ಬುಕರ್ ಪ್ರಶಸ್ತಿಯ ಕೀರ್ತಿ ಬೇಕು,ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ!?

ಮೂರನೇ ಕಣ್ಣು

ಬುಕರ್ ಪ್ರಶಸ್ತಿಯ ಕೀರ್ತಿ ಬೇಕು,ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ!? ::

ಮುಕ್ಕಣ್ಣ ಕರಿಗಾರ
ಪೀಠಾಧ್ಯಕ್ಷರು
ಮಹಾಶೈವ ಧರ್ಮಪೀಠ, ಶ್ರೀಕ್ಷೇತ್ರ ಕೈಲಾಸ, ಗಬ್ಬೂರು.

     ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಬಾರಿಯ ವಿಶ್ವವಿಖ್ಯಾತ ಉತ್ಸವ,ನಾಡಹಬ್ಬ ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡುವ ಮೂಲಕ ಅಭಿನಂದನಾರ್ಹ ಕಾರ್ಯ ಮಾಡಿದ್ದಾರೆ.ಸಾಂಸ್ಕೃತಿಕ ಹಬ್ಬವಾಗಿ ವಿಶ್ವದ ಗಮನಸೆಳೆದ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ವಿಶ್ವದಪ್ರತಿಷ್ಠಿತ ಪ್ರಶಸ್ತಿಯಾದ ಬುಕರ್ ಪ್ರಶಸ್ತಿ ಪಡೆದು ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿ, ಅವರಿಂದ ದಸರಾ ಉದ್ಘಾಟನೆ ಮಾಡಿಸುತ್ತಿರುವುದು ಸಾಹಿತ್ಯಲೋಕಕ್ಕೆ ಅದರಲ್ಲೂ ಕನ್ನಡದ ಕಥಾ ಸಾಹಿತ್ಯಕ್ಕೆ ಸಲ್ಲುವ ವಿಶೇಷ ಗೌರವ.ಆದರೆ ಈ ನಡುವೆ ಯಾರೋ ಪುಣ್ಯಾತ್ಮರುಗಳು ಕೆಲವರು ಬಾನು ಮುಷ್ತಾಕ್ ಮುಸ್ಲಿಮರಾದ್ದರಿಂದ ಅವರಿಂದ ದಸರಾ ಉದ್ಘಾಟನೆ ಬೇಡ ಎಂದು ತಕರಾರು ತೆಗೆದಿದ್ದಲ್ಲದೆ ಶಿವಕುಮಾರ್ ನಾಯ್ಕ್ ಎನ್ನುವ ಮಹಾನುಭಾವರನ್ನು ಸರ್ವಸಂಘಟನೆಗಳ ಅಧ್ಯಕ್ಷರನ್ನಾಗಿ ನೇಮಿಸಿ ಅವರ ನೇತೃತ್ವದಲ್ಲಿ ರಾಜ್ಯಪಾಲರಿಗೆ ದೂರು ನೀಡಲಿದ್ದಾರಂತೆ! ಇದು ಅವಿವೇಕದ ನಡೆ ಮಾತ್ರವಲ್ಲ, ಸ್ವಯಂ ನಾಡದೇವಿ ಚಾಮುಂಡೇಶ್ವರಿಗೆ ಮಾಡುವ ಅಪಚಾರ ಕೂಡ.ಪ್ರಸಿದ್ಧರಾದ ಪುರುಷರಿಂದಲೇ ಉದ್ಘಾಟಿಸಲ್ಪಡುವ ಮೈಸೂರು ದಸರಾ ಹಬ್ಬವನ್ನು ಅಪರೂಪಕ್ಕೆ ಉದ್ಘಾಟಿಸುವ ಅವಕಾಶ ಮಹಿಳೆಯಾದ ಬಾನು ಮುಷ್ತಾಕ್ ಅವರಿಗೆ ದೊರೆತಿದೆ.ನಾಡಿನ ಹೆಮ್ಮೆಯ ಮಗಳಾಗಿ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡೇಶ್ವರಿಯ ಉತ್ಸವವವನ್ನು ಉದ್ಘಾಟಿಸಲಿದ್ದಾರೆ‌.

ಹಾಗೆ ನೋಡಿದರೆ ಬಾನು ಮುಷ್ತಾಕ್ ಒಬ್ಬರೇ ದಸರಾ ಹಬ್ಬವನ್ನು ಉದ್ಘಾಟಿಸುವ ಮುಸ್ಲಿಂ ಸಮುದಾಯದವರಲ್ಲ.ಈ ಹಿಂದೆ ಖ್ಯಾತ ಕವಿ ಕೆ.ಎಸ್.ನಿಸಾರ್ ಅಹ್ಮದ್ ಅವರು ಕೂಡ ಮೈಸೂರು ದಸರಾ ಉದ್ಘಾಟಿಸಿದ್ದರು.ಆಗ ಯಾಕೆ ಆಕ್ಷೇಪ ಎತ್ತಿರಲಿಲ್ಲ ಈ ಸ್ವಯಂಘೋಷಿತ ಹಿಂದು ಧರ್ಮದ ರಕ್ಷಕರು ? ಈ ಸ್ವಯಂಘೋಷಿತ ಹಿಂದು ಧರ್ಮರಕ್ಷಕರ ವಿತಂಡವಾದ ನಗೆ ತರಿಸುವಂತಿದೆ,ಬಾನು ಮುಷ್ತಾಕ್ ಅವರು ದನದ ಮಾಂಸ ತಿನ್ನದೆ ಇರಬಹುದು, ಆದರೆ ಅವರ ಪೂರ್ವಿಕರು ತಿಂದಿರಬಹುದಲ್ಲ! ಮನುಷ್ಯ ನಾಗರಿಕತೆಯ ಇತಿಹಾಸ ಅರಿಯದ ಇಂತಹ ಎಡಬಿಡಂಗಿಗಳು ಧರ್ಮ,ಸಂಸ್ಕೃತಿಯನ್ನು ಹಾಳುಗೆಡಹುವ ವಿಕೃತ ಮನಸ್ಕರುಗಳು ಎಂದು ಬೇರೆ ಹೇಳಬೇಕಿಲ್ಲ.ಎಲ್ಲ ಮನುಷ್ಯರ ಪೂರ್ವಿಕರಾಗಿದ್ದ ಆದಿಮಾನವರು ಮಾಂಸಭಕ್ಷಕರೇ ಅಲ್ಲವೆ? ಮಾಂಸಭಕ್ಷಕರ ಸಂತಾನವಾದವರ ರಕ್ತದಲ್ಲಿ ಪೂರ್ವಿಕರ ಪ್ರಾಣಿ ಪಕ್ಷಿಗಳನ್ನು ತಿಂದ ರಕ್ತದ ಅವಶೇಷಗಳು ಇರಲಾರವೆ? ಇಂತಹ ಎಡಬಿಡಂಗಿಗಳ ಮಾತಿಗೆ ಸರಕಾರ ಕಿವಿಗೊಡಬಾರದು.

ಘನತೆವೆತ್ತ ರಾಜ್ಯಪಾಲರು ಕೂಡ ಇಂತಹ ವಿಕೃತ ಮನಸ್ಕರ ಮಾತುಗಳಿಗೆ ಮನ್ನಣೆ ನೀಡಬಾರದು.ಅಷ್ಟಕ್ಕೂ ಮೈಸೂರು ದಸರಾವು ನಾಡಹಬ್ಬ; ಅದನ್ನು ಆಯೋಜಿಸುವುದು ಕರ್ನಾಟಕ ಸರಕಾರ,ರಾಜ್ಯಪಾಲರಲ್ಲ.ಕರ್ನಾಟಕದ ಪ್ರಜಾಸಮಸ್ತರ ಪ್ರತಿನಿಧಿಯಾಗಿ ಆಳ್ವಿಕೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಿರ್ಧಾರ ಸರಿ ಇದೆ ಮತ್ತು ಸಮರ್ಥನೀಯವಾದ,ಸಮಯೋಚಿತ ನಿರ್ಧಾರವಾಗಿದೆ.ಅವರು ಮುಂದುವರೆಯಲಿ.

ಬಾನು ಮುಷ್ತಾಕ್ ಅವರದ್ದು ಮಾನವಿಯತೆಯ ಪರವಾದ ಬದುಕು,ಬರಹ.ಅವರು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿರಬಹುದು ಆದರೆ ಅವರು ತಮ್ಮ ಕಥೆ,ಕಾದಂಬರಿ,ಕವನಸಂಕಲನಗಳಲ್ಲಿ ಪ್ರತಿಪಾದಿಸಿದ್ದು ಮಾನವಿಯತೆಯನ್ನು.ಮುಸ್ಲಿಂ ಸಮುದಾಯದ ಮಹಿಳೆಯರ ಬದುಕು ಬವಣೆಗಳನ್ನು ತಮ್ಮ ಕಥಾ ಸಾಹಿತ್ಯದ ಮೂಲಕ ಜನರಿಗೆ,ಜಗತ್ತಿಗೆ ಪರಿಚಯಿಸಿದ ಬಾನು ಮುಷ್ತಾಕ್ ಅವರು ಕೇವಲ ಮುಸ್ಲಿಂ ಸಮುದಾಯದ ಮಹಿಳೆಯರ ಹಕ್ಕುಗಳಿಗಾಗಿ ಮಾತ್ರ ಹೋರಾಡುತ್ತಿಲ್ಲ; ಅವರು ಎಲ್ಲ ಮಹಿಳೆಯರು, ಶೋಷಿತರ ಪರವಾಗಿ ಹೋರಾಡುತ್ತಿದ್ದಾರೆ.ಮನುಷ್ಯರ ಹೃದಯಗಳಲ್ಲಿ ಅವಿತುಕುಳಿತ ರಕ್ಕಸರ ಬಗ್ಗೆ ಹೋರಾಡುತ್ತಿರುವ ಅವರನ್ನು ಧರ್ಮದ ‘ಮುಸುಕುಧಾರಿಗಳು’ ಅರ್ಥಮಾಡಿಕೊಳ್ಳಲಾರರು.ಧರ್ಮಸ್ಥಳಕ್ಕೆ ಕೇಡು ಬಗೆದ ‘ ಮುಸುಕುಧಾರಿ’ ಯ ಹಿಂದೆ ಇರುವ ನಿಜಮುಸುಕುಧಾರಿಗಳಂತೆ ಬಾನು ಮುಷ್ತಾಕ್ ಅವರನ್ನು ವಿರೋಧಿಸುತ್ತಿರುವ ಶಿವಕುಮಾರ್ ನಾಯ್ಕ್ ಎನ್ನುವ ವ್ಯಕ್ತಿಯ ಹಿಂದೆ ಮತ್ತಾರೋ ಮುಸುಕುಧಾರಿಗಳು ಇರಬೇಕು.

ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದೇ ಧರ್ಮ.ತಾಯಿ ಚಾಮುಂಡೇಶ್ವರಿಯು ಮಾನವಕುಲಕ್ಕೆ ಕಂಟಕರಾಗಿದ್ದ ರಾಕ್ಷಸರನ್ನು ಸಂಹರಿಸಿ ಧರ್ಮ ಸ್ಥಾಪಿಸಿದ್ದಾಳೆ ಎಂದ ಬಳಿಕ ಆ ತಾಯಿಯ ಮಕ್ಕಳಾದ ಲೋಕಸಮಸ್ತರ ಸಮಾನತೆ,ಆತ್ಮಗೌರವದಿಂದ ಬದುಕುವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಬಾನು ಮುಷ್ತಾಕ್ ಅವರು ಮಾಡುತ್ತಿರುವುದು ಧಾರ್ಮಿಕ ಕಾರ್ಯವಲ್ಲವೆ?

ನಮ್ಮ ಕನ್ನಡಪರ ಸಂಘಟನೆಗಳು,ರಾಜ್ಯಸರಕಾರದಿಂದ ಪೊರೆಯಲ್ಪಡುವ ಸಾಹಿತ್ಯಕ ಸಾಂಸ್ಕೃತಿಕ ಸಂಘಟನೆಗಳು ಸಹ ಬಾನು ಮುಷ್ತಾಕ್ ಅವರನ್ನು ಗುರುತಿಸಿ,ಗೌರವಿಸುವಲ್ಲಿ ವಿಫಲವಾಗಿವೆ. ಮಸಕು ಬುದ್ಧಿಯ ಇಂತಹ ಸಂಸ್ಥೆಗಳ ಸಲ್ಲದ ನಡೆಯನ್ನು ಖಂಡಿಸಲೆಂದೇ ನಾವು ಇದೇ ಅಗಸ್ಟ್ 09 ರಂದು ನಮ್ಮ ಮಹಾಶೈವ ಧರ್ಮಪೀಠದಲ್ಲಿ ನಡೆದ ಯುಗಯೋಗಿ,ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಹೆಸರಿನಲ್ಲಿ ಕೊಡಮಾಡುವ ” ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ “ಯನ್ನು ಕನ್ನಡದ ಹೆಮ್ಮೆ ಬಾನು ಮುಷ್ತಾಕ್ ಅವರಿಗೆ ನೀಡಿ,ಗೌರವಿಸಿದ್ದೇವೆ.ನಮ್ಮದು ಕೂಡ ಶಿವಸರ್ವೋತ್ತಮ ತತ್ತ್ವವನ್ನು ಸಾರುವ ಶಕ್ತಿಸಮೇತನಾಗಿ ಪರಶಿವನು ನೆಲೆಗೊಂಡಿರುವ ಶಿವಶಕ್ತ್ಯಾದ್ವೈತ ತತ್ತ್ವದ ಮಠವೆ.ಚಾಮುಂಡೇಶ್ವರಿಯ ಮೂಲ ರೂಪವಾದ ದುರ್ಗಾದೇವಿಯೇ ನಮ್ಮ ಮಠದಲ್ಲಿ ವಿಶ್ವೇಶ್ವರಿ ದುರ್ಗಾದೇವಿಯ ರೂಪದಲ್ಲಿ ವಿಜಯದುರ್ಗೆಯ ನಾಮದಲ್ಲಿ ಲೋಕಪೂಜಿತಳಾಗಿದ್ದಾಳೆ.ಅಂತಹ ವಿಶ್ವಮಾತೆಯ ಸನ್ನಿಧಿಯಲ್ಲಿ ನಾವು ಬಾನು ಮುಷ್ತಾಕ್ ಅವರನ್ನು ಸತ್ಕರಿಸಿ,ಸನ್ಮಾನಿಸಿದ್ದೇವೆ ಎನ್ನುವುದನ್ನು ವಿವೇಕಶೂನ್ಯ ಜನರ ಗಮನಕ್ಕೆ ತರಬಯಸುತ್ತೇವೆ.ಬಾನು ಮುಷ್ತಾಕ್ ಅವರಿಂದ ದಸರಾ ಹಬ್ಬದ ಉದ್ಘಾಟನೆ ಆದರೆ ತಾಯಿ ಚಾಮುಂಡೇಶ್ವರಿಯು ಕುಪಿತಳಾಗುವುದಿಲ್ಲ ಬದಲಿಗೆ ಪ್ರತಿಬಾರಿಗಿಂತ ಈ ಬಾರಿ ಹೆಚ್ಚು ಪ್ರಸನ್ನಳಾಗುತ್ತಾಳೆ.ಬಾನು ಮುಷ್ತಾಕ್ ಅವರಿಂದ ಉದ್ಘಾಟನೆಗೊಳ್ಳುವ ಮೈಸೂರು ದಸರಾ ಈ ಬಾರಿ ಮತ್ತಷ್ಟು ವೈಭಯುತವಾಗಿ ಕಂಗೊಳಿಸುತ್ತದೆ.

 

೨೩.೦೮.೨೦೨೫