ವಾಲ್ಮೀಕಿಯವರ ಸ್ವಯಂ ಸಿದ್ಧ ಮಹೋನ್ನತ ಋಷಿ ವ್ಯಕ್ತಿತ್ವ ನಮಗೆ ಮುಖ್ಯವಾಗಬೇಕು;ಅವರ ಸುತ್ತ ಹೆಣೆದ ಕಥೆ- ಪುರಾಣಗಳಲ್ಲ. : ಮುಕ್ಕಣ್ಣ ಕರಿಗಾರ

ಮಹರ್ಷಿ ವಾಲ್ಮೀಕಿಯವರ ಜಯಂತಿಯ ಸರಳ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಬೆಳಿಗ್ಗೆ ಗುರುಮಿಠಕಲ್ ಗೆ ಹೊರಟಿದ್ದೆ.ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯ ಸ್ಥಾನಬಲದಿಂದ ನಾನು ಗುರುಮಿಠಕಲ್ ತಾಲೂಕಾ ಪಂಚಾಯತಿಯ ಆಡಳಿತಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಬಸವರಾಜ ಶರಭೈ ಅವರು ಸರಳ ಕಾರ್ಯಕ್ರಮ ಆಯೋಜಿಸಿ,ತಾಲೂಕಾ ಪಂಚಾಯತಿಯ ಮುಖ್ಯಸ್ಥನಾದ ನನ್ನನ್ನು ಆಹ್ವಾನಿಸಿದ್ದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು.ಕಾರಿನಲ್ಲಿ ಪಯಣಿಸುತ್ತಿದ್ದ ನನ್ನ ತಲೆತುಂಬ ವಾಲ್ಮೀಕಿಯವರೇ ತುಂಬಿದ್ದರು.ತಿರಷ್ಕೃತ ಸಮಾಜ ಒಂದರಿಂದ ಬಂದ ಒಬ್ಬ ಸಾಮಾನ್ಯ ಮನುಷ್ಯ ಮಹರ್ಷಿ ವಾಲ್ಮೀಕಿಗಳಾಗಿ ವಿಶ್ವವಂದ್ಯರಾಗುವ ಮಟ್ಟಿಗೆ ಬೆಳೆದ ಅವರ ವ್ಯಕ್ತಿತ್ವದ ಮಹೋನ್ನತಿಯ ಬಗ್ಗೆ ಆಲೋಚಿಸುತ್ತಿದ್ದೆ,ಚಿಂತಿಸುತ್ತಿದ್ದೆ.ಪರಿಶಿಷ್ಟ ಪಂಗಡದ ಜನರು ಇಂದು ಹೆಮ್ಮೆ- ಅಭಿಮಾನಗಳಿಂದ ವಾಲ್ಮೀಕಿಯವರನ್ನು ಸ್ಮರಿಸಿ,ಜೈಕಾರ ಹಾಕಿ ಸಂಭ್ರಮಿಸುತ್ತಾರೆ.ಸರಕಾರಿ ಮತ್ತು ಸಂಘ- ಸಂಸ್ಥೆಗಳ ಜಯಂತಿ ಕಾರ್ಯಕ್ರಮಗಳಲ್ಲಿ ರತ್ನಾಕರನೆಂಬ ಕಡುಕ್ರೂರಿ ಬೇಡ ಋಷಿಗಳ ಪ್ರೇರಣೆಯಿಂದ ತಪಸ್ಸುಮಾಡಿ,ಹುತ್ತದಿಂದ ಎದ್ದು ಬಂದು ರಾಮಾಯಣ ಬರೆದು ಮಹಾಕವಿ ಆದ ಕಥೆಯನ್ನು ಹಾಡಿ ಹೊಗಳಿ ಸಂಭ್ರಮಿಸುತ್ತಾರೆ.ಆದರೆ ಇದರ ಹಿಂದಣ ಮರ್ಮ ಏನು,ಯಾವ ರಾಜಸೂಕ್ಷ್ಮ- ಧರ್ಮಸೂಕ್ಷ್ಮಗಳು ಈ ಕಥೆಯ ಹಿಂದೆ ಕೆಲಸ ಮಾಡಿವೆ ಎನ್ನುವುದನ್ನು ಯಾರೂ ಯೋಚಿಸುವುದೇ ಇಲ್ಲ.ರತ್ನಾಕರನೆಂಬ ಬೇಡನ ಕಥೆ ಮಹರ್ಷಿ ವಾಲ್ಮೀಕಿಯವರ ಮಹೋನ್ನತ ವ್ಯಕ್ತಿತ್ವವನ್ನು ಅಲ್ಲಗಳೆಯುವ ಕಪಟಿಗಳ ಮನಸ್ಸಿನ ಸೃಷ್ಟಿ.ತಲೆತಲಾಂತರಗಳಿಂದ ದೇವರು- ಧರ್ಮಗಳು ತಮ್ಮ ಖಾಸಗಿ ಸ್ವತ್ತು ಎಂದು ಅವುಗಳ ಏಕಸ್ವಾಮ್ಯಪಡೆದಿದ್ದ ಪುರೋಹಿತರ ಕಟ್ಟುಕಥೆ ಅದು.ಸಾಮಾನ್ಯ ಬೇಡನೊಬ್ಬ ತಪಸ್ಸು ಮಾಡಿ ಮಹಾನ್ ಋಷಿ ಆಗಿ ಎದ್ದು ಬರುತ್ತಾನೆ ಎನ್ನುವುದನ್ನು ಸಹಿಸದ ಮನಸ್ಸುಗಳು ವಾಲ್ಮೀಕಿಯವರ ಮಹೋಜ್ವಲ ವ್ಯಕ್ತಿತ್ವದ ಪ್ರಖರ ಪ್ರಭಾಪುಂಜವನ್ನು ಮಂಕುಗೊಳಿಸಲು ಕಟ್ಟಿದ ಕಥೆಯೇ ಅವರು ರಾಮ ನಾಮ ಜಪಿಸಿ,ಹುತ್ತದಿಂದ ಎದ್ದು ಬಂದು,ರಾಮಾಯಣ ರಚಿಸಿದರು ಎನ್ನುವುದು.ತಮಗಲ್ಲದೆ ದೇವರು ಯಾರಿಗೂ ಒಲಿಯುವುದಿಲ್ಲ,ತಮಗಲ್ಲದೆ ದೇವರನ್ನು ಪೂಜಿಸುವ ಹಕ್ಕು ಯಾರಿಗೂ ಇಲ್ಲ ಎಂದು ಶಾಸನವಿಧಿಸಿ ‘ ಭೂಸುರರು’ ಎಂದು ಮೆರೆಯುತ್ತಿದ್ದವರಿಗೆ ಒಬ್ಬ ಸಾಮಾನ್ಯ ಬೇಡ ಹನ್ನೆರಡು ವರ್ಷಗಳ ಸುದೀರ್ಘ ತಪಸ್ಸು ಮಾಡಿ ಋಷಿಯಾದ,ಮಹರ್ಷಿಯಾದ ಎಂದರೆ ಸಹಿಸಲಾದೀತೆ? ಶುಷ್ಕ ಹೋಮ- ಹವನ,ವ್ರತಾದಿಗಳೇ ದೇವರೊಲುಮೆಯ ಸಾಧನ ಎಂದು ಭ್ರಮಿಸಿದ್ದವರಿಗೆ ಬೇಡನೊಬ್ಬ ತನ್ನ ಸತ್ತ್ವಸಿದ್ಧಿಯಿಂದ,ಆತ್ಮಶ್ರೀಯಿಂದ ಪರಮಾತ್ಮನ ಸಾಕ್ಷಾತ್ಕಾರ ಪಡೆಯುತ್ತಾನೆ ಎಂದರೆ ಅದು ತಮಗಾಗುವ ಅಪಮಾನವಲ್ಲವೆ? ವಾಲ್ಮೀಕಿಯವರು ತಪಸ್ವಿಗಳೆಂದು ಲೋಕಜನಾದರಣೀಯರಾಗುತ್ತಿದ್ದುದನ್ನು ವಿರೋಧಿಸಲಾಗದೆ ವಾಲ್ಮೀಕಿಯವರ ಆ ಸಿದ್ಧಿ ಸಾಧನೆಗಳ ಹಿಂದೇ ನಾವೇ ಇದ್ದೇವೆ ಎನ್ನುವುದನ್ನು ಸಾರಲು ಪುರೋಹಿತಶಾಹಿ ವ್ಯವಸ್ಥೆ ಕಟ್ಟಿದ ಕಥೆಯೇ ರತ್ಮಾಕರ ವಲ್ಮೀಕದಿಂದ ಎದ್ದು ಬಂದು ವಾಲ್ಮೀಕಿಯಾಗಿ ರಾಮಾಯಣ ಬರೆದು ಮಹಾಕವಿಯಾದ,ಮಹರ್ಷಿಯಾದ ಎನ್ನುವುದು.ರಾಮ ಹೇಗೂ ಪುರೋಹಿತರ,ಪಟ್ಟಭದ್ರರ ದೇವರು.ರಾಮನು ಪುರೋಹಿತಶಾಹಿ ವ್ಯವಸ್ಥೆಯ ಪೋಷಕ ಪ್ರಭು.ಅಂತಹ ರಾಮನನ್ನು ಕುರಿತು ವಾಲ್ಮೀಕಿಯವರು ತಪಸ್ಸು ಮಾಡಿದರು ಎಂದರೆ ಅದು ಪುರೋಹಿತರ ಗೆಲುವೇ ಅಲ್ಲವೆ!? ಇದು ನಾವು ಅರ್ಥಮಾಡಿಕೊಳ್ಳಬೇಕಾದ ಸಂಗತಿ.
ಹುತ್ತದಿಂದ ಎದ್ದು ಬಂದು ವಾಲ್ಮೀಕಿ ಆದರು ಎನ್ನುವುದು ವಾಲ್ಮೀಕಿಯವರ ಮಹರ್ಷಿ ವ್ಯಕ್ತಿತ್ವಕ್ಕೆ ಎಸಗುವ ಅಪಚಾರ.ಅವರನ್ನು ಎಷ್ಟು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದರೆ ‘ ರಾಮ’ ಎನ್ನುವ ಎರಡಕ್ಷರಗಳನ್ನೇ ಉಚ್ಚರಿಸಲು ಬಾರದ ಕಡುಕರ್ಮಿ,ಕಡುದಡ್ಡರನ್ನಾಗಿ.ಅಂದರೆ ಆತ ಅಂತಹ ಪಾಪಾತ್ಮನಾಗಿದ್ದ,ನಮ್ಮ ರಾಮನಾಮಬಲದಿಂದ ಉದ್ಧಾರವಾದ ಎನ್ನುವುದನ್ನು ಸಾರುವುದು ಚತುರರ ಕಥಾರಚನೆಯ ಉದ್ದೇಶ.ಈ ಸತ್ಯ ಎಲ್ಲರಿಗೂ ತಿಳಿದಿರಲಿ,ಇಂದು ರಾಮನ ಹೆಸರು ಉಳಿದಿದ್ದರೆ ,ಆತ ದೇವರು ಎಂದು ಪೂಜೆಗೊಳ್ಳುತ್ತಿದ್ದರೆ ಅದಕ್ಕೆ ಮೂಲಕಾರಣರು ಮಹರ್ಷಿ ವಾಲ್ಮೀಕಿಯವರು.ಒಂದು ವೇಳೆ ವಾಲ್ಮೀಕಿಯವರು ರಾಮನ ಕಥೆ ರಾಮಾಯಣವನ್ನು ಬರೆಯದೆ ಇದ್ದರೆ ರಾಮ ಎಲ್ಲಿರುತ್ತಿದ್ದ? ಹೇಗೆ ದೇವರಾಗುತ್ತಿದ್ದ? ವಾಲ್ಮೀಕಿಯವರು ವೈಭವೀಕರಿಸಿದ ರಾಮನನ್ನು ದೇವರು ಎಂದು ಪೂಜಿಸುವವರು,ಪೂಜಿಸಲು ಆಜ್ಞೆ ಮಾಡುವವರು ರಾಮನ ಕಥೆಯ ಮೂಲಪುರುಷರಾದ ವಾಲ್ಮೀಕಿಯವರನ್ನು ಪೂಜಿಸುವುದಿಲ್ಲ! ಪೂಜಿಸುವುದು ಬೇಡ ,ಅವರ ತಪಸ್ಸಾಮರ್ಥ್ಯವನ್ನು ಸಹ ಒಪ್ಪುವುದಿಲ್ಲ.
ವಾಲ್ಮೀಕಿಯವರನ್ನು ರಾಮಭಕ್ತನಂತೆ ಚಿತ್ರಿಸಿದ್ದು ಕಪಟವಲ್ಲದೆ ಸತ್ಯವಲ್ಲ.ವಾಲ್ಮೀಕಿ ಮತ್ತು ರಾಮ ಇಬ್ಬರೂ ಸಮಕಾಲೀನರೆ! ಇಬ್ಬರೂ ತ್ರೇತಾಯುಗದಲ್ಲಿ ಬದುಕಿದ್ದ ಐತಿಹಾಸಿಕ ವ್ಯಕ್ತಿಗಳು.ವಾಲ್ಮೀಕಿಯವರು ರಾಮನನ್ನು ಪ್ರತ್ಯಕ್ಷವಾಗಿ ಕಂಡವರು,ರಾಮನೂ ವಾಲ್ಮೀಕಿಯವರ ಭವ್ಯಾದ್ಭುತವಾದ ವ್ಯಕ್ತಿತ್ವದಿಂದ ಆಕರ್ಷಿತನಾದವನು.ರಾಮಾಯಣವನ್ನು ರಚಿಸಿ ತಮ್ಮ ಆಶ್ರಮದಲ್ಲಿ ಬೆಳೆಯುತ್ತಿದ್ದ ರಾಮಪುತ್ರರಾದ ಲವ- ಕುಶರಿಗೆ ಅದನ್ನು ಕಂಠಪಾಠ ಮಾಡಿಸಿ,ರಾಮನ ಆಸ್ಥಾನದಲ್ಲಿ ಸುಶ್ರಾವ್ಯವಾಗಿ ಆ ಇಬ್ಬರು ಬಾಲಕರಿಂದ ಹಾಡಿಸುವ ಏರ್ಪಟು ಮಾಡಿದವರೇ ವಾಲ್ಮೀಕಿಯವರು.ಕೆಲವು ಪುರಾಣಗಳಂತೆ ತ್ರೇತಾಯುಗದಲ್ಲಿ ಸಮಕಾಲೀನರಾಗಿ ಬದುಕಿದ್ದ ವಾಲ್ಮೀಕಿ ಮತ್ತು ರಾಮರಲ್ಲಿ ವಾಲ್ಮೀಕಿಯವರಿಗೆ ಎಂಬತ್ತು ವರ್ಷಗಳಾಗಿದ್ದರೆ ರಾಮನಿಗೆ ಮುವ್ವತ್ತು ವರ್ಷಗಳಾಗಿದ್ದವು.ಇಕ್ಷಾಕು ವಂಶದ ಅರಸಕುಮಾರನಾದ ತನಗಿಂತ ಕಿರಿಯನಾಗಿದ್ದ ರಾಮನನ್ನು ಕುರಿತು ವಾಲ್ಮೀಕಿಯವರು ತಪಸ್ಸು ಮಾಡಿದರು ಎಂದರೆ ಅದು ಎಂತಹ ಕಪಟ ಆಗಿರಬಹುದು ,ನೀವೇ ಊಹಿಸಿ.ಅಲ್ಲದೆ ರಾಮಾಯಣದ ಕಾಲದಲ್ಲಿ ಅರಸೊತ್ತಿಗೆ ಅಷ್ಟು ನಿರಂಕುಶವಾಗಿರಲಿಲ್ಲ,ಆಳರಸರನ್ನು ದೇವರು ಎಂದು ಪೂಜಿಸುವ ಮಟ್ಟಿಗೆ ಪ್ರಭುತ್ವದ ಸಾಮರ್ಥ್ಯ ವಿಸ್ತಾರಗೊಂಡಿರಲಿಲ್ಲ. ರಾಮಾಯಣದಲ್ಲೇ ಬರುವ ದಶರಥನು ತನ್ನ ಪುತ್ರ ರಾಮನಿಗೆ ಪಟ್ಟಗಟ್ಟಲು ಅಯೋಧ್ಯೆಯ ಪುರಪ್ರಮುಖರು ಮತ್ತು ಜನರ ಅಭಿಪ್ರಾಯಪಡೆಯುವ ಪ್ರಸಂಗವು ಇದನ್ನು ಪುಷ್ಟೀಕರಿಸುತ್ತದೆ.ಅಲ್ಲದೆ ರಾಮನನ್ನು ವೈಷ್ಣವರು ತಮ್ಮ ದೇವರು,ವಿಷ್ಣುವಿನ ಅವತಾರಗಳಲ್ಲೊಬ್ಬ ಎಂದು ಸ್ವೀಕರಿಸಿದ್ದು ರಾಮಾಯಣದ ಕಾಲವಾದ ಎಷ್ಟೋ ಸಹಸ್ರವರ್ಷಗಳ ಬಳಿಕ.ಹಾಗಿರುವಾಗ ವಾಲ್ಮೀಕಿಯವರು ರಾಮಭಕ್ತರಾಗಿದ್ದರು ಎಂದರೆ ಅದು ವಾಲ್ಮೀಕಿಯವರ ವ್ಯಕ್ತಿತ್ವಕ್ಕೆ ಮಾಡುವ ಕೇಡಲ್ಲವೆ? ಗಮನಿಸಬೇಕಾದ ಬಹುಮುಖ್ಯ ಸಂಗತಿ ಎಂದರೆ ರಾಮಾಯಣವನ್ನು ರಚಿಸಿದ ವಾಲ್ಮೀಕಿಯವರೇ ರಾಮನನ್ನು ದೇವರು,ವಿಷ್ಣುವಿನ ಅವತಾರ ಎಂದು ಹೇಳಿಲ್ಲ ! ವಾಲ್ಮೀಕಿಯವರು ರಾಮನಲ್ಲಿ ಒಬ್ಬ ಆದರ್ಶ ದೊರೆ,ಮರ್ಯಾದಾ ಪುರುಷೋತ್ತಮನನ್ನು ಕಂಡಿದ್ದಾರೆಯೇ ಹೊರತು ವಿಷ್ಣುವನ್ನಾಗಲಿ,ದೇವರನ್ನಾಗಲಿ ಕಂಡಿಲ್ಲ.ಈ ಸತ್ಯವನ್ನು ಮರೆಮಾಚಿ ಮಹೋನ್ನತ ವ್ಯಕ್ತಿತ್ವದ ವಾಲ್ಮೀಕಿಯವರನ್ನು ರಾಮಭಕ್ತನನ್ನಾಗಿಸುವ ಮನಸ್ಸುಗಳ ಕಪಟವನ್ನರಿಯದೆ ಒಪ್ಪಿ,ಸಮರ್ಥಿಸುವುದು ಸರಿಯಲ್ಲ.
ನಾವು ಗಮನಿಸಬೇಕಾದದ್ದು ರತ್ನಾಕರನೆಂಬ ಬೇಡ,ವಾಲ್ಮೀಕಿಯಾದ ಕಟ್ಟುಕಥೆಯನ್ನಲ್ಲ.ಒಬ್ಬ ಕಡೆಗಣಿಸಲ್ಪಟ್ಟ ಬೇಡನಾಗಿಯೂ ತಪಸ್ಸನ್ನಾಚರಿಸಿ ಮಹರ್ಷಿಯಾಗಿ ಎದ್ದು ಬಂದ ವಾಲ್ಮೀಕಿಯವರ ಆತ್ಮಶ್ರೀಯನ್ನು.ಮನೆ,ಮಡದಿ ಮಕ್ಕಳು,ವೃತ್ತಿಯನ್ನು ತೊರೆದು ಪರಮಾತ್ಮನ ಅನ್ವೇಷಣೆಯಲ್ಲಿ ದೇಹದ ಹಂಗು- ಅಭಿಮಾನ ತೊರೆದು,ಮಳೆ ಗಾಳಿ ಚಳಿಗಳಿಗೆ ಮೊಯೊಡ್ಡಿ ತಪಸ್ಸನ್ನಾಚರಿಸಿ ಗೆದ್ದು ಋಷಿಯಾದ,ಲೋಕಪೂಜ್ಯರಾದ ವಾಲ್ಮೀಕಿಯವರನ್ನು.ವಾಲ್ಮೀಕಿಯವರ ಸಿದ್ಧಿ ಸಾಧನೆಗಳೆಲ್ಲ ಸ್ಪಷ್ಟವಾಗಿ ಪ್ರಕಟಗೊಂಡಿವೆ ರಾಮಾಯಣದಲ್ಲಿ.ಅವರೊಬ್ಬ ಆದರ್ಶ ಸಮಾಜ ನಿರ್ಮಾಣದ ಕನಸುಣಿ.ಮನುಕುಲದ ಉನ್ನತಿ- ಉದ್ಧಾರಗಳ ಬಗ್ಗೆ ಕಾಳಜಿ- ಕಕ್ಕುಲತೆಗಳುಳ್ಳ ಮಹರ್ಷಿ.ತತ್ತ್ವಜ್ಞಾನಿ ಅರಸನ ಕಲ್ಪನೆಯ ಬೀಜಾಂಕುರವಾದದ್ದೇ ರಾಮಾಯಣದಲ್ಲಿ.ಸರ್ವೋದಯ ಸಮಾಜದ ಮೂಲ ಸೂತ್ರಗಳಿರುವುದೇ ರಾಮಾಯಣದಲ್ಲಿ.ಸುಖೀರಾಜ್ಯ,ಗ್ರಾಮರಾಜ್ಯ,ಕಲ್ಯಾಣರಾಜ್ಯಗಳಂತಹ ಪರಿಕಲ್ಪನೆಗಳ ಉಗಮ,ತತ್ತ್ವ ಗಂಗೋತ್ರಿಯೇ ರಾಮಾಯಣ.ಈ ಅರ್ಥದಲ್ಲಿ ನಾವು ರಾಮಾಯಣವನ್ನು ಗ್ರಹಿಸಬೇಕು; ಆದರ್ಶ ಸಮಾಜವನ್ನು ಕಟ್ಟಬಯಸಿದ್ದ ಪರಿಪೂರ್ಣ ಸಿದ್ಧರನ್ನಾಗಿ ವಾಲ್ಮೀಕಿಯವರನ್ನು ಕಾಣಬೇಕು.
20.10.2021