ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಬಾರದೆಂದು ಹಂಬಲಿಸುವ ಪ್ರತಾಪಸಿಂಹ ಅವರ ಸಂವಿಧಾನ ವಿರೋಧಿ ನಡೆ 

ಮೂರನೇ ಕಣ್ಣು

 ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಬಾರದೆಂದು ಹಂಬಲಿಸುವ ಪ್ರತಾಪಸಿಂಹ ಅವರ ಸಂವಿಧಾನ ವಿರೋಧಿ ನಡೆ 

   ಮುಕ್ಕಣ್ಣ ಕರಿಗಾರ.

‌ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರಿಂದ 2025 ನೇ ಸಾಲಿನ ಮೈಸೂರು ದಸರಾ ಉದ್ಘಾಟನೆಗೆ ನಿರ್ಧರಿಸಿ,ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನಿಸಿ ಕರ್ನಾಟಕದ ಸಮನ್ವಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಹತ್ವದ,ಅಭಿನಂದನಾರ್ಹ ಕಾರ್ಯ ಮಾಡಿದ್ದಾರೆ.ಆದರೆ ಹಿಂದುತ್ವದ ನೆಲೆಯಲ್ಲಿ ವಿಚಾರಿಸುತ್ತಿರುವ ಕೆಲವರು ಅನಗತ್ಯ ರಾದ್ಧಾಂತ ಎಬ್ಬಿಸುತ್ತ,ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ.ಇದೀಗ ಮೈಸೂರಿನ ಮಾಜಿ ಸಂಸದ ಪ್ರತಾಪಸಿಂಹ ಅವರು ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸದಂತೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟಿನ ಮೊರೆ ಹೋಗಿದ್ದಾರೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ತಡೆಯಾಜ್ಞೆ ನೀಡುವುದಿಲ್ಲ ಎನ್ನುವ ಸಂಗತಿ ಗೊತ್ತಿದ್ದರೂ ಪ್ರತಾಪಸಿಂಹ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ಅವರ ಪ್ರಚಾರಪ್ರಿಯತೆಯಲ್ಲದೆ ಮತ್ತೇನೂ ಅಲ್ಲ.ಅಷ್ಟಕ್ಕೂ ಮಾಜಿ ಸಂಸದರಾಗಿರುವ ಪ್ರತಾಪಸಿಂಹ ಅವರಿಗೆ ನಮ್ಮ ಪ್ರಬುದ್ಧ ಸಂವಿಧಾನದ ಆಶಯಗಳ ಅರಿವು ಇಲ್ಲವೆ? ಹಿಂದೆ ಸಂಸದರಾಗಿ ‘ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇನೆ’ ಎಂದು ಪ್ರಮಾಣವಚನ ಸ್ವೀಕರಿಸಿ ಸಂಸದರಾದ ಪ್ರತಾಪಸಿಂಹ ಅವರಿಗೆ ಇಷ್ಟು ಬೇಗನೆ ಸಂವಿಧಾನದ ಮೌಲ್ಯಗಳು ಮರೆತುಹೋದವೆ?

ಪ್ರತಾಪಸಿಂಹ ಅವರು ಚಾಮುಂಡೇಶ್ವರಿ ದೇವಿಯನ್ನು ಕೇವಲ ಹಿಂದೂಗಳ ದೇವಿ ಎಂಬಂತೆ ಭಾವಿಸಿದಂತಿದೆ.ಚಾಮುಂಡೇಶ್ವರಿಯು ಕರ್ನಾಟಕದ ನಾಡದೇವಿ,ಕನ್ನಡ ಸಂಸ್ಕೃತಿಯ ಸಮನ್ವಯದ ಸಂಕೇತವಾದ ನಾಡದೇವಿ.ದಸರಾವು ಕರ್ನಾಟಕದ ನಾಡಹಬ್ಬವಾದರೆ ಅದು ಕರ್ನಾಟಕದ ಪ್ರಜಾಸಮಸ್ತರ ಹಬ್ಬ ತಾನೆ? ಹಿಂದೂ ಧರ್ಮ,ಸಂಸ್ಕೃತಿಯ ಪುನರುದ್ಧಾರಕ್ಕೆ ಪಣತೊಟ್ಟವರಂತೆ ವರ್ತಿಸುವ ಪ್ರತಾಪಸಿಂಹ ಅವರು ಚಾಮುಂಡೇಶ್ವರಿ ವೈದಿಕ ದೇವಿಯಲ್ಲ ಎನ್ನುವ ವೇದಸತ್ಯವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.ಚಾಮುಂಡೇಶ್ವರಿಯು ವೇದೋಕ್ತ ದೇವಿಯಲ್ಲ ನಾಡ ಜನಪದರ ದೇವಿ,ಶೂದ್ರ,ದ್ರಾವಿಡ ಸಂಸ್ಕೃತಿಯ ದೇವಿ.ವೇದದ ದುರ್ಗಾ ಸೂಕ್ತಕ್ಕೂ ಚಾಮುಂಡೇಶ್ವರಿಗೂ ಯಾವುದೇ ಸಂಬಂಧವಿಲ್ಲ.ನಾಡಜನಪದರ ದೇವಿಯಾದ ಚಾಮುಂಡೇಶ್ವರಿಯನ್ನು ನಾಡಿನ ಜನರೆಲ್ಲರೂ ಪೂಜಿಸಬಹುದು.ಮುಸ್ಲಿಮರು ಚಾಮುಂಡೇಶ್ವರಿಯ ಉತ್ಸವದಲ್ಲಿ ಪಾಲ್ಗೊಳ್ಳಬಾರದು ಎನ್ನುವ ಅಘೋಷಿತ ನಿಯಮ ಪ್ರತಾಪಸಿಂಹ ಅವರು ಮಾಡಿಕೊಂಡಿರಬೇಕು ಎಂದು ಕಾಣಿಸುತ್ತಿದೆ.

ಅಷ್ಟಕ್ಕೂ ನಾವು ಬದುಕುತ್ತಿರುವುದು ವೈದಿಕ ಯುಗದಲ್ಲೋ,ಪುರಾಣಗಳ ಯುಗದಲ್ಲೋ ಅಲ್ಲ,ವಿಶ್ವಮಾನ್ಯತೆಯನ್ನು ಪಡೆದ ಪ್ರಬುದ್ಧ ಸಂವಿಧಾನದ ಆಶಯಗಳಂತೆ ರಾಜ್ಯಾಡಳಿತ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ.ಭಾರತದಲ್ಲಿ ಸಂವಿಧಾನವೇ ಪರಮಪ್ರಮಾಣವೇ ಹೊರತು ಯಾವುದೇ ಧರ್ಮದ ಶಾಸ್ತ್ರ,ನಂಬಿಕೆಗಳಲ್ಲ.ಧರ್ಮನಿರಪೇಕ್ಷ ರಾಷ್ಟ್ರವಾದ ಭಾರತಕ್ಕೆ ಒಂದು ರಾಷ್ಟ್ರೀಯ ಧರ್ಮ ಇಲ್ಲ ಎಂದಾದರೆ ಹಿಂದೂ ಧರ್ಮ ಭಾರತದ ರಾಷ್ಟ್ರಧರ್ಮವಾಗಬಹುದೆ? ಕರ್ನಾಟಕದ ರಾಜ್ಯಧರ್ಮವಾಗಬಹುದೆ? ರಾಜಕೀಯ ಪಕ್ಷಗಳು, ರಾಜಕಾರಣಿಗಳು ಸಂವಿಧಾನ ಬದ್ಧರಾಗಿ ನಡೆದುಕೊಳ್ಳಬೇಕು,ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು.

ನಮ್ಮ ಸಂವಿಧಾನದ ಪೀಠಿಕೆಯೂ ಸೇರಿ ಹಲವೆಡೆ ಸರ್ವಧರ್ಮಸಮನ್ವಯದ ಅಗತ್ಯ ಮತ್ತು ಅನಿವಾರ್ಯತೆಯನ್ನು ಸಂವಿಧಾನವು ಒತ್ತಿಹೇಳಿದೆ.ನಮ್ಮ ಸಂವಿಧಾನದ ಪೀಠಿಕೆಯು ” ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ :

* ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ,

* ವಿಚಾರ,ಅಭಿವ್ಯಕ್ತಿ, ವಿಶ್ವಾಸ,ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ ;

* ಸ್ಥಾನಮಾನ ಹಾಗೂ ಅವಕಾಶ ಸಮಾನತೆ

ದೊರೆಯುವಂತೆ ಮಾಡಲು ಮತ್ತು ವ್ಯಕ್ತಿಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಸಂಕಲ್ಪಮಾಡಿದವರಾಗಿ” ಎಂದು ಸರ್ವಧರ್ಮಸಮಭಾವನೆಯನ್ನು ಎತ್ತಿಹಿಡಿದಿರುವ ಸಂಗತಿ ಅರ್ಥವಾಗಿಲ್ಲವೆ ಮಾಜಿ ಸಂಸದ ಪ್ರತಾಪಸಿಂಹ ಅವರಿಗೆ? ಭಾರತವು ಸರ್ವಧರ್ಮಸಮಭಾವದ ‘ಜಾತ್ಯಾತೀತ ರಾಷ್ಟ್ರ’ ಎಂದು ಸಂವಿಧಾನದ ಪೀಠಿಕೆಯೇ ಉದ್ಘೋಷಿಸುತ್ತಿರುವಾಗ ಸರ್ವಜನಾಂಗದ ಶಾಂತಿಯ ತೋಟವಾದ ನಾಡಿನ ಹೆಮ್ಮೆಯ ದಸರಾ ಹಬ್ಬದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರು ಬೇಡ ಎಂದು ಪ್ರತಾಪಸಿಂಹ ಅವರು ವಾದಿಸುತ್ತಿರುವುದರ ಹಿನ್ನೆಲೆಯಾದರೂ ಏನು?

ಭಾರತದ ಪ್ರಜೆಗಳೆಲ್ಲರೂ ಅವರ ಜಾತಿ,ಧರ್ಮಗಳಾಚೆ ರಾಜ್ಯ,ರಾಜ್ಯದ ಕಾನೂನಿನ ಮುಂದೆ ಸಮಾನರು ಎಂದು ಸಾರುವ ಸಮಾನತೆಯ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ವಿಧಿಸಿರುವ ನಮ್ಮ ಸಂವಿಧಾನದ ಅನುಚ್ಛೇದಗಳ ಪರಿಚಯವಿಲ್ಲವೆ ಪ್ರತಾಪಸಿಂಹ ಅವರಿಗೆ? ಸಂವಿಧಾನದ 15 (1) ನೇ ಅನುಚ್ಛೇದವು ‘ ರಾಜ್ಯವು ಯಾರೇ ನಾಗರಿಕನ ವಿರುದ್ಧ ಧರ್ಮ,ಮೂಲವಂಶ,ಜಾತಿ,ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯವನ್ನು ಮಾಡತಕ್ಕದ್ದಲ್ಲ’ ಎಂದು ವಿಧಿಸಿದೆ.ಸಂವಿಧಾನದ 15(2) ( ಬಿ) ನಿಯಮದಂತೆ ಧರ್ಮದ ಆಧಾರದ ಮೇಲೆ ಸಾರ್ವಜನಿಕರು ಸೇರುವ ಸ್ಥಳಗಳ ಉಪಯೋಗಕ್ಕೆ ನಿರ್ಬಂಧ ಹೇರುವಂತಿಲ್ಲ.ಮೈಸೂರು ದಸರಾ ಹಬ್ಬವು ರಾಜ್ಯ ಸರಕಾರವು ಆಚರಿಸುತ್ತಿರುವ ಸಾರ್ವಜನಿಕರ ಹಬ್ಬ,ಮೈಸೂರು ದಸರಾವು ಜಾತಿ,ಧರ್ಮಾತೀತವಾಗಿ ಪ್ರಜಾಸಮಸ್ತರು, ಸಾರ್ವಜನಿಕರು ಸೇರುತ್ತಿರುವ ಸ್ಥಳ.ಅಂದ ಬಳಿಕ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸಬಾರದು ಎನ್ನುವುದು ಸಂವಿಧಾನದ 15 ನೇ ಮತ್ತು ಅದರ ಉಪಚ್ಛೇದಗಳಿಗೆ ಅಪಚಾರ ಎಸಗಿದಂತಲ್ಲವೆ? ಚಾಮುಂಡೇಶ್ವರಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರಿಂದ ಅದು ಸಾರ್ವಜನಿಕರ ದೇವಸ್ಥಾನ,ಹಿಂದೂಗಳ ದೇವಸ್ಥಾನ ಮಾತ್ರವಲ್ಲ ‌.

ಬಾನು ಮುಷ್ತಾಕ್ ಅವರು ಕುಂಕುಮ ಧರಿಸುವುದಿಲ್ಲವಾದ್ದರಿಂದ ಅವರು ಮೈಸೂರು ದಸರಾ ಉದ್ಘಾಟಿಸಬಾರದು ಎನ್ನುವವರು ದೇಶವಾಸಿಗಳಿಗೆಲ್ಲ ಧಾರ್ಮಿಕ ಸ್ವಾತಂತ್ರ್ಯ ನೀಡಿರುವ ಸಂವಿಧಾನದ 25 ನೆಯ ಅನುಚ್ಛೇದವನ್ನು ಅರ್ಥ ಮಾಡಿಕೊಳ್ಳಬೇಕು.ಸಂವಿಧಾನದ 25(1) ನೇ ಅನುಚ್ಛೇದವು ‘ ಎಲ್ಲಾ ವ್ಯಕ್ತಿಗಳು ಅಂತಃಸಾಕ್ಷಿ ಸ್ವಾತಂತ್ರ್ಯಕ್ಕೆ ಸಮಾನ ರೀತಿಯಲ್ಲಿ ಹಕ್ಕುಳ್ಳವರಾಗಿರುತ್ತಾರೆ ಹಾಗೂ ಅಬಾಧಿತವಾಗಿ ಧರ್ಮವನ್ನು ಅವಲಂಬಿಸುವುದಕ್ಕೆ,ಆಚರಿಸುವುದಕ್ಕೆ ಮತ್ತು ಪ್ರಚಾರ ಮಾಡುವುದಕ್ಕೆ ಹಕ್ಕುಳ್ಳವರಾಗಿರುತ್ತಾರೆ’. ಸಂವಿಧಾನದ ಈ ಅನುಚ್ಛೇದದಂತೆ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಬಾನು ಮುಷ್ತಾಕ್ ಅವರು ಇಸ್ಲಾಂ ಧರ್ಮದ ರೀತಿ ರಿವಾಜುಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದ ಬಳಿಕ ಅವರು ಕುಂಕುಮ ಧರಿಸಬೇಕು ಎಂದು ನಿರೀಕ್ಷಿಸುವುದೇಕೆ ?

ಭಾರತದ ಪ್ರಬುದ್ಧ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಇರುವಂತೆ ಮೂಲಭೂತ ಕರ್ತವ್ಯಗಳೂ ಇವೆ ಎನ್ನುವುದನ್ನು ಮರೆಯಬಾರದು. ಸಂವಿಧಾನದ 4 ಎ ಭಾಗವು ಭಾರತದ ಪ್ರಜೆಗಳೆಲ್ಲರೂ ಪಾಲಿಸಬೇಕಾದ ಮೂಲಭೂತಕರ್ತವ್ಯಗಳನ್ನು ವಿಧಿಸಿದೆ.ಅನುಚ್ಛೇದ 51 ಎ ( ಎ) ಯು ಭಾರತದ ಪ್ರಜೆಗಳೆಲ್ಲರೂ ” ಸಂವಿಧಾನಕ್ಕೆ ಬದ್ಧರಾಗಿರಬೇಕು” ಎಂದು ವಿಧಿಸಿದೆ. ಸಂವಿಧಾನದ ಈ ವಿಧಿಯಂತೆ ಪ್ರತಾಪಸಿಂಹ ಅವರು ಸೇರಿದಂತೆ ಬಾನು ಮುಷ್ತಾಕ್ ಅವರನ್ನು ಅವರು ಮುಸ್ಲಿಮರು ಎನ್ನುವ ಕಾರಣದಿಂದ ವಿರೋಧಿಸುವವರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದೇ ಹೇಳಬೇಕಾಗುತ್ತದೆ.ಸಂವಿಧಾನದ 51 ಎ (ಸಿ) ಯು ” ಭಾರತದ ಸಾರ್ವಭೌಮತ್ವವನ್ನು, ಐಕ್ಯತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು” ಭಾರತದ ಪ್ರಜೆಗಳೆಲ್ಲರ ಮೂಲಭೂತ ಕರ್ತವ್ಯ ಎನ್ನುತ್ತದೆ.ಸಂವಿಧಾನದ 51 ಎ (ಇ) ಅನುಚ್ಛೇದವು ” ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭೇದ- ಭಾವಗಳಿಂದ ಅತೀತವಾಗಿ,ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟು ಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು” ಭಾರತದ ಪ್ರಜೆಗಳೆಲ್ಲರ ಮೂಲಭೂತ ಕರ್ತವ್ಯ ಎನ್ನುತ್ತದೆ.ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣ ಮಾತ್ರದಿಂದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಬಾರದು ಎಂದು ಬಯಸುವುದು ಸಂವಿಧಾನದ 51 ಎ (ಇ) ಅನುಚ್ಛೇದದ ಸ್ಪಷ್ಟ ಉಲ್ಲಂಘನೆ ಮಾತ್ರವಲ್ಲ ಅದು ಬಾನು ಮುಷ್ತಾಕ್ ಅವರ ಗೌರವಕ್ಕೆ ಕುಂದುಂಟು ಮಾಡುವ ಕೃತ್ಯವೂ ಹೌದು.ಸಂವಿಧಾನದ 51 ಎ ( ಎಫ್) ಅನುಚ್ಛೇದವು ‘ ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು’ ಭಾರತೀಯ ಪ್ರಜೆಗಳೆಲ್ಲರ ಮೂಲಭೂತ ಕರ್ತವ್ಯ ಎಂದು ಸಂವಿಧಾನ ವಿಧಿಸಿದ್ದನ್ನು ಪ್ರತಾಪಸಿಂಹ ಅವರು ಮತ್ತು ಅವರಂತಹ ಮನಸ್ಕರು ಅರ್ಥ ಮಾಡಿಕೊಳ್ಳಬೇಕು.

ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರಾಗಿ ಕನ್ನಡದ ಕೀರ್ತಿ ಪತಾಕೆಯನ್ನು ಜಗದಗಲ ಹರಡಿದ ಅಭಿಮಾನದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟನೆಗೆ ನಿರ್ಧರಿಸಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆಯೇ ಹೊರತು ಯಾರನ್ನೋ ಓಲೈಸುವ ಉದ್ದೇಶದಿಂದ ಅವರು ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಆಲೋಚಿಸಿಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದರಿಂದ ಮುಸ್ಲಿಂ ಧರ್ಮಗುರುಗಳ ಬೇಸರಕ್ಕೂ ಕಾರಣವಾಯಿತು ಎಂದ ಬಳಿಕ ಯಾರನ್ನಾದರೂ ಓಲೈಸುವ ಪ್ರಶ್ನೆ ಎಲ್ಲಿಂದ ಬರುತ್ತದೆ? ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಾಂವಿಧಾನಿಕ ಬದ್ಧತೆಯ ನಡೆ ಪ್ರಶಂಸನೀಯವೇ ಹೊರತು ಪ್ರಶ್ನಾರ್ಹವಲ್ಲ ; ಬಾನು ಮುಷ್ತಾಕ್ ಅವರು ದಸರಾ ಉತ್ಸವವನ್ನು ಉದ್ಘಾಟಿಸಲಿರುವುದು ರಾಜ್ಯ ಮತ್ತು ದೇಶದ ಸರ್ವಸಮನ್ವಯ ಭಾವದ ವಿಜಯೋತ್ಸವ.ನಮಗೆ ಸಂವಿಧಾನವೇ ಮುಖ್ಯವಾಗಬೇಕೇ ಹೊರತು ಶಾಸ್ತ್ರ ಸಂಪ್ರದಾಯಗಳ ಅರ್ಥಹೀನ ಆಚರಣೆಗಳಲ್ಲ.

ಕೊನೆಯದಾಗಿ ಒಂದು ಮಾತು, ಪ್ರತಾಪಸಿಂಹ ಅವರು ಮತ್ತು ಅವರಂಥವರು ಅರ್ಥ ಮಾಡಿಕೊಳ್ಳಲೇಬೇಕಾದ ಮಾತು , ನಾಡದೇವಿ ಚಾಮುಂಡೇಶ್ವರಿಯು ಹೋರಾಡಿದ್ದು ರಾಕ್ಷಸರ ವಿರುದ್ಧವೇ ಹೊರತು ಮುಸ್ಲಿಮರ ವಿರುದ್ಧವಲ್ಲ ; ಚಾಮುಂಡೇಶ್ವರಿಯು ಸಂಹರಿಸಿದ್ದು ಅಸುರರನ್ನೇ ಹೊರತು ಮುಸ್ಲಿಮರನ್ನಲ್ಲ.’ಅಸುರ ‘ಇಲ್ಲವೆ ‘ರಾಕ್ಷಸ’ ಎಂದರೆ ಲೋಕಕಂಟಕ ವ್ಯಕ್ತಿ ಎಂದರ್ಥವೇ ಹೊರತು ವಿಚಿತ್ರ ದೈಹಿಕ ಆಕಾರವನ್ನು ಹೊಂದಿದ್ದ ವ್ಯಕ್ತಿಗಳು ಎಂದರ್ಥವಲ್ಲ.ಆಧ್ಯಾತ್ಮಿಕವಾಗಿ ವಿಚಾರಿಸಿದರೆ ಅಸುರೀಗುಣಗಳು ಎಲ್ಲರಲ್ಲೂ ಇವೆ.ನಮ್ಮಲ್ಲಿರುವ ಅಸುರೀಗುಣಗಳ ವಿರುದ್ಧದ ಹೋರಾಟದಲ್ಲಿ ಗೆಲ್ಲಲ್ಲು ನಮಗೆ ಮಾತೆಯಾದ ,ಶಕ್ತಿಯಾದ ಚಾಮುಂಡೇಶ್ವರಿಯ ಅನುಗ್ರಹದ ಅವಶ್ಯಕತೆ ಇದೆ. ರಾಕ್ಷಸಿ ಸ್ವಭಾವದ ಜನರು ಹಿಂದೂಗಳಲ್ಲಿ ಇದ್ದಾರೆ,ಮುಸ್ಲಿಮರಲ್ಲೂ ಇದ್ದಾರೆ,ಕ್ರಿಶ್ಚಿಯನ್ ಜನಾಂಗದವರಲ್ಲೂ ಇದ್ದಾರೆ.ಅಷ್ಟೇ ಏಕೆ ,ಎಲ್ಲ ಜಾತಿ ಜನಾಂಗಗಳಲ್ಲಿ ಒಳ್ಳೆಯವರು ಇದ್ದಂತೆ ಕೆಟ್ಟವರು ಇದ್ದಾರೆ.ಲೋಕ ಸಮಸ್ತ ರಲ್ಲಿ ಒಳ್ಳೆಯವರು ದೇವತೆಗಳಾದರೆ ಕೆಟ್ಟವರೇ ರಾಕ್ಷಸರು.ಚಾಮುಂಡೇಶ್ವರಿಯು ಚಂಡ ಮುಂಡ,ರಕ್ತಬೀಜ,ಮಹಿಷಾಸುರ, ಶುಂಭ ನಿಶುಂಭಾದಿ ರಕ್ಕಸರನ್ನು ಕೊಂದಿದ್ದು ಇಸ್ಲಾಂ ಧರ್ಮ ಹುಟ್ಟಿರದೆ ಇದ್ದ ಬಹುಪೂರ್ವದ ವೇದೋತ್ತರ ಕಾಲದಲ್ಲಿ ಎಂದ ಬಳಿಕ ಮುಸ್ಲಿಂ ದ ಧರ್ಮಕ್ಕೆ ಸೇರಿದವರು ಎನ್ನುವ ಒಂದೇ ಕಾರಣದಿಂದ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸಬಾರದು ಎಂದು ಆಗ್ರಹಿಸುವುದು ಸಂವಿಧಾನ ವಿರೋಧಿ ಕೃತ್ಯಮಾತ್ರವಲ್ಲ,ಧಾರ್ಮಿಕ ವಿರೋಧಿ ನಡೆಯೂ ಹೌದು.

 

           ೦೬.೦೯.೨೦೨೫