ಮಾಸಿಕ ಮತ್ತು ತ್ರೈಮಾಸಿಕ ಎನ್ನುವ ಎರಡು ಕೆಡಿಪಿ ಸಭೆಗಳಿದ್ದು ಮಾಸಿಕ ಕೆಡಿಪಿ ಸಭೆಗಳನ್ನು ತಾಲೂಕಾ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಅಧ್ಯಕ್ಷರು ನಡೆಸಬೇಕು.ತ್ರೈಮಾಸಿಕ ಕೆಡಿಪಿ ಸಭೆಗಳನ್ನು ಆಯಾ ತಾಲೂಕುಗಳ ವಿಧಾನಸಭೆಯ ಸದಸ್ಯರುಗಳಾದ ಶಾಸಕರು ಮತ್ತು ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರುಗಳ ನಡೆಸಬೇಕು.ಬಹುತೇಕ ಕಡೆ ಕೆಡಿಪಿ ಸಭೆಗಳು ಕಾಟಾಚಾರದ ಅಭಿವೃದ್ಧಿ ಪರಿಶೀಲನೆಯ ಸಭೆಗಳಾಗಿವೆಯೇ ಹೊರತು ಅಂತಹ ಕೆಡಿಪಿ ಸಭೆಗಳಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ.ಗ್ರಾಮ ಪಂಚಾಯತಿಗಳ ಹಂತದಲ್ಲಿ ಅಧಿಕಾರಿಗಳ ಪ್ರತಿಷ್ಠೆಯ ಕಾರಣದಿಂದ ಕೆಡಿಪಿ ಸಭೆಗಳು ಯಶಸ್ವಿ ಆಗುತ್ತಿಲ್ಲ.ಗ್ರಾಮ ಪಂಚಾಯತಿಗಳು ಸ್ಥಳೀಯ ಸರ್ಕಾರಗಳಾಗಿದ್ದು ಗ್ರಾಮ ಪಂಚಾಯತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗಳಿಗೆ ಸರಕಾರಿ ಅಧಿಕಾರಿಗಳು ಹಾಜರಾಗುವುದು ಅವರ ಜವಾಬ್ದಾರಿ.’ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ಏನು ಗೊತ್ತಿರುತ್ತಿದೆ,ಪಿಡಿಒ ಸಿ ದರ್ಜೆಯ ಅಧಿಕಾರಿ ,ಎ ಮತ್ತು ಬಿ ದರ್ಜೆಯ ಅಧಿಕಾರಿಗಳಾದ ನಾವೇಕೆ ಗ್ರಾಮ ಪಂಚಾಯತಿಗಳ ಕೆಡಿಪಿ ಸಭೆಗೆ ಹಾಜರಾಗಬೇಕು’ ಎಂದು ಕೆಲವು ಜನ ಅಧಿಕಾರಿಗಳು ಏನೇನೂ ಮಾಹಿತಿ ಇಲ್ಲದ ಅವರ ಅಧೀನದ ಅಧಿಕಾರಿಗಳನ್ನು ಗ್ರಾಮ ಪಂಚಾಯತಿಗಳ ಕೆಡಿಪಿ ಸಭೆಗಳಿಗೆ ಕಳಿಸುತ್ತಿದ್ದಾರೆ.ಇಲ್ಲಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರ ವಿದ್ಯಾರ್ಹತೆ, ಪಿಡಿಒಗಳ ಹುದ್ದೆಯ ಸ್ಥಾನಮಾನ ಮುಖ್ಯವಲ್ಲ, ಗ್ರಾಮ ಪಂಚಾಯತಿಯು ಸಂವಿಧಾನ ಬದ್ಧ ಸ್ಥಳೀಯ ಆಡಳಿತ ಸಂಸ್ಥೆ ಎನ್ನುವ ಗೌರವಭಾವನೆ ಮುಖ್ಯವಾಗಬೇಕು.
ಜಿಲ್ಲಾ ಪಂಚಾಯತಿ ಮತ್ತು ತಾಲೂಕಾ ಪಂಚಾಯತಿಗಳು ಅಸ್ತಿತ್ವದಲ್ಲಿ ಇಲ್ಲವಾದ್ದರಿಂದ ಸರಕಾರಿ ಅಧಿಕಾರಿಗಳೇ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತಿಗಳಲ್ಲಿ ಮಾಸಿಕ ಕೆಡಿಪಿ ಸಭೆಗಳು ನಿಯತವಾಗಿ ನಡೆಯುತ್ತಿಲ್ಲ.ಕೆಲವು ಕಡೆ ಶಾಸಕರುಗಳು ನಿಯತವಾಗಿ ತ್ರೈಮಾಸಿಕ ಕೆಡಿಪಿ ಸಭೆಗಳನ್ನು ಜರುಗಿಸುತ್ತಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರುಗಳಲ್ಲಿ ಕೆಲವರು ನಿಯತವಾಗಿ, ಅರ್ಥಪೂರ್ಣವಾಗಿ ಕೆಡಿಪಿ ಸಭೆಗಳನ್ನು ಜರುಗಿಸುತ್ತಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬಿಟ್ಟರೆ ಬೀದರ ಜಿಲ್ಲಾ ಉಸ್ತುವಾರಿ ಸಚಿವರೂ ರಾಜ್ಯದ ಅರಣ್ಯ,ಜೀವಿಪರಿಸರ ಸಚಿವರೂ ಆಗಿರುವ ಈಶ್ವರ ಖಂಡ್ರೆಯವರು ಮಾತ್ರ ಸುದೀರ್ಘ ಅವಧಿಯ ಕೆಡಿಪಿ ಸಭೆಗಳನ್ನು ಜರುಗಿಸುತ್ತಾರೆ.ಆರರಿಂದ ಎಂಟು ತಾಸುಗಳವರೆಗೆ ಬೀದರ ಜಿಲ್ಲಾ ಕೆಡಿಪಿ ಸಭೆ ಜರುಗಿಸುವ ಈಶ್ವರ ಖಂಡ್ರೆಯವರು ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಮತ್ತು ಜಡಭರತ ಅಧಿಕಾರಿಗಳ ಮೈಬೆವರಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಈಶ್ವರ ಖಂಡ್ರೆಯವರ ಕೆಡಿಪಿ ಸಭೆಗಳಿಗೆ ಹಾಜರಾಗಲು ಅಧಿಕಾರಿಗಳು ಎರಡು ಮೂರುದಿನಗಳ ಪೂರ್ವಸಿದ್ಧತೆ ಮಾಡಿಕೊಂಡು ಬರುವಂತಹ ಅನಿವಾರ್ಯ ಆಡಳಿತಾತ್ಮಕ ವಾತಾವರಣ ನಿರ್ಮಿಸಿದ್ದಾರೆ ಈಶ್ವರ ಖಂಡ್ರೆಯವರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಈಶ್ವರ ಖಂಡ್ರೆಯವರ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಕೆಡಿಪಿ ಸಭೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಆಡಳಿತ ಚುರುಕುಗೊಳ್ಳುತ್ತದೆ,ಅಭಿವೃದ್ಧಿ ಕಾಮಗಾರಿಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳುತ್ತವೆ.ಕಾಟಾಚಾರಕ್ಕೆ,ಸಭೆಗಳನ್ನು ಜರುಗಿಸಲೇಬೇಕು ಎನ್ನುವ ಕಾರಣದಿಂದ ಕೆಡಿಪಿ ಸಭೆಗಳನ್ನು ಜರುಗಿಸಿದರೆ ಕೆಡಿಪಿ ಸಭೆಯ ಉದ್ದೇಶ ಈಡೇರುವುದಿಲ್ಲ.ಆದರೆ ಬಹಳಷ್ಟು ಜನ ಶಾಸಕರುಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಕೆಡಿಪಿ ಸಭೆಯ ಮಹತ್ವ ತಿಳಿದಿಲ್ಲವೆಂದೇ ಅವರು ಕೆಡಿಪಿ ಸಭೆಗಳ ಬಗ್ಗೆ ಉದಾಸೀನಭಾವ ತಳೆದಿದ್ದಾರೆ ಎನ್ನದೆ ವಿಧಿಯಿಲ್ಲ.ಒಂದೆರಡು ತಾಸುಗಳ ಕೆಡಿಪಿ ಸಭೆಗಳನ್ನು ಜರುಗಿಸಿ,ತಮಗೆ ಬೇಡವಾದ ಅಧಿಕಾರಿಗಳ ಮೇಲೆ ಹರಿಹಾಯ್ದು ಹೋಗುವ ಪರಿಪಾಠ ಕೆಡಿಪಿ ಸಭೆಗಳ ಸಂಪ್ರದಾಯವಾಗಿಬಿಟ್ಟಿದೆ.ಕೆಡಿಪಿ ಸಭೆಗಳು ಚುನಾಯಿತ ಜನಪ್ರತಿನಿಧಿಗಳಿಗೆ ಸರಕಾರಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸುವ,ನಿಯಂತ್ರಿಸುವ,ನಿರ್ದೇಶಿಸುವ ಅಧಿಕಾರಯುತವೇದಿಕೆಗಳು ಎನ್ನುವುದನ್ನು ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕು.ಬರಿ ಅಧಿಕಾರಿಗಳನ್ನು ಬಯ್ಯುವುದೇ ಕೆಡಿಪಿ ಸಭೆಗಳ ಉದ್ದೇಶವಾಗಬಾರದು.ಸಲಹೆ- ಸೂಚನೆ,ನೀತಿ ನಿರ್ದೇಶನ ನೀಡುವ ರಚನಾತ್ಮಕ ಸಭೆಗಳಾಗಬೇಕು ಕೆಡಿಪಿ ಸಭೆಗಳು.
ರಾಜ್ಯದ ಮುಖ್ಯಮಂತ್ರಿಗಳಾಗಿಯೂ ಮೈಸೂರು ಜಿಲ್ಲೆಯ ಕೆಡಿಪಿ ಸಭೆಯನ್ನು ಹತ್ತುತಾಸುಗಳವರೆಗೆ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇತರರಿಗೆ ಮಾದರಿಯಾಗಿದ್ದಾರೆ.ಸರಿಯಾದ ಮಾಹಿತಿಯೊಂದಿಗೆ,ಅಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾದ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡ ಸಂಗತಿಯೂ ವರದಿಯಾಗಿದೆ.ಮುಖ್ಯಮಂತ್ರಿಗಳವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗೆ ಅಧಿಕಾರಿಗಳು ಅಪೂರ್ಣ ಇಲ್ಲವೆ ಅಸಮರ್ಪಕ ಮಾಹಿತಿಯೊಂದಿಗೆ ಹಾಜರಾಗುತ್ತಾರೆ ಎಂದರೆ ಅದು ಗಂಭೀರವಾಗಿ ಆಲೋಚಿಸಬೇಕಾದ ವಿಚಾರ.ರಾಜ್ಯಾಡಳಿತದ,ಕಾರ್ಯಾಂಗದ ನಿಜಮುಖ್ಯಸ್ಥರು ಆಗಿರುವ ಮುಖ್ಯಮಂತ್ರಿಗಳ ಸಭೆಗೆ ನಾಲ್ಕೈದು ದಿನಗಳ ಪೂರ್ವಸಿದ್ಧತೆ ಮಾಡಿಕೊಂಡು,ಪರಿಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕಾದದ್ದು ಅಧಿಕಾರಿಗಳ ಪ್ರಾಥಮಿಕ ಜವಾಬ್ದಾರಿ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸುದೀರ್ಘ ಅವಧಿಯ ಕೆಡಿಪಿ ಸಭೆ ಜರುಗಿಸಿ, ಅಧಿಕಾರಿಗಳಿಗೆ ಹತ್ತುಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.ಮೈಸೂರು ಜಿಲ್ಲೆಯ ಪ್ರಗತಿಯ ದೃಷ್ಟಿಯಿಂದ ಈ ಸೂಚನೆಗಳು ಮಹತ್ವದ ಸೂಚನೆಗಳಾಗಿದ್ದು ಅಧಿಕಾರಿಗಳು ಅವುಗಳನ್ನು ಅನುಷ್ಟಾನಗೊಳಿಸುವ ಪ್ರಾಮಾಣಿಕ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.
೧೧.೧೧.೨೦೨೫