ಮುಖ್ಯಮಂತ್ರಿಯ ಆಯ್ಕೆ ; ಸಂವಿಧಾನ ಹೇಳುವುದೇನು ?

ಮೂರನೇ ಕಣ್ಣು

ಮುಖ್ಯಮಂತ್ರಿಯ ಆಯ್ಕೆ ; ಸಂವಿಧಾನ ಹೇಳುವುದೇನು ?

 ಮುಕ್ಕಣ್ಣ ಕರಿಗಾರ

 

ಮುಖ್ಯಮಂತ್ರಿ ಆಯ್ಕೆ ಹೇಗೆ ಆಗುತ್ತದೆ ಎನ್ನುವುದನ್ನು ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರು ವಿಭಿನ್ನವಾಗಿ ಅರ್ಥೈಸಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ಜೊತೆ ಶಾಸಕರ ನಿರ್ಧಾರವೂ ಮುಖ್ಯವಾಗುತ್ತದೆ’ ಎಂದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ ಮುಖ್ಯಮಂತ್ರಿಯಾಗಲು ಶಾಸಕರ ಬಲ ಮುಖ್ಯವಲ್ಲ‌.ಎಲ್ಲ ನಿರ್ಧಾರಗಳನ್ನು ಹೈಕಮಾಂಡ್ ಮಾಡುತ್ತದೆ’ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೈಕಮಾಂಡ್ ನ ಅಧಿಕಾರವನ್ನು ಅಲ್ಲಗಳೆಯದೆ ಮುಖ್ಯಮಂತ್ರಿಯ ಆಯ್ಕೆ ಪ್ರಜಾಸತ್ತಾತ್ಮಕವಾಗಿರಬೇಕು ಎಂದು ಪ್ರತಿಪಾದಿಸಿದ್ದಾರೆ.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಜಾಸತ್ತಾತ್ಮಕ ಮೌಲ್ಯಗಳಿಗಿಂತ ಹೈಕಮಾಂಡ್ ದೊಡ್ಡದು ಎನ್ನುವ ನಿಲುವು ಹೊರಹಾಕಿದ್ದಾರೆ.

 

ಎಲ್ಲ ರಾಜಕೀಯ ಪಕ್ಷಗಳು ಹೈಕಮಾಂಡ್ ಸಂಸ್ಕೃತಿಯನ್ನು ಹೊಂದಿವೆ.ಹೈಕಮಾಂಡ್ ಸಂಸ್ಕೃತಿಯು ರಾಜ್ಯದ ಜನತೆಯ ಅಪೇಕ್ಷೆಗೆ ವಿರುದ್ಧವಾಗಿ ಇರುವ ಸಾಧ್ಯತೆಗಳೂ ಇರುತ್ತವೆ.ಮತದಾರರು ಯಾರೋ ಒಬ್ಬ ಜನಪ್ರಿಯ ರಾಜಕಾರಣಿಯ ಮುಖನೋಡಿ ಅಥವಾ ಅವರ ವರ್ಛಸ್ಸಿಗೆ ಮನಸೋತು ಮತ ಚಲಾಯಿಸಿರುತ್ತಾರೆ.ಆದರೆ ಹೈಕಮಾಂಡ್ ಸಂಸ್ಕೃತಿಯಲ್ಲಿ ಜನಪ್ರಿಯತೆ ಪಡೆದವರೇ ಮುಖ್ಯಮಂತ್ರಿ ಆಗಿ ಆಯ್ಕೆ ಆಗುತ್ತಾರೆ ಎನ್ನುವಂತಿಲ್ಲ.ಹೈಕಮಾಂಡ್ ಯಾರನ್ನು ಬೆಂಬಲಿಸುತ್ತದೆಯೋ ಅವರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುವ ಅನಿವಾರ್ಯತೆ ಆ ಪಕ್ಷದ ಶಾಸಕರು ಮತ್ತು ರಾಜ್ಯದ ಜನತೆಗೆ ಬಂದೊದಗುತ್ತದೆ.ಎಲ್ಲ ರಾಜಕೀಯ ಪಕ್ಷಗಳು ಹೈಕಮಾಂಡ್ ಸಂಸ್ಕೃತಿಯನ್ನು ಒಪ್ಪಿಕೊಂಡಿವೆಯಾದರೂ ಹೈಕಮಾಂಡ್ ಎನ್ನುವುದು ಸಂವಿಧಾನಬದ್ಧ ಸಂಸ್ಥೆಯಲ್ಲ ! ಅದೊಂದು ರಾಜಕೀಯ ವ್ಯವಸ್ಥೆ ಅಷ್ಟೇ. ಹೈಕಮಾಂಡ್ ಸಂಸ್ಕೃತಿಯು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ರಾಜಕೀಯ ಒಪ್ಪಿತ ಸಂಪ್ರದಾಯ.ಇದರಿಂದ ಸ್ಥಳೀಯ ಜನತೆಯ ಆಶೋತ್ತರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

 

ಭಾರತದ ಸಂವಿಧಾನದಂತೆ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲವನ್ನು ನೇಮಿಸುವವರು ರಾಜ್ಯಪಾಲರು. ಸಂವಿಧಾನದ 163 ನೆಯ ಅನುಚ್ಛೇದವು ರಾಜ್ಯಪಾಲರಿಗೆ ನೆರವಾಗಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಇರತಕ್ಕದ್ದು ಎನ್ನುತ್ತದೆ.ಸಂವಿಧಾನದ164 (1) ನೆಯ ಅನುಚ್ಛೇದವು ‘ ರಾಜ್ಯಪಾಲನು ಮುಖ್ಯಮಂತ್ರಿಯನ್ನು ನೇಮಕ ಮಾಡತಕ್ಕದ್ದು ಮತ್ತು ಮುಖ್ಯಮಂತ್ರಿಯ ಸಲಹೆಗನುಸಾರ ಇತರ ಮಂತ್ರಿಗಳನ್ನು ರಾಜ್ಯಪಾಲನು ನೇಮಕ ಮಾಡತಕ್ಕದ್ದು’ ಎನ್ನುತ್ತದೆ.ಸಂವಿಧಾನದ ಈ ಅನುಚ್ಛೇದದಂತೆ ಮುಖ್ಯಮಂತ್ರಿ ಮತ್ತು ಮಂತ್ರಿಗಳನ್ನು ನೇಮಿಸುವ ಸಾಂವಿಧಾನಿಕ ಅಧಿಕಾರ ಮತ್ತು ಹೊಣೆಗಾರಿಕೆ ರಾಜ್ಯದ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರಲ್ಲಿ ನಿಹಿತವಾಗಿದೆ.

 

ಕೇಂದ್ರಸರಕಾರದಿಂದ ನೇಮಕಗೊಳ್ಳುವ ರಾಜ್ಯಪಾಲರು ರಾಜ್ಯದ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳನ್ನು ನೇಮಿಸುವ ಸಾಂವಿಧಾನಿಕ ಹೊಣೆಯನ್ನು ಹೊಂದಿದ್ದಾರಾದರೂ ಅವರು ಮುಖ್ಯಮಂತ್ರಿಯ ನೇಮಕದಲ್ಲಿ ತಮ್ಮ ರಾಜಕೀಯ ವಿವೇಚನೆಯನ್ನು ಬಳಸುವಂತಿಲ್ಲ.ಕ್ವಚಿತ್ತಾಗಿ ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಿ ಮುಖ್ಯಮಂತ್ರಿಯನ್ನು ನೇಮಿಸಿದ ಒಂದೆರಡು ಪ್ರಕರಣಗಳಿವೆಯಾದರೂ ಅಂತಹ ಪ್ರಕರಣಗಳು ಸುಪ್ರೀಂಕೋರ್ಟ್ ನಲ್ಲಿ ಬಿದ್ದುಹೋಗಿವೆ.ಹೈಕೋರ್ಟ್ ಗಳು ಮತ್ತು ಸುಪ್ರೀಂಕೋರ್ಟ್ ಸಂವಿಧಾನದಂತೆ ರಾಜ್ಯಪಾಲರು ರಾಜ್ಯದ ಕಾರ್ಯಾಂಗದ ಮುಖ್ಯಸ್ಥರಾಗಿದ್ದರೂ ಅವರು ನಾಮಮಾತ್ರ ರಾಜ್ಯದ ಮುಖ್ಯಸ್ಥರು,ರಾಜ್ಯದ ನಿಜವಾದ ಮುಖ್ಯಸ್ಥರು ಶಾಸಕರ ಬಲ ಮತ್ತು ಮಂತ್ರಿಮಂಡಲದ ಬೆಂಬಲಪಡೆದಿರುವ ಮುಖ್ಯಮಂತ್ರಿ ಎನ್ನುವ ಪ್ರಜಾಪ್ರಭುತ್ವ ಪರ ನಿಲುವನ್ನು ತಳೆದಿವೆ.

 

ರಾಜ್ಯಪಾಲರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ಒಬ್ಬರನ್ನು ಮುಖ್ಯಮಂತ್ರಿ ಎಂದು ಪರಿಗಣಿಸುತ್ತಾರೆ. ಬಹುಮತ ಪಡೆದ ರಾಜಕೀಯ ಪಕ್ಷದ ಶಾಸಕರುಗಳು ಯಾರನ್ನು ತಮ್ಮ ನಾಯಕ ಎಂದು ಒಪ್ಪುತ್ತಾರೋ ಅವರೇ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುತ್ತಾರೆ.ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದವರು ತಮ್ಮ ನೇತೃತ್ವದಲ್ಲಿ ಸರಕಾರ ರಚಿಸುವ ಹಕ್ಕು ಮಂಡಿಸುತ್ತಾರೆ.ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ತಮ್ಮ ಜೊತೆ ತಮಗೆ ನಿಷ್ಠರಾದ ಶಾಸಕರುಗಳನ್ನು ಸಚಿವಸಂಪುಟಕ್ಕೆ ಸೇರಿಸಿಕೊಳ್ಳಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತಾರೆ. ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸುವ ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ರಾಜ್ಯ ಸರಕಾರವು ಅಸ್ತಿತ್ವಕ್ಕೆ ಬರುತ್ತದೆ.ಇದು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ.

 

ನಮ್ಮ ಸಂವಿಧಾನವು ಮುಖ್ಯಮಂತ್ರಿಯ ಆಯ್ಕೆಯ ಬಗ್ಗೆ ಏನನ್ನೂ ಹೇಳದೆ ಮೌನವಹಿಸಿರುವುದರಿಂದ ರಾಜಕೀಯ ಪಕ್ಷಗಳು ತಮ್ಮ ಇಷ್ಟಾನುಸಾರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತವೆ.ಹೈಕಮಾಂಡ್ ನ ಕೃಪೆಗೆ ಪಾತ್ರರಾದವರು ಮುಖ್ಯಮಂತ್ರಿ, ಮಂತ್ರಿಯಾಗಿ ನೇಮಕಗೊಳ್ಳುತ್ತಾರೆ.’ಮಂತ್ರಿಗಳಾಗಿ ರಾಜ್ಯಪಾಲನು ಇಷ್ಟಪಟ್ಟಷ್ಟು ದಿನಗಳವರೆಗೆ ಮುಂದುವರೆಯುವುದು’ ಸಂವಿಧಾನದ ವಿಧಿಯಾಗಿದ್ದರೂ ರಾಜಕೀಯ ಪಕ್ಷಗಳು ಸ್ಥಾಪಿಸಿಕೊಂಡ ಪರಮೋಚ್ಛ ಅಧಿಕಾರ ಕೇಂದ್ರ ಹೈಕಮಾಂಡ್ ಇಷ್ಟಪಟ್ಟಷ್ಟು ದಿನ ಮುಖ್ಯಮಂತ್ರಿ, ಮಂತ್ರಿಗಳು ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎನ್ನುವುದು ವಾಸ್ತವ.ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ವ್ಯಕ್ತಿಯೂ ಆರು ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸುವ ಅಪರೂಪದ ಅವಕಾಶವನ್ನು ಸಂವಿಧಾನವು ನೀಡಿದ್ದರಿಂದ ರಾಜಕೀಯ ಪಕ್ಷಗಳ ಹೈಕಮಾಂಡ್ ಗಳು ತಮ್ಮ ಪ್ರಾಬಲ್ಯ ಮೆರೆಯುತ್ತಿವೆ.

 

ಮುಖ್ಯಮಂತ್ರಿಯ ಆಯ್ಕೆ ಪ್ರಜಾಸತ್ತಾತ್ಮಕವಾಗಿ ನಡೆಯಬೇಕು.ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ಶಾಸಕರುಗಳು ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತಸ್ವಾತಂತ್ರ್ಯ ಪಡೆದಿರಬೇಕು.ಹೈಕಮಾಂಡ್ ತೆರೆಮರೆಯಲ್ಲಿ ಪಾತ್ರವಹಿಸುವ ಪೋಷಕ ನಟರ ಪಾತ್ರವಹಿಸಬೇಕೇ ಹೊರತು ಹೈಕಮಾಂಡ್ ಗಳೇ ಸೂತ್ರಧಾರಿಗಳಾಗಬಾರದು.ಹೈಕಮಾಂಡ್ ನಿಷ್ಠರು ಪಕ್ಷದ ಶಾಸಕರುಗಳನ್ನು ಕಡೆಗಣಿಸುವ ಸಾಧ್ಯತೆ ಇರುತ್ತದೆ ಹೈಕಮಾಂಡ್ ಕೃಪಾಕಟಾಕ್ಷ ತಮಗೆ ಇರುವುದರಿಂದ. ರಾಜ್ಯದ ಮುಖ್ಯಮಂತ್ರಿ ಮತ್ತು ಮಂತ್ರಿಗಳು ತಮ್ಮನ್ನು ಚುನಾಯಿಸಿದ ಮತದಾರರಿಗೆ ನಿಷ್ಠರಾಗಿರಬೇಕೇ ಹೊರತು ಹೈಕಮಾಂಡ್ ಗೆ ಅಲ್ಲ.ರಾಜ್ಯಗಳು ಬಲಗೊಳ್ಳಬೇಕು,ಸ್ಥಳೀಯ ಆಡಳಿತ ಬಲಯುತವಾಗಿರಬೇಕು ಎಂದರೆ ಹೈಕಮಾಂಡ್ ಗಳು ಪೋಷಕನಟರ ಪಾತ್ರವನ್ನಷ್ಟೇ ವಹಿಸಬೇಕು.

 

೧೪.೧೦.೨೦೨೫