ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕಿಸುವುದು ಸರಿಯಲ್ಲ

ಮೂರನೇ ಕಣ್ಣು 

ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕಿಸುವುದು ಸರಿಯಲ್ಲ.

ಶ್ರೀ ಮುಕ್ಕಣ್ಣ ಕರಿಗಾರ
ಪೀಠಾಧ್ಯಕ್ಷರು
ಮಹಾಶೈವ ಧರ್ಮಪೀಠ, ಗಬ್ಬೂರು

ಹಿಂದೂಧರ್ಮದ ಪರ ವಕಾಲತ್ತುವಹಿಸಿಕೊಂಡು ಆಗಾಗ ಲಿಂಗಾಯತ ಸ್ವತಂತ್ರಧರ್ಮ ಹೋರಾಟದ ಬಗ್ಗೆ ಅಪಸ್ವರ ಎತ್ತುತ್ತಿರುವ ಕೊಲ್ಲಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರು ಇತ್ತೀಚೆಗೆ ಮುಕ್ತಾಯಗೊಂಡ ‘ ಬಸವ ಸಂಸ್ಕೃತಿ ಅಭಿಯಾನ’ದ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತ ಸಂನ್ಯಾಸಿಗಳಿಗೆ ಶೋಭೆಯನ್ನುಂಟು ಮಾಡದ ಮಾತುಗಳನ್ನಾಡಿದ್ದಾರಲ್ಲದೆ ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೆಸರನ್ನು ಅನಗತ್ಯವಾಗಿ ಎಳೆ ತಂದಿದ್ದಾರೆ.ಅವರು ಮಠಾಧೀಶರಾಗಿ ಅವರ ಭಕ್ತರುಗಳಿಗೆ ದೊಡ್ಡವರು ಆಗಿರಬಹುದು,ಆದರೆ ಭಾರತದ ಪ್ರಜೆಗಳಾಗಿ ಸಂವಿಧಾನವನ್ನು ಗೌರವಿಸುವ,ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರ ಬಗ್ಗೆ ಗೌರವಾದರಭಾವನೆಗಳನ್ನು ಬೆಳೆಸಿಕೊಳ್ಳಲೇಬೇಕು.ಯಾವ ಸ್ವಾಮಿ,ಸಂತ,ಶರಣ ಸಂವಿಧಾನಕ್ಕಿಂತ ದೊಡ್ಡವರಲ್ಲ.

ಇತ್ತೀಚೆಗೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಬೀಳೂರು ಗ್ರಾಮದ ವಿರಕ್ತಮಠ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ತಮ್ಮ ಹೊಟ್ಟೆಉರಿಯನ್ನು ಹೊರಹಾಕಿದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರು ತಮ್ಮ ಹಿಡಿತವಿಲ್ಲದ ನಾಲಿಗೆಯನ್ನು ಹರಿಯಬಿಟ್ಟು ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟವನ್ನು ಮುಖ್ಯಮಂತ್ರಿ ಕೃಪಾಪೋಷಿತ ನಾಟಕ ತಂಡ’ ಎಂದು ಹೇಳಿಕೆ ನೀಡಿದ್ದು ಅವರ ವ್ಯಕ್ತಿತ್ವವನ್ನು ಸಾರ್ವಜನಿಕರೆದುರು ಅನಾವರಣಗೊಳಿಸಿದೆ.ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳಿಗೆ ಲಿಂಗಾಯತ ಮಠಾಧೀಶರ ಒಕ್ಕೂಟದ ಬಗ್ಗೆ ಅಸಂತೃಪ್ತಿ ಇದ್ದರೆ ಅದನ್ನು ವ್ಯಕ್ತಪಡಿಸಬಹುದಿತ್ತು;ಆದರೆ ‘ಮುಖ್ಯಮಂತ್ರಿ ಕೃಪಾಪೋಷಿತ ನಾಟಕ ತಂಡ’ ಎಂದು ಟೀಕಿಸುವ ಅಗತ್ಯವೇನಿತ್ತು? ಔಚಿತ್ಯವೇನಿತ್ತು? ವೀರಶೈವ ಪರಂಪರೆಯ ಗುರು ಜಗದ್ಗುರುಗಳ ಪದತಲದಡಿ ಸಮಾಜ ಬಿದ್ದಿರಬೇಕು ಎಂದು ಹಪಹಪಿಸುವ ಕಾಡಸಿದ್ಧೇಶ್ವರ ಸ್ವಾಮಿಯವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸರ್ವೋದಯ ಸಮಾಜ ನಿರ್ಮಾಣದ ಬಸವ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿರುವುದು,ಬೆಂಬಲಿಸುತ್ತಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ.ಸಾಧು – ಸಂನ್ಯಾಸಿಗಳು ‘ ಲೋಕಕಲ್ಯಾಣ ಗುಣದ ಆದರ್ಶವನ್ನು ಎತ್ತಿಹಿಡಿಯಬೇಕಾದದ್ದು ಸಂನ್ಯಾಸ ಧರ್ಮದ ಪ್ರಾಥಮಿಕ ಅಗತ್ಯ.ಕರ್ನಾಟಕದ ಲಿಂಗಾಯತ ಮಠಾಧೀಶರುಗಳು ಬಸವಣ್ಣನವರು ಬಿತ್ತಿ ಬೆಳೆದ ಮಾನವೀಯ ಮೌಲ್ಯಗಳ ಅಮರಬೀಜಗಳನ್ನು ಬಿತ್ತಿ ಬೆಳೆಯುವ ಕೆಲಸ ಮಾಡುತ್ತಿದ್ದಾರೆ.ಲಿಂಗಾಯತ ಮಠಾಧೀಶರುಗಳು ಬಸವಣ್ಣನವರಂತೆ ಎಲ್ಲ ಸಮುದಾಯಗಳನ್ನು ತಮ್ಮೊಂದಿಗೆ ಕರೆದುಕೊಂಡು ಲಿಂಗಾಯತ ಸ್ವತಂತ್ರಧರ್ಮದ ಹೋರಾಟ ನಡೆಸುತ್ತಿಲ್ಲ ಎನ್ನುವ ಕೊರಗು ಎಲ್ಲ ಬಸವಾಭಿಮಾನಿಗಳಲ್ಲಿ ಇರುವುದು ಸತ್ಯ.ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರು ಲಿಂಗಾಯತ ಮಠಾಧೀಶರುಗಳ ‘ ಸರ್ವರನ್ನೂ ಒಳಗೊಳ್ಳದ,ಪೂರ್ಣ ಬಸವತತ್ತ್ವವಾಗದ ಇಂತಹ ಸೀಮಿತ ಜನಾಂದೋಲನ ನಡೆಯನ್ನು ಖಂಡಿಸಬಹುದಿತ್ತು.ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೆಸರನ್ನು ಈ ವಿವಾದದಲ್ಲಿ ಎಳೆದು ತರುವ ಅಗತ್ಯ ಇರಲಿಲ್ಲ.

ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ ಬಸವ ಸಂಸ್ಕೃತಿಯನ್ನು ಬೆಂಬಲಿಸಿದ್ದಾರೆ.ಬಸವಣ್ಣನವರ ಅನುಯಾಯಿ,ಅಭಿಯಾನಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಸವಣ್ಣನವರ ಮೇಲಿನ ಸಹಜ ಗೌರವದಿಂದ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆಯೇ ಹೊರತು ವೀರಶೈವ ಲಿಂಗಾಯತ ಸಮುದಾಯಗಳನ್ನು ಒಡೆಯುವ ಉದ್ದೇಶದಿಂದ ಪಾಲ್ಗೊಂಡಿಲ್ಲ.ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಸವತತ್ತ್ವದ ಅನಿವಾರ್ಯತೆ,ಪ್ರಸ್ತುತತೆ ಮತ್ತು ಬಸವ ಸಂಸ್ಕೃತಿಯ ಪ್ರಸಾರದ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಅವರು ವೀರಶೈವ ಲಿಂಗಾಯತರಲ್ಲಿ ಒಡಕನ್ನುಂಟು ಮಾಡುವ ಯಾವ ಮಾತುಗಳನ್ನೂ ಆಡಿಲ್ಲ.ವಸ್ತುಸ್ಥಿತಿ ಹೀಗಿರುವಾಗ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕಿಸುವುದು ಎಷ್ಟರ ಮಟ್ಟಿಗೆ ಸರಿ? ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯವರು ಸೇರಿದಂತೆ ಕೆಲವು ಜನ ವೀರಶೈವ ಮಠಪರಂಪರೆಯ ಸ್ವಾಮಿಗಳಲ್ಲಿ ಮುಖ್ಯಮಂತ್ರಿ ತಮಗಿಂತ ಸಣ್ಣವರು,ತಾವು ದೊಡ್ಡವರು ಎನ್ನುವ ಪ್ರಜಾಪ್ರಭುತ್ವ ವಿರೋಧಿ,ಸಂವಿಧಾನ ವಿರೋಧಿ ಭಾವನೆ ಇದೆ.ಸಮಾನತೆಯನ್ನು ಪ್ರತಿಪಾದಿಸುವ ,ಬಿರುದು ಬಾವಲಿಗಳನ್ನು ತಿರಸ್ಕರಿಸಿದ ಭಾರತದ ಪ್ರಬುದ್ಧ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಚಿತ್ರವಿಚಿತ್ರ ಬಿರುದು ಪದವಿಗಳನ್ನು ಸ್ವಯಂಘೋಷಿಸಿಕೊಂಡು ಮುಗ್ಧಜನಕೋಟಿಯ ಮೇಲೆ ಧರ್ಮದ ಹೆಸರಿನಲ್ಲಿ ಮೌಢ್ಯ,ಅಂಧಕಾರದ ಕಾರ್ಮೋಡಗಳನ್ನು ಪಸರಿಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವ ಮಠ ಪೀಠಾಧಿಪತಿಗಳು ಸಂವಿಧಾನವನ್ನು ಗೌರವಿಸದಿದ್ದರೆ,ಸಾಂವಿಧಾನಿಕ ಹುದ್ದೆಗಳಲ್ಲಿ ಇದ್ದವರನ್ನು ಗೌರವಿಸುವ ಸನ್ನಡತೆಯನ್ನು ರೂಢಿಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಅದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ.

ಜಗತ್ತಿನ ಸಮಾಜೋ ಧಾರ್ಮಿಕ ಸುಧಾರಕರುಗಳಲ್ಲಿ ಅಗ್ರಮಾನ್ಯರಾಗಿರುವ ಬಸವಣ್ಣನವರ ಕನಸಿನ ಶಿವಸಮಾಜ,ಸರ್ವೋದಯ ಸಮಾಜ ನಿರ್ಮಿಸಬೇಕು ಎನ್ನುವ ಸದಾಶಯದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಸವಣ್ಣನವರು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸುವ ಒಂದು ಅತಿಮಹತ್ವದ ಕಾರ್ಯ ಮಾಡಿದ್ದಾರೆ.ವೀರಶೈವ ಲಿಂಗಾಯತ ಸಮುದಾಯಗಳಿಂದ ಬಂದಿರುವ ಯಡಿಯೂರಪ್ಪ,ಜಗದೀಶ ಶೆಟ್ಟರ್,ಬಸವರಾಜ ಬೊಮ್ಮಾಯಿ ಅವರುಗಳಾರೂ ಮುಖ್ಯಮಂತ್ರಿಗಳಾಗಿ ಮಾಡದ ಅದ್ಭುತವಾದ,ಸಾಹಸದ ಕಾರ್ಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾಡಿದ್ದಾರೆ,ಬಸವಣ್ಣನವರ ಮಹೋನ್ನತ ವ್ಯಕ್ತಿತ್ವದ ಹಿರಿಮೆ- ಗರಿಮೆಗಳನ್ನು ಜಗದಗಲ ಪಸರಿಸಿದ್ದಾರೆ.ಹಿಂದೆ ದೇವರಾಜು ಅರಸು ಅವರು ಗಮನಕ್ಕೆ ಬಾರದ ಜಾತಿಗಳ ವ್ಯಕ್ತಿಗಳನ್ನು ರಾಜಕೀಯ ನಾಯಕರುಗಳನ್ನಾಗಿ ರೂಪಿಸಿದಂತೆ ಸಿದ್ಧರಾಮಯ್ಯನವರು ಸರ್ವರನ್ನೂ ಒಳಕೊಂಡು,ಸರ್ವರಿಗೂ ಉನ್ನತಿಯ ಅವಕಾಶ ನೀಡುವ ಬಸವ ಸಂಸ್ಕೃತಿಯನ್ನು ಬೆಂಬಲಿಸುವ ಮೂಲಕ ತುಳಿತಕ್ಕೊಳಗಾದ ಎಲ್ಲರಿಗೂ ರಾಜಕೀಯ ಪ್ರಾತಿನಿಧ್ಯ ಮಾತ್ರವಲ್ಲ,ಎಲ್ಲರಲ್ಲಿಯೂ ಇರುವ ಶಿವಚೈತನ್ಯ ಜಾಗೃತವಾಗಲಿ ಎನ್ನುವ ಮಹದುದ್ದೇಶದಿಂದ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿ ಸಾರ್ವತ್ರಿಕವಾದ ಮಾನವೀಯ ಮೌಲ್ಯಗಳ ಜೀವಪರ,ಜನಪರ ಬಸವಸಂಸ್ಕೃತಿಯನ್ನು ಬೆಂಬಲಿಸುತ್ತಿದ್ದಾರೆ ಎನ್ನುವುದನ್ನು ವ್ಯಕ್ತಿಗೌರವವನ್ನು ಪ್ರೋತ್ಸಾಹಿಸದ,ಆಧ್ಯಾತ್ಮಿಕ ವಿರೋಧಿ ತತ್ತ್ವವಾದ ವ್ಯಕ್ತಿಪೂಜೆಯಂತಹ ಅನಾಗರಿಕ ನಡೆಯನ್ನು ಅನುಚಾನವಾಗಿ ಪಾಲಿಸಿಕೊಂಡು ಬರುತ್ತಿರುವ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳಂಥವರು ಅರ್ಥ ಮಾಡಿಕೊಳ್ಳಬೇಕು.

೧೨.೧೦.೨೦೨೫