ಬಸವಚಿಂತನೆ : ಬಸವಣ್ಣನವರ ಉಗ್ರ ಶಿವನಿಷ್ಠೆ,ಅನ್ಯದೈವಗಳ ಪೂಜಿಪ ಭಕ್ತರ ತೀವ್ರ ತಿರಸ್ಕಾರ : ಮುಕ್ಕಣ್ಣ ಕರಿಗಾರ

ಬಸವಚಿಂತನೆ : ಬಸವಣ್ಣನವರ ಉಗ್ರ ಶಿವನಿಷ್ಠೆ,ಅನ್ಯದೈವಗಳ ಪೂಜಿಪ ಭಕ್ತರ ತೀವ್ರ ತಿರಸ್ಕಾರ

      ಮುಕ್ಕಣ್ಣ ಕರಿಗಾರ

 

ಬಸವಣ್ಣನವರು ಮೂಲತಃ ಶಿವಭಕ್ತರು,’ಶಿವಸರ್ವೋತ್ತಮ ತತ್ತ್ವ’ವನ್ನು ಸಾರಲೆಂದೇ ಅವತರಿಸಿದ ಶಿವವಿಭೂತಿಗಳು.ಈಗಿನ ಕೆಲವರು ಗಳಹುವಂತೆ ‘ ಶಿವ ವೈದಿಕರ ದೇವರು,ಲಿಂಗಾಯತರು ಶಿವನನ್ನು ಪೂಜಿಸಬಾರದು’ ಎಂದು ಭಾವಿಸಿದವರಲ್ಲ ಬಸವಣ್ಣನವರು. ಬಸವಣ್ಣನವರ ಪರಿಪೂರ್ಣ ವ್ಯಕ್ತಿತ್ವ ಅವರ ವಚನಗಳಲ್ಲಿಯೇ ವ್ಯಕ್ತಗೊಂಡಿದೆ.ಬಸವಣ್ಣನವರ ಸಮಗ್ರವಚನಗಳನ್ನು ಓದದೆ,ಅರ್ಥೈಸಿಕೊಳ್ಳದೆ ಅವರ ನಾಲ್ಕಾರು ವಚನಗಳನ್ನು ಓದಿ ಮನಬಂದಂತೆ ಗಳಹುವ ಅಪ್ರಬುದ್ಧ ಮತಿಗಳಿಂದ ಬಸವ ತತ್ತ್ವ ಬೆಳೆಯದು; ಬಸವತತ್ತ್ವದ ಹೆಸರಿನಲ್ಲಿ ಬೆಳೆಯಬಯಸುವ ‘ ಒಡಲುಹೊರೆವ ವ್ಯರ್ಥಕಾಯರುಗಳು’ ಬಸವಣ್ಣನವರನ್ನು ತಮಗೆ ತೋಚಿದಂತೆ ಅರ್ಥೈಸುತ್ತ ಬಸವಣ್ಣನವರಿಗೆ,ಬಸವಣ್ಣನವರ ಮಹೋನ್ನತ,ಮಹೋಜ್ವಲ ವ್ಯಕ್ತಿತ್ವಕ್ಕೆ ಅಪಚಾರ ಎಸಗುತ್ತಿದ್ದಾರೆ.ಶಿವನನ್ನು ‘ಜಗದ ಕರ್ತಾರ’ನೆಂದು ನಂಬಿ ನಡೆದಿದ್ದ ಬಸವಣ್ಣನವರು ಯುಗಯುಗದಲ್ಲಿ ತಾವು ಶಿವಧರ್ಮಸ್ಥಾಪನೆಗೆ ಅವತರಿಸುವುದಾಗಿ ಅವರ ವಚನಗಳಲ್ಲಿಯೇ ಸ್ಪಷ್ಟವಾಗಿ ಸಾರಿದ್ದಾರೆ.ಜಗದ ಕರ್ತಾರನಾದ ಶಿವನು’ ಸಾಕಾರ’ ಮತ್ತು ‘ನಿರಾಕಾರ’ ಎಂಬೆರಡು ಅವಸ್ಥೆಗಳುಳ್ಳವನು ಎಂದು ನಂಬಿದ್ದ ಬಸವಣ್ಣನವರಿಗೆ ಕೂಡಲಸಂಗಮದೇವನು ‘ ಸಾಕಾರಶಿವ’ ನಾದರೆ ಕರಸ್ಥಳದಲ್ಲಿ ಚುಳುಕುಗೊಳ್ಳುವ ಇಷ್ಟಲಿಂಗವು ‘ ನಿರಾಕಾರ ಶಿವನ‌ ಪ್ರತೀಕ’ .ಇದು ಬಸವಣ್ಣನವರ ನಂಬಿಗೆ,ಅಚಲ ಶಿವನಿಷ್ಠೆ. ‘ಶಿವ ಏಕದೇವೋಪಾಸನೆ’ಯನ್ನು ಬಲವಾಗಿ ಪ್ರತಿಪಾದಿಸಿದ ಬಸವಣ್ಣನವರು ತಮ್ಮ ಹಲವಾರು ವಚನಗಳಲ್ಲಿ ಹಲವು ಕುನ್ನಿದೈವಗಳನ್ನು ಕಟೂಕ್ತಿಗಳಲ್ಲಿ ಖಂಡಿಸಿದ್ದಾರೆ,ಶಿವಭಕ್ತರು ಎಂದು ಕೊಚ್ಚಿಕೊಳ್ಳುತ್ತ ಅನ್ಯದೈವಗಳನ್ನು ಪೂಜಿಸುವ ಕುನ್ನಿಭಕ್ತರುಗಳ ಅಜ್ಞಾನ,ಅವಿವೇಕವನ್ನು ಕೆಡೆನುಡಿದಿದ್ದಾರೆ.ಶಿವಭಕ್ತರೆಂದು ಹೇಳಿಕೊಳ್ಳುತ್ತ ಅನ್ಯದೇವರುಗಳ ಪೂಜೆ,ಸೇವೆ ಮಾಡುವವರ ಬಗ್ಗೆ ಬಸವಣ್ಣನವರು ಎಷ್ಟು ಉಗ್ರವಾಗಿ ಖಂಡಿಸಿದ್ದಾರೆ ಎನ್ನುವುದನ್ನು ಪ್ರಸ್ತುತ ‘ ಬಸವಚಿಂತನೆ’ಲೇಖನದಲ್ಲಿ ಕೆಲವು ಉದಾಹರಣೆಗಳ ಮೂಲಕ ವಿವರಿಸುವೆ.

ತಮ್ಮ ಒಂದು ವಚನದಲ್ಲಿ ಬಸವಣ್ಣನವರು ಶಿವಭಕ್ತರಾಗಿ ಅನ್ಯದೈವಗಳನ್ನು ಪೂಜಿಸುವವರ ಬಗ್ಗೆ ಎಷ್ಟು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ ನೋಡಿ;–‘ ಕರ್ತಾರನ ಪೂಜಿಸಿ ಕುತ್ಸಿತ ದೈವಕ್ಕೆರಗುವುದು ಕತ್ತೆ ಕುದುರೆಗೆ ಹುಟ್ಟಿದ ವೇಸರ( ಹೇಸರಗತ್ತೆ)ನಂತೆ’.ಹೇಸರಗತ್ತೆ ಎನ್ನುವ ಜೀವಿಯು ಕುದುರೆ ಮತ್ತು ಕತ್ತೆಗಳ ಸಂಭೋಗದಿಂದ ಜನ್ಮತಾಳುತ್ತದೆ.ಗಂಡುಕುದುರೆ ಹೆಣ್ಣು ಕುದುರೆಯನ್ನು ಭೋಗಿಸಿದರೆ ಕುದುರೆ ಮರಿಹುಟ್ಟುತ್ತದೆ,ಅದು ಕುದುರೆಯ ಸಹಜ ಸಂತಾನ,ನಿಸರ್ಗತತ್ತ್ವ.ಗಂಡು‌ಕತ್ತೆ ಹೆಣ್ಣು ಕತ್ತೆಯನ್ನು ಕೂಡಿದರೆ ಕತ್ತೆಮರಿ ಹುಟ್ಟುತ್ತದೆ,ಅದು ಕತ್ತೆಯ ಸಹಜಸಂತಾನ,ನಿಸರ್ಗತತ್ತ್ವ.ಆದರೆ ಗಂಡುಕುದುರೆಯು ಕಾಮವಿಕಾರದಿಂದ ಹೆಣ್ಣು ಕತ್ತೆಯನ್ನು ಭೋಗಿಸಿದಾಗ ಅತ್ತ ಕುದುರೆಯೂ ಅಲ್ಲದ ಇತ್ತ ಕತ್ತೆಯೂ ಅಲ್ಲದ ಹೊಸಪ್ರಾಣಿಯೊಂದು ಹುಟ್ಟುತ್ತದೆ .ಅದೇ ಹೇಸರಗತ್ತೆ! ಹೇಸರಗತ್ತೆಯು ಕುದುರೆಯ ಕಾಮವಿಕಾರದ ಫಲ,ಅಸಹಜ ಸಂತಾನ, ನಿಸರ್ಗ ವಿರೋಧಿ ತತ್ತ್ವ.ಶಿವಭಕ್ತರಾಗಿ ಅನ್ಯ ದೈವಗಳನ್ನು ಪೂಜಿಸುವವರನ್ನು ಹೇಸರಗತ್ತೆಗೆ ಹೋಲಿಸುವ ಮೂಲಕ ಬಸವಣ್ಣನವರು ತಮ್ಮ ಉಗ್ರಶಿವನಿಷ್ಠೆ ಮೆರೆದಿದ್ದಾರೆ.

ಬಸವಣ್ಣನವರು ಶಿವಭಕ್ತರಾಗಿ ಹುಟ್ಟಿ ಹತ್ತುಹಲವು ದೈವಗಳನ್ನು ಪೂಜಿಸುವವರನ್ನು ಮತ್ತೊಂದು ವಚನದಲ್ಲಿ ವಿಡಂಬಿಸುವುದು ‘ ತುಡುಗುಣಿ ನಾಯನು ಹಿಡಿತಂದು ಸಾಕಿದರೆ ತನ್ನೊಡೆಯಂಗೆ ಬಗುಳುವಂತೆ’.ನಾಯಿ ನಿಷ್ಠೆಗೆ ಹೆಸರಾದ ಪ್ರಾಣಿ.ಆದರೆ ಸಾಕಿದ ನಾಯಿ ತನ್ನ ಒಡೆಯನಲ್ಲಿ ನಿಷ್ಠೆಯನ್ನು ಹೊಂದಿರುತ್ತದೆಯೇ ಹೊರತು ಕಂಡವರ ಮನೆಯ ತುತ್ತನ್ನದ ಎಂಜಲು ತಿಂದು ಬದುಕುವ ಬೀದಿನಾಯಿಯು ಒಡೆಯನನ್ನು ಗುರುತಿಸದು.ಒಂದು ಬೀದಿನಾಯಿಯನ್ನು ಹಿಡಿದು ತಂದು ಬಗೆಬಗೆಯ ಅನ್ನ ಆಹಾರವನ್ನಿತ್ತು ಸಾಕಿದರೂ ಅದು ಮನೆಯ ಒಡೆಯನನ್ನು ಕಂಡೇ ಬೊಗಳುತ್ತದೆ.ಮನೆಯಲ್ಲಿ ಸಾಕಿದ ನಾಯಿ ಆಗಿದ್ದರೆ ತನ್ನ‌ ಒಡೆಯನನ್ನು ಕಂಡು ಬಾಲ ಅಲ್ಲಾಡಿಸುತ್ತ,ಕುಂಯ್ ಗುಟ್ಟುತ್ತ ಅವನ ಸುತ್ತ ಸುತ್ತುತ್ತದೆ,ಅನ್ಯರು ಯಾರಾದರೂ ಒಡೆಯನ ಮನೆಗೆ ಬಂದರೆ ಬೊಗಳುತ್ತದೆ,ಕಳ್ಳರು ಒಡೆಯನ ಮನೆ ಪ್ರವೇಶಿಸದಂತೆ ತಡೆಯುತ್ತದೆ.ಆದರೆ ಹಿಡಿತಂದು ಸಾಕಿದ ಬೀದಿನಾಯಿ ‌ಕಾರ್ಯನಿಮಿತ್ತವಾಗಿಹೊರಗೆಹೋಗಿ ಹಿಂತಿರುಗಿದ ಮನೆಯ ಒಡೆಯನ್ನು ಕಂಡು ಬೊಗಳುತ್ತದೆ! ಶಿವಭಕ್ತರಾಗಿ ಹುಟ್ಟಿದವರು,ಶಿವಭಕ್ತರ ವಂಶಗಳಲ್ಲಿ ಹುಟ್ಟಿ ಶಿವಪಾರಮ್ಯವನ್ನು ಸಾಧಿಸಲರಿಯದೆ,ಶಿವಸರ್ವೋತ್ತಮ ತತ್ತ್ವವನ್ನು ಪ್ರತಿಪಾದಿಸದೆ ಕಂಡಕಂಡ ದೈವಗಳಿಗೆ ಎರಗುವವರು ಶಿವತತ್ತ್ವಕ್ಕೆ ಅಪಚಾರ ಎಸಗುವ ‘ಬೀದಿನಾಯಿಗಳಂತೆ’.

ಮತ್ತೊಂದು ವಚನದಲ್ಲಿ ಬಸವಣ್ಣನವರು ಅನ್ಯದೈವಗಳ ಪೂಜಿಸುವ ಶಿವಭಕ್ತರುಗಳನ್ನು ‘ಪೊಡವಿಗೀಶ್ವರನ ಗರ್ಭಾಸನದೊಳಗಿದ್ದು ಮತ್ತೊಂದು ದೈವವುಂಟೆಂದು ಮತಿಹೀನರು ನುಡಿಯುತ್ತಾರೆ’ ಎಂದು ಜರೆದಿದ್ದಾರೆ.ಶಿವದೇವಸ್ಥಾನದ ಗರ್ಭಗುಡಿಯಲ್ಲಿ ಶಿವನನ್ನು ಪೂಜಿಸುತ್ತ ಇನ್ನು ಬೇರೆ ದೇವರುಗಳುಂಟೆಂದು ಭಾವಿಸುವವರನ್ನು ‘ ಹುಚ್ಚರು’ ಎಂದಿದ್ದಾರೆ ಬಸವಣ್ಣನವರು. ಗರ್ಭಗುಡಿ ದೇವರ ಸನ್ನಿಧಾನ,ಶಿವನ ಮೂರ್ತಿ,ಲಿಂಗ ಇರುವ ಶಿವಗರ್ಭಗುಡಿಯು ಕೈಲಾಸದಂತೆ.ಅಂತಹ ಕೈಲಾಸಸ್ಥಾನದಲ್ಲಿದ್ದೂ ಅನ್ಯದೈವಗಳ ಆರಾಧನೆಗೆ ಎಳಸುವವರು ಹುಚ್ಚರಲ್ಲದೆ ಮತ್ತಿನ್ನೇನು? ಶಿವಶರಣರು ನಿಜ ಶಿವಭಕ್ತರಿರದ ಠಾವಿನತ್ತ ನಡೆಯಬಾರದು ಎನ್ನುವ ನಿಲುವಿನ ಬಸವಣ್ಣನವರು’ ಒಡೆಯನಿಲ್ಲದ ಮನೆಯ ತುಡುಗುಣಿ ನಾಯಿ ಹೋಗುವಂತೆ’ ಎನ್ನುವ ಮಾತಿನಲ್ಲಿ ನಿರೂಪಿಸಿ,ನಿರ್ಬಂಧಿಸಿದ್ದಾರೆ.ಸಾಕಿದ ನಾಯಿಯು ತನ್ನನ್ನು ಕಟ್ಟುವಗೂಟ ಅಥವಾ ನಾಯಿಮನೆಯ ಒಳಗಿದ್ದುಕೊಂಡೇ ಮನೆಕಾಯುತ್ತದೆಯೇ ಹೊರತು ಒಡೆಯನ ಮನೆಯ ಅಡುಗೆಮನೆಯ ಹೊಕ್ಕು ಕಂಡುದುದನ್ನು ತಿಂದು ಹೊಟ್ಟೆಹೊರೆದುಕೊಳ್ಳುವುದಿಲ್ಲ.ಆದರೆ ಕೂಳಿಲ್ಲದೆ ಬಸವಳಿದ ಬೀದಿ ನಾಯಿಯು ಒಡೆಯರಿಲ್ಲದ ಮನೆಹೊಕ್ಕು ಕದ್ದು ತಿನ್ನಲು ಹವಣಿಸುತ್ತದೆ.ಕಳ್ಳನಾಯಿಯಲ್ಲಿ ಮೌಲ್ಯವನ್ನರಸುವುದೆಂತು? ಶರಣರು ಶಿವನಲ್ಲಿ ದೃಢಭಕ್ತಿ ಇಲ್ಲದ,ಶಿವನನ್ನು ಪೂಜಿಸುತ್ತ ಅನ್ಯದೈವಗಳಿಗೆ ನಡೆದುಕೊಳ್ಳುವವರ ಮನೆಗೆ ಹೋಗಬಾರದು ,ಅದು ಶಿವಭಕ್ತರಿಗೆ ‘ ನಿಷಿದ್ಧಸ್ಥಳ’ ಎನ್ನುವ ಮೂಲಕ ಹಲವುದೈವಗಳ ಪೂಜಿಪರನ್ನು ಪಾತಕಿಗಳು,ಸೂತಕಿಗಳು ಎಂದು ಜರೆದಿದ್ದಾರೆ.

ನಾವು ಲಿಂಗಾಯತರು, ಶೈವರು- ವೀರಶೈವರು ಎಂದು ಜಂಬಕೊಚ್ಚಿಕೊಳ್ಳುತ್ತ ಹತ್ತು ಹಲವು ದೇವರು,ದೈವಗಳನ್ನು ಪೂಜಿಸುವ ಮಹಾನುಭಾವರುಗಳು ಬಸವಣ್ಣನವರ ಆಶಯ ಅರ್ಥಮಾಡಿಕೊಳ್ಳಬೇಕು.

 

 ‌‌‌‌ ೦೪.೧೦.೨೦೨೫