ಅಧಿಕಾರ ಕೊಟ್ಟ ದೈವವನ್ನು ಮರೆತವರಿಗೆ ಅಪಮೃತ್ಯುವೇ ಗತಿ !

ಚಿಂತನೆ

ಅಧಿಕಾರ ಕೊಟ್ಟ ದೈವವನ್ನು ಮರೆತವರಿಗೆ ಅಪಮೃತ್ಯುವೇ ಗತಿ ! : ಮುಕ್ಕಣ್ಣ ಕರಿಗಾರ

 

ವರನಟ ಡಾಕ್ಟರ್ ರಾಜಕುಮಾರ ಅವರ ಬಬ್ರುವಾಹನ ಚಿತ್ರ ಕನ್ನಡದ ಮಹತ್ವದ ಚಲನಚಿತ್ರಗಳಲ್ಲಿ ಒಂದು.ನಾನು ಮೆಚ್ಚಿದ ಹಲವು ಚಲನ ಚಿತ್ರಗಳಲ್ಲಿ ಅದೂ ಒಂದು. ನಾನು ಹತ್ತಾರು ಬಾರಿ ನೋಡಿದ ಏಕೈಕ ಚಲನಚಿತ್ರ ಅದು.ಡಾಕ್ಟರ್ ರಾಜಕುಮಾರ ಅವರ ಅದ್ಭುತ ಅಭಿನಯ ಮತ್ತು ಆ ಸಿನೆಮಾದ ಸಂಭಾಷಣೆಗಳು ಆ ಚಿತ್ರದ ಶ್ರೇಷ್ಠತೆಯನ್ನು ಹೆಚ್ಚಿಸಿವೆ.ಮೂರುಲೋಕ ವಿಜೇತನೆಂಬ ಬಿರುದಿನಿಂದ ಲೊಕವಿಖ್ಯಾತನಾಗಿದ್ದ ಅರ್ಜುನ ತನ್ನ ಮಗ ಬಬ್ರುವಾಹನನಿಂದ ಸೋಲುತ್ತಾನೆ,ಹತನಾಗುತ್ತಾನೆ.ಕೊನೆಗೆ ಶ್ರೀಕೃಷ್ಣನ ದಯೆಯಿಂದ ಮತ್ತೆ ಮರುಜನ್ಮ ಪಡೆಯುತ್ತಾನೆ.ಇದು ಕಥಾವಸ್ತು. ಡಾಕ್ಟರ್ ರಾಜಕುಮಾರ ಅವರು ಅರ್ಜುನ ಮತ್ತು ಬಬ್ರುವಾಹನ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡು ಎರಡೂ ಪಾತ್ರಗಳಿಗೆ ಜೀವತುಂಬಿದ್ದಾರೆ.

 

ಬಬ್ರುವಾಹನ ಸಿನೆಮಾದ ಒಂದು ಸಂಭಾಷಣೆ ವಿಶೇಷ ಗಮನಸೆಳೆಯುವಂತೆ ಇದೆ.ಪಾಂಡವರ ಅಶ್ವಮೇಧ ಯಜ್ಞದ ಕುದುರೆಯನ್ನು ಕಟ್ಟಿ ಯಜ್ಞಾಶ್ವದ ರಕ್ಷಣೆಗೆ ಬಂದಿದ್ದ ಪಾಂಡವಸೈನ್ಯವನ್ನು ನುಚ್ಚುನೂರಾಗಿ ಮಾಡಿದ ಬಬ್ರುವಾಹನನ್ನು ಸಂಹರಿಸಿಯೇ ಬಿಡುವೆ ಎನ್ನುವ ಆಕ್ರೋಶದಿಂದ ರಣಭೂಮಿಗೆ ಬಂದ ಅರ್ಜುನ ಮತ್ತು ಅವನನ್ನು ಎದುರಿಸಿ ನಿಂತ ಬಬ್ರುವಾಹನನ ನಡುವೆ ನಡೆಯುವ ಸಂಭಾಷಣೆ ರೋಚಕವಾಗಿದೆ,ಮೈಮನಗಳಲ್ಲಿ ರೋಷಾವೇಶವನ್ನುಂಟು ಮಾಡುವಂತೆ ಇದೆ.ಅದುವರೆಗೂ ಸೋಲನ್ನೇ ಕಂಡಿರದ ಅಜೇಯ ಅರ್ಜುನ ಇಂದು ಒಬ್ಬ ತರುಣವೀರನೊಂದಿಗೆ ಸೆಣಸುವ ಸಂದರ್ಭ.ತನ್ನ ಶೌರ್ಯ,ಪರಾಕ್ರಮ,ಬಾಹುಬಲದಲ್ಲಿ ಅಚಲ ನಂಬಿಕೆಯುಳ್ಳ ಅರ್ಜುನನು ಬಬ್ರುವಾಹನನ್ನು ಯಾವ ಲೆಕ್ಕಕ್ಕೂ ತೆಗೆದುಕೊಂಡಿಲ್ಲ.ಅಪ್ರತಿಮವೀರನಾದರೂ ದೈವಭಕ್ತನೂ ವಿವೇಕಿಯೂ ಆಗಿರುವ ಬಬ್ರುವಾಹನನು ಅರ್ಜುನನ ವಿಜಯದ ಹಿಂದೆ ಶ್ರೀಕೃಷ್ಣನ ಅನುಗ್ರಹ ಇದೆ ಎಂದು ಬಲ್ಲವನು.ಕೃಷ್ಣನನ್ನು ಸಾರಥಿಯನ್ನಾಗಿ ಮಾಡಿಕೊಂಡೇ ಯುದ್ಧಕ್ಕೆ ಹೊರಡುತ್ತಿದ್ದ ಅರ್ಜುನನು ಬಬ್ರುವಾಹನನೊಡನೆ ಸೆಣಸಲು ಕೃಷ್ಣನ ನೆರವು ಅಗತ್ಯವಿಲ್ಲವೆಂದು ಒಬ್ಬನೇ ಬಂದಿದ್ದಾನೆ. ಯುದ್ಧಾರಂಭದಲ್ಲಿ ಮಾತಿಗೆ ಮಾತು ಬೆಳೆದು ಬಬ್ರುವಾಹನನು ಅರ್ಜುನನಿಗೆ ‘ ನಿನ್ನ ಯುದ್ಧಗಳ ವಿಜಯಕ್ಕೆ ನಿನ್ನ ಬಾಹುಬಲವಲ್ಲ ಕಾರಣ,ಶ್ರೀಕೃಷ್ಣನ ಅನುಗ್ರಹವೇ ಕಾರಣ’ ಎನ್ನುತ್ತಾನೆ.’ಮೂರುಲೋಕದ ಗಂಡನಾದ ನನಗೆ ನಿನ್ನಂತಹ ಯಕಃಶ್ಚಿತ ಜಂತುವಿನ ಸಂಹಾರಕ್ಕೆ ಶ್ರೀಕೃಷ್ಣನ ನೆರವು ಬೇಕಿಲ್ಲ’ ಎಂದು ಉತ್ತರಿಸುತ್ತಾನೆ ಮದೋನ್ಮತ್ತನಾದ ಅರ್ಜುನ.’ ನಿನ್ನ ಗೆಲುವಿಗೆ ಶ್ರೀಕೃಷ್ಣನೇ ಕಾರಣ,ಅವನಿಲ್ಲದೆ ನನ್ನೊಡನೆ ಯುದ್ಧಕ್ಕೆ ಬಂದ ನೀನು ತೃಣಕ್ಕೆ ಸಮಾನ’ ಎಂದು ನಿಂದಿಸುವ ಬಬ್ರುವಾಹನ ಹೇಳುವ ಮಾತು ಬಹು ಮಾರ್ಮಿಕವಾದುದು,ವ್ಯಕ್ತಿಯ ಬದುಕಿನಲ್ಲಿ ದೈವದ ಮಹತ್ವವನ್ನು ಸಾರುವ ಮಾತು — ‘ ದೈವವನ್ನು ಮರೆತವನಿಗೆ ಮೃತ್ಯುವೇ ಸಾರಥಿ’ ತನ್ನ ವಿಜಯದ ರೂವಾರಿ ಶ್ರೀಕೃಷ್ಣನು ಎಂಬುದನ್ನು ಮರೆತು ಬಂದಿದ್ದ ಅರ್ಜುನನ ರಥದ ಸಾರಥಿ ಈಗ ಮೃತ್ಯುದೇವತೆಯೇ !

 

ಈ ಪ್ರಸಂಗ,ಬಬ್ರುವಾಹನನ ಈ ಮಾತು ಮಹತ್ವದ ಸಂದೇಶವನ್ನು ಸಾರುತ್ತದೆ.ಮನುಷ್ಯರ ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ದೈವವು ವ್ಯಕ್ತಿಗಳ ಏಳು ಬೀಳುಗಳಿಗೆ ಕಾರಣವಾಗುತ್ತದೆ. ದೈವವನ್ನು ನಂಬಿ,ಪೂಜಿಸಿ ಉದ್ಧಾರವಾದರೆ ದೈವವನ್ನು ನಂಬದವರು ಅಧಃಪತನ ಹೊಂದುತ್ತಾರೆ.ಮನುಷ್ಯರಲ್ಲಿ ಕೆಲವರ ಸ್ವಭಾವ ತಮಗೆ ಅಧಿಕಾರವನ್ನು ಕೊಟ್ಟ ದೈವವನ್ನು ಮರೆಯುವುದು.ಅದರಲ್ಲೂ ವಿಶೇಷವಾಗಿ ರಾಜಕಾರಣಿಗಳಲ್ಲಿ ಈ ಬುದ್ಧಿ ಹೆಚ್ಚಾಗಿ ಕಾಣಿಸುತ್ತದೆ.ರಾಜಕೀಯ ಜೀವನದಲ್ಲಿ ಗೆಲುವನ್ನೇ ಕಾಣದೆ ಸೋತು ಸುಣ್ಣವಾಗಿದ್ದವರು ಯಾರೋ ಯೋಗಿಗಳು,ಮಹಾತ್ಮರ ಉದಾರಬುದ್ಧಿಯಿಂದ ದೈವಕೃಪೆಗೆ ಪಾತ್ರರಾಗಿ ಅದ್ಭುತವಾದ ಗೆಲುವು ಪಡೆಯುತ್ತಾರೆ.ಚುನಾವಣೆಯಲ್ಲಿ ಗೆದ್ದಾದ ಬಳಿಕ ತಮ್ಮ ಗೆಲುವಿಗೆ ಕಾರಣವಾದ ದೈವವನ್ನೇ ಮರೆಯುತ್ತಾರೆ.ಜನತೆ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಜಂಬಕೊಚ್ಚಿಕೊಳ್ಳುತ್ತಾರೆ.ಆ ಜನತೆ ಹಿಂದೆಯೂ ಇದ್ದರಲ್ಲ,ಆಗ ಯಾಕೆ ಗೆಲ್ಲಲಿಲ್ಲ? ಈಗ ಗೆದ್ದದ್ದು ಹೇಗೆ ಎಂದು ವಿಚಾರಿಸುವುದಿಲ್ಲ.ದೈವದ ಪ್ರೇರಣೆಯಂತೆ ಜನತೆಯ ಬೆಂಬಲ ಪಡೆದು ಗೆದ್ದವರು ತಮಗೆ ಭವಿಷ್ಯ ಕರುಣಿಸಿದ ದೈವವನ್ನೇ ಮರೆಯುವುದು ವಿಪರ್ಯಾಸ ಮಾತ್ರವಲ್ಲ ಅವರ ಅವನತಿಯ ಸೂಚಕವೂ ಹೌದು.

 

ದೈವವು ಯಾರಿಂದಲೂ ಏನನ್ನೂ ನಿರೀಕ್ಷಿಸವುದಿಲ್ಲ.ಆದರೆ ದೈವಾನುಗ್ರಹದಿಂದ ರಾಜಕೀಯ ಭವಿಷ್ಯ ರೂಪಿಸಿಕೊಂಡವರು ಅಧಿಕಾರ ಕರುಣಿಸಿದ ದೈವವನ್ನು ಮರೆಯಬಾರದು. ದೇವರು ವರಕೊಡಲು ಸಮರ್ಥನಿರುವಂತೆಯೇ ಶಾಪಕೊಡಲು ಸಮರ್ಥನಿದ್ದಾನೆ.ದೈವಾಂಶ ಸಂಭೂತರಾದ ಯೋಗಿಗಳು,ಶರಣರು ತಮ್ಮನ್ನು ನಂಬಿದವರನ್ನು ಅನುಗ್ರಹಿಸಬಲ್ಲರು,ತಮ್ಮಿಂದ ಉದ್ಧಾರವಾಗಿ ಮರೆತವರನ್ನು ಶಿಕ್ಷಿಸಲೂ ಬಲ್ಲರು.ಯೋಗಿಗಳೊಂದಿಗೆ ವ್ಯವಹರಿಸುವಾಗ ರಾಜಕಾರಣಿಗಳು ಎಚ್ಚರದಿಂದ ಇರಬೇಕು.ಯೋಗಿಗಳ ಸಹವಾಸ ಬೆಂಕಿಯ ಸಹವಾಸ.ಬೆಂಕಿಯು ಬೆಳಕಾಗಲೂ ಬಲ್ಲದು,ಸುಟ್ಟು ಸರ್ವನಾಶಮಾಡಲೂ ಬಲ್ಲದು.ಯೋಗಿಗಳ ತಪೋಸಾಮರ್ಥ್ಯ,ದೈವಬಲದಿಂದ ರಾಜಕೀಯ ನೆಲೆಕಂಡು ರಾಜಕಾರಣಿಗಳು ದೈವವನ್ನು ಮರೆತಾಗ ಸರ್ವನಾಶವಾಗುತ್ತಾರೆ.ದೈವವನ್ನು ಮರೆತ ರಾಜಕಾರಣಿಗೆ ಮೃತ್ಯುವೇ ಸಾರಥಿಯಾಗಿ ಅಪಮೃತ್ಯು ಕಾಣಬೇಕಾಗುತ್ತದೆ.

 

೧೩.೧೦.೨೦೨೫