ಮೂರನೇ ಕಣ್ಣು
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಬೇಡ ಎಂದು ವಿರೋಧಿಸುವವರು ವಿಚಾರಿಸಬೇಕಾದ ಕೆಲವು ಸಂಗತಿಗಳು
ಮುಕ್ಕಣ್ಣ ಕರಿಗಾರ
ಬೂಕರ್ ಪ್ರಶಸ್ತಿಯಿಂದ ಕನ್ನಡದ ಹಿರಿಮೆ- ಗರಿಮೆಗಳನ್ನು ಹೆಚ್ಚಿಸಿದ ಕನ್ನಡದ ಹೆಮ್ಮೆಯ ಕಥೆಗಾರರಾದ ಬಾನು ಮುಷ್ತಾಕ್ ಅವರಿಂದ ಮುಖ್ಯಮಂತ್ರಿಯವರು ನಾಡಹಬ್ಬ ದಸರಾದ ಉದ್ಘಟನೆಗೆ ನಿರ್ಧರಿಸಿದ ದಿನದಿಂದಲೂ ಆ ಕುರಿತು ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಮುಸ್ಲಿಂ ಸಮುದಾಯದ ಧರ್ಮಗುರುಗಳು ಬಾನು ಮುಷ್ತಾಕ್ ಅವರನ್ನು ವಿರೋಧಿಸುವುದನ್ನು ಅರ್ಥಮಾಡಿಕೊಳ್ಳಬಹುದು.ಆದರೆ ಹಿಂದುಪರ ಸಂಘಟನೆಗಳು ಮತ್ತು ಇತರರು ಬಾನು ಮುಷ್ತಾಕ್ ಅವರನ್ನು ವಿರೋಧಿಸುತ್ತಿರುವುದು ವಿಪರ್ಯಾಸದ ಸಂಗತಿ.
ಬಾನು ಮುಷ್ತಾಕ್ ಅವರು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿರಬಹುದು ಆದರೆ ಅವರು ಬರೆಯುತ್ತಿರುವುದು ಕನ್ನಡದಲ್ಲಿ ಎನ್ನುವುದು ಅರ್ಥಮಾಡಿಕೊಳ್ಳಬೇಕು.ಬಾನು ಮುಷ್ತಾಕ್ ಅವರ ‘ ಎದೆಯ ಹಣತೆ’ ಕಥಾ ಸಂಕಲನದ ಇಂಗ್ಲಿಷ್ ಅನುವಾದಕ್ಕೆ ಈ ಪ್ರಶಸ್ತಿ ಬಂದಿದೆ ಎಂದರೆ ಅದು ಕನ್ನಡಿಗರೆಲ್ಲರಲ್ಲಿ ಹೆಮ್ಮೆ,ಅಭಿಮಾನಿಗಳನ್ನು ಉಂಟು ಮಾಡಬೇಕಾದ ಸಂಗತಿ.ಬಾನು ಮುಷ್ತಾಕ್ ಅವರು ಕನ್ನಡದಲ್ಲಿ ಬರೆಯದೆ ಉರ್ದು ಅಥವಾ ಅರೆಬಿಕ್ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದರೆ ವಿರೋಧಿಸಬಹುದಿತ್ತು.ಚಾಮುಂಡೇಶ್ವರಿಯನ್ನು ಕರ್ನಾಟಕದ ನಾಡದೇವಿ ಎನ್ನುತ್ತಲೇ ಕನ್ನಡಕ್ಕೆ ವಿಶ್ವಮಾನ್ಯತೆಯನ್ನು ತಂದಿತ್ತ ಬಾನು ಮುಷ್ತಾಕ್ ಅವರನ್ನು ವಿರೋಧಿಸುವುದು ಸರಿಯಲ್ಲ.ಚಾಮುಂಡೇಶ್ವರಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿರಬಹುದು ಆದರೆ ಚಾಮುಂಡೇಶ್ವರಿ ದೇವಸ್ಥಾನವು ಶೈವಪರಂಪರೆಗೆ ಸೇರಿದ ದೇವಸ್ಥಾನ.ಈಗ ಚಾಮುಂಡಿ ಬೆಟ್ಟ ಎಂದು ಪ್ರಸಿದ್ಧವಾಗಿರುವ ಆ ಕ್ಷೇತ್ರ ಪರಶಿವನ ನೆಲೆಯಾದ ‘ ಮಹಾಬಲಾದ್ರಿ’ ಎಂದು ಹಿಂದೆ ಹೆಸರಾಗಿತ್ತು.ಈಗಿನ ಚಾಮುಂಡೇಶ್ವರಿ ದೇವಸ್ಥಾನದ ಹಿಂದೆ ಮಹಾಬಲ ಶಿವನ ಹಳೆಯ ದೇವಸ್ಥಾನ ಇದೆ ಮಹಾಬಲಾದ್ರಿಯ ಕುರುಹಾಗಿ.ಶೈವಧರ್ಮ ಭಾರತದ ಮೂಲಧರ್ಮ,ಶೈವ ಸಂಸ್ಕೃತಿ ಭಾರತದ ಮೂಲ ಸಂಸ್ಕೃತಿ. ಶೈವ ಧರ್ಮವು ಅಭೇದ ಸಂಸ್ಕೃತಿಯ ವಿಶ್ವಮಾನವ ಸಂಸ್ಕೃತಿ.ಶೈವ ಸಂಸ್ಕೃತಿಯ ಸರ್ವಸಮನ್ವಯ ಭಾವದಿಂದಾಗಿ ಭಾರತದಲ್ಲಿ ಸಾಕಷ್ಟು ಜನ ಸೂಫಿ ಸಂತರುಗಳು ಬೆಳಕಿಗೆ ಬಂದಿದ್ದಾರೆ.ಸಂತ ಶಿಶುನಾಳ ಶರೀಫರ ಹೆಸರನ್ನು ಕೇಳದ ಕನ್ನಡಿಗರಿಲ್ಲ.ಅವರ ಗುರುಗೋವಿಂದ ಭಟ್ಟರು ಶೈವಸಂಸ್ಕೃತಿಯಲ್ಲಿ ಅರಳಿದ ಮಹೋನ್ನತ ಚೇತನರಾಗಿದ್ದರಿಂದಲೇ ಶಿಶುನಾಳ ಶರೀಫರಂತಹ ಸಂತರು ಹೊರಬರಲು ಸಾಧ್ಯವಾಯಿತು. ಗೋವಿಂದ ಭಟ್ಟರು ಶರೀಫರಲ್ಲಿ ‘ ಮುಸ್ಲಿಮ್’ ನನ್ನು ಗುರುತಿಸಲಿಲ್ಲ; ಶರೀಫರು ಗೋವಿಂದಭಟ್ಟರಲ್ಲಿ ‘ ಬ್ರಾಹ್ಮಣ’ ನನ್ನು ಗುರುತಿಸಲಿಲ್ಲ.ಗೋವಿಂದಭಟ್ಟರು ಶರೀಫರಲ್ಲಿ ‘ ಆತ್ಮ’ ನನ್ನು ಕಂಡರು; ಶರೀಫರು ಗೋವಿಂದಭಟ್ಟರಲ್ಲಿ ‘ ವಿಶ್ವವನ್ನು ಬೆಳಗುವ ಶಿವಚೈತನ್ಯ’ ವನ್ನು ಕಂಡರು.ಕನ್ನಡದ ಅನುಭಾವ ಸಾಹಿತ್ಯಕ್ಕೆ ಶಿಶುನಾಳ ಶರೀಫರ ಕೊಡುಗೆ ಬೆಲೆಕಟ್ಟಲಾರದಂತಹದ್ದು. ಗೋವಿಂದ ಭಟ್ಟರು ತಾವು ‘ ಹಿಂದು’ ಎಂದು ಹೇಳಿಕೊಳ್ಳಲಿಲ್ಲ; ಶಿಶುನಾಳ ಶರೀಫರು ‘ಮುಸ್ಲಿಂ’ ಹಣೆಪಟ್ಟಿಯನ್ನು ಅಂಟಿಸಿಕೊಳ್ಳಲಿಲ್ಲ.
ಹಿಂದುಪರ ಸಂಘಟನೆಯವರ ಒಳತೋಟಿಯನ್ನು ಕನ್ನಡಿಗರು ಅರ್ಥಮಾಡಿಕೊಳ್ಳಬೇಕಿದೆ.ಹಿಂದೂ ಸಂಸ್ಕೃತಿ ಎಂದರೆ ( ಇಂದಿನ ಹಿಂದೂ ವಾದಿಗಳಂತೆ) ಅದು ಸಂಸ್ಕೃತ ಭಾಷೆಯ ಹಿರಿಮೆಯ ಸಂಸ್ಕೃತಿ. ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರು ಮತ್ತು ಅವರ ಸಮಕಾಲೀನ ವಚನಕಾರರು ಸಂಸ್ಕೃತವನ್ನು ಧಿಕ್ಕರಿಸಿ ನಾಡಭಾಷೆ ಕನ್ನಡದಲ್ಲಿ ವಚನಗಳನ್ನು ರಚಿಸಿದರು.ಕನಕದಾಸರು,ಪುರಂದರ ದಾಸರಂತಹ ದಾಸವರೇಣ್ಯರುಗಳು ಕನ್ನಡದಲ್ಲಿಯೇ ಕೀರ್ತನೆಗಳನ್ನು ರಚಿಸಿದರು.ಆಂಡಯ್ಯನೆಂಬ ಕವಿ ಒಂದೂ ಸಂಸ್ಕೃತ ಶಬ್ದ ಇಲ್ಲದೆ ‘ ಕಬ್ಬಿಗರ ಕಾವಂ’ ಎನ್ನುವ ಕಾವ್ಯವನ್ನು ಬರೆದು ಸಂಸ್ಕೃತ ಭಾಷೆಯ ಎದುರು ಎದೆಸೆಟೆಸಿ ನಿಂತು ಕನ್ನಡದ ಸತ್ತ್ವ ಪ್ರದರ್ಶಿಸಿದ್ದಾನೆ.ಮುಸ್ಲಿಂ ಸಮುದಾಯದಲ್ಲಿ ಹುಟ್ಟಿಯೂ ಕನ್ನಡದಲ್ಲಿ ಬರೆದು ಕನ್ನಡಕ್ಕೆ ವಿಶ್ವಮಟ್ಟದ ಕೀರ್ತಿಯನ್ನು ತಂದಿತ್ತ ‘ ಕನ್ನಡವಾಗಿಯೇ ಬದುಕುತ್ತಿರುವ’ ಬಾನು ಮುಷ್ತಾಕ್ ಅವರನ್ನು ವಿರೋಧಿಸುವವರು ಕನ್ನಡ ಭಾಷೆ- ಸಂಸ್ಕೃತಿಯನ್ನು ವಿರೋಧಿಸಿದಂತೆ.ವಚನಕಾರರು,ದಾಸರನ್ನು ಅರ್ಥಮಾಡಿಕೊಂಡರೆ ಬಾನು ಮುಷ್ತಾಕ್ ಅವರನ್ನು ವಿರೋಧಿಸುವ ಪ್ರಸಂಗ ಬರುವುದಿಲ್ಲ. ಶಿಶುನಾಳ ಶರೀಫರನ್ನು ಅರ್ಥ ಮಾಡಿಕೊಂಡರೆ ಬಾನು ಮುಷ್ತಾಕ್ ಅವರನ್ನು ವಿರೋಧಿಸಬೇಕು ಎನ್ನಿಸುವುದಿಲ್ಲ.ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸಬಾರದು ಎನ್ನುವವರ ಹಿಂದೆ ಕನ್ನಡ ಭಾಷೆ,ಸಂಸ್ಕೃತಿಗಳ ಹಿತಾಸಕ್ತಿಗಿಂತ ಬೇರೆಯದ್ದೆ ಆದ ಗುಪ್ತಕಾರ್ಯಸೂಚಿ ( hidden agenda) ಒಂದು ಇರುವುದಂತೂ ಸ್ಪಷ್ಟ.
೩೧.೦೮.೨೦೨೫