ಅನುಭಾವ ಚಿಂತನೆ : ಶ್ರೀದೇವಿ ತತ್ತ್ವ ಚಿಂತನೆ
ಮುಕ್ಕಣ್ಣ ಕರಿಗಾರ
ದುರ್ಗಾಸಪ್ತಶತಿ,ದೇವಿಭಾಗವತ,ಕಾಳಿಕಾ ಪುರಾಣ ಮತ್ತು ಕನ್ನಡದಲ್ಲಿ ಚಿದಾನಂದಾವಧೂತರ ಶ್ರೀದೇವಿ ಮಹಾತ್ಮೆ ಮೊದಲಾದ ಶಾಕ್ತಕೃತಿಗಳಲ್ಲಿ ದೇವಿ ದುರ್ಗೆಯು ರಾಕ್ಷಸರನ್ನು ಸಂಹರಿಸಿದ ಪ್ರಸಂಗಗಳು ಬಣ್ಣಿಸಲ್ಪಟ್ಟಿವೆ.ಸುರಾಸುರರ ಸಂಗ್ರಾಮದಲ್ಲಿ ಅಸುರರ ಕೈ ಮೇಲಾಗಿ ಸುರ ನರರುಗಳು ಅಸುರರುಗಳ ಪೀಡೆಯಿಂದ ಬಾಧಿತರಾದಾಗ ದೇವತೆಗಳ ಮೊರೆ ಕೇಳ್ದು ಪ್ರಕಟಗೊಳ್ಳುತ್ತಾಳೆ ಪರಾಶಕ್ತಿ.ಮಧುಕೈಟಭರನ್ನು ಕೊಂದು ಮಧುಕೈಟಭ ಸಂಹಾರಿಣಿ ಎಂದು ಬಿರುದುಗೊಂಡರೆ ಮಹಿಷನನ್ನು ಕೊಂದು ಮಹಿಷಮರ್ದಿನಿ ಎಂದು ಲೋಕಪೂಜಿತಳಾಗಿದ್ದಾಳೆ. ಚಂಡ ಮುಂಡರನ್ನು ಸಂಹರಿಸಿ ಚಾಮುಂಡಿ ಎನ್ನುವ ಹೆಸರಿನಿಂದ ತನ್ನ ಲೀಲೆ ಮೆರೆದಿದ್ದಾಳೆ.ನಿಶುಂಭ ಶುಂಭರನ್ನು ವಧಿಸಿ ನಿಶುಂಭ ಶುಂಭ ಸಂಹಾರಿಣಿ ಎಂದು ಲೋಕಪ್ರಸಿದ್ಧಳಾಗಿದ್ದಾಳೆ.ದುರ್ಗಾದೇವಿಯು ಅಸಂಖ್ಯ ರಕ್ಕಸರನ್ನು ಸಂಹರಿಸಿ,ಕಕ್ಕುಲತೆಯಿಂದ ಅವರನ್ನು ಉದ್ಧರಿಸಿ ರಕ್ಕಸರನಾಮಗಳೊಂದಿಗೆ ಪೂಜೆಗೊಳ್ಳುತ್ತಿದ್ದಾಳೆ.
ದೇವಿ ತತ್ತ್ವದಲ್ಲಿ ದುರ್ಗಾ ಮತ್ತು ಕೌಶಿಕಿ ತತ್ತ್ವಗಳೆರಡು ವಿಶೇಷ ಮನನೀಯವಾಗಿವೆ.ಶ್ರೀದೇವಿಯು ರಾಕ್ಷಸರನ್ನು ಕೊಲ್ಲಲು ಕೌಶಿಕಿ ರೂಪ ಧಾರಣೆ ಮಾಡುತ್ತಾಳೆ.ಮಹಾಬಲಾಢ್ಯ ದುರ್ಗಮಾಸುರನನ್ನು ಕೊಂದು ದುರ್ಗಾದೇವಿ ಎಂದು ಭಕ್ತರಿಂದ ಹೊಗಳಿಸಿಕೊಳ್ಳುತ್ತಿದ್ದಾಳೆ.ಶ್ರೀದೇವಿ ತತ್ತ್ವವೆಂದರೆ ಅದು ಯೋಗತತ್ತ್ವವೆ,ಶಾಕ್ತದರ್ಶನವೆ.ದುರ್ಗಾಸಪ್ತಶತಿಯಾದಿ ಶಾಕ್ತಕೃತಿಗಳು ಕುಂಡಲಿನಿಶಕ್ತಿಯನ್ನು ಜಾಗ್ರತಗೊಳಿಸುವ ಶಕ್ತಿಯೋಗ ಸಂಹಿತೆಗಳು.ದೇವಿಯು ರಾಕ್ಷಸರನ್ನು ಕೌಶಿಕಿ ರೂಪದಿಂದ ಸಂಹರಿಸುತ್ತಾಳೆ.ದುರಿತನಿವಾರಕಿಯಾದ್ದರಿಂದ ದೇವಿಯನ್ನು ದುರ್ಗೆ ಎನ್ನಲಾಗುತ್ತದೆ.
ದುರ್ಗ ಎಂದರೆ ಕೋಟೆ ಎಂದರ್ಥವಿದ್ದು ದುರ್ಗವನ್ನು ಅಂದರೆ ಕೋಟೆಯನ್ನು ರಕ್ಷಿಸುವ ದೇವಿಯು ದುರ್ಗಾದೇವಿಯು.ಹಿಂದೆ ರಾಜಮಹಾರಾಜರುಗಳು ತಮ್ಮ ಕೋಟೆಗಳಲ್ಲಿ ದುರ್ಗಾದೇವಿಯ ಮಂದಿರವನ್ನು ಕಟ್ಟಿ ಕೋಟೆ ಮತ್ತು ಸಾಮ್ರಾಜ್ಯ ರಕ್ಷಣೆಗಾಗಿ ದೇವಿ ದುರ್ಗೆಯನ್ನು ಪೂಜಿಸುತ್ತಿದ್ದರು.ಮನುಷ್ಯರ ಶರೀರವು ಸಹ ಕೋಟೆಯೆ.ಶರೀರವೆಂಬ ಈ ಕೋಟೆಯ ರಕ್ಷಕ ದೇವಿಯೇ ದುರ್ಗಾದೇವಿಯು.ನರರನ್ನು ಕಾಡುವ ಅಧ್ಯಾತ್ಮಿಕ,ಅಧಿಭೌತಿಕ ಮತ್ತು ಅಧಿದೈವಿಕ ಎನ್ನುವ ಮೂರು ಬಗೆಯ ತಾಪತ್ರಯಗಳಿಂದ ರಕ್ಷಿಸಿ ಪೊರೆಯುವ ದೇವಿಯಾದ್ದರಿಂದ ಆಕೆಯು ದುರ್ಗಾದೇವಿಯು.ಮನುಷ್ಯರ ಶರೀರದಲ್ಲಿ ಅನ್ನಮಯ ಕೋಶ,ಪ್ರಾಣಮಯಕೋಶ,ಮನೋಮಯಕೋಶ,ವಿಜ್ಞಾನಮಯಕೋಶ ಮತ್ತು ಆನಂದಮಯ ಕೋಶಗಳೆಂಬ ಐದುಕೋಶಗಳಿವೆ.ಈ ಐದುಕೋಶಗಳ ಪ್ರತೀಕಸ್ವರೂಪ ದೇವಿಯೇ ದೇವಿ ಕೌಶಿಕಿಯು.ದೇಹ ಮತ್ತು ಚಿತ್ತಗಳೆರಡರನ್ನು ಸ್ವಸ್ಥವಾಗಿಡುವ ಯೋಗವೇ ಶಾಕ್ತಯೋಗ.ಮೂಲಾಧಾರದಲ್ಲಿ ಊರ್ಧಮುಖವಾಗಿ ಮಲಗಿರುವ ಸರ್ಪರೂಪಿ ದೇವಿಶಕ್ತಿಯು ಸ್ವಾದಿಷ್ಟಾನ,ಮಣಿಪುರ,ಅನಾಹತ,ವಿಶುದ್ಧಿ ಮತ್ತು ಆಜ್ಞಾಚಕ್ರಗಳೆಂಬ ಆರು ಚಕ್ರಗಳನ್ನು ದಾಟಿ ಏಳನೆಯ ಮತ್ತು ಮಹಾಚಕ್ರವಾದ ಸಹಸ್ರಾರದ ಸಹಸ್ರದಳ ಕಮಲದ ಮಧ್ಯೆ ಪವಡಿಸಿಪ್ಪ ಸದಾಶಿವನಲ್ಲಿ ಒಂದಾಗುವ ಕುಂಡಲಿನಿ ಯೋಗವೇ ಶಾಕ್ತಯೋಗ.’ಕುಂಡ ‘ಎಂದರೆ ಕೊಡ ಎಂದರ್ಥವಿದ್ದು ಜಗತ್ತೆಲ್ಲವು ಜಗನ್ಮಾತೆಯ ಉದರದಿಂದ ಹೊರಹೊಮ್ಮಿದೆಯಾದ್ದರಿಂದ ಆಕೆಯು ಕುಂಡಲಿನಿಯು.ಕುಂಡಲಿನಿ ಶಕ್ತಿಯು ಮೂಲಾಧಾರದಲ್ಲಿ ಹಾವಿನಂತೆ ಸುತ್ತಿಕೊಂಡಿದ್ದು ಕೊಡದ ಆಕಾರದಲ್ಲಿದೆ.ಮೂಲಾಧಾರವು ಶಕ್ತಿಸಂಚಾರದ ಆರಂಭಕೇಂದ್ರವಾಗಿದ್ದು ಸಹಸ್ರಾರವು ಶಕ್ತಿಯ ಸಂಗಮ ಇಲ್ಲವೆ ಲಯಕೇಂದ್ರವಾಗಿದೆ.
ಶ್ರೀದೇವಿ ತತ್ತ್ವದಲ್ಲಿ ದೇವತೆಗಳು,ರಾಕ್ಷಸರು ಮತ್ತು ಮನುಷ್ಯರೆಂಬ ಮೂರು ಬಗೆಯ ಜೀವರುಗಳಿದ್ದಾರೆ.ಯುದ್ಧವು ದೇವತೆಗಳು ಮತ್ತು ರಾಕ್ಷಸರ ನಡುವೆ ನಡೆದರೂ ಮನುಷ್ಯರು ಆ ಯುದ್ಧದ ಕಾರಣದಿಂದ ಬಾಧೆಗೆ ಒಳಗಾಗುತ್ತಾರೆ.ದೇವತೆಗಳು ರಾಕ್ಷಸರಿಂದ ಪ್ರತ್ಯಕ್ಷ ಬಾಧೆಗೆ ಒಳಗಾಗಿದ್ದರೆ ಮನುಷ್ಯರು ಪರೋಕ್ಷ ಬಾಧೆಗೆ ಒಳಗಾಗಿದ್ದಾರೆ.ಸುರರು ಮತ್ತು ನರರ ಬಾಧಾ ನಿವಾರಣೆಯ ಅನುಗ್ರಹತತ್ತ್ವವೇ ಶ್ರೀದೇವಿ ತತ್ತ್ವವು.ಮನುಷ್ಯರಲ್ಲಿ ಸತ್ತ್ವ,ರಜಸ್ಸು ಮತ್ತು ತಮೋಗುಣ ಎನ್ನುವ ಮೂರು ಗುಣಗಳಿವೆ.ಸತ್ತ್ವವು ಶುದ್ಧಗುಣವಾದರೆ ರಜವು ಗೊಂದಲಸ್ಥಿತಿಯಾದರೆ ತಾಮಸವು ಅತ್ಯಂತ ಕೆಟ್ಟ ಸ್ಥಿತಿಯು,ಅಸುರೀ ಭಾವವು.ದೇವತೆಗಳು ಸತ್ತ್ವಗುಣದ ಪ್ರತಿನಿಧಿಗಳಾದರೆ ಮನುಷ್ಯರು ರಜೋಗುಣವನ್ನು ಪ್ರತಿನಿಧಿಸಿದರೆ ರಾಕ್ಷಸರು ತಮೋಗುಣವನ್ನು ಸಂಕೇತಿಸುತ್ತಾರೆ.ಪ್ರತಿಯೊಬ್ಬರಲ್ಲಿಯೂ ಒಳ್ಳೆಯತನವಿದೆ,ಹೊಯ್ದಾಟವಿದೆ ಮತ್ತು ಕೆಟ್ಟತನವೂ ಇದೆ.ಕೆಟ್ಟದ್ದರ ಮೇಲಿನ ಒಳಿತಿನ ವಿಜಯವೇ ಯೋಗವಾಗಿದ್ದು ಅದುವೇ ಶ್ರೀದೇವಿ ತತ್ತ್ವವಾಗಿದೆ.ಕೆಟ್ಟ ಆಲೋಚನೆಗಳನ್ನು ಮೆಟ್ಟಿನಿಲ್ಲುವುದೇ ಸತ್ತ್ವಗುಣಸ್ವರೂಪಳಾದ ದುರ್ಗಾವಿಜಯವಾಗುತ್ತದೆ.ದೇವತೆಗಳು ಸತ್ತ್ವಗುಣದ ಪ್ರತಿನಿಧಿಗಳಾಗಿದ್ದರಿಂದ ಅವರು ಲೋಕೋಪಕಾರಿಗಳು.ರಾಕ್ಷಸರು ದುಷ್ಟತನದ ಪ್ರತೀಕವಾದ್ದರಿಂದ ಅವರು ಲೋಕಭಯಂಕರರು,ಲೋಕೋಪದ್ರವ ಜೀವಿಗಳು.ಚಂಚಲ ಸ್ವಭಾವದ ಮನುಷ್ಯರು ಹೊಯ್ದಾಟದ,ಗೊಂದಲದ ಮನಸ್ಸಿನವರು.ಕೆಟ್ಟದಾರಿಯಲ್ಲಿ ನಡೆಯುವುದು ಸುಲಭ; ಒಳ್ಳೆಯ ದಾರಿಯಲ್ಲಿ ನಡೆಯುವುದು ಕಷ್ಟ.ಮನುಷ್ಯರು ಒಳ್ಳೆಯವರಾಗಬಯಸಿಯೂ ತಮ್ಮ ಪ್ರಯತ್ನದಲ್ಲಿ ಪ್ರತಿಬಾರಿಯೂ ಸೋಲುತ್ತಾರೆ.ಗಟ್ಟಿಮನಸ್ಸಿನಿಂದ,ತೊಂದರೆಗಳನ್ನೆಲ್ಲ ನಿವಾರಿಸಿಕೊಂಡು ನಡೆದದ್ದಾದರೆ ಒಳ್ಳೆಯವರಾಗಲು,ಸದ್ಗುಣಸಂಪನ್ನರಾಗಲು ಸಾಧ್ಯ.ಶರೀರದಲ್ಲಿ ಸತ್ತ್ವ ಮತ್ತು ತಮೋಗುಣಗಳ ನಡುವೆ ಹೋರಾಟ ಸದಾ ನಡೆದೇ ಇರುತ್ತದೆ.ಮನುಷ್ಯರ ಶರೀರದ ಸತ್ತ್ವ ಮತ್ತು ತಮೋಗುಣಗಳ ನಡುವಿನ ಹೋರಾಟವೇ ದೇವತೆಗಳು ಮತ್ತು ರಾಕ್ಷಸರ ನಡುವಿನ ಭೀಕರ ಸಂಗ್ರಾಮ.ರಜೋಗುಣವು ಅತ್ತ ಇತ್ತ ಒಯ್ದಾಡುತ್ತಿರುತ್ತದೆ.
ಸತ್ತ್ವ ಮತ್ತು ತಮೋಗುಣಗಳ ಹೋರಾಟದಲ್ಲಿ ತಮೋಗುಣವು ಸತ್ತ್ವಗುಣವನ್ನು ಮಣಿಸಿ ಗೆಲ್ಲುತ್ತದೆ.ಸತ್ತ್ವಗುಣದ ಮೇಲಿನ ತಮೋಗುಣದ ವಿಜಯವೇ ದೇವತೆಗಳ ವಿರುದ್ಧ ರಾಕ್ಷಸರ ಗೆಲುವು.ಸತ್ತ್ವಗುಣ ಸೋತಾಗ ಅದಕ್ಕೆ ದೈವದ ರಕ್ಷಣೆ ಬೇಕಾಗುತ್ತದೆ.ವಿಶ್ವನಿಯಾಮಕ ಪರಶಿವನ ವಿಶ್ವನಿಯಮಗಳ ಸಂಕಲನವಾದ ನಿಯತಿಶಕ್ತಿಯೇ ಪರಶಿವನ ಶಕ್ತಿ ಪಾರ್ವತಿ ತತ್ತ್ವವೇ ಶ್ರೀದೇವಿಯು.ದೇವಿಯು ಜಗನ್ಮಾತೆಯಾಗಿರುವಂತೆಯೇ ಶಿಷ್ಟರಕ್ಷಕಿ,ದುಷ್ಟಶಿಕ್ಷಕಿ ಎನ್ನುವ ಬಿರುದನ್ನು ಹೊಂದಿದ್ದಾಳೆ.ಶಿಷ್ಟರಾದ ದೇವತೆಗಳ ರಕ್ಷಣೆ ಮತ್ತು ದುಷ್ಟರಾದ ರಾಕ್ಷಸರ ಸಂಹಾರವು ದೇವಿಯ ಲೋಕೋದ್ಧಾರ ಕಾರ್ಯ.ದೇವಿ ದುರ್ಗೆಯು ತಾಯಿಯೂ ಅಹುದು,ಮಾಯೆಯೂ ಹೌದು.ದೇವತೆಗಳು,ಸತ್ಪುರುಷರನ್ನು ತಾಯಿಯಾಗಿ ಕಾಪಾಡುವ ಜಗನ್ಮಾತೆಯು ದುಷ್ಟರಿಗೆ ಮಾಯೆಯಾಗಿ ಕಾಡಿ,ದಂಡಿಸುತ್ತಾಳೆ.
ಸೂರ್ಯ,ಚಂದ್ರ,ಅಗ್ನಿ,ವಾಯು ಮತ್ತು ವರುಣರೆಂಬ ಐದು ದೇವತೆಗಳು ದೇವತೆಗಳ ಒಡೆಯನಾದ ಇಂದ್ರನ ಆಸ್ಥಾನಿಕದೇವತೆಗಳಾಗಿದ್ದು ಇವರೆಲ್ಲರು ಸೇರಿ ದೇವಗಣವಾಗಿದ್ದಾರೆ.ದೇವತೆಗಳ ಒಡೆಯನಾದ ಇಂದ್ರನು ಮಹಾಬಲಶಾಲಿಯಾಗಿಯೂ ಅವನು ಪ್ರತಿಬಾರಿಯೂ ರಾಕ್ಷಸರಿಂದ ಸೋಲಿಸಲ್ಪಡುತ್ತಿದ್ದಾನೆ.ಇಂದ್ರನ ರಾಜಧಾನಿಯಾದ ಅಮರಾವತಿಯು ರಾಕ್ಷಸರ ಕೈವಶವಾಗುತ್ತದೆ,ಇಂದ್ರಾದಿ ದೇವತೆಗಳು ಅರಣ್ಯವಾಸಿಗಳಾಗುತ್ತಾರೆ.ಇಂದ್ರನು ಮನೋತತ್ತ್ವದ ಅಧಿಪತಿಯಾಗಿದ್ದು ಮನಸ್ಸು ಚಂಚಲವಾದುದು,ಒಳಿತಿನ ಪಥದಲ್ಲಿ ಸದಾ ಸೋಲುತ್ತಿರುತ್ತದೆ.ಬಲಗಣ್ಣು ಸೂರ್ಯನಾದರೆ ಎಡಗಣ್ಣು ಚಂದ್ರ ಮತ್ತು ಅಗ್ನಿಯು ಮೂರನೇ ಕಣ್ಣು.ದೇಹದಲ್ಲೆಡೆ ಸಂಚರಿಸುವ ಪ್ರಾಣವೇ ವಾಯು.ಭಾವನೆಗಳ ಪ್ರವಾವಹೇ ವರುಣನು.ಸತ್ತ್ವ ತಮೋಗುಣಗಳ ಸಂಘರ್ಷದಲ್ಲಿ ಮನಸ್ಸು ಬಾರಿಬಾರಿಗೂ ಸೋಲುವುದೇ ಇಂದ್ರನ ಸೋಲು.ಇಂದ್ರಿಯಗಳು ಇಂದ್ರನ ಸಹಾಯಕ ಗಣಗಳಾಗಿದ್ದು ದುರ್ಬಲಮನಸ್ಸಿನೊಡನೆ ಬೆರೆತು ಅವೂ ಸೋಲನ್ನಪ್ಪುತ್ತವೆ.ಲೌಕಿಕ ಪ್ರಪಂಚದ ಆಸೆ,ವಾಸನೆಗಳಿಗೆ ಬಲಿಯಾಗುವುದೇ ಇಂದ್ರ ಮತ್ತು ದೇವತೆಗಳ ಸೋಲು.ತಮೋಗುಣವು ಸತ್ತ್ವಗುಣವನ್ನು ಸಂಪೂರ್ಣ ಆವರಿಸಿಕೊಂಡು ಅದರ ಮೇಲೆ ಜಯ ಸಾಧಿಸುವುದೇ ದೇವತೆಗಳ ಪರಾಜಯ.ಸೋತಮನಸ್ಸು ದೈವದಲ್ಲಿ ಶರಣಾಗುತ್ತದೆ ಅಸಹಾಯಕತೆಯ ಭಾವದಲ್ಲಿ.ಆಗ ಪ್ರಕಟಗೊಳ್ಳುವ ಅನುಗ್ರಹಶಕ್ತಿಯೇ ದೇವಿ ದುರ್ಗೆಯು.ದುರ್ಗಾದೇವಿಯು ಪ್ರಕಟಗೊಂಡು ದೈತ್ಯರನ್ನು ಸಂಹರಿಸಿ ದೇವತೆಗಳಿಗೆ ಜಯವನ್ನುಂಟು ಮಾಡಿಕೊಡುತ್ತಾಳೆ.ದೇವಿಯು ಆತ್ಮತತ್ತ್ವವಾಗಿದ್ದು ಜೀವನನ್ನು ಪರಮಾತ್ಮನೊಡನೆ ಒಂದುಗೂಡಲು ನೆರವಾಗುತ್ತಾಳೆ.ದೇವತೆಗಳು ಕಳೆದುಕೊಂಡ ಸ್ವರ್ಗ ಎಂದರೆ ಇದೇ ಸ್ವರೂಪ ಜ್ಞಾನ ಅಥವಾ ಆತ್ಮಜ್ಞಾನ.ದೇವತೆಗಳು ಅಜ್ಞಾನ,ಅಹಂಕಾರವಶರಾಗಿ ತಮ್ಮ ಸ್ವರೂಪಜ್ಞಾನ ವಂಚಿತರಾಗಿರುತ್ತಾರೆ.ದುರ್ಗಾದೇವಿಯ ಅನುಗ್ರಹದಿಂದ ಪುನಃ ಸ್ವರೂಪಜ್ಞಾನವನ್ನು ಸಂಪಾದಿಸುವ ದೇವತೆಗಳು ಆತ್ಮಾನಂದವೆಂಬ ಸ್ವರ್ಗಸುಖವನ್ನು ಅನುಭವಿಸುತ್ತಾರೆ.ಇದೇ ಶ್ರೀದೇವಿ ತತ್ತ್ವವು.