ಸರಕಾರಿ ಅಧಿಕಾರಿಗಳ ಸೇವಾ ಆನಂದ ಯೋಗ 

ಸರಕಾರಿ ಅಧಿಕಾರಿಗಳ ‘ ಸೇವಾ ಆನಂದ ಯೋಗ’
ಮುಕ್ಕಣ್ಣ ಕರಿಗಾರ 

      ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯ ಸ್ಥಾನಬಲದಿಂದ ಹುಮನಾಬಾದ್ ತಾಲೂಕಾ ಪಂಚಾಯತಿಯ ಆಡಳಿತಾಧಿಕಾರಿ ಆಗಿರುವ ನಾನು ನಿನ್ನೆ ಅಂದರೆ ಅಗಸ್ಟ್ 22,2025 ರ ಶುಕ್ರವಾರದಂದು ಹುಮನಾಬಾದ್ ತಾಲೂಕಿನ ಮಾಸಿಕ ಕೆಡಿಪಿ ಪ್ರಗತಿಪರಿಶೀಲನಾ ಸಭೆ ಜರುಗಿಸಿದೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಪತ್ರಿಕಾ ಮಿತ್ರರುಗಳು ಸಭೆಯಲ್ಲಿ ತಾವು ಕಂಡ ನನ್ನ ಜನಪರ ಕಾಳಜಿ, ಸಾಮಾಜಿಕ ಬದ್ಧತೆ ಮತ್ತು ಅಧಿಕಾರಿಗಳಿಗೆ ನೀಡಿದ ನಿಷ್ಠುರ ಸಲಹೆ ಸೂಚನೆಗಳನ್ನು ಪ್ರಶಂಸಿಸಿ ಬರೆದು ನನ್ನನ್ನು ಪ್ರೋತ್ಸಾಹಿಸಿದ್ದಾರೆ.ಪತ್ರಿಕಾಮಿತ್ರರುಗಳಿಗೆ ಧನ್ಯವಾದಗಳನ್ನರ್ಪಿಸಿ ನಾನು ಈ ಲೇಖನವನ್ನು ಪ್ರಾರಂಭಿಸುವೆ.

ಹುಮನಾಬಾದ್ ತಾಲೂಕಾ ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆಯನ್ನು ಕರೆಯಲು ನಾನು ಸಾಕಷ್ಟು ಮುಂಚಿತವಾಗಿಯೇ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀಮತಿ ದೀಪಿಕಾ ನಾಯ್ಕರ್ ಅವರಿಗೆ ತಿಳಿಸಿದ್ದೆ ಮತ್ತು ಸಭೆಯ ಮುನ್ನಾದಿನವೇ ನಾನು ಪ್ರಗತಿ ವರದಿಗಳನ್ನು ತರಿಸಿಕೊಂಡು ಓದಿ,ಟಿಪ್ಪಣಿ ಮಾಡಿಕೊಂಡಿದ್ದೆ.ಸಭೆಗೆ ಹೋಗುವ ಪೂರ್ವದಲ್ಲಿ ನಮ್ಮ ಜಿಲ್ಲಾ ಪಂಚಾಯತಿಯ ಅಧಿಕಾರಿ ಮಿತ್ರರುಗಳೊಂದಿಗೆ ಕ್ರಿಯಾ ಯೋಜನೆಗಳ ಅನುಮೋದನೆ,ಅನುದಾನ ಬಿಡುಗಡೆಯ ಬಗ್ಗೆ ಚರ್ಚಿಸಿ,ಖಚಿತ ಮಾಹಿತಿ ಪಡೆದಿದ್ದೆ.ಬೇಸರದ ಸಂಗತಿ ಎಂದರೆ ಹುಮನಾಬಾದ್ ತಾಲೂಕಿನ ಬಹಳಷ್ಟು ಜನ ತಾಲೂಕಾ ಮಟ್ಟದ ಅಧಿಕಾರಿಗಳು ಪ್ರಗತಿವರದಿಗಳನ್ನು ಕಾಟಾಚಾರಕ್ಕೆ ಎನ್ನುವಂತೆ ಸಿದ್ಧಪಡಿಸಿದ್ದರು.ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ಸರಕಾರವು ನಿಗದಿಪಡಿಸಿದ ನಿರ್ದಿಷ್ಟ ಪ್ರಗತಿವರದಿಯ ನಮೂನೆಗಳಿವೆ.ಆ ನಮೂನೆಗಳಂತೆ ಪ್ರತಿ ಇಲಾಖೆಯು ಆಯಾ ಆರ್ಥಿಕ ವರ್ಷದಲ್ಲಿ ಇಲಾಖೆಯು ಸಾಧಿಸಬೇಕಿರುವ ಭೌತಿಕ ಮತ್ತು ಆರ್ಥಿಕ ಗುರಿಗಳು,ಅನುದಾನ ಬಿಡುಗಡೆ,ತಿಂಗಳಿನ ಸಾಧನೆ,ವಾರ್ಷಿಕ ಸಾಧನೆಗೆ ಎದುರಾಗಿ ತಿಂಗಳಿನ ಸಾಧನೆ ಮೊದಲಾದ ವಿವರಗಳಿರುತ್ತವೆ.ಈ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿದರೆ ಸಾಕು.ಆದರೆ ನಾನು ಗಮನಿಸಿದಂತೆ ಬಹಳಷ್ಟು ಅಧಿಕಾರಿಗಳು ತಮ್ಮ ‌ಕಛೇರಿಗಳ ಆಧೀನದ ಸಿಬ್ಬಂದಿಯವರು ತಯಾರಿಸಿದ ಪ್ರಗತಿ ವರದಿಗಳಿಗೆ ಸಹಿ ಮಾಡಿದ್ದರೇ ವಿನಃ ಅವರಾರೂ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.ಕೆಲವರು ಭೌತಿಕಗುರಿ ಶೂನ್ಯ ಎಂದು ಬರೆದಿದ್ದರೆ ಮತ್ತೆ ಕೆಲವರು ಅನುದಾನ ಇನ್ನೂ ಬಿಡುಗಡೆಯಾಗಿರುವುದಿಲ್ಲ ಎಂದು ಬರೆದಿದ್ದರು.ಒಬ್ಬಿಬ್ಬರು ಅಧಿಕಾರಿಗಳು ಹಳೆಯ ವರ್ಷಗಳ ಮಾಹಿತಿಯನ್ನು ಈ ಪ್ರಗತಿಪರಿಶೀಲನೆಗೆ ನೀಡಿದ್ದರು! ಅಧಿಕಾರಿಗಳ ಈ ಅಸಡ್ಡೆ ಮನೋಭಾವ ನನ್ನನ್ನು ಕೆರಳಿಸಿತು.

ಸರಕಾರಿ ಅಧಿಕಾರಿಗಳನ್ನು ಜನಪ್ರತಿನಿಧಿಗಳು,ಸಾರ್ವಜನಿಕರು ಮತ್ತು ಸರಕಾರಿ ಸಂಸ್ಥೆಗಳು ಕೆಟ್ಟದ್ದಾಗಿ ನೋಡುತ್ತಿರುವ ಬಗ್ಗೆ ನನಗೆ ಅತೀವ ಬೇಸರ ಇದೆ.ಎಲ್ಲ ಸರಕಾರಿ ಅಧಿಕಾರಿಗಳು ಭ್ರಷ್ಟರು ಇಲ್ಲವೆ ಅದಕ್ಷರು ಆಗಿರುವುದಿಲ್ಲ.ಕೆಲವರ ತಪ್ಪುಗಳಿಗೆ ಇಡೀ ಸರಕಾರಿ ಅಧಿಕಾರಿಗಳನ್ನೇ ಗುರಿ ಮಾಡುತ್ತಿರುವ ಸಮಾಜದ ‘ ದೃಷ್ಟಿದೋಷ’ ದ ಬಗ್ಗೆ ನನಗೆ ಬೇಸರವಿದೆ.ಆದರೆ ಇದರಲ್ಲಿ ಅಧಿಕಾರಿಗಳ ಪಾತ್ರವೂ ಇದೆ ಎನ್ನುವುದನ್ನು ನಾನು ಅಲ್ಲಗಳೆಯುವುದಿಲ್ಲ.ಅದನ್ನೇ ನಾನು ಹುಮನಾಬಾದ್ ತಾಲೂಕಿನ ನಿನ್ನೆಯ ಕೆಡಿಪಿ ಸಭೆಯಲ್ಲಿ ಗಮನಿಸಿದೆ ಮತ್ತು ಅಧಿಕಾರಿಗಳಿಗೆ ನಿಷ್ಠುರ ಸೂಚನೆಗಳನ್ನು ನೀಡಿದೆ.

ನಮ್ಮ ಸರಕಾರಿ ಅಧಿಕಾರಿಗಳು ಒಮ್ಮೆ ಅಧಿಕಾರಿಗಳಾಗಿ ಆಯ್ಕೆಗೊಂಡರೋ ತೀರಿತು,ಅವರು ತಮ್ಮನ್ನು ತಾವು ‘ಸರ್ವಜ್ಞರು’, ‘ಸರ್ವಶಕ್ತರು’ ಎಂದು ಭಾವಿಸಿಕೊಳ್ಳುತ್ತಾರೆ.ಸರಕಾರಿ ಅಧಿಕಾರಿ ಆಗಲು ಕಷ್ಟಪಟ್ಟು ಓದಿದವರು ಅಧಿಕಾರಿಗಳು ಆದೊಡನೆ ಓದುವುದನ್ನೇ ಮರೆಯುತ್ತಾರೆ.ಕಛೇರಿಗೆ ಬಂದ ಪತ್ರೋತ್ತರಗಳ ಟಪಾಲು ಸಹ ನೋಡದಷ್ಟು ಬ್ಯುಸಿನಟಿಸುತ್ತಾರೆ.ಕಡತಗಳನ್ನು ಸರಿಯಾಗಿ ಓದುವುದಿಲ್ಲ,ಪತ್ರಗಳು,ಆದೇಶಗಳು,ಅಧಿಕೃತ ಜ್ಞಾಪನಗಳನ್ನು ಸರಿಯಾಗಿ ಸಿದ್ಧಪಡಿಸಿದ್ದಾರೆಯೆ,ಸರಕಾರಿ ನೀತಿ- ನಿರ್ದೇಶನಗಳ ಉಲ್ಲೇಖ ಇದೆಯೇ ಎಂಬಿತ್ಯಾದಿ ಯಾವ ವಿಷಯಗಳನ್ನು ಗಮನಿಸುವುದಿಲ್ಲ.ಅವರು ಗಮನಿಸುವುದು ಇಷ್ಟೆ,ತಾವು ಸಹಿ ಮಾಡುವ ಸ್ಥಳದ ಕೆಳಗೆ ತಮ್ಮ ಕಛೇರಿಯ ವಿಷಯ ನಿರ್ವಾಹಕ,ಮ್ಯಾನೇಜರ್ ಮತ್ತು ಆಧೀನದ ಅಧಿಕಾರಿಗಳು ಅವರುಗಳ ಚಿಕ್ಕಸಹಿ ಮಾಡಿದ್ದಾರೆಯೇ ಎನ್ನುವುದನ್ನು ಮಾತ್ರ! ಕಛೇರಿಯ ಸಿಬ್ಬಂದಿಯವರು ಚಿಕ್ಕರುಜು ಮಾಡಿದ್ದರೆ ಮುಗಿಯಿತು ಈ ಅಧಿಕಾರಿ ಮಹಾನುಭಾವರುಗಳು ಹಿಂದೆ ಮುಂದೆ ನೋಡದೆ ಸಹಿಮಾಡಿಯೇ ಬಿಡುತ್ತಾರೆ! ಕಛೇರಿಯ ಆಧೀನದ ಸಿಬ್ಬಂದಿಯವರ ಮೇಲೆ ಅಷ್ಟು ವಿಶ್ವಾಸವೋ ಅಥವಾ ಚಿಕ್ಕರುಜುಮಾಡಿದವರು ಹೊಣೆಗಾರರಾಗುತ್ತಾರೆ ಎನ್ನುವ ಭ್ರಮೆಯೋ ನಾನರಿಯೆ.ಇದು ಅಧಿಕಾರಿಗಳಾದವರಿಗೆ ಸಲ್ಲದ ನಡೆ.ಸರಕಾರಿ ಕಛೇರಿಗಳ ಗುಮಾಸ್ತರುಗಳು,ಆಧೀನದ ಸಿಬ್ಬಂದಿಯವರು ಇನ್ನೂ ಓಬಿರಾಯನ ಕಾಲದಲ್ಲೇ ಇದ್ದಾರೆ.ಅವರ ಬರೆದ ಟಿಪ್ಪಣಿ, ಒತ್ತಿದ ಚಿಕ್ಕರುಜುಗಳನ್ನು ನಂಬುವ ಅಧಿಕಾರಿಗಳು ತಮ್ಮನ್ನು ತಾವು ಆತ್ಮವಂಚನೆ ಮಾಡಿಕೊಳ್ಳುತ್ತಾರೆ.ನಾವು ಸಮರ್ಥ ಅಧಿಕಾರಿಗಳು ಎನ್ನಿಸಿಕೊಳ್ಳಬೇಕಾದರೆ ನಾವು ಕೂಡ ಕಾಲಮಾನದ ಅವಶ್ಯಕತೆಗೆ ತಕ್ಕಂತೆ ಅಪ್ ಡೇಟ್ ಆಗಬೇಕಾಗುತ್ತದೆ,ಸರಕಾರದ ನೀತಿ- ನಿರೀಕ್ಷೆಗಳಿಗೆ ಅನುಗುಣವಾಗಿ ನಮ್ಮ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ.ಉದಾಹರಣೆಗೆ ಹೇಳುವುದಾದರೆ ನಾನು ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನನ್ನ ಸರಕಾರಿ ವೃತ್ತಿ ಜೀವನ ಪ್ರಾರಂಭಿಸಿದ 1997 ರ ವರ್ಷಗಳಿಗೂ ಇಂದಿನ ಅತ್ಯಾಧುನಿಕ ದಿನಮಾನಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ.ನಾನು ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾಗ ಮೊಬೈಲ್ ಫೋನ್ ಇರಲಿಲ್ಲ, ಕಛೇರಿಗಳಲ್ಲಿ ಲ್ಯಾಂಡ್ ಫೋನ್ ಗಳಿದ್ದವು,ಟೈಪ್ ರೈಟರ್ ಗಳಿದ್ದವು,ಜೆರಾಕ್ಸ್ ಮಶಿನ್ ಗಳಿದ್ದವು. ನಂತರ ಸಣ್ಣ ಹ್ಯಾಂಡ್ ಫೋನ್ಗಳು ಬಂದವು,ಕಲರ್ ಜೆರಾಕ್ಸ್, ಪ್ರಿಂಟರ್,ಮೊಬೈಲ್,ಕಂಪ್ಯೂಟರ್ ಗಳು ಬಂದವು.ಈಗ ಎಲ್ಲ ಕಛೇರಿಗಳಲ್ಲಿ ಇ ಆಫೀಸ್ ನ ಮೂಲಕವೇ ಕಛೇರಿಗಳ ಆಡಳಿತ ನಡೆಯುತ್ತಿದೆ.ನಾನು ಸರಕಾರಿ ಸೇವೆಗೆ ಸೇರಿದಾಗ ಈ ಆಫೀಸ್ ಸೇರಿದಂತೆ ಆಡಳಿತದಲ್ಲಿ ಆಧುನಿಕಪದ್ಧತಿಗಳು ಇರಲಿಲ್ಲ ಹಾಗಾಗಿ ನಾನು ಈ ನೂತನ ಆವಿಷ್ಕಾರಗಳಿಗೆ ಒಗ್ಗಿಕೊಳ್ಳುವುದಿಲ್ಲ ಎನ್ನಲು ಆಗುತ್ತದೆಯೆ? ನಾನು ಹಾಗೊಂದು ವೇಳೆ ಹೇಳಿದರೆ ನಾನು ಸರಕಾರಿ ಸೇವೆಯಲ್ಲಿ ನಿಷ್ಪ್ರಯೋಜಕ ವ್ಯಕ್ತಿಯಾಗುತ್ತಾನೆ,ಔಟ್ ಡೇಟೆಡ್ ಆಗುತ್ತೇನೆ.ಜಗತ್ತು ಒಂದು ಮನೆಯಾಗಿ ಮಾರ್ಪಟ್ಟ ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಕಛೇರಿಗಳಾಚೆಯೂ ಕೆಲಸ ಕಾರ್ಯಗಳನ್ನು ಮಾಡಿ,ಗುರಿ ಸಾಧನೆ ಮಾಡುವ ಅವಕಾಶ ಇದೆ.ಎಲ್ಲೇ ಇದ್ದರೂ ನಾವು ಕಛೇರಿಗಳ ಕೆಲಸ ಕಾರ್ಯಗಳನ್ನು ಮಾಡುವಷ್ಟು ವೈಜ್ಞಾನಿಕವಾಗಿ ಮುಂದುವರೆದಿದೆ ನಮ್ಮ ಆಡಳಿತ ವ್ಯವಸ್ಥೆ. ಹಾಗಿದ್ದಾಗ ನಾವು ಕ್ಷೇತ್ರಭೇಟಿಯಲ್ಲಿದ್ದಾಗ,ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಅಥವಾ ಫ್ರೀ ಇದ್ದಾಗ ನಮ್ಮ ಮೊಬೈಲ್ ಗಳು,ಲ್ಯಾಪ್ ಟಾಪ್ ಗಳ ಮೂಲಕ ನಮ್ಮ ಕಛೇರಿ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದು.ಇದರಿಂದ ಆಡಳಿತದ ಗತಿ ತೀವ್ರಗೊಳ್ಳುತ್ತದೆ,ಸಾರ್ವಜನಿಕರ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುತ್ತವೆ,ಸರಕಾರದ ಅಭಿವೃದ್ಧಿ ಯೋಜನೆಗಳು,ಕಾರ್ಯಕ್ರಮಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳುತ್ತವೆ,ಸರಕಾರದ ಅನುದಾನ ನಿಗದಿತ ಅವಧಿಯಲ್ಲಿ ಖರ್ಚಾಗುತ್ತದೆ, ಅನುದಾನ ಲ್ಯಾಪ್ಸ್ ಆಗುವ ಪ್ರಮೇಯವೇ ಬರುವುದಿಲ್ಲ. ಇದು ನಮ್ಮ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕಾದ ಬಹುಮುಖ್ಯ ಸಂಗತಿ.

ಸರಕಾರಿ ಅಧಿಕಾರಿಗಳ ಪ್ರತಿ ಹುದ್ದೆಗೂ ಅದರದ್ದೇ ಆದ ಜವಾಬ್ದಾರಿ,ಕಾರ್ಯಕ್ಷೇತ್ರ ಇರುತ್ತದೆ.ಸರಕಾರಿ ಅಧಿಕಾರಿಗಳು ತಾವು ಕುಳಿತುಕೊಳ್ಳುವ ಖುರ್ಚಿಗಳ ನೆಲೆ ಬೆಲೆ ಮೊದಲು ತಿಳಿದುಕೊಳ್ಳಬೇಕು.ನಾವು ಅಧಿಕಾರಿ ಎಂಬ ಹುಂಬಹಮ್ಮಿನಲ್ಲಿ ತಿರುಗಿದರೆ ಆಗದು,ನನ್ನ ಖುರ್ಚಿಯ ಜವಾಬ್ದಾರಿ ಏನು,ನಾನು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆಯೇ ಎನ್ನುವುದನ್ನು ಆ ಖುರ್ಚಿಗಳ ಮೇಲೆ ಕುಳಿತುಕೊಳ್ಳುವ ಸರಕಾರಿ ಅಧಿಕಾರಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.ಸರಕಾರಿ ಕಛೇರಿಗಳ ನಿರ್ಜೀವ ಖುರ್ಚಿಗಳಿಗೆ ಬೆಲೆ ಬರುವುದು ಆ ಖುರ್ಚಿಗಳ ಮೇಲೆ ಕುಳಿತುಕೊಳ್ಳುವ ವ್ಯಕ್ತಿಗಳ ‘ಜೀವಂತಿಕೆಯಭಾವ’ ದಿಂದ.ಸರಕಾರಿ ಖುರ್ಚಿಗಳ ಮೇಲೆಗಳ ಮೇಲೆ ‘ ಜೀವಚ್ಛವಗಳು’ ಕುಳಿತರೆ ನಿರ್ಜೀವ ಖುರ್ಚಿಯ ಶವಸ್ವರೂಪ ಪ್ರಕಟಗೊಳ್ಳುತ್ತದೆ. ಜನಪರ ಕಾಳಜಿಯುಳ್ಳ,ದಕ್ಷ ಅಧಿಕಾರಿಗಳ ಸಂವೇದನಾಶೀಲನಡತೆಯಿಂದ ಜೀವಪಡೆಯುವ ಸರಕಾರಿ ಖುರ್ಚಿಗಳು ಅನರ್ಹ ಮತ್ತು ಅದಕ್ಷ ಅಧಿಕಾರಿಗಳ ಕಾರಣದಿಂದ ಜಡತ್ವಪಡೆಯುತ್ತವೆ.

‌ ಸರಕಾರಿ ಅಧಿಕಾರಿಗಳು ಸಮಯ ಪ್ರಜ್ಞೆಯನ್ನು ಎತ್ತಿಹಿಡಿಯಬೇಕು.ಕಛೇರಿಗಳಿಗೆ ಬೆಳಿಗ್ಗೆ ಸರಿಯಾದ ಸಮಯಕ್ಕೆ ಹೋಗಬೇಕು,ಕಛೇರಿಗಳಲ್ಲಿ ಕುಳಿತು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕು,ಕಛೇರಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಸರಕಾರಿ ಕಛೇರಿಗಳ ಕರ್ತವ್ಯದ ಅವಧಿ ಬೆಳಿಗ್ಗೆ ಹತ್ತರಿಂದ ಸಂಜೆ ಐದುಘಂಟೆಯವರೆಗೆ ಇದ್ದು ಕಛೇರಿಗೆ ಹಾಜರಾಗಲು ಹತ್ತುನಿಮಿಷಗಳ ‘ ಲೀನ್ ಪೀರಿಯಡ್’ ಪಡೆಯಬಹುದೇ ಹೊರತು ‘ ಯಾವಾಗ ಕಛೇರಿಗೆ ಬಂದರೂ ನಡೆಯುತ್ತದೆ’ ಎನ್ನುವ ಸಲ್ಲದ ಮನೋಭಾವ ರೂಢಿಸಿಕೊಳ್ಳಬಾರದು.ಕಛೇರಿಗಳ ಮುಖ್ಯಸ್ಥರುಗಳೇ ಸರಿಯಾದ ಸಮಯಕ್ಕೆ ಕಛೇರಿಗಳಿಗೆ ಬರದೆ ಇದ್ದರೆ ಅವರ ಆಧೀನದ ಅಧಿಕಾರಿಗಳು, ಸಿಬ್ಬಂದಿಯವರು ಸಮಯಕ್ಕೆ ಸರಿಯಾಗಿ ಕಛೇರಿಗಳಿಗೆ ಹಾಜರಾಗುವುದಿಲ್ಲ,ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸುವುದಿಲ್ಲ.ಕೆಲವು ಜನ ಹಿರಿಯ ಅಧಿಕಾರಿಗಳು 24 ಘಂಟೆಗಳು ಕಾರ್ಯನಿರ್ವಹಿಸುವ ಅನಿವಾರ್ಯತೆ ಇರುವುದರಿಂದ ಅಂತಹ ಅಧಿಕಾರಿಗಳಿಗೆ ‘ ಗೃಹಕಛೇರಿ’ ( Home Office) ಸೌಲಭ್ಯ ಕಲ್ಪಿಸಲಾಗಿದೆಯೇ ಹೊರತು 24 ಘಂಟೆಗಳ ಕಾಲ ಮನೆಯಲ್ಲಿಯೇ ಇದ್ದು ಕಡತಗಳನ್ನು ಮನೆಯಿಂದ ವಿಲೇವಾರಿ ಮಾಡಿ ಎಂದಲ್ಲ.ಗೃಹಕಛೇರಿಯನ್ನು ಕಡಿಮೆ ಬಳಸಿದಷ್ಟೂ ಅಧಿಕಾರಿಗಳು ದಕ್ಷರಾಗಿರುತ್ತಾರೆ,ಪ್ರಾಮಾಣಿಕರಾಗಿರುತ್ತಾರೆ.ಅಧಿಕಾರಿಗಳ ಪ್ರಾಮಾಣಿಕತೆಯ ಮೌಲ್ಯಮಾಪನಗಳಲ್ಲೊಂದು ಅವರು ಎಷ್ಟು ಕಡಿಮೆ ಅಥವಾ ಕ್ವಚಿತ್ ಆಗಿ ಗೃಹಕಛೇರಿಯಿಂದ ಕಾರ್ಯನಿರ್ವಹಿಸುತ್ತಾರೆ ಎನ್ನುವುದು. ಕಛೇರಿಗಳಲ್ಲಿ ಕ್ಲಿಯರ್ ಮಾಡಬೇಕಾದ ಕಡತಗಳನ್ನು ಮನೆಗೆ ತೆಗೆದುಕೊಂಡು ಹೋಗುವುದು ಅಧಿಕಾರಿಗಳ ದಕ್ಷತೆಯನ್ನು ಪ್ರಶ್ನಿಸುವುದಲ್ಲದೆ ಅಧಿಕಾರಿಗಳ ಬಗ್ಗೆ ಅನುಮಾನಹುಟ್ಟುಹಾಕುತ್ತದೆ.ಸಂಜೆ ಸ್ವಲ್ಪ ತಡವಾದರೂ ಕಛೇರಿಗಳಲ್ಲೇ ಕಡತಗಳನ್ನು ಕ್ಲಿಯರ್ ಮಾಡಬಹುದಲ್ಲ.ಕಛೇರಿ ಕಡತಗಳನ್ನು ಮನೆಗೆ ಒಯ್ಯುವ ಅಭ್ಯಾಸ ಉಳ್ಳ ಅಧಿಕಾರಿಗಳು ಮನೆಗಳ ನೆಮ್ಮದಿಯನ್ನು ಕೂಡ ಹಾಳು ಮಾಡುತ್ತಾರೆ.ಒಬ್ಬ ಉತ್ತಮ ಸರಕಾರಿ ಅಧಿಕಾರಿ ಆಗುವುದು ಎಷ್ಟು ಮುಖ್ಯವೋ ಮನೆಗಳಲ್ಲಿ ಹೆಂಡತಿಗೆ ಉತ್ತಮ ಗಂಡನಾಗಿ,ಮಕ್ಕಳಿಗೆ ಉತ್ತಮ ತಂದೆಯಾಗಿ ಕರ್ತವ್ಯ ನಿರ್ವಹಿಸುವುದೂ ಅಷ್ಟೇ ಮುಖ್ಯ.ಕಛೇರಿಯ ಕಡತಗಳನ್ನು ಮನೆಗೆ ಒಯ್ದು ನಿಮ್ಮ ಟೆನ್ ಶನ್ ಅನ್ನು ಮನೆಯಲ್ಲೂ ಹಂಚುವ ಮೂಲಕ ಮನೆಗಳ ಶಾಂತಿ,ನೆಮ್ಮದಿ ಕದಡಲು ಕಾರಣರಾಗುತ್ತೀರಿ.ಕಡತಗಳನ್ನು ಪೆಂಡಿಂಗ್ ಇಟ್ಟುಕೊಳ್ಳದೆ ಅಂದಂದಿನ ಕಡತಗಳನ್ನು ಅಂದಂದೇ ತೀರುವಳಿ ಮಾಡಿದರೆ ಟೆನ್ ಶನ್ ಇಲ್ಲವೆ ಉದ್ವೇಗಕ್ಕೆ ಒಳಗಾಗುವ, ಬಿ.ಪಿ,ಶುಗರ್ ಗಳಿಗೆ ತುತ್ತಾಗುವ ಸಂದರ್ಭಗಳು ಬರುವುದಿಲ್ಲ.

‌ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳನ್ನು ಪಡೆಯುವ ಸರಕಾರಿ ಅಧಿಕಾರಿಗಳು ಹೃದಯವಂತರಾಗಿರಬೇಕು.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು.ತಮ್ಮ ಕಛೇರಿಗಳಿಗೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಸಂಯಮದಿಂದ,ಸಮಚಿತ್ತದಿಂದ ಆಲಿಸಬೇಕು.ತ್ವರಿತವಾಗಿ ಜನರ ಕೆಲಸಕಾರ್ಯಗಳನ್ನು ಮಾಡಿಕೊಡಬೇಕು.ತಮ್ಮನ್ನು ಭೇಟಿ ಮಾಡಲು ಬರುವ ಗ್ರಾಮೀಣಪ್ರದೇಶದ ಜನರು ಮತ್ತು ಜನಸಾಮಾನ್ಯರ ಬಗ್ಗೆ ಗೌರವಾದರದ ಭಾವನೆಗಳಿರಬೇಕು ಸರಕಾರಿ ಅಧಿಕಾರಿಗಳಲ್ಲಿ.ವಿ ಐ ಪಿ ಗಳು ಫೋನಿನಲ್ಲಿ ಹೇಳಿದ ಕೆಲಸಕಾರ್ಯಗಳನ್ನು ಆ ಕ್ಷಣದಲ್ಲೇ ಮಾಡಿಕೊಡುವ,ಗಣ್ಯಾತಿಗಣ್ಯರುಗಳ ಮನೆಗಳಿಗೆ ಹೋಗಿ ಅವರು ಹೇಳಿದಲ್ಲೆಲ್ಲ ಹೆಬ್ಬೆಟ್ಟು ಒತ್ತುವ ಅಧಿಕಾರಿಗಳು ಕಛೇರಿಗಳಿಗೆ ತಮ್ಮನ್ನು ಕಾಣಲು ಬರುವ ಜನರ ಕಷ್ಟಕಾರ್ಪಣ್ಯಗಳಿಗೆ ಕರಗದ ‘ಕಲ್ಲುಹೃದಯಿ’ ಗಳಾಗುತ್ತಾರೆ,ಜಡದೇಹಿಗಳಾಗುತ್ತಾರೆ ಎನ್ನುವುದು ನೋವಿನ ಸಂಗತಿ.

ಸರಕಾರಿ ಅಧಿಕಾರಿಗಳು ಅವರವರ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿಯೇ ಸಾಕಷ್ಟು ಜನೋಪಯೋಗಿ ಕೆಲಸ ಕಾರ್ಯಗಳನ್ನು ಮಾಡಲು ಖಂಡಿತ ಅವಕಾಶ ಇದೆ.ಪ್ರತಿಯೊಂದು ಇಲಾಖೆಯಲ್ಲಿಯೂ ಹತ್ತಾರೂ ಜನೋಪಯೋಗಿ ಕಾರ್ಯಕ್ರಮ,ಯೋಜನೆಗಳಿವೆ.ಆ ಯೋಜನೆಗಳ ಲಾಭ ಅರ್ಹ ಜನತೆ,ಜನಸಮುದಾಯಕ್ಕೆ ತಲುಪಿಸುವ ಕಾರ್ಯವನ್ನು ಮಾಡಬೇಕು ಸರಕಾರಿ ಅಧಿಕಾರಿಗಳು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪ್ರಾಮಾಣಿಕ ಇಚ್ಛಾಶಕ್ತಿ ಮತ್ತು ಜನತೋದ್ಧಾರದ ಬದ್ಧತೆಯಿಂದ ಕೆಲಸ ಮಾಡಿದರೆ ನಮ್ಮ ಗ್ರಾಮಗಳನ್ನು ಸುಖಿಗ್ರಾಮಗಳನ್ನಾಗಿ,ಗ್ರಾಮರಾಜ್ಯಗಳನ್ನಾಗಿ ಮಾಡಬಹುದು. ಕಂದಾಯ ಇಲಾಖೆಯ ತಳಮಟ್ಟದ ಅಧಿಕಾರಿಗಳು ಜನಸೇವೆಯ ಬದ್ಧತೆಯೊಂದಿಗೆ ಕೆಲಸ ಮಾಡಿದರೆ ಸಶಕ್ತಗ್ರಾಮಗಳನ್ನು ರೂಪಿಸಬಹುದು.ಪೋಲೀಸ ಇಲಾಖೆಯ ಅಧಿಕಾರಿಗಳು ಜನಮುಖಿಯಾಗಿ ಕೆಲಸ ಮಾಡಿದರೆ ಪ್ರತಿಗ್ರಾಮವೂ ಅಪರಾಧಮುಕ್ತ ನೆಮ್ಮದಿಯ ನೆಲೆಯಾಗಬಹುದು.ಆಹಾರ ಮತ್ತು ನಾಗರಿಕ ಪೂರೈಕೆಯ ಅಧಿಕಾರಿಗಳಲ್ಲಿ ಜನಸಾಮಾನ್ಯರೂ ನಮ್ಮಂತೆ ಜೀವ ನೋವುಗಳನ್ನುಳ್ಳ ಜೀವಂತ ಮನುಷ್ಯರು ಎನ್ನುವ ಸಂವೇದನೆ ಜಾಗ್ರತಗೊಂಡರೆ ಸಶಕ್ತಗ್ರಾಮಭಾರತವನ್ನು ಕಟ್ಟಬಹುದು. ಸ್ಟೆತಾಸ್ಕೋಪುಗಳು,ಅತ್ಯಾಧುನಿಕ ಸೌಲಭ್ಯಗಳು- ಉಪಕರಣಗಳಿಂದ ಜನರ ಆರೋಗ್ಯಮಟ್ಟವನ್ನು ಅಳೆಯುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಜನರ ನಾಡಿಬಡಿತ ಮತ್ತು ನಾಡಿಮಿಡಿತಗಳನ್ನು ಅರ್ಥಮಾಡಿಕೊಂಡರೆ ಆರೋಗ್ಯವಂತ ಭಾರತವನ್ನು ಕಟ್ಟಬಹುದು. ಪ್ರತಿಯೊಬ್ಬ ಶಿಕ್ಷಕ ಪ್ರಾಮಾಣಿಕನಾಗಿ ತನ್ನ ಕರ್ತವ್ಯ ನಿರ್ವಹಿಸಿದರೆ ಪ್ರಜ್ಞಾವಂತ ಪ್ರಜೆಗಳ ಪ್ರಬುದ್ಧ ಭಾರತ ನಿರ್ಮಾಣ ಕಷ್ಟಸಾಧ್ಯದ ಸಂಗತಿ ಏನಲ್ಲ.ಈ ಕೆಲವೇ ಇಲಾಖೆಗಳು ಮಾತ್ರವಲ್ಲ, ಎಲ್ಲ ಸರಕಾರಿ ಇಲಾಖೆಗಳಲ್ಲಿ ಜನಮುಖಿಯಾಗಿ,ಜನಪರವಾಗಿ ಮಾಡಬೇಕಾದ ಸಾಕಷ್ಟು ಕೆಲಸ ಕಾರ್ಯಗಳಿವೆ.ನಮ್ಮ ಅಧಿಕಾರಿಗಳು ಎಷ್ಟು ಹೃದಯವಂತರಾಗುತ್ತಾರೋ ಅಷ್ಟೂ ಆ ಇಲಾಖೆ ಜನರ ಹತ್ತಿರದ ಇಲಾಖೆಯಾಗುತ್ತದೆ,ಜನರ ಇಲಾಖೆಯೇ ಆಗುತ್ತದೆ.

ಪ್ರತಿಯೊಬ್ಬ ಸರಕಾರಿ ಅಧಿಕಾರಿ ಅವರವರ ಇಲಾಖೆಗೆ ನಿಗದಿಪಡಿಸಿದ ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸುವುದಷ್ಟೇ ಸೇವೆಯ ಸಾರ್ಥಕತೆ ಎಂದು ಭಾವಿಸಬಾರದು.ಸರಕಾರಿ ಅಧಿಕಾರಿಗಳಾಗಿಯೂ ನಾವು ಸಮಾಜಜೀವಿಗಳು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ನಮ್ಮಲ್ಲೂ ಸಾಮಾಜಿಕ ಬದ್ಧತೆ ಇರಬೇಕು.ಸರಕಾರಿ ಅಧಿಕಾರಿಗಳಾಗಿ ನಾವು ಬರಬೀಳಲಿ,ಪ್ರವಾಹ ಬರಲಿ ಋತುಮಾನ ಹೇಗೇ ಇರಲಿ ತಿಂಗಳು ಆದೊಡನೆ ಸಂಬಳ ಪಡೆಯುತ್ತೇವೆ.ಕೈತುಂಬ ಸಂಬಳ ಪಡೆಯುವ ನಮಗೆ ನಮ್ಮಲ್ಲಿ ನೆರೆಹೊರೆಯ ಬಡವರು,ದುರ್ಬಲರ ಬಗ್ಗೆ ಅಂತಃಕರಣ ಜಾಗ್ರತವಾಗಿರಬೇಕು.ನಮ್ಮ ಸಂಬಳ- ಸಂಭಾವನೆಯ ಅತಿಸ್ವಲ್ಪಭಾಗವಾದರೂ ಇಂತಹ ದೀನದುರ್ಬಲರ ಒಳಿತಿಗಾಗಿ ಖರ್ಚುಮಾಡಬೇಕು.ಸರಕಾರ ಎಷ್ಟೇ ಸೌಲಭ್ಯಗಳನ್ನು ನೀಡಿದರೂ ಇಂದಿಗೂ ಬರಿಗಾಲುಗಳಲ್ಲಿ ಶಾಲೆಗಳಿಗೆ ಹೋಗುವ ಬಡಮಕ್ಕಳುಗಳು ಇದ್ದಾರೆ,ಬಟ್ಟೆಯಿಲ್ಲದೆ ತಿರುಗುವಬರಿಮೈಯ ಬಡವರುಗಳು ಇದ್ದಾರೆ ,ತುತ್ತು ಅನ್ನಕ್ಕೂ ಗತಿಯಿಲ್ಲದ ಹಸಿವಿನ ಬವಣೆಪೀಡಿತರೂ ಇದ್ದಾರೆ, ರೋಗಪೀಡಿತರಾಗಿ ಹರಕುಗುಡಿಸಲು,ಮುರುಕು ಮನೆಗಳಲ್ಲಿ ಬಿದ್ದು ಹೊರಳಾಡುತ್ತ ಜೀವಂತ ನರಕ ಅನುಭವಿಸುವ ಜನರೂ ನಮ್ಮೊಂದಿಗೆ ಬದುಕುತ್ತಿದ್ದಾರೆ‌.ಅಂಥಹವರ ಯಾತನಾಮಯ ಬದುಕಿಗೆ ಒಂದಷ್ಟು ನೆರವುನೀಡಿ ಅವರನ್ನು ಸಂಕಟಮುಕ್ತರನ್ನಾಗಿಸುವುದು ಸೇವೆಯ ಸಾರ್ಥಕತೆಯಲ್ಲವೆ? ಇದೇ ಬಸವಣ್ಣನವರ ‘ ದಾಸೋಹಪರಿಕಲ್ಪನೆ’.ಇದುವೆ ಮಹಾತ್ಮಗಾಂಧೀಜಿಯವರ ‘ಟ್ರಸ್ಟಿಶಿಪ್ ಪರಿಕಲ್ಪನೆ’. ಇಂತಹ ಹೃದಯವಂತಿಕೆಯನ್ನು ಸರಕಾರಿ ಅಧಿಕಾರಿಗಳಾದ ನಾವೇಕೆ ಮೈಗೂಡಿಸಿಕೊಳ್ಳಬಾರದು ?

‌ಇದೆಲ್ಲ ಹೇಳಲು ಸುಲಭ,ಆಚರಿಸಲು ಕಷ್ಟ ಎನ್ನಬಹುದು ಕೆಲವರು‌.ಓದಲು ಚೆಂದಮಾತ್ರವಾದ ರಂಜನೀಯ ಕಥೆ ಎನ್ನಿಸಲೂಬಹುದು ಮತ್ತೆ ಕೆಲವರಿಗೆ.ಆದರೆ ಇದು ಸಾಧ್ಯ! ನನ್ನ ಬಾಳ ಅನುಭವವೇ ಇದಕ್ಕೆ ನಿದರ್ಶನ.1997 ರಲ್ಲಿ ಸರಕಾರಿ ಅಧಿಕಾರಿಯಾಗಿ ಆಯ್ಕೆಯಾದ ನಾನು ಇದುವರೆಗೆ ನೂರಾರು ಜನರನ್ನು ಸರಕಾರಿ ಅಧಿಕಾರಿಗಳನ್ನಾಗಿ ಮಾಡಲು ಸ್ಫೂರ್ತಿಯಾಗಿದ್ದೇನೆ; ನೂರಾರು ಜನ ಸರಕಾರಿ ನೌಕರರಾಗಲು ನೆರವು ನೀಡಿದ್ದೇನೆ.ಅಸಂಖ್ಯಾತ ಜನರು ಸ್ವಾವಲಂಬಿಗಳಾಗಿ ಬದುಕುವ ಸ್ಫೂರ್ತಿ ಪ್ರೇರಣೆಗಳನ್ನು ನೀಡಿದ್ದೇನೆ.ಸರಕಾರಿ ಸೇವೆಯ ಮೊದಲ ತಿಂಗಳಿನ ಸಂಬಳದಿಂದ ಈ ಇಪ್ಪತ್ತಾರು ವರ್ಷಗಳ ಸೇವಾ ಅವಧಿಯಲ್ಲಿ ಪ್ರತಿ ತಿಂಗಳ ಸಂಬಳದ 25% ಅನ್ನು ‘ ಸಮಾಜಮುಖಿ’ ಕೆಲಸ ಕಾರ್ಯಗಳಿಗೆ ಬಳಸುತ್ತ ಸೇವೆಯ ನಿಜ ಆನಂದವನ್ನು ಅನುಭವಿಸುತ್ತಿದ್ದೇನೆ.

 

೨೩.೦೮.೨೦೨೫