ಕನ್ಹೇರಿ ಶ್ರೀಗಳ ವಿಜಯಪುರ ಪ್ರವೇಶ ನಿಷೇಧದ ಜಿಲ್ಲಾಡಳಿತದ ನಿರ್ಧಾರ ಸರಿ ಇದೆ,ಅದರಲ್ಲಿ ರಾಜಕೀಯ ಬೇಡ !

ಮೂರನೇ ಕಣ್ಣು

ಕನ್ಹೇರಿ ಶ್ರೀಗಳ ವಿಜಯಪುರ ಪ್ರವೇಶ ನಿಷೇಧದ ಜಿಲ್ಲಾಡಳಿತದ ನಿರ್ಧಾರ ಸರಿ ಇದೆ,ಅದರಲ್ಲಿ ರಾಜಕೀಯ ಬೇಡ !

ಮುಕ್ಕಣ್ಣ ಕರಿಗಾರ

ಮಹಾರಾಷ್ಟ್ರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲೆ ಪ್ರವೇಶಿಸಿ ವಿಜಯಪುರ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಸಂಗತಿ ರಾಜಕೀಯ ಚರ್ಚೆಗೆ ಆಸ್ಪದ ನೀಡಿದೆ.ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ವಿಜಯಪುರ ಜಿಲ್ಲೆಯ ಶಾಂತಿಗೆ ಧಕ್ಕೆ ಬರಬಹುದು ಎನ್ನುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್ 16 ರಿಂದ ಡಿಸೆಂಬರ್ 14 ರವರೆಗೆ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರು ವಿಜಯಪುರ ಜಿಲ್ಲೆ ಪ್ರವೇಶಿಸಿದಂತೆ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ.ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಈ ನಿರ್ಬಂಧಕಾಜ್ಞೆ ಸರಿಯಾಗಿದೆ ,ಇದರಲ್ಲಿ ಆಕ್ಷೇಪಾರ್ಹ ಸಂಗತಿ ಏನೂ ಇಲ್ಲ.ರಾಜಕಾರಣಕ್ಕಾಗಿ ಆಕ್ಷೇಪಿಸುವವರು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರು ಬಸವ ಸಂಸ್ಕೃತಿ ಅಭಿಯಾನ ಮತ್ತು ಲಿಂಗಾಯತ ಮಠಾಧೀಶರುಗಳ ಬಗ್ಗೆ ಅತ್ಯಂತ ಕೆಳಮಟ್ಟದ ಭಾಷೆಯನ್ನು ಬಳಸಿ ನಿಂದಿಸಿದ್ದಾರೆ.ಒಬ್ಬ ಸಂನ್ಯಾಸಿಗೆ ತಕ್ಕುದಲ್ಲದ ಭಾಷೆಯನ್ನು ಬಳಸಿದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರನ್ನು ಬೆಂಬಲಿಸಿ ಮಾತನಾಡುವುದು ಕರ್ನಾಟಕದ ಸಂಸ್ಕೃತಿಗೆ ಎಸಗುವ ಅಪಚಾರ.ವಿಜಯಪುರ ಜಿಲ್ಲಾಧಿಕಾರಿಗಳ ನಡೆಯಲ್ಲಿ ರಾಜ್ಯಸರಕಾರದ ಪಾತ್ರವನ್ನು ಕಾಣುವ ರಾಜಕಾರಣಿಗಳು ಕನ್ಹೇರಿ ಶ್ರೀಗಳ ಕೊಳಕು ಮನಸ್ಥಿತಿಯನ್ನು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? ಕನ್ಹೇರಿ ಸ್ವಾಮಿಯವರನ್ನು ಬೆಂಬಲಿಸುವ ರಾಜಕಾರಣಿಗಳು ಬಸವಣ್ಣನವರ ವಿರೋಧಿಗಳು ಎಂದೇ ಅರ್ಥೈಸಬೇಕಾಗುತ್ತದೆ.

ಲಿಂಗಾಯತ ಮಠಾಧೀಶರುಗಳು ಹಮ್ಮಿಕೊಂಡಿದ್ದ ‘ ಬಸವ ಸಂಸ್ಕೃತಿ ಅಭಿಯಾನ’ ವು ಸಮಷ್ಟಿ ಕನ್ನಡಿಗರ ಅಭಿಯಾನವಲ್ಲ ಎನ್ನುವುದನ್ನು ನಾನೂ ಒಪ್ಪುತ್ತೇನೆ.ಕೆಲವು ಅರೆ ಕೊರೆಗಳ ನಡುವೆಯೂ ಲಿಂಗಾಯತ ಮಠಾಧೀಶರುಗಳು ಬಸವ ಸಂಸ್ಕೃತಿಯನ್ನು ಎತ್ತಿಹಿಡಿಯುವ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ಕರ್ನಾಟಕ ಸರಕಾರವು ಬಸವಣ್ಣನವರನ್ನು ರಾಜ್ಯದ ‘ ಸಾಂಸ್ಕೃತಿಕ ನಾಯಕರು’ ಎಂದು ಅಧಿಕೃತವಾಗಿ ಘೋಷಿಸಿದ ಬಳಿಕ ಬಸವ ಸಂಸ್ಕೃತಿಯನ್ನು ಬೆಂಬಲಿಸುವುದು,ಪ್ರಸಾರ ಮಾಡುವುದು ಎಲ್ಲರ ಕರ್ತವ್ಯ. ಕನ್ಹೇರಿ ಶ್ರೀಗಳನ್ನು ಬೆಂಬಲಿಸುವ ರಾಜಕಾರಣಿಗಳು ಬಸವಸಂಸ್ಕೃತಿ ಮತ್ತು ಲಿಂಗಾಯತರ ವಿರೋಧಿಗಳು ಎಂದು ತೋರಿಸಿಕೊಳ್ಳಲು ಹೊರಟಂತಿದೆ.

ರಾಜಕಾರಣಿಗಳು ತಾವು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ರಾಜ್ಯದ ನೆಲ ಜಲ ಭಾಷೆ ಸಂಸ್ಕೃತಿಗಳ ವಿಷಯದಲ್ಲಿ ರಾಜಕೀಯ ಮಾಡಬಾರದು. ಕರ್ನಾಟಕದ ಸಮನ್ವಯ ಸಂಸ್ಕೃತಿಯನ್ನು ಹೀಗಳೆದಿರುವ ಕನ್ಹೇರಿ ಸ್ವಾಮಿಯವರು ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಮಾತ್ರವಲ್ಲ, ಕರ್ನಾಟಕ ರಾಜ್ಯದ ಪ್ರವೇಶಕ್ಕೆ ಅನರ್ಹರಾಗಿದ್ದಾರೆ.ಕನ್ಹೇರಿ ಸ್ವಾಮಿಯವರು ಲಿಂಗಾಯತ ಮಠಾಧೀಶರುಗಳ ಕ್ಷಮೆ ಕೇಳುವವರೆಗೆ ಅವರನ್ನು ಕರ್ನಾಟಕ ಪ್ರವೇಶಿಸಿದಂತೆ ನಿರ್ಬಂಧ ವಿಧಿಸುವ ಅಗತ್ಯವಿದೆ. ಕರ್ನಾಟಕದ ಸ್ವಾಭಿಮಾನದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜಕಾರಣಿಗಳು ಈಗಲಾದರೂ ನಾಡು ನುಡಿಯ ಅಭಿಮಾನವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ.

೧೭.೧೦.೨೦೨೫