ಶಹಪುರ : ಸಮಾಜದಲ್ಲಿ ಶಿಕ್ಷಣದ ಪಾತ್ರ ಮಹತ್ವದಾಗಿದ್ದು,ಶಿಕ್ಷಕರು ತಮ್ಮ ಜವಾಬ್ದಾರಿಯನ್ನರಿತು ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಶಿಕ್ಷಕರಿಗೆ ಕರೆ ನೀಡಿದರು. ನಗರದ ಕೃಷಿ ಮಹಾ ವಿದ್ಯಾಲಯ ಸಭಾಂಗಣದಲ್ಲಿ, ಜಿಲ್ಲಾ ಪಂಚಾಯಿತಿ ಯಾದಗಿರಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ಯಾದಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಹಪುರ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ಶಹಪುರ ಇವರ ಸಂಯುಕ್ತಾಶ್ರಯದಲ್ಲಿ 2025-26 ನೇ ಸಾಲಿನ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ದೇಶದ ಏಳಿಗೆಗೆ ಶಿಕ್ಷಕರ ಪಾತ್ರ ಬಹುಮುಖ್ಯ. ಯುವಕರನ್ನು ತರಬೇತಿ ನೀಡಿ ಉತ್ತಮ ವಿದ್ಯಾರ್ಥಿಯಾಗಿ ರೂಪಿಸುತ್ತಾರೆ. ಮಾಜಿ ಸಚಿವ ಗೋವಿಂದೇಗೌಡರು ಶಿಕ್ಷಣ ಸಚಿವರಾದ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಶಿಕ್ಷಕರ ಕೊರತೆಯಾಗದಂತೆ ನೋಡಿಕೊಂಡರು. ಶಿಕ್ಷಕರು ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಗುರುತಿಸಿ ಹೊರ ತರಬೇಕಿದೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಅಕ್ಷರ ಅವಿಷ್ಕಾರ ಯೋಜನೆ ಅಡಿ ಪ್ರತಿ ಕ್ಷೇತ್ರಕ್ಕೆ ಶಿಕ್ಷಣಕ್ಕಾಗಿ 15 ಕೋಟಿ ಅನುದಾನ ನೀಡಲಾಗಿದೆ. ಅದರಲ್ಲಿ ಶಾಲೆ ಕೋಣೆಗಳ ರಿಪೇರಿ, ಕಟ್ಟಡ, ಶೌಚಾಲಯ ನಿರ್ಮಾಣ ಸೇರಿದಂತೆ ಇತರ ಸೇವೆಗಳನ್ನು ಕೊಡಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಭಾಗದ ಹಾಗೂ ನಗರ ವಿದ್ಯಾರ್ಥಿಗಳ ಸರಿಸಮಾನವಾಗಿ ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಪ್ರಮುಖವಾಗಿದೆ. ಜ್ಞಾನ, ಪ್ರತಿಭೆ, ಸಾಮರ್ಥ್ಯ ಅನಾವರಣಗೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಕರು, ಅಧಿಕಾರಿಗಳು, ಚುನಾವಣೆ ಪ್ರತಿನಿಧಿಗಳು, ಪಾಲಕರು ಜೊತೆಯಾಗಿ ಶ್ರಮಿಸಬೇಕು ಎಂದರು.
ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣ ಅವರ ಶೈಕ್ಷಣಿಕ ಚಿಂತನೆಗಳು ಮತ್ತು ತತ್ವಶಾಸ್ತçದ ವಿಚಾರಗಳು ಇಂದು ತುಂಬಾ ಪ್ರಸ್ತುತವಾಗಿವೆ ಎಂದರು.
ವಿಶ್ರಾಂತ ಶಿಕ್ಷಣ ಉಪನಿರ್ದೇಶಕ ಶಾಂತಗೌಡ ಪಾಟೀಲ್ ಉಪನ್ಯಾಸ ನೀಡಿ, ಸಗರನಾಡಿನಲ್ಲಿ ಪ್ರತಿಭಾವಂತ ಸಂಪನ್ಮೂಲ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಾಗಲು ಶಿಕ್ಷಕರು ಪ್ರಯತ್ನಿಸಿದರೆ ಇತರೆ ಜಿಲ್ಲೆಗಳಿಗಿಂತ ಫಲಿತಾಂಶದಲ್ಲಿ ಹೆಚ್ಚಳ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿಡಿಪಿಐ ಚನ್ನಬಸಪ್ಪ ಮುದೋಳ, ಶಾಲಾ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪನಿರ್ದೇಶಕ ವೃಷಭೇಂದ್ರಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಸೇರಿದಂತೆ ರೇಣುಕಾ ಪಾಟೀಲ, ಬಸವರಾಜ ಶರಬೈ, ರಾಯಪ್ಪಗೌಡ ಹುಡೇದ, ಅಶೋಕ ಕುಮಾರ ಕೆಂಭಾವಿ, ರಾಘವೇಂದ್ರ ಅಳ್ಳಳ್ಳಿ, ಆದೆಪ್ಪ ಬಾಗ್ಲಿ, ಮಲ್ಲಯ್ಯ ಸಂಜೀವಿನಿ, ಹಣಮಂತ ಹೊಸಮನಿ, ಮಲ್ಲೇಶಪ್ಪ ಹೊಸ್ಮನಿ, ಲಕ್ಷö್ಮಣ ಲಾಳಸೇರಿ, ಕಾವೇರಿ ಪಾಟೀಲ್, ಲಕ್ಕಪ್ಪ ಮಲ್ಲಾಬಾದಿ, ಶಂಕ್ರಪ್ಪ ಗೊಂದೆನೂರ ಇತರರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಣಮಂತ್ರಾಯ ಸೋಮಾಪುರ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಾಲ್ವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಶಿಕ್ಷಕರ ಸಂಘದಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಲವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
**************************
ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲಾ ರೀತಿಯಿಂದ ಶ್ರಮಿಸಲಾಗುತ್ತದೆ. ನರೇಗಾ ಯೋಜನೆಯಡಿಯಲ್ಲಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸಲಾಗುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಿಸಿದೆ. ನರೇಗಾದಡಿ ಶಾಲೆಗಳಿಗೆ ಮೂಲ ಸೌಲಭ್ಯ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಸುಮಾರು ಸಾವಿರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಗತ್ಯ ಶಾಲೆಗಳಿಗೆ ಶೌಚಾಲಯ, ಕಂಪೌಂಡ್, ನೀರು, ಆಟದ ಮೈದಾನ ಇತರೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ.–ಲವೀಶ್ ಒರಡಿಯಾ. ಜಿಪಂ ಸಿಇಓ ಯಾದಗಿರಿ.