ಬಾನು ಮುಷ್ತಾಕ್ ಅವರಿಂದಾಗಿ ದೀಪಾ ಬಸ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆಯೇ ಹೊರತು ಅವರ ಸ್ವತಂತ್ರ ಕೃತಿಗಲ್ಲ 

ಮೂರನೇ ಕಣ್ಣು

ಬಾನು ಮುಷ್ತಾಕ್ ಅವರಿಂದಾಗಿ ದೀಪಾ ಬಸ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆಯೇ ಹೊರತು ಅವರ ಸ್ವತಂತ್ರ ಕೃತಿಗಲ್ಲ 

ಮುಕ್ಕಣ್ಣ ಕರಿಗಾರ

ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟನೆಯನ್ನು ಸಹಿಸಿದವರು ತಮ್ಮ ಅಸಹನೆಯನ್ನು ಹಲವು ರೂಪಗಳಲ್ಲಿ ಹೊರಹಾಕುತ್ತಿದ್ದಾರೆ.ಇದೀಗ ಹೊಸದೊಂದು ವರಸೆ ಶುರುವಾಗಿದೆ , ‘ದೀಪಾ ಬಸ್ತಿಯವರನ್ನು ಮೈಸೂರು ದಸರಾ ಉದ್ಘಾಟನೆಗೆ ಏಕೆ ಆಹ್ವಾನಿಸಿಲ್ಲ? ಅವರು ಕೂಡ ಬಾನು ಮುಷ್ತಾಕ್ ಅವರ ಜೊತೆ ಬೂಕರ್ ಪ್ರಶಸ್ತಿ ಪಡೆದಿದ್ದಾರೆ’ ಇದು ಹೊಸ ವಾದ.ದೀಪಾಬಸ್ತಿಯವರು ಬಾನು ಮುಷ್ತಾಕ್ ಅವರ ‘ ಎದೆಯ ಹಣತೆ’ ಕಥಾ ಸಂಕಲನವನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಕ್ಕೆ ಅವರು ಬಾನು ಮುಷ್ತಾಕ್ ಅವರ ಜೊತೆ ಬಹುಮಾನದ ಅರ್ಧಮೊತ್ತವನ್ನು ಹಂಚಿಕೊಂಡಿದ್ದಾರೆ ಬೂಕರ್ ಪ್ರಶಸ್ತಿಯ ನಿಯಮಾವಳಿಗಳಂತೆ.ದೀಪಾ ಬಸ್ತಿಯವರಿಗೆ ಬಾನು ಮುಷ್ತಾಕ್ ಅವರಿಂದಾಗಿಯೇ ಬೂಕರ್ ಪ್ರಶಸ್ತಿಯ ಮಾನ್ಯತೆ ದೊರೆತಿದೆಯೇ ಹೊರತು ಸ್ವಯಂ ಅವರ ಸಾಹಿತ್ಯ ಕೃತಿಗೆ ಈ ಪ್ರಶಸ್ತಿ ದೊರೆತಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

‌ಹಾಗೆಂದು ನಾನು ದೀಪಾ ಬಸ್ತಿಯವರ ಕೊಡುಗೆಯನ್ನು ಕಡೆಗಣಿಸುತ್ತಿಲ್ಲ,ಅನುವಾದಕರಾಗಿ ಅವರ ಮಿತಿಯನ್ನಷ್ಟೇ ಒತ್ತಿ ಹೇಳುತ್ತಿದ್ದೇನೆ.ದೀಪಾ ಬಸ್ತಿಯವರು ಬಾನು ಮುಷ್ತಾಕ್ ಅವರ ‘ ಎದೆಯ ಹಣತೆ’ ಕಥಾ ಸಂಕಲನವನ್ನು ಮೂಲ ಇಂಗ್ಲಿಷ್ ಬರಹ ಎಂಬಂತೆ, ಮರುಹುಟ್ಟು ಪಡೆದಂತೆ ಅನುವಾದಿಸಿದ್ದರಿಂದ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ದೊರೆಯಿತು.ಆದರೆ ಬಾನು ಮುಷ್ತಾಕ್ ಅವರು ‘ ಎದೆಯ ಹಣತೆ’ ಕೃತಿಯನ್ನು ರಚಿಸದೆ ಇದ್ದರೆ ಅಥವಾ ಇಂಗ್ಲಿಷ್ ಗೆ ಅನುವಾದಿಸಲು ಬಾನು ಮುಷ್ತಾಕ್ ಅವರು ಅನುಮತಿ ನೀಡದೆ ಇದ್ದರೆ ದೀಪಾ ಬಸ್ತಿಯವರಿಗೆ ಬೂಕರ್ ಪ್ರಶಸ್ತಿ ಸಿಗುತ್ತಿತ್ತೆ? ಸಾಹಿತ್ಯ ಲೋಕದಲ್ಲಿ ಸೃಷ್ಟಿಶೀಲ ಸಾಮರ್ಥ್ಯವನ್ನುಳ್ಳ ಮೂಲ ಲೇಖಕರಿಗೆ ಮಹತ್ವ ಇದೆಯೇ ಹೊರತು ಅನುವಾದಕರಿಗಲ್ಲ.ಅನುವಾದಕರು ಎಷ್ಟೇ ಪ್ರತಿಭಾವಂತರಿದ್ದರೂ ಸಮರ್ಥವಾಗಿ ಅನುವಾದ ಮಾಡಿದರೂ ಅವರು ಮೂಲ ಲೇಖಕರು ಆಗಲು ಸಾಧ್ಯವಿಲ್ಲ. ಮೂಲ ಲೇಖಕರಿಗೆ ಸಿಗುವ ಸ್ಥಾನಮಾನ ಅನುವಾದಕರಿಗೆ ಸಿಗಲು ಸಾಧ್ಯವಿಲ್ಲ. ಅನುವಾದಕರಷ್ಟೇ ಅಲ್ಲ,ವಿಮರ್ಶಕರು ಕೂಡ ಮೂಲ ಲೇಖಕರ ಕೀರ್ತಿಯಲ್ಲಿ ಪಾಲುದಾರರಾಗುವುದಿಲ್ಲ.ಇದು ಸಾಹಿತ್ಯ ಪ್ರಪಂಚದ ತತ್ತ್ವ,ಸಿದ್ಧಾಂತ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಬಾನು ಮುಷ್ತಾಕ್ ಅವರ ಜೊತೆ ಹಿಂದೂ ಸಮಾಜದವರಾದ ದೀಪಾ ಬಸ್ತಿಯವರು ಸೇರಿ ದಸರಾ ಉದ್ಘಾಟಿಸಿದ್ದರೆ ಸಮಾಧಾನವಾಗುತ್ತಿತ್ತೋ ಏನೋ ಅಪ್ರಬುದ್ಧ ವಿಚಾರವಾದಿಗಳಿಗೆ.ಸಾಹಿತ್ಯದ ಸಂದರ್ಭದಲ್ಲಿ ಅನುವಾದಕರದು ಎರಡನೇ ಸ್ಥಾನವೇ ಹೊರತು ಮೊದಲ ಸ್ಥಾನವಲ್ಲ.ಸೃಷ್ಟಿಶೀಲ ಸಾಹಿತಿ ಸ್ವಯಂ ಪ್ರಕಾಶ ಉಳ್ಳ ಸೂರ್ಯನಾದರೆ ಅನುವಾದಕ ಸೂರ್ಯನ ಬೆಳಕಿನಿಂದ ಶಕ್ತಿಪಡೆಯುವ ಚಂದ್ರನಂತೆ.ಚಂದ್ರ ಬೆಳದಿಂಗಳನ್ನು ಪಸರಿಸಿದರೂ ಅದರ ಮೂಲ ಸೂರ್ಯನೆ! ಸೂರ್ಯನೇ ಇಲ್ಲದೆ ಬೆಳದಿಂಗಳು ಇರಲು ಸಾಧ್ಯವೆ? ಇಲ್ಲಿ ಮತಧರ್ಮದ ಪ್ರಶ್ನೆ ಮುಖ್ಯವಲ್ಲ, ಸಾಹಿತ್ಯಪ್ರತಿಭೆಯ ಪ್ರಶ್ನೆ ಮಹತ್ವದ್ದು.

 

          ‌ ೦೫.೦೯.೨೦೨೫