ಸ್ಮರಣೆ : ಮೂರ್ಕಣ್ಣ ಬಸವ ‘ ಈಗ ನೆನಪು ಮಾತ್ರ !
ಮುಕ್ಕಣ್ಣ ಕರಿಗಾರ
ಪೀಠಾಧ್ಯಕ್ಷರು ಮಹಾಶೈವ ಧರ್ಮಪೀಠ
ರಾಯಚೂರು : ಅಗಸ್ಟ್ 12,2025 ರ ಮಂಗಳವಾರದ ಬೆಳಿಗ್ಗೆ ಆರು ಘಂಟೆಯ ಸಮಯ.ಎರಡು ತಾಸುಗಳ ಹಿಂದಷ್ಟೇ ಬೆಂಗಳೂರು ತಲುಪಿ ಲಾಡ್ಜಿನಲ್ಲಿ ನಿದ್ದೆ ಮಾಡುತ್ತಿದ್ದೆ.ಬೀದರ ಜಿಲ್ಲಾ ಪಂಚಾಯತಿಯ ಸರಕಾರಿ ಕೆಲಸದ ನಿಮಿತ್ತ ಅಗಸ್ಟ್ 11 ರ ಸಂಜೆ ಕಾರಿನಲ್ಲಿ ಹೊರಟು ಅಗಸ್ಟ್ 12 ರ ಬೆಳಿಗ್ಗೆ ನಾಲ್ಕು ಘಂಟೆಗೆ ಬೆಂಗಳೂರು ತಲುಪಿ ವಿಶ್ರಾಂತಿ ಪಡೆಯುತ್ತಿದ್ದೆ.ನನ್ನ ಮೊಬೈಲ್ ನ ರಿಂಗಣಿಸಿತು.ಬೆಳಿಗ್ಗೆ ನನ್ನ ಮೊಬೈಲ್ ಫೋನ್ ರಿಂಗಣಿಸುವುದು ಅಶುಭವಾರ್ತೆಗಳನ್ನು ತಲುಪಿಸಲೆಂದೇ! ಫೋನ್ ನೋಡಿದೆ ಊರಿನಿಂದ ಅಳಿಯ ತ್ರಯಂಬಕೇಶ ಫೋನ್ ಮಾಡುತ್ತಿದ್ದಾನೆ.’ ಮತ್ತೇನಾಯಿತು,ಯಾರು ಹೋದರು?’ ಎಂದು ಅನುಮಾನದಿಂದಲೇ ಫೋನ್ ಎತ್ತಿದೆ.’ ಗೂಳಿ ಸತ್ತಿದೆ’ ಎಂದ ಅಳಿಯ ಅಂಬಕೇಶ.ಮನಸ್ಸಿಗೆ ಬೇಸರವಾಯಿತು.ಗೂಳಿಯನ್ನು ಸಕಲಗೌರವಗಳೊಂದಿಗೆ ವಿಶ್ವೇಶ್ವರನ ಎದುರು ಸಮಾಧಿ ಮಾಡುವಂತೆ ಅಳಿಯ ತ್ರಯಂಬಕೇಶನಿಗೆ ಹೇಳಿದೆ.ಮನಸ್ಸು ಭಾರವಾಗಿತ್ತು,ಆತ್ಮೀಯನೊಬ್ಬನನ್ನು ಕಳೆದುಕೊಂಡ ದುಗುಡ ಆವರಿಸಿತ್ತು.
ನಾವು ‘ಬಸವ’ ನೆಂದೇ ಕರೆಯುತ್ತಿದ್ದ ಈ ಗೂಳಿ’ ಮೂರ್ಕಣ್ಣ ಬಸವ’ ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವನ ವಾಹನ.ಸುಮಾರು ಹದಿನೈದು ವರ್ಷಗಳ ಕಾಲ ಮಠದಲ್ಲಿತ್ತು ವಿಶ್ವೇಶ್ವರನ ವಾಹನವಾಗಿ.ಹದಿನೈದು ವರ್ಷಗಳ ಹಿಂದೆ ಭಕ್ತರೊಬ್ಬರು ತಂದು ಬಿಟ್ಟಿದ್ದರು ಈ ಗೂಳಿಯನ್ನು ನಮ್ಮ ಮಠ,ಮಹಾಶೈವ ಧರ್ಮಪೀಠಕ್ಕೆ. ಅಂದಿನಿಂದ ಮಠದ ಪರಿವಾರದವರಲ್ಲಿ ಒಬ್ಬರಂತೆ ಬೆಳೆದಿದ್ದ ಈ ಮೂರ್ಕಣ್ಣಬಸವ.
ಈ ಬಸವನ ವಿಶೇಷವೆಂದರೆ ಇವನಿಗೆ ಮೂರು ಕಣ್ಣುಗಳು ಇದ್ದವು.ಅಂದರೆ ಬಲಗಣ್ಣಿನಲ್ಲಿ ಎರಡು ಕಣ್ಣುಗುಡ್ಡೆಗಳು ಇದ್ದವು.ಎರಡು ಕಣ್ಣುಗುಡ್ಡೆಗಳ ಕಾರಣದಿಂದ ಸರಿಯಾಗಿ ನೋಡಲು ತೊಂದರೆ ಪಡುತ್ತಿದ್ದ ಮೂರ್ಕಣ್ಣಬಸವ ಹೆಚ್ಚಾಗಿ ತನ್ನ ಎಡಗಣ್ಣನ್ನೇ ಆಶ್ರಯಿಸಿದ್ದ.ಮಹಾಶೈವ ಧರ್ಮಪೀಠದ ಪ್ರಾರಂಭದ ದಿನಗಳಲ್ಲಿ ಮೂರ್ಕಣ್ಣಬಸವನೇ ಆಕರ್ಷಣೆಯ ಕೇಂದ್ರವಾಗಿದ್ದ.ಮೂರು ಕಣ್ಣುಗಳನ್ನು ಉಳ್ಳ ಬಸವನನ್ನು ನೋಡಲು ಜನರು ನಮ್ಮ ಮಠದತ್ತ ಬರುತ್ತಿದ್ದರು.
ನಾನಿನ್ನೂ ಆಗ ಜನರ ಸಂಕಷ್ಟಪರಿಹರಿಸುವ ‘ ಶಿವೋಪಶಮನ ಕಾರ್ಯ’ ಪ್ರಾರಂಭಿಸದೆ ಇದ್ದ ದಿನಗಳವು.ಆಗ ನಮ್ಮ ಮೂರ್ಕಣ್ಣ ಬಸವನ ಪವಾಡಗಳಿಂದ ಮಹಾಶೈವ ಧರ್ಮಪೀಠ ಹೆಸರುಗೊಂಡಿತ್ತು.ನನ್ನ ಭೇಟಿಗೆ ಬರುವ ಭಕ್ತರು ಬಸವನಿಗೆ ತಿನ್ನಲು ಬಾಳೆ ಹಣ್ಣುಗಳನ್ನು ತರುತ್ತಿದ್ದರು.ಬಸವ ಯಾರ ಬಾಳೆಹಣ್ಣು ತಿನ್ನುತ್ತಾನೋ ಅವರು ಮಠಕ್ಕೆ ಬಂದ ಕಾರ್ಯ ಆಗುತ್ತಿತ್ತು,ಬಾಳೆ ಹಣ್ಣು ತಿನ್ನದವರ ಕೆಲಸ ಆಗುತ್ತಿರಲಿಲ್ಲ! ಇದು ನಮಗೂ ಸೋಜಿಗದ ಸಂಗತಿಯೆ.ಕ್ಷೇತ್ರನಾಥ ವಿಶ್ವೇಶ್ವರ ಶಿವ ತನ್ನ ಭಕ್ತರೋದ್ಧಾರಕ್ಕೆ ಬಸವನ ಮೂಲಕ ಲೀಲೆಯಾಡುತ್ತಿದ್ದಾನೆ ಎಂದು ನಂಬಿದ್ದೆವು.ಮಠಕ್ಕೆ ಬರುವ ನೂರಾರು ಜನ ಭಕ್ತರೆಲ್ಲರೂ ಬಾಳೆ ಹಣ್ಣು ತಂದು ತಿನ್ನಿಸ ಹೋಗುತ್ತಿದ್ದರೂ ಬಸವ ತನಗೆ ಇಷ್ಟವಾದವರ ಬಾಳೆ ಹಣ್ಣುಗಳನ್ನು ಮಾತ್ರ ತಿನ್ನುತ್ತಿದ್ದ! ಶಿವನ ಅಪ್ಪಣೆ ಕೇಳಲು ಕೆಲವರು ಬಂದಾಗ ಅವರ ಕಾರ್ಯಸಾಧಿಸುತ್ತಿದ್ದರೆ ಬಸವ ಅವರಿಗೆ ದರ್ಶನ ಕೊಡುತ್ತಿದ್ದ.ಒಮ್ಮೊಮ್ಮೆ ದೂರ ಓಡಿ ಹೋಗುತ್ತಿದ್ದ ತಮ್ಮ ಕೆಲಸ ಆಗದವರು ನಮ್ಮ ಮಠಕ್ಕೆ ಬರುವುದನ್ನು ಅರಿತು.ಅದು ಹೇಗೋ ಮೊದಲೇ ಗೊತ್ತಾಗುತ್ತಿತ್ತು ಬಸವನಿಗೆ ಯಾರು ಮಠಕ್ಕೆ ಬರುತ್ತಾರೆ ಎಂದು.
ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ಗೋಪುರ, ಕಳಶಾರೋಹಣದ ನಂತರ ನನ್ನ ಶರನ್ನವರಾತ್ರಿಯ ಅನುಷ್ಠಾನ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ ನಡೆಯುತ್ತಿತ್ತು.ರಾತ್ರಿಯ ಪೂಜೆ ಮುಗಿಸಿಕೊಂಡು ಹೊರಬರಲು ರಾತ್ರಿಯ ಎರಡು ಮೂರು ಘಂಟೆ ಆಗುತ್ತಿತ್ತು.ನಾನು ಪೂಜೆ ಮುಗಿಸಿಕೊಂಡು ಬರುವ ತನಕ ಬಸವ ದುರ್ಗಾ ದೇವಿಯ ಮಂದಿರದ ಎದುರು ನನಗಾಗಿ ಕಾಯ್ದು ಮಲಗುತ್ತಿದ್ದ! ನನ್ನ ರಕ್ಷಣೆಯ ಹೊಣೆಗಾರಿಕೆ ನಿಭಾಯಿಸುತ್ತಿದ್ದನೋ ಏನೋ.ಅಂತೂ ನವರಾತ್ರಿಯ ದಿನಗಳಲ್ಲಿ ರಾತ್ರಿಯ ನನ್ನ ಪೂಜಾನುಷ್ಠಾನ ಮುಗಿಯುವ ತನಕ ಹೊರಗೆಲ್ಲೂ ಹೋಗದೆ ದೇವಸ್ಥಾನದ ಮುಂದೆಯೇ ಮಲಗುತ್ತಿದ್ದ ನಮ್ಮ ಬಸವ.
ಬಸವ ಬರಿ ಮೂಕಪ್ರಾಣಿಯಾಗಿರದೆ ನಿಜಾರ್ಥದಲ್ಲಿ ಶಿವನ ವಾಹನವೇ ಆಗಿದ್ದ.ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶಿವ ದುರ್ಗಾದೇವಿಯರ ದೇವಸ್ಥಾನಗಳನ್ನು ಐದು ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದ ! ತಾನು ಪ್ರದಕ್ಷಿಣೆ ಹಾಕುವುದನ್ನು ಯಾರಾದರೂ ನೋಡಿದರೆ ತಕ್ಷಣ ತನ್ನ ಪ್ರದಕ್ಷಿಣೆಯ ಸೇವೆ ನಿಲ್ಲಿಸುತ್ತಿದ್ದ.ಒಂದರ್ಥದಲ್ಲಿ ಗುಪ್ತಭಕ್ತನಾಗಿದ್ದ ನಮ್ಮ ಮೂರ್ಕಣ್ಣ ಬಸವ.
ನಾನು ‘ ಶಿವೋಪಶಮನ ಕಾರ್ಯ’ ಕಾರ್ಯ ಪ್ರಾರಂಭಿಸಿದ ಬಳಿಕ ಮಧ್ಯಾಹ್ನದ ಪ್ರಸಾದದ ವೇಳೆಯಲ್ಲಿ ಮೊದಲು ಬಸವನಿಗೆ ನೈವೇದ್ಯ ಸಮರ್ಪಣೆಯಾಗುತ್ತಿತ್ತು.ಮಹಾಶೈವ ಧರ್ಮಪೀಠದ ದಾಸೋಹಸಮಿತಿಯ ಅಧ್ಯಕ್ಷರಾಗಿರುವ ಶಿಷ್ಯ ಗುರುಬಸವ ಹುರಕಡ್ಲಿಯವರು ನಾವು ಪ್ರಸಾದಕ್ಕೆ ಕೂಡುವ ಮೊದಲು ಬಸವನಿಗೆ ಪ್ರಸಾದ ಸಮರ್ಪಿಸುವ ಕಾರ್ಯ ಮಾಡುತ್ತಿದ್ದರು.ಬಸವನ ಮೂಲಕ ಪ್ರಸಾದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನಿಗೆ ಸಲ್ಲುತ್ತಿತ್ತು.
ವಿಶ್ವೇಶ್ವರ ಶಿವನ ವಾಹನವಾಗಿದ್ದ ಮೂರ್ಕಣ್ಣ ಬಸವ ಶ್ರಾವಣಮಾಸದ ಮೂರನೇ ಸೋಮವಾರದ ರಾತ್ರಿ ಕೈಲಾಸವಾಸಿಯಾದದ್ದು ಅವನ ಮಹಿಮೆ! ಬಹುಶಃ ಶಿವನೆದುರಿನಲ್ಲಿ ನಿರ್ಮಿಸ ಬಯಸಿದ್ದ ನಂದಿಮಂಟಪದ ಚಾಲನೆಗೆ ಕಾಲ ಕೂಡಿ ಬಂದಂತೆ ಕಾಣಿಸುತ್ತಿದೆ.ಈ ಬಸವನ ನಿಧನಾನಂತರ ಬಸವನ ಕಳೇಬರವನ್ನು ವಿಶ್ವೇಶ್ವರನ ಎದುರು ಸಮಾಧಿ ಮಾಡಿ ಅದರ ಮೇಲೆ ಬೃಹತ್ ನಂದಿಯನ್ನು ಸ್ಥಾಪಿಸುವ ಸಂಕಲ್ಪ ನಮ್ಮದಾಗಿತ್ತು.ಶಿವ ದುರ್ಗಾದೇವಿಯರ ದೇವಸ್ಥಾನದ ಎದುರು ಪ್ರಣವಮಂಟಪದ ಕಾರ್ಯ ಭರದಿಂದ ನಡೆದಿದ್ದು ಅದು ಮುಗಿದ ಕೂಡಲೆ ನಂದಿಮಂಟಪ ಪ್ರಾರಂಭಿಸು ಎನ್ನುವ ಶಿವಸೂಚನೆಯಂತೆ ನಮ್ಮ ಮೂರ್ಕಣ್ಣಬಸವ ಶ್ರಾವಣಮಾಸದ ಮೂರನೇ ಸೋಮವಾರದ ರಾತ್ರಿ ಶಿವೈಕ್ಯನಾಗಿದ್ದಾನೆ.
ತಾಪ,ಬೇಸರಗಳಿಂದಲೇ ಅಳಿಯ ತ್ರಯಂಬಕೇಶನಿಗೆ ಬಸವನ ಅಂತ್ಯಸಂಸ್ಕಾರ ಸಕಲ ಶಿವಸಂಸ್ಕಾರಗಳೊಂದಿಗೆ ಮಾಡಲು ತಿಳಿಸಿ ನಮ್ಮ ಪ್ರೀತಿಯ ಬಸವನಿಗೆ ಬೆಂಗಳೂರಿನಿಂದಲೇ ಅಂತಿಮ ನಮನಗಳನ್ನು ಸಲ್ಲಿಸಿದೆ ದುಃಖಾರ್ದ ಹೃದಯದಿಂದ. ಮಹಾಶೈವ ಧರ್ಮಪೀಠದ ಸದಸ್ಯನೊಬ್ಬ ಇನ್ನಿಲ್ಲವಾದ ನೋವು ಬಾಧಿಸುತ್ತಿತ್ತು.
12.08.2025