ಅನುಭಾವ ಚಿಂತನೆ : ಮಾಯೆ’ ಯಿಂದ ಮುಕ್ತರಾಗದ ಹೊರತು’ ತಾಯಿ’ ಯ ದರ್ಶನ ಸಾಧ್ಯವಿಲ್ಲ

ಅನುಭಾವ ಚಿಂತನೆ

ಮಾಯೆ’ ಯಿಂದ ಮುಕ್ತರಾಗದ ಹೊರತು’ ತಾಯಿ’ ಯ ದರ್ಶನ ಸಾಧ್ಯವಿಲ್ಲ

 ಮುಕ್ಕಣ್ಣ ಕರಿಗಾರ

 

ಸೆಪ್ಟೆಂಬರ್ 22 ರಿಂದ 2025 ನೇ ವರ್ಷದ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗುತ್ತದೆ.ಪ್ರತಿವರ್ಷ ಒಂಬತ್ತು ದಿನಗಳ ಕಾಲ ನಡೆಯುವ ಶರನ್ನವರಾತ್ರಿಯು ಈ ಬಾರಿ ಹತ್ತು ದಿನಗಳ ಕಾಲ ನಡೆಯಲಿದೆ.ಶರನ್ನವರಾತ್ರಿಯು ದೇವಿ ಉಪಾಸನೆ ಮತ್ತು ತಾಯಿಯ ಅನುಗ್ರಹ ಹಾಗೂ ಶಕ್ತಿ ಸಂಪಾದನೆಗೆ ಅತ್ಯುತ್ತಮ ಕಾಲವಾಗಿದ್ದು ದಸರೆಯ ದಿನಗಳ ಶ್ರೀದೇವಿ ಪೂಜೆಗೆ ವಿಶೇಷ ಮಹತ್ವ,ಸಿದ್ಧಿಗಳಿವೆ.ವರ್ಷವಿಡೀ ದೇವಿಯ ಉಪಾಸನೆ ಮಾಡದೆ ಇದ್ದರೂ ನವರಾತ್ರಿಯ ದಿನಗಳಲ್ಲಿ ದೇವಿಯ ಪೂಜೆ- ಸೇವೆ ಮಾಡಿ ದುರ್ಗಾದೇವಿಯ ಅನುಗ್ರಹ ಪಡೆಯಬಹುದು.

 

ನವರಾತ್ರಿಯು ಶಾಕ್ತರಿಗೆ ಅತ್ಯಂತ ಪವಿತ್ರ ಆಚರಣೆ,ಪರಾಶಕ್ತಿಯ ಅನುಗ್ರಹಕ್ಕೆ ಪಾತ್ರರಾಗುವ ವಿಶೇಷ ಉತ್ಸವ.ತನ್ನಲ್ಲಿ ಅತ್ಯಂತ ಶ್ರದ್ಧೆ,ನಿಷ್ಠೆಗಳನ್ನುಳ್ಳ ಭಕ್ತರಿಗೆ ತಾಯಿಯು ನವರಾತ್ರಿಯ ದಿನಗಳಲ್ಲಿ ದರ್ಶನ ಕೊಡುತ್ತಾಳೆ.ಶ್ರೀದೇವಿಯ ದರ್ಶನ ಇಲ್ಲವೆ ಸಾಕ್ಷಾತ್ಕರ ಸುಳ್ಳಲ್ಲ ಅಥವಾ ಕಟ್ಟುಕಥೆಯಲ್ಲ,ಸತಸ್ಯಸತ್ಯ ಸಂಗತಿ.ಆದರೆ ಆಕೆಯನ್ನು ಕಾಣಲು ಪ್ರಯತ್ನಿಸಬೇಕಲ್ಲ.ಪ್ರಯತ್ನ ಇಲ್ಲದೆ ಫಲ ಸಿದ್ಧಿಸದು.ದೇವಿಯ ದರ್ಶನ ಸತ್ಯಯುಗ,ಕೃತಯುಗ,ದ್ವಾಪರಯುಗಗಳಲ್ಲಿ ಎಂತು ಸತ್ಯವಾಗಿತ್ತೋ ಈ ಕಲಿಯುಗದಲ್ಲಿಯೂ ಅಷ್ಟೇ ಸತ್ಯ.ಶ್ರೀದೇವಿ ದುರ್ಗೆಯನ್ನು ಪ್ರತ್ಯಕ್ಷವಾಗಿ ಕಾಣಬಹುದು,ಮಹಾಮಾತೆಯೊಂದಿಗೆ ಮಾತನಾಡಬಹುದು,ನಮ್ಮ ಅಭೀಷ್ಟಸಿದ್ಧಿಯನ್ನು ಸಾಧಿಸಿಕೊಳ್ಳಬಹುದು ಜಗನ್ಮಾತೆಯ ಅನುಗ್ರಹದಿಂದ.

 

‌ಯಾರು ಜಗನ್ಮಾತೆಯ ಹಂಬಲಕ್ಕಾಗಿ ತೀವ್ರವಾಗಿ ಹಾತೊರೆಯುತ್ತಾರೋ ಖಂಡಿತವಾಗಿ ಅವರಿಗೆ ಲೋಕಮಾತೆಯ ದರ್ಶನವಾಗುತ್ತದೆ.ಇದನ್ನೇ ರಾಮಕೃಷ್ಣ ಪರಮಹಂಸರು ನರೇಂದ್ರನಿಗೆ ಹೇಳಿದ್ದು.ರಾಮಕೃಷ್ಣ ಪರಮಹಂಸರು ತಾವು ಕಂಡ ಪರಮಸತ್ಯವನ್ನು, ಪರಾಶಕ್ತಿಯ ದರ್ಶನವನ್ನು ಅವರ ಶಿಷ್ಯ ವಿವೇಕಾನಂದರಿಗೂ ಮಾಡಿಸಿದರು.ಆದರೆ ನರೇಂದ್ರ ವಿವೇಕಾನಂದ ಆಗುವವರೆಗೆ ಕಾಳಿ ಮಾತೆಯ ದರ್ಶನ,ಅನುಗ್ರಹ ಸಾಧ್ಯವಾಗಲಿಲ್ಲ. ಎಲ್ಲರಲ್ಲಿಯೂ ಇರುವ ನರೇಂದ್ರ ವಿವೇಕಾನಂದ ಆಗಿ ಪರಿವರ್ತನೆ ಆಗಬೇಕು.ಪರಿವರ್ತನೆಯಿಂದ ಮಾತ್ರ ಪರಾಶಕ್ತಿಯ ದರ್ಶನ ಸಾಧ್ಯ.ಪರಿವರ್ತನೆ,ಪ್ರಯತ್ನ ಮತ್ತು ಪಕ್ವತೆಗಳಿಂದ ಪರಾಶಕ್ತಿಯ ಸಾಕ್ಷಾತ್ಕರ ಪಡೆಯಬಹುದು.

 

‌ಪರಾಶಕ್ತಿಯು ಪ್ರಕೃತಿಯ ರೂಪದಲ್ಲಿ ವಿಶ್ವದಲ್ಲಿ ಪ್ರಕಟಗೊಂಡಿದ್ದಾಳೆ.ಪ್ರಕೃತಿಯ ಅಣು ಅಣುಗಳಲ್ಲಿ ತಾಯಿ ಪರಾಶಕ್ತಿಯ ನಿತ್ಯಲೀಲೆ ನಡೆಯುತ್ತಿದೆ.ಪ್ರಕೃತಿಯ ಮೂಲಕವೇ ಲೋಕಮಾತೆಯಾದ ಪರಾಶಕ್ತಿಯ ದರ್ಶನ,ಸಾಕ್ಷಾತ್ಕಾರ ಸಾಧ್ಯ.ನಾವು ಅಹಂಕಾರಭಾವದಿಂದ ಮುಕ್ತರಾಗಿ ಪ್ರಕೃತಿತತ್ತ್ವವನ್ನು ಅಳವಡಿಸಿಕೊಳ್ಳಬೇಕು.ದೇಹಭಾವದಿಂದ ಮುಕ್ತರಾಗಿ ದೇವಿಯ ಭಾವನೆಯನ್ನು ಅಳವಡಿಸಿಕೊಳ್ಳಬೇಕು.ಸ್ವಭಾವ ಪರಿವರ್ತನೆಯೇ ಶಕ್ತಿ ಉಪಾಸನೆಯ ರಹಸ್ಯ; ಭಾವವು ದಿವ್ಯತ್ವಕ್ಕೇರುವುದೇ ಶ್ರೀದೇವಿಯ ಉಪಾಸನೆ.

 

ಪರಶಿವನ ಶಕ್ತಿಯಾದ ಲೋಕಮಾತೆ‌ ಪರಾಶಕ್ತಿಯು ಲೋಕಾನುಗ್ರಹ ಕಾರಣದಿಂದ ಹಲವು ಲೀಲೆಗಳನ್ನುಂಟು ಮಾಡಿ,ಹಲವು ರೂಪಗಳನ್ನು ಧರಿಸುತ್ತಾಳೆ.ಶ್ರೀದೇವಿಯ ವಿವಿಧ ನಾಮ ರೂಪಗಳು ಲೋಕಮಾತೆಯ ಜಗದೋದ್ಧಾರ ಲೀಲೆಗಳು.ನಿಗ್ರಹಾನುಗ್ರಹ ಸಮರ್ಥಳಾದ ಶ್ರೀದೇವಿಯು ತನ್ನ ಭಕ್ತರಿಗೆ ತಾಯಿಯ ರೂಪದಲ್ಲಿ ದರ್ಶನ ನೀಡಿ,ಅನುಗ್ರಹಿಸಿದರೆ ದುಷ್ಟರನ್ನು ದಂಡಿಸಿ ತನ್ನ ನಿಗ್ರಹ ಶಕ್ತಿಯನ್ನು ನಿರೂಪಿಸುತ್ತಾಳೆ.ಸತ್ಪುರುಷರು ದೇವತೆಗಳಾದರೆ ದುರುಳರು ರಾಕ್ಷಸರು.ಒಳ್ಳೆಯವರನ್ನು ರಕ್ಷಿಸುವುದು,ಕೆಟ್ಟವರನ್ನು ಶಿಕ್ಷಿಸುವುದು ದೇವಿಯ ಲೋಕೋದ್ಧಾರ ಲೀಲೆ.ಪರಾಶಕ್ತಿಯು ‘ತಾಯಿ’ ಮತ್ತು ‘ಮಾಯೆ’ ಎನ್ನುವ ಎರಡು ಅವಸ್ಥೆಗಳ ಮೂಲಕ ತನ್ನ ಲೋಕಾನುಗ್ರಹ ಲೀಲೆಯನ್ನಾಡುತ್ತಿದ್ದಾಳೆ.ಸತ್ಪುರುಷರಿಗೆ ‘ ತಾಯಿ’ ಯಾಗಿ ಕಾಣುವ ದೇವಿಯೇ ದುರುಳರಿಗೆ ‘ ಮಾಯೆ’ ಯಾಗಿ ಕಾಣುತ್ತಾಳೆ.ಅಸುರೀಗುಣಗಳು ಮಾಯೆಯ ಪ್ರಭಾವ.ರಾಕ್ಷಸರು ಶಿವನನ್ನೋ ಬ್ರಹ್ಮನನ್ನೋ ಕುರಿತು ಅಷ್ಟು ಉಗ್ರ ತಪಸ್ಸನ್ನಾಚರಿಸಿ ತಮ್ಮ ಇಷ್ಟದೈವದ ಸಾಕ್ಷಾತ್ಕಾರ ಪಡೆದೂ ದುರ್ಮಾರ್ಗಿಗಳಾಗುತ್ತಾರೆ,ಲೋಕಕಂಟಕರಾಗುತ್ತಾರೆ.ಇಂದ್ರನಾದಿ ದೇವತೆಗಳನ್ನು ಅವರ ಲೋಕಗಳಿಂದ ಹೊಡೆದಟ್ಟಿ ಸ್ವರ್ಗಗಳಾದಿ ಊರ್ಧ್ವಲೋಕಗಳ ಮೇಲೆ ಅಧಿಪತ್ಯ ಸ್ಥಾಪಿಸುವಲ್ಲಿ ತತ್ಕಾಲದಲ್ಲಿ ಯಶಸ್ವಿಯಾಗುತ್ತಾರೆ.ರಾಕ್ಷಸರು ಸ್ವರ್ಗಾರೋಹಣಮಾಡಿ,ಸ್ವರ್ಗಾಧಿಪತಿಗಳಾಗುವುದು ಸೃಷ್ಟಿ ನಿಯಮಕ್ಕೆ, ನಿಯತಿಗೆ ವಿರುದ್ಧವಾದುದು. ನಿಯತಿತತ್ತ್ವದ ಮರುಸ್ಥಾಪನೆಯೇ ದೇವಿಯ ಪ್ರಕಟತತ್ತ್ವ ಲೀಲೆ,ದೈವಿಶಕ್ತಿಯ ಅವತರಣ ಲೀಲೆ.

 

ಮನುಷ್ಯರಲ್ಲಿ ಸತ್ತ್ವ,ರಜ ಮತ್ತು ತಮೋ ಗುಣಗಳೆಂಬ ಮೂರು ಗುಣಗಳಿವೆ.ಸತ್ತ್ವಗುಣವು ದೇವತೆಗಳನ್ನು ಪ್ರತಿನಿಧಿಸಿದರೆ,ಹೊಯ್ದಾಡುವ ಚಂಚಲಮನಸ್ಸು ಮನುಷ್ಯರ‌ ಪ್ರತೀಕ,ಒಳಿತು ಕೆಡುಕುಗಳ ವಿವೇಚನಾರಹಿತ ದುರ್ನಡತೆಯ ಸ್ವಭಾವವೇ ರಾಕ್ಷಸರ ಪ್ರತೀಕವಾದ ತಮೋಗುಣ.ನಮ್ಮಲ್ಲಿ ಈ ಮೂರುಗುಣಗಳ ನಡುವೆ ಹೋರಾಟ,ಹೊಯ್ದಾಟ ಸದಾ ನಡೆದಿರುತ್ತದೆ.ಯಾವ ಗುಣದ‌ ಪ್ರಾಬಲ್ಯ ಹೆಚ್ಚುತ್ತದೆಯೋ ಆ ಗುಣಸ್ವಭಾವಕ್ಕನುಗುಣವಾಗಿ ರೂಪುಗೊಳ್ಳುತ್ತದೆ ನಮ್ಮ ವ್ಯಕ್ತಿತ್ವ.ಸತ್ತ್ವಗುಣ ವಿಶೇಷತೆಯಿಂದ ದೇವತೆಗಳಾದರೆತಮೋಗುಣಾಧಿಕ್ಯಪ್ರಕಟನೆಯಿಂದ ರಾಕ್ಷಸರು ಆಗುತ್ತಾರೆ.ಸರಿ ತಪ್ಪುಗಳ ನಡುವೆ ಸರಿಯಾದ ನಿಷ್ಕರ್ಷೆ ಮಾಡದೆ,ನಿಷ್ಕರ್ಷೆ ಮಾಡಿಯೂ ನಡೆಯದ ಚಂಚಲಮನಸ್ಸಿನವರೇ ಮನುಷ್ಯರನ್ನು ಪ್ರತಿನಿಧಿಸುವ ರಜೋಗುಣ.ಈ ಮೂರು ಗುಣಗಳನ್ನು ಬಂಗಾರ,ಬೆಳ್ಳಿ ಮತ್ತು ಕಬ್ಬಿಣಕ್ಕೆ ಹೋಲಿಸಲಾಗಿದೆ.ಸತ್ತ್ವಗುಣವು ಬಂಗಾರವಾದರೆ,ರಜೋಗುಣವು ಬೆಳ್ಳಿ; ಕಬ್ಬಿಣವು ತಮೋಗುಣದ ಸಂಕೇತ‌.ಬಂಗಾರವು ತುಸು ಬೆಂಕಿಗೆ ಸ್ಪಂದಿಸಿದರೆ ಬೆಳ್ಳಿಗೆ ಬಂಗಾರಕ್ಕಿಂತ ತುಸು ಹೆಚ್ಚಿನ ಶಾಖ ಬೇಕು.ಕಬ್ಬಿಣ ಕರಗಲು ಬಹಳ ಬೆಂಕಿ ಬೇಕು.ಮನುಷ್ಯರಾದ ಎಲ್ಲರಲ್ಲಿಯೂ ದೋಷವಿದೆ,ಅವಗುಣಗಳಿವೆ.ಸತ್ಪುರುಷರಿಗೆ ಯಾವುದೋ ಒಂದು ಪ್ರಸಂಗ ಇಲ್ಲವೇ ಸಂದರ್ಭ ಅವರ ಕಣ್ಣುಗಳನ್ನು ತೆರೆಯಿಸಿ ಅವರನ್ನು ಸನ್ಮಾರ್ಗದದಲ್ಲಿ ಕರೆದೊಯ್ಯುತ್ತದೆ.ಮಾನವರಿಗೆ ಮೇಲಿಂದ ಮೇಲೆ ಹೇಳಬೇಕಾಗುತ್ತದೆ.ರಾಕ್ಷಸರಿಗೆ ಎಷ್ಟು ಹೇಳಿದರೂ ಪ್ರಯೋಜನವಾಗುವುದಿಲ್ಲ.ರಾಕ್ಷಸರ ಅಸುರೀಸ್ವಭಾವವೇ ಅವರ ಅಧಃಪತನದ ಕಾರಣವಾಗುತ್ತದೆ.

 

‌ರಾಕ್ಷಸರನ್ನು ಬ್ರಹ್ಮನಾಗಲಿ ಅಥವಾ ಶಿವನಾಗಲಿ ಸಂಹರಿಸುವುದಿಲ್ಲ ಎನ್ನುವುದು ವಿಶೇಷ ( ಅಂತಹ ಕೆಲವು ಪ್ರಸಂಗಗಳು ಸಿಕ್ಕರೂ ಒಂದೋ ಎರಡೋ ಸಂದರ್ಭಗಳಲ್ಲಿ ಮಾತ್ರ) ರಾಕ್ಷಸರ ಸಂಹಾರ ಕಾರ್ಯದೇವಿಯದು ಮಾತ್ರ.ಶಕ್ತಿಯೇ ದುಷ್ಟರನ್ನು ದಂಡಿಸಲು ಸಮರ್ಥಳು.ದೇವತೆಗಳು ಶಕ್ತಿಹೀನರಾಗಿ ದುರ್ಬಲರಾದಾಗ ಅವರ ಮೊರೆಕೇಳಿ,ನೆರವಿಗೆ ಧಾವಿಸುತ್ತಾಳೆ ದೇವಿಯು.ಸತ್ಪುರುಷರನ್ನು ಸಂಕಟಮುಕ್ತರನ್ನಾಗಿಸುವುದು ದೇವಿಯ ಔದಾರ್ಯ ವಿಶೇಷ,ತಾಯ್ತನ.ಲೌಕಿಕ ವ್ಯವಹಾರದಲ್ಲಿ ತಾಯಿಯು ತನ್ನ ಕೆಟ್ಟಮಕ್ಕಳನ್ನು ಸರಿದಾರಿಗೆ ತರಲು ಬಯ್ಯುವುದು,ಹೊಡೆಯುವುದು ಮಾಡುವುದು ದೇವಿಯ ನಿಗ್ರಹಗುಣದ ನಿದರ್ಶನ.ಲೌಕಿಕ ತಾಯಿಯು ತನ್ನ ಮಕ್ಕಳನ್ನು ಕೊಲ್ಲುವುದಿಲ್ಲ( ದಾರಿ ತಪ್ಪಿದ ಹೆಂಗಸರು ತಮ್ಮ ಮಕ್ಕಳನ್ನು ಕೊಲ್ಲುತ್ತಿರುವ ಪ್ರಸಂಗಗಳು ಆಗಾಗ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ.ಅಂತಹ ತಾಯಂದಿರು ಕೂಡ ರಕ್ಕಸಿಸ್ವಭಾವದವರೇ!) ಜಗನ್ಮಾತೆಯಾದ ದುರ್ಗಾದೇವಿಯು ಲೋಕಕಂಟಕರಾದ ರಾಕ್ಷಸರನ್ನು ಸಂಹರಿಸುತ್ತಾಳೆ.

 

ನಮ್ಮಲ್ಲಿ ಸದ್ಭಾವ ಜಾಗೃತವಾಗಬೇಕು.ದುರಾಲೋಚನೆಯು ಮರೆಯಾಗಿ ಸದ್ವಿಚಾರಗಳು ಮೂಡಬೇಕು.ವಿಕಾರದ ಬದಲು ವಿವೇಕ ತಲೆ ಎತ್ತಬೇಕು.ದ್ವೇಷದ ಬದಲು ಪ್ರೀತಿಯ ಅಮೃತಸೆಲೆ ಉಂಟಾಗಬೇಕು.ಅಸೂಯೆಯ ಬದಲು ಭೂತಾನುಕಂಪೆ ಮೂಡಬೇಕು.ಎಲ್ಲರಲ್ಲಿಯೂ ಒಳ್ಳೆಯದನ್ನೇ ಕಾಣುವ ಎಲ್ಲದರಲ್ಲಿಯೂ ದೈವೀತತ್ತ್ವವನ್ನೇ ಗುರುತಿಸುವ ವಿವೇಕೋದಯವಾಗಬೇಕು.ಅವಗುಣಗಳನ್ನು ಶಿವಗುಣಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು.ಅಪೂರ್ಣತೆಯ ಪೂರ್ಣತೆಯ ಪಥ ಹಿಡಿಯಬೇಕು.ಪ್ರಕೃತಿಯ ಪೂಜೆಯೇ ಪರಮಾತ್ಮನ ಪೂಜೆ ಎಂದು ಪ್ರಕೃತಿಗೆ ಬಾಧಕರಾಗದಂತೆ ನಡೆದು ಸಾಧಕರು ಆಗಬೇಕು.ಆಸೆ ಇರಲಿ ಆದರೆ ದುರಾಸೆಬೇಡ.ದುರಾಸೆಯ ದುರ್ಮಾರ್ಗ ಹಿಡಿದರೆಂದೇ ರಾಕ್ಷಸರ ಸಂಹಾರವಾಯಿತು.ದುರಾಶೆಯ ಸೆಳವಿಗೆ ಸಿಕ್ಕದೆ ಸಿಕ್ಕುದುದರಲ್ಲಿ ತೃಪ್ತರಾಗುತ್ತ,ಇದ್ದುದರಲ್ಲಿಯೇ ಹಂಚಿ ತಿನ್ನುವ ಗುಣವನ್ನು ರೂಢಿಸಿಕೊಂಡರೆ ಒಲಿದು ಉದ್ಧರಿಸಲಾರಳೇನು ತಾಯಿ ಜಗನ್ಮಾತೆ? ರಕ್ತಗುಣಗಳಿಂದ ಮುಕ್ತರಾಗಿ ಶಕ್ತಿಸಂಪನ್ನರಾಗಬೇಕು.ವ್ಯಕ್ತಿಗುಣಗಳಿಂದ ಮುಕ್ತರಾಗಿ ವಿಭೂತಿಗುಣಗಳನ್ನಳವಡಿಸಿಕೊಳ್ಳಬೇಕು.ವ್ಯಕ್ತಿಗುಣದಿಂದ ಮುಕ್ತರಾಗಿ ಸಮಷ್ಟಿ ತತ್ತ್ವವನ್ನಳವಡಿಸಿಕೊಳ್ಳಬೇಕು.ಹೀಗಾದರೆ ದೇವಿ ದುರ್ಗೆಯ ದರ್ಶನ ದುರ್ಲಭವೇನಲ್ಲ.

 

             ೨೧.೦೯.೨೦೨೫