ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಶ್ರೀರಕ್ಷೆ, ಸುಪ್ರೀಂಕೋರ್ಟ್ ನಲ್ಲೂ ಗೆದ್ದರು ಬಾನು ಮುಷ್ತಾಕ್ ಅವರು

ಅನುಭಾವ ಸಂಗತಿ

ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಶ್ರೀರಕ್ಷೆ, ಸುಪ್ರೀಂಕೋರ್ಟ್ ನಲ್ಲೂ ಗೆದ್ದರು ಬಾನು ಮುಷ್ತಾಕ್ ಅವರು

             ಮುಕ್ಕಣ್ಣ ಕರಿಗಾರ

 

ಸುಪ್ರೀಂಕೋರ್ಟ್ ಕೂಡ ಬೂಕರ್ ಪ್ರಶಸ್ತಿಯಿಂದ ಕನ್ನಡದ ಕೀರ್ತಿ ಕಂಪನ್ನು ಜಗದಗಲ ಪಸರಿಸಿದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡದಂತೆ ತಡೆನೀಡಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ತಿರಸ್ಕರಿಸುವ ಮೂಲಕ ಭಾರತದ ಸಂವಿಧಾನದ ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿದಿದೆ.ಸಂವಿಧಾನದ ರಕ್ಷಕನಾಗಿರುವ ಸುಪ್ರೀಂಕೋರ್ಟ್ ಹತ್ತು ಹಲವು ಬಾರಿ ಸಂವಿಧಾನದ ‌ಮೂಲ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತಿದೆ.’ಮಾಡಲು ಕೆಲಸವಿಲ್ಲದವರು ಏನೋ ಮಾಡಿದರು’ ಎಂಬಂತೆ ಕೆಲವು ಜನ ಪ್ರಚಾರಪ್ರಿಯರುಗಳು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿ ಸೋತ ಬಳಿಕವೂ ‘ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ಸುಪ್ರೀಂಕೋರ್ಟ್ ನ ಮೊರೆಹೋಗಿ ಸೋತು ಮುಖ ಎತ್ತಿ ತಿರುಗದ ದೈನೇಸಿ ಸ್ಥಿತಿ ತಲುಪಿದ್ದಾರೆ.ಭಾರತದ ಸುಪ್ರೀಂಕೋರ್ಟ್ ಈಗ ‘ಸಂವಿಧಾನವೇ ಭಾರತದ ರಾಷ್ಟ್ರೀಯ ಗ್ರಂಥ’ ಎನ್ನುವುದನ್ನು ಪರೋಕ್ಷವಾಗಿ ಸಾರಿದೆ ಕರ್ನಾಟಕ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿಯುವ ಮೂಲಕ. ಇದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ದೊಡ್ಡ ಗೆಲುವು,ಅವರು ನಂಬಿ, ಪ್ರತಿಪಾದಿಸುತ್ತ ಬಂದಿದ್ದ ಜಾತ್ಯಾತೀತ ಮೌಲ್ಯಗಳ ಗೆಲುವು.ಬೂಕರ್ ಪ್ರಶಸ್ತಿಯಿಂದ ಜಗತ್ಪ್ರಸಿದ್ಧರಾಗಿದ್ದ ಬಾನು ಮುಷ್ತಾಕ್ ಅವರು ಕರ್ನಾಟಕ ಹೈಕೋರ್ಟ್, ಭಾರತದ ಸುಪ್ರೀಂಕೋರ್ಟ್ ನಲ್ಲೂ ಗೆಲ್ಲುವ ಮೂಲಕ ದೇಶವಾಸಿಗಳೆಲ್ಲರಿಗೂ ಪರಿಚಿತರಾದರು,ಜನರ ಮನೆಮಾತು ಆದರು.ಇದು ನಮ್ಮ ಸಂವಿಧಾನದ ಗೆಲುವು ಮಾತ್ರವಲ್ಲ, ಕರುನಾಡಿನ ನಾಡದೇವಿ ಚಾಮುಂಡೇಶ್ವರಿಯು ವಿಕೃತಮನಸ್ಕರ ‘ ಖಾಸಗಿ ಸ್ವತ್ತು’ಅಲ್ಲ ಎಂದು ಸಾಬೀತಾದ ಪ್ರಸಂಗವೂ ಹೌದು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಾನು ಮುಷ್ತಾಕ್ ಅವರಿಂದ 2025 ನೇ ಸಾಲಿನ ದಸರಾ ಉದ್ಘಾಟಿಸಬೇಕು ಎಂದು ನಿರ್ಧರಿಸಿದ ದಿನದಿಂದಲೂ ನಾನು ಬಾನು ಮುಷ್ತಾಕ್ ಅವರನ್ನು ಬೆಂಬಲಿಸಿ ಬರೆಯುತ್ತಲೇ ಇದ್ದೇನೆ.ಕನ್ನಡಕ್ಕೆ ಬೂಕರ್ ಪ್ರಶಸ್ತಿಯ ಗೌರವವನ್ನು ತರುವ ಮೂಲಕ ಬಾನು ಮುಷ್ತಾಕ್ ಅವರು ಕನ್ನಡವನ್ನು ಜಗತ್ತಿಗೆ ಪರಿಚಯಿಸಿದರು ಎನ್ನುವುದು ನಾನು ಅವರನ್ನು ಬೆಂಬಲಿಸುವ ಒಂದು ಕಾರಣವಾದರೆ ಶಕ್ತಿ ಉಪಾಸಕನಾದ ನಾನು ನಾಡದೇವಿ ಚಾಮುಂಡೇಶ್ವರಿಯು ಜಗನ್ಮಾತೆ,ಆಕೆ ಹಿಂದುಗಳಿಗೆ ಎಂತು ತಾಯಿಯೋ ಹಾಗೆಯೇ ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧ,ಜೈನ,ಸಿಖ್ಖ ಸೇರಿದಂತೆ ಎಲ್ಲ ಮತಧರ್ಮೀಯರಿಗೂ ತಾಯಿಯು ಅವರವರ ಮತಧರ್ಮಗಳ ದೃಷ್ಟಿಕೋನಗಳಾಚೆಯೂ ಎಂದು ನಂಬಿದವನು.ಚಾಮುಂಡೇಶ್ವರಿಯ ಜಗನ್ಮಾತೆ ತತ್ತ್ವ ಗೆಲ್ಲುವುದು ನನಗೆ ಮುಖ್ಯವಾಗಿತ್ತು.

ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿ ವಿಜೇತರಾದ ಕೆಲವೇ ದಿನಗಳಲ್ಲಿ ನಾನು ನಮ್ಮ‌ಮಹಾಶೈವ ಧರ್ಮಪೀಠವು ನಮ್ಮ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಹೆಸರಿನಲ್ಲಿ ಕೊಡಮಾಡುವ 2025 ನೇ ಸಾಲಿನ “ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ” ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡುವ ಮೂಲಕ ನನ್ನ ಸಂವಿಧಾನ ಬದ್ಧತೆಯನ್ನು ಪ್ರತಿಪಾದಿಸಿದೆ.ಆಧುನಿಕ ಭಾರತದ ಪಂಚಾಚಾರ್ಯರಲ್ಲಿ ಒಬ್ಬರು,ನವಭಾರತ ನಿರ್ಮಾಣದ ಮಹಾಯೋಗಿ,ಯುಗಸಂತ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ಮನುಷ್ಯಧರ್ಮವನ್ನು ಎತ್ತಿ ಹಿಡಿದ ಶಿವವಿಭೂತಿಗಳು‌.’ ಎಲ್ಲರಲ್ಲಿಯೂ ಶಿವ ಚೈತನ್ಯವಿದೆ’ ಎಂದು ನಿತ್ಯವೂ ಬೋಧಿಸುತ್ತಿದ್ದ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಸಂದೇಶವನ್ನು ಅಕ್ಷರಶಃ ಪಾಲಿಸುತ್ತಿರುವ ನಾನು ಪೀಠಾಧ್ಯಕ್ಷನಾಗಿರುವ ನಮ್ಮ ಮಹಾಶೈವ ಧರ್ಮಪೀಠವು ನಿಜವಾದ ಅರ್ಥದಲ್ಲಿ ಜಾತ್ಯಾತೀತ ಮಠವಾಗಿದೆ,ಸಂವಿಧಾನದ ಮೌಲ್ಯಗಳನ್ನು ಪಸರಿಸುವ ಧಾರ್ಮಿಕ ಕೇಂದ್ರವಾಗಿದೆ. ನಾವು ಈ ಹಿಂದೆ ಮುಸ್ಲಿಂ ಸಮುದಾಯದವರೇ ಆಗಿದ್ದ ‘ ಮಾನವ್ಯದ ಮಂದಾರ’ ಕವಿ ಬಿ.ಎ ಸನದಿಯವರಿಗೆ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಹೆಸರಿನ ಪ್ರಶಸ್ತಿ ನೀಡಿದ್ದೆವು.ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿಯು ಖಾಸಗಿ ಕ್ಷೇತ್ರದಲ್ಲಿ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ. ಒಂದು ಲಕ್ಷ ನಗದು,ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡ ಈ ಪ್ರಶಸ್ತಿಯನ್ನು ಇದುವರೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಅವರು ಸೇರಿದಂತೆ ಕನ್ನಡದ ಹಲವು ದಿಗ್ಗಜ ಸಾಹಿತಿಗಳಿಗೆ ಕೊಡಮಾಡಿದೆ.ವಿಶೇಷವೆಂದರೆ ನಮ್ಮ ಮಠದ ಪ್ರಶಸ್ತಿ ಸ್ವೀಕರಿಸಿದ ಬಳಿಕ ಖ್ಯಾತನಾಮ ಸಾಹಿತಿಗಳು ಮತ್ತಷ್ಟು ಸಿದ್ಧಿ ಪ್ರಸಿದ್ಧಿಗಳನ್ನು ಪಡೆದದ್ದು.ಚಂದ್ರಶೇಖರ ಕಂಬಾರ ಅವರು ನಮ್ಮ ಮಠದ ಪ್ರಶಸ್ತಿ ಪಡೆದ ಬಳಿಕ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರು ಬಳಿಕ ಅಧ್ಯಕ್ಷರೂ ಆದರು.ಬಿ.ಎ.ಸನದಿಯವರು ನಮ್ಮ ಮಠದ ಪ್ರಶಸ್ತಿ ಪಡೆದ ಬಳಿಕ ಪಂಪಪ್ರಶಸ್ತಿ ಪುರಸ್ಕೃತರಾದರು.ನಮ್ಮ ಮಠದಲ್ಲಿ ಪ್ರಶಸ್ತಿಯಿಂದ ಪುರಸ್ಕೃತರಾದ ಕವಿ ಸಾಹಿತಿಗಳೆಲ್ಲರಿಗೂ ಪ್ರಶಸ್ತಿ ಪಡೆದಾದ ಬಳಿಕ ಒಂದಿಲ್ಲ ಒಂದು ಉನ್ನತ ಪದವಿ- ಪ್ರಶಸ್ತಿ ಬಂದಿವೆ.ಹಾಗೆಯೇ ಬಾನು ಮುಷ್ತಾಕ್ ಅವರು ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪದವಿ ಪ್ರಶಸ್ತಿಗಳನ್ನು ಪಡೆಯಲಿದ್ದಾರೆ.ಆ ಕುರಿತು ಈ ಹಿಂದೆ ಪ್ರಶಸ್ತಿ ಪಡೆದ ಕವಿ ಸಾಹಿತಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ ನನ್ನ ಅಧ್ಯಕ್ಷೀಯ ಅಭಿನಂದನಾ ಭಾಷಣದಲ್ಲಿ ಹೇಳಿದಂತೆ ಈ ಬಾರಿಯೂ ಬಾನು ಮುಷ್ತಾಕ್ ಅವರ ಬಗ್ಗೆಯೂ ಹೇಳುತ್ತ “ಬಾನು ಮುಷ್ತಾಕ್ ಮೇಡಂ ಅವರು ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುವುದರ ಜೊತೆಗೆ ರಾಜ್ಯ ರಾಷ್ಟ್ರಮಟ್ಟದ ಹತ್ತು ಹಲವು ಗೌರವಗಳಿಗೆ ಪಾತ್ರರಾಗಲಿದ್ದಾರೆ” ಎಂದು ಹೇಳಿದ್ದೆ ಅಗಸ್ಟ್ 09 ರಂದು ನಮ್ಮ ಮಹಾಶೈವ ಧರ್ಮಪೀಠದಲ್ಲಿ ನಡೆದ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ. ಅದಾದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಾನು ಮುಷ್ತಾಕ್ ಅವರಿಂದ ಈ ಬಾರಿಯ ದಸರಾ ಉದ್ಘಾಟನೆಗೆ ನಿರ್ಧರಿಸಿದರು.ಮುಖ್ಯಮಂತ್ರಿಯವರ ಈ ನಿರ್ಧಾರದ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿ ಒಂದು ರೀತಿಯ ಗೊಂದಲದ ವಾತಾವರಣ ಉಂಟಾಗಿತ್ತು.ಆದರೆ ನಾನು ಪ್ರತಿ ಬಾರಿಯೂ ಬಾನು ಮುಷ್ತಾಕ್ ಅವರನ್ನು ಬೆಂಬಲಿಸಿ ಶುಭ ಹಾರೈಸಿದ್ದೆ,ಅವರ ಶ್ರೇಯೋಭಿವೃದ್ಧಿಯನ್ನು ಬಯಸಿದ್ದೆ.ನಾನು ನುಡಿದುದನ್ನು ನಡೆಸಿಕೊಡುತ್ತಿರುವ ಶ್ರೀ ಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ನನ್ನ ನಂಬಿಕೆಯನ್ನು ಹುಸಿಗೊಳಿಸಲಿಲ್ಲ; ಯುಗಾಚಾರ್ಯ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ಬಾನು ಮುಷ್ತಾಕ್ ಅವರ ಬೆನ್ನ ಹಿಂದೆ ಇದ್ದು ಅವರ ಶ್ರೀರಕ್ಷೆಯಾಗಿ ಮುನ್ನಡೆಸಿದರು.ಬಾನು ಮುಷ್ತಾಕ್ ಅವರು ಇಂತಹವುಗಳನ್ನು ನಂಬುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ ,ಆದರೆ ಸುಪ್ರೀಂಕೋರ್ಟ್ ಬಾನು ಮುಷ್ತಾಕ್ ಅವರ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ತಿರಸ್ಕರಿಸಿದ್ದು ನನಗೆ ನಮ್ಮ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ತಪೋಶಕ್ತಿ ಮತ್ತು ‘ಮಾತನಾಡುವ ಮಹಾದೇವ’ ನೆಂದೇ ಬಿರುದುಗೊಂಡಿರುವ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನ ಭಕ್ತರನ್ನು ಪೊರೆಯುವ ಭಕ್ತವತ್ಸಲ ಭಾವ ಮತ್ತು ಶಿವನ ಲೋಕಾನುಗ್ರಹಶಕ್ತಿಯ ಬಗ್ಗೆ ನನ್ನಲ್ಲಿದ್ದ ಅಚಲ ನಂಬಿಕೆಗೆ ಮತ್ತಷ್ಟು ಬಲಬಂದಿದೆ.

 

        ೨೦.೦೯.೨೦೨೫