ಮೂರನೇ ಕಣ್ಣು
ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಬಸವಣ್ಣನವರ ‘ ಪರೋಕ್ಷ ಪ್ರಭಾವ’ ಇದೆಯೇ ಹೊರತು ‘ಪ್ರತ್ಯಕ್ಷಪ್ರಭಾವ’ ಇಲ್ಲ
ಮುಕ್ಕಣ್ಣ ಕರಿಗಾರ
‘ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಬಸವ ಸಂಸ್ಕೃತಿ ಅಭಿಯಾನ ಬೀದರ ಜಿಲ್ಲಾ ಸಮಿತಿಯು’ ಹೊರಡಿಸಿದ ಕರಪತ್ರ ಒಂದು ವಿವಾದಕ್ಕೆ ಈಡಾಗಿ ಬೀದರ ಜಿಲ್ಲೆಯ ವಿವಿಧ ದಲಿತನಾಯಕರುಗಳು ಅದನ್ನು ವಿರೋಧಿಸಿ, ಕರಪತ್ರಗಳನ್ನು ವಾಪಾಸು ಪಡೆಯಲು ಆಗ್ರಹಿಸಿದ್ದಾರೆ( ಪ್ರಜಾವಾಣಿ 07.09.2024 ಪುಟ 4 D)ಬಸವ ಸಂಸ್ಕೃತಿ ಅಭಿಯಾನದವರು ಕರಪತ್ರದಲ್ಲಿ ‘ಭಾರತದ ಸಂವಿಧಾನ ಪ್ರತಿಪಾದಿಸುವ ಆಶಯಗಳೆಲ್ಲವೂ ಬಸವಾದಿ ಶರಣರ ವಚನ ಸಂವಿಧಾನದಲ್ಲಿ ಅಡಕವಾಗಿವೆ.ವಚನ ಸಂವಿಧಾನದಲ್ಲಿರುವ ವಿಶ್ವಮಾನ್ಯ ತತ್ತ್ವಾದರ್ಶಗಳೆಲ್ಲವೂ ಭಾರತ ಸಂವಿಧಾನದಲ್ಲಿ ಇಲ್ಲ.ಭಾರತ ಸಂವಿಧಾನ ರಚನೆಯಾಗುವ 900 ವರ್ಷಗಳ ಹಿಂದೆಯೇ ‘ವಚನ ಸಂವಿಧಾನ’ ಅನುಭವ ಮಂಟಪ ಎನ್ನುವ ಸಂಸತ್ ಮೂಲಕ ಜಾರಿಯಲ್ಲಿ ಬಂದಿತ್ತು ಎಂಬುದೇ ಅದ್ಭುತ’ ಎನ್ನುವ ವಾಕ್ಯಗಳನ್ನು ದಲಿತ ಮುಖಂಡರುಗಳು ವಿರೋಧಿಸಿದ್ದಾರೆ.ಬಸವಣ್ಣನವರ ಮೇಲೆ ಗೌರವಾದರಗಳನ್ನು ಹೊಂದಿರುವ ದಲಿತರಿಗೆ ಇದರಿಂದ ನೋವು ಆದರೆ ಅದು ಸಹಜ ಮತ್ತು ಸಮರ್ಥನೀಯ.
ಬಸವಣ್ಣನವರ ಕೊಡುಗೆಯನ್ನು ಹೊಗಳುವ ಭರದಲ್ಲಿ ಲಿಂಗಾಯತ ಮಠಾಧೀಶರುಗಳು ಸಂವಿಧಾನ ವಿರೋಧಿ ಮಾತುಗಳನ್ನು ಆಡಿ, ಎಡವಿದ್ದಾರೆ.ಬಸವಾದಿ ಶರಣರು ರಚಿಸಿದ ವಚನಗಳಲ್ಲಿ ಮಾನವಕುಲಕ್ಕೇ ಅನ್ವಯವಾಗುವ ತತ್ತ್ವ ಮೌಲ್ಯಾದರ್ಶಗಳಿವೆ ನಿಜ.ಸಶಕ್ತ ವಿಚಾರಗಳು ಸಾವಿರಾರು ವರ್ಷಗಳ ಕಾಲವೂ ಜೀವಂತವಿದ್ದು ಸಮರ್ಥವ್ಯಕ್ತಿಗಳನ್ನು ಪ್ರಚೋದಿಸುತ್ತವೆ ಎನ್ನುವ ಅರ್ಥದಲ್ಲಿ ಬಸವಣ್ಣನವರ ಪ್ರಭಾವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಆಗಿತ್ತು ಎಂದು ಒಪ್ಪಬಹುದೇ ಹೊರತು ಅಂಬೇಡ್ಕರ್ ಅವರ ಮೇಲೆ ಬಸವಣ್ಣನವರ ಪ್ರತ್ಯಕ್ಷಪ್ರಭಾವ ಇದೆ ಎನ್ನುವುದಾಗಲಿ ಅಥವಾ ಬಸವಾದಿ ಶರಣರ ನೇರಪ್ರಭಾವ ಸಂವಿಧಾನದಲ್ಲಿ ಇದೆ ಎನ್ನುವುದಾಗಲಿ ಸರಿಯಲ್ಲ.’ ವಚನ ಸಂವಿಧಾನದಲ್ಲಿರುವ ವಿಶ್ವಮಾನ್ಯ ತತ್ತ್ವಾದರ್ಶಗಳೆಲ್ಲವೂ ಭಾರತ ಸಂವಿಧಾನದಲ್ಲಿ ಇಲ್ಲ’ ಎಂದಿರುವುದಂತೂ ಯಾರೂ ಒಪ್ಪದ,ಸಂವಿಧಾನ ವಿರೋಧಿ ನಡೆಯೆ.ಭಾರತವು ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಬುದ್ಧ ಸಂವಿಧಾನದಡಿ ತನ್ನ ರಾಜ್ಯಾಡಳಿತ ನಡೆಸುತ್ತಿದೆ.ಸಂವಿಧಾನಕ್ಕೆ ಬದ್ಧರಾಗಿರುವುದು ಭಾರತೀಯರೆಲ್ಲರ ಮೂಲಭೂತ ಕರ್ತವ್ಯ(ಸಂವಿಧಾನದ 51 ಎ(ಎ) ಅನುಚ್ಛೇದ).ಲಿಂಗಾಯತ ಮಠಾಧೀಶರ ಒಕ್ಕೂಟದ ಕರಪತ್ರದ ನಿಲುವು ಸಂವಿಧಾನದ ಈ ಅನುಚ್ಛೇದಕ್ಕೆ ವಿರುದ್ಧವಾದುದು.
ಭಾರತೀಯರೆಲ್ಲರಿಗೂ ಅವರು ಯಾವುದೇ ಮತ ಧರ್ಮಗಳಿಗೆ ಸೇರಿದವರಾಗಿರಲಿ ಒಂದೇ ಸಂವಿಧಾನವಿದೆ; ಎರಡು ಸಂವಿಧಾನಗಳ ಕಲ್ಪನೆಯೇ ಅ್ರಪ್ರಸ್ತುತ.ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಲ್ಲಿ ‘ ವಚನ ಸಂವಿಧಾನ’ ಎಂದು ಪ್ರಸ್ತಾಪಿಸಿರುವುದು ಕೂಡ ಸರಿಯಲ್ಲ. ಅದು ಅಂಬೇಡ್ಕರ್ ಅವರ ಪ್ರಬುದ್ಧ ಸಂವಿಧಾನಕ್ಕೆ ಪ್ರತಿಯಾಗಿ ಮತ್ತೊಂದು ಸಂವಿಧಾನ ಇದೆ ಎನ್ನುವ ಅರ್ಥವನ್ನು ಹೊರಹೊಮ್ಮಿಸುತ್ತದೆ.’ವಚನಸಂವಿಧಾನ’ ಎನ್ನುವುದು ಲಿಂಗಾಯತ ಧರ್ಮದ ಪರವಾಗಿ ಇರುವವರ ಕಲ್ಪನೆಯೇ ಹೊರತು ಅದು ಭಾರತೀಯರೆಲ್ಲರ ಸ್ವೀಕಾರಾರ್ಹ ಮೌಲ್ಯವಲ್ಲ.ಬೇಕಿದ್ದರೆ ಲಿಂಗಾಯತ ಮಠಾಧೀಶರುಗಳು ಅದನ್ನು ತಮ್ಮ ಖಾಸಗಿ ಜೀವನದಲ್ಲಿ ಅನುಷ್ಠಾನಿಸಲಿ ಆದರೆ ಸಾರ್ವಜನಿಕ ಜೀವನದಲ್ಲಿ ಬಾಬಾ ಸಾಹೇಬ್ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಅನುಚ್ಛೇದಗಳು,ಆಶಯಗಳಿಗನುಗುಣವಾಗಿಯೇ ನಡೆದುಕೊಳ್ಳಬೇಕು.
ಬಸವಣ್ಣನವರು’ ಭುವನದ ಭಾಗ್ಯ’ ವಾಗಿ,ತಾಯಿ ಕನ್ನಡಮ್ಮನ ಸಹಸ್ರಮಾನಗಳ ಕನಸು- ಕನವರಿಕೆ,ನಾಡಜನತೆಯ ಅಂತರಾಳದ ಅಭೀಪ್ಸೆಯಾಗಿ ಅವತರಿಸಿದ ಅದ್ವಿತೀಯ, ಅನ್ಯಾದೃಶ ಸಮಾಜೋಧಾರ್ಮಿಕ ಸುಧಾರಕರು.ವಿಶ್ವದ ಎಲ್ಲರ ಮೇಲೆ ಪ್ರಭಾವ ಬೀರುವ ಸತ್ತ್ವಯುತ ,ಸತ್ಯಯುತ ವಿಚಾರಗಳನ್ನು ಹೊಂದಿದ್ದರಿಂದ ಅವರು ವಿಶ್ವಗುರುಗಳು.ಬಸವಣ್ಣನವರ ಮಹೋನ್ನತ ವ್ಯಕ್ತಿತ್ವವನ್ನು ಗುರುತಿಸಿ,ಗೌರವಿಸಲೆಂದೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕರ್ನಾಟಕ ಸರಕಾರವು ಬಸವಣ್ಣನವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಿದೆ; ಕರುನಾಡಿನ ಪ್ರಜಾಸಮಸ್ತರು ಬಸವಣ್ಣನವರನ್ನು ತಮ್ಮ ಸಾಂಸ್ಕೃತಿಕ ನಾಯಕರು ಎಂದು ಒಪ್ಪಿಕೊಂಡಿದ್ದಾರೆ.ಹೀಗಿರುವಾಗ ಬಸವಣ್ಣನವರ ಪೇಟೆಂಟ್ ಪಡೆಯ ಹೊರಟಿರುವ ಲಿಂಗಾಯತ ಮಠಾಧೀಶರುಗಳು ದಲಿತರ ಮನೋಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದು ಸರಿಯಲ್ಲ.ಇದು ದಲಿತರಿಗಷ್ಟೇ ನೋವನ್ನುಂಟು ಮಾಡುವ ಸಂಗತಿಯಲ್ಲ,ಸಂವಿಧಾನಬದ್ಧರೆಲ್ಲರಲ್ಲೂ ಆಕ್ರೋಶವನ್ನುಂಟು ಮಾಡುವ ಸಂಗತಿ.
ಸ್ವತಂತ್ರ ಲಿಂಗಾಯತ ಧರ್ಮಸ್ಥಾಪನೆಯ ಹಕ್ಕೊತ್ತಾಯ ಮಂಡಿಸುವ ಲಿಂಗಾಯತ ಮಠಾಧೀಶರುಗಳು ಮೊದಲು ತಮ್ಮ ‘ ನಿಜದಾರಿ’ ಯನ್ನು ಕಂಡುಕೊಳ್ಳಬೇಕಿದೆ.ಲಿಂಗಾಯತ ಧರ್ಮವು ಸಮಸ್ತ ಕನ್ನಡಿಗರನ್ನು ಒಳಗೊಂಡಿದೆಯೇ ಅಥವಾ ಕೇವಲ ನಾಲ್ಕಾರು ಲಿಂಗಾಯತ ಜಾತಿಗಳಿಗೆ ಸೀಮಿತವಾಗಿದೆಯೇ ಎನ್ನುವುದನ್ನು ಲಿಂಗಾಯತ ಮಠಾಧೀಶರುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.ವಚನ ಸಂಸತ್ತಿನ ಬಗ್ಗೆ ಮಾತನಾಡುವವರು ಜಾತಿಯಿಂದ ಬ್ರಾಹ್ಮಣರಾಗಿದ್ದ ಬಸವಣ್ಣನವರು ದಲಿತರಾಗಿದ್ದ ಮಾದಾರ ಚೆನ್ನಯ್ಯನವರನ್ನು ‘ ನನ್ನ ತಂದೆ’ ಎಂದರು,ಡೋಹಾರ ಕಕ್ಕಯ್ಯನವರನ್ನು ‘ ನನ್ನ ಚಿಕ್ಕಪ್ಪ’ ಎಂದರು.ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಡುವವರು ದಲಿತರ ಬಗ್ಗೆ ಯಾವ ನಿಲುವು ಹೊಂದಿದ್ದಾರೆ? ಯಾರಾದರೂ ಲಿಂಗಾಯತ ಸ್ವಾಮಿಗಳು ಬಸವಣ್ಣನವರಂತೆ ಮಾದಾರ ಚೆನ್ನಯ್ಯ,ಡೋಹಾರ ಕಕ್ಕಯ್ಯನವರನ್ನು ಸ್ಮರಿಸುವ ಕಾರ್ಯ ಮಾಡುತ್ತಿದ್ದಾರೆಯೆ?ವಚನಸಂಸತ್ತಿನ ಬಗ್ಗೆ ಪ್ರಸ್ತಾಪಿಸುವವರು ಬಸವಣ್ಣನವರು ತಳಸಮುದಾಯ ನಟುವ ಜಾತಿಗೆ ಸೇರಿದ ಅಲ್ಲಮಪ್ರಭುಗಳನ್ನು ಶೂನ್ಯ ಸಿಂಹಾಸನದ ಅಧ್ಯಕ್ಷರನ್ನಾಗಿ ಮಾಡಿದ್ದರು ಎನ್ನುವುದನ್ನು ಮರೆಯಬಾರದು. ಲಿಂಗಾಯತ ಧರ್ಮದ ಹೋರಾಟಗಾರರು ದಲಿತ ಹಿಂದುಳಿದ ವರ್ಗಗಳಿಗೆ ಸೇರಿದ ಮಠಾಧೀಶರುಗಳನ್ನು ಸಹ ತಮ್ಮೊಟ್ಟಿಗೆ ಕರೆದುಕೊಂಡಿಲ್ಲ! ಇದು ಇವರ ಲಿಂಗಾಯತ ಧರ್ಮದ ಕಲ್ಪನೆ,ಮಿತಿ.ಸಂವಿಧಾನವನ್ನು ಒಪ್ಪಿಕೊಂಡ ಭಾರತೀಯರೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು,ಅದಕ್ಕೆ ಲಿಂಗಾಯತ ಧರ್ಮದ ಹೋರಾಟಗಾರರು ಹೊರತಲ್ಲ,ಲಿಂಗಾಯತ ಮಠಾಧೀಶರುಗಳು ಸಹ ಹೊರತಲ್ಲ.
ಬಸವಣ್ಣನವರು ‘ ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯ’ ಎಂದು ಶಿವಾನುಭವನ್ನು ಆನಂದಿಸುತ್ತ ತಾವು ಕಂಡುಂಡ ಪರಮಾನಂದವನ್ನು,ಪರಮಸತ್ಯವನ್ನು ದಲಿತರು,ಮಹಿಳೆಯರು,ಹಿಂದುಳಿದವರು ಎನ್ನದೆ ಸರ್ವ ಜಾತಿ ಜನಾಂಗಗಳಿಗೆ ನೀಡಿದರು,ಎಲ್ಲರ ಅಂಗಗಳಲ್ಲಿ ಲಿಂಗವನ್ನಿರಿಸಿ ಜನಕೋಟಿಯನ್ನು ‘ ಲಿಂಗಾಯತ’ ರನ್ನಾಗಿಸಿದರು.’ಲಿಂಗ’ ವು ‘ಅಂಗಗುಣ’ ಗಳನ್ನು ಕಳೆಯುವ,ಮಾರ್ಪಡಿಸುವ ಸಾಧನ.ಲಿಂಗದ ಬಲದಿಂದ ಅಂಗಗಳ ಅವಗುಣಗಳನ್ನು ಹಿಂಗಿಸಿಕೊಂಡವನೇ ಲಿಂಗಾಯತ, ಶರಣ.ಲಿಂಗವನ್ನು ಆಯತಮಾಡಿಕೊಂಡವನೇ ಲಿಂಗಾಯತ. ಅಂದರೆ ಅಂಗಗುಣಗಳನ್ನು ಕಳೆದುಕೊಂಡು ಲಿಂಗಗುಣಗಳನ್ನು ಅಳವಡಿಸಿಕೊಂಡವನೇ ಲಿಂಗಾಯತ. ಅವಗುಣಗಳಗಳನ್ನು ಶಿವಗುಣಗಳನ್ನಾಗಿ ಪರಿವರ್ತಿಸಿಕೊಳ್ಳುವವರೇ ಶರಣರು,ಲಿಂಗಾಯತರು.ಇದು ಬಸವಣ್ಣನವರ ಇಷ್ಟಲಿಂಗ ಪರಿಕಲ್ಪನೆ.ಇದನ್ನು ಎಷ್ಟು ಜನ ಲಿಂಗಾಯತ ಹೋರಾಟಗಾರರು ಅರ್ಥ ಮಾಡಿಕೊಂಡಿದ್ದಾರೆ ? ಎಲ್ಲ ಜನರನ್ನು ಒಳಗೊಳ್ಳದೆ ಕೇವಲ ನಾಲ್ಕಾರು ಜಾತಿಗಳ ಕೂಟಕಟ್ಟಿಕೊಂಡು ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಹೋರಾಡುವವರು ಬಸವಣ್ಣನವರ ಸಮಷ್ಟಿ ಕಲ್ಯಾಣದ ತತ್ತ್ವವನ್ನೇನೂ ಎತ್ತಿಹಿಡಿಯುತ್ತಿಲ್ಲ ಎನ್ನುವ ಮಾತನ್ನು ವಿಷಾದದಿಂದಲೇ ಹೇಳಬೇಕಿದೆ.
ಈಗ ಸಂವಿಧಾನದ ಮೇಲಿನ ಬಸವಪ್ರಭಾವ ವಿಷಯಕ್ಕೆ ಬರೋಣ.ಡಾ.ಅಂಬೇಡ್ಕರ್ ಅವರಿಗೆ ಬಸವಣ್ಣನವರ ಬಗ್ಗೆ ತಿಳಿದದ್ದು ಸ್ವಲ್ಪವೆ.ಅಂಬೇಡ್ಕರ್ ಅವರು ಕರ್ನಾಟಕದ ಗಡಿರಾಜ್ಯ ಮಹಾರಾಷ್ಟ್ರದಲ್ಲಿಯೇ ನೆಲೆಗೊಂಡಿದ್ದರೂ ಅಂದಿನ ಕರ್ನಾಟಕದ ವೀರಶೈವ ಲಿಂಗಾಯತ ಮಠಪೀಠಗಳ ಸ್ವಾಮಿಗಳು ಬಸವಣ್ಣನವರನ್ನು ತಮ್ಮ ಮಠಗಳಲ್ಲಿಯೇ ಬಂಧಿಸಿ ಇಟ್ಟಿದ್ದರಿಂದ ಬಸವತತ್ತ್ವವು ವ್ಯಾಪಕವಾಗಿ ಪ್ರಚಾರಗೊಂಡಿರಲಿಲ್ಲ.ಆದರೂ ತಮಗೆ ತಿಳಿದ ಅಲ್ಪಸ್ವಲ್ಪ ಮಾಹಿತಿಯ ಆಧಾರದ ಮೇಲೆಯೇ ಅಂಬೇಡ್ಕರ್ ಅವರು ಬಸವಣ್ಣನವರ ಬಗ್ಗೆ ಗೌರವಾದರ ಭಾವನೆಗಳನ್ನು ಹೊಂದಿದ್ದರು.ಅಂಬೇಡ್ಕರ್ ಅವರು ವಚನ ಸಾಹಿತ್ಯವನ್ನಾಗಲಿ,ಬಸವಾದಿ ಶರಣರ ಬಗೆಗಾಗಲಿ ಓದಿರಲಿಲ್ಲ.ಭಾರತದ ಇತಿಹಾಸ,ಸಮಾಜ ಸಂಸ್ಕೃತಿ, ಧರ್ಮ ,ಅರ್ಥಶಾಸ್ತ್ರ, ರಾಜನೀತಿಗಳ ಅಪಾರ ತಿಳಿವಳಿಕೆ ಯನ್ನು ಅಂಬೇಡ್ಕರ್ ಅವರು ತಮ್ಮ ಸ್ವಂತ ಅಧ್ಯಯನ ಬಲದಿಂದ ಸಂಪಾದಿಸಿದ್ದರು.ಬುದ್ಧನ ಮಾನವೀಯಧರ್ಮದ ನೆಲೆಯಲ್ಲಿ ತಮ್ಮ ಬಾಳನ್ನು ರೂಪಿಸಿಕೊಂಡ ಡಾ. ಬಿ.ಆರ್.ಅಂಬೇಡ್ಕರ್ ಅವರು ಇಂಗ್ಲೆಂಡ್, ಅಮೇರಿಕಾ ಸೇರಿದಂತೆ ನೂರಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ ಸ್ವತಂತ್ರಭಾರತದ ಮುನ್ನಡೆಗೆ,ಅಭಿವೃದ್ಧಿಗೆ ಪೂರಕವಾಗಬಲ್ಲ ನಿಶಿತಮತಿಯ ಬೆಳಕಿನಲ್ಲಿ ಸ್ವತಂತ್ರ ಸಂವಿಧಾನ ಒಂದನ್ನು ರಚಿಸಿದ್ದಾರೆ.ಅಂಬೇಡ್ಕರ್ ಅವರು ಬುದ್ಧನಿಂದ ಹೆಚ್ಚು ಪ್ರಭಾವಿತರಾಗಿದ್ದರು,ಬುದ್ಧನ ವಿಚಾರಗಳ ನೆರಳು ಸಂವಿಧಾನದಲ್ಲಿ ಇರಬಹುದು.ಬಸವಣ್ಣನವರ ಸಾರ್ವಕಾಲಿಕ ಸತ್ತ್ವಯುತ ವಿಚಾರಗಳ ಹೊಳಹೂ ಸಂವಿಧಾನದಲ್ಲಿ ಇರಬಹುದು.ಭಾರತದ ಎಲ್ಲ ಸಂತರು,ಶರಣರ ಉನ್ನತ ಆಲೋಚನೆಗಳ ಪರೋಕ್ಷ ಪ್ರಭಾವವೂ ಸಂವಿಧಾನದಲ್ಲಿ ಇರಬಹುದು.ಹಾಗೆಂದು ಭಾರತದ ಸಂವಿಧಾನವನ್ನು ಅವರಿವರ ಪ್ರಭಾವ ಮುದ್ರೆಯಲ್ಲಿ ಅರಳಿದ ಕೃತಿ ಎಂದು ಅರ್ಥೈಸಲಾಗದು; ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್ ಅವರ ಸ್ವತಂತ್ರಮತಿ ಸ್ಪಷ್ಟ ನಿಲುವು ,ಭಾರತದ ಪುರೋಭಿವೃದ್ಧಿಯ ನೈಜ ಕಾಳಜಿ ಕಳಕಳಿಗಳ ದೂರದೃಷ್ಟಿ ಅಭಿವ್ಯಕ್ತಿಗೊಂಡಿದೆ.
೦೭.೦೯.೨೦೨೫