ಪತ್ರಿಕಾ ದಿನಾಚರಣೆ | ಪ್ರಶಸ್ತಿ ವಿಜೇತರಿಗೆ ಸನ್ಮಾನ |ಫಲಾಪೇಕ್ಷೆ ಬಯಸದ ಸೇವೆಗೆ ಅಭೂತಪೂರ್ವ ಗೌರವ- ಡಾ.ಶಿರವಾಳ

ಫಲಾಪೇಕ್ಷೆ ಬಯಸದ ಸೇವೆಗೆ ಅಭೂತಪೂರ್ವ ಗೌರವ- ಡಾ.ಶಿರವಾಳ…

ಶಹಾಪುರ : ನಗರದ ಕಸಾಪ ಭವನದಲ್ಲಿ ಕಾನಿಪ ಸಂಘ ಶಹಾಪುರ ಘಟಕದಿಂದ ನಡೆದ ಪತ್ರಿಕಾ ದಿನಾಚರಣೆಗೆ ಡಿವಿಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಶೋಧಕ ಡಾ.ಮೋನಪ್ಪ ಶಿರವಾಳ ಚಾಲನೆ ನೀಡಿದರು.

ಶಹಾಪುರ,,

ಇಡಿ ಪ್ರಪಂಚದಲ್ಲಿಯೇ ಪತ್ರಕರ್ತರಿಗೆ ಇರುವ ಬೆಲೆ ಮತ್ಯಾರಿಗೂ ಇಲ್ಲ. ಆದರೆ ಫಲಾಪೇಕ್ಷೆ ಬಯಸದೆ ಕರ್ತವ್ಯ ನಿಷ್ಠೆ ಮೆರೆಯುವಂತ ಪತ್ರಕರ್ತರಿಗೆ ಅಭೂತಪೂರ್ವ ಗೌರವವಿದೆ ಎಂದು ಸಂಶೋಧಕ, ತಾಲೂಕು ಖಜಾನೆ ಇಲಾಖೆ ಅಧಿಕಾರಿ ಡಾ.ಮೋನಪ್ಪ ಶಿರವಾಳ ಅಭಿಪ್ರಾಯಪಟ್ಟರು.ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಸ್ತುತ ವರ್ಷದ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುಪ್ರಸಿದ್ಧ ರಾಜ ನೆಪೋಲಿಯನ್ ಬೋನೋಪಾರ್ಟ್ ಎಂಬಾತ ಜಗತ್ತನ್ನೆ ಗೆಲ್ಲಬೇಕೆಂಬ ಮಹಾದಾಸೆ ಹೊಂದಿದ್ದ, ಅಲ್ಲದೆ ಆತ ಯಾರೊಬ್ಬರಿಗೆ ಭಯಪಡುವ ಮಾತೇ ಇಲ್ಲ ಎನ್ನುತ್ತಿದ್ದ, ಆದರೆ ಆತ ಪತ್ರಕರ್ತರೊಂದಿಗೆ ಸಂವಾದ ಮಾಡಲು ಭಯವಾಗುತ್ತೆ ಎನ್ನುತ್ತಿದ್ದನಂತೆ. ರಾಜ ಮಹಾರಾಜರ ಕಾಲದಿಂದಲೂ ಕಾಯಕನಿಷ್ಠೆ ಹೊಂದಿರುವ ಪತ್ರಕರ್ತರಿಗೆ ಸರ್ವ ಕ್ಷೇತ್ರದಲ್ಲಿ ಬೆಲೆ ಇದೆ. ಪ್ರಸ್ತುತ ಕೆಲವೊಬ್ಬರು ಮಾಧ್ಯಮ ರಂಗಕ್ಕೆ ಬಂದು ಅದರ ನೀತಿ. ನಿಯಮಗಳನ್ನು ಗಾಳಿಗೆ ತೂರಿ ಮಾಧ್ಯಮ ಕ್ಷೇತ್ರಕ್ಕೆ ಕಳಂಕ ತರುವಂತ ಕೆಲಸ ಮಾಡಿದ್ದಾರೆ. ಆದರೆ ನಮ್ಮ ಶಹಾಪುರದಲ್ಲಿ ಉತ್ತಮ ಪತ್ರಕರ್ತರ ಬಳಗ ಹೊಂದಿದ್ದು, ಕ್ಷೇತ್ರದ ಸೌಭಾಗ್ಯ. ಮಾಧ್ಯಮ ಕ್ಷೇತ್ರಕ್ಕೆ ಕಳಂಕ ತರುವ ಕೆಲಸ ಮಾಡುವ ಕೆಲವರಿಗೆ ಈಚೆಗೆ ಕಡಿವಾಣ ಬಿದ್ದಿರುವದು ಸಂತಸ ತರುವಂತದ್ದು, ಸಮಾಜದ ಕಟ್ಟಕಡೆಯ ಒಬ್ಬ ಬಡ ವ್ಯಕ್ತಿಗೂ ನ್ಯಾಯ ಕೊಡಿಸುವ ಮಹತ್ವದ ಕಾರ್ಯ ಪತ್ರಕರ್ತರಿಂದ ಸಾಧ್ಯವಿದೆ. ಅಲ್ಲದೇ ಸರ್ಕಾರಿ ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳು ಎಸಗುವ ಭ್ರಷ್ಟಚಾರ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಮುಲಾಜಿಲ್ಲದೆ ಲಗಾಮು ಹಾಕುವ ಶಕ್ತಿ ಪತ್ರಕರ್ತರಿಗಿದೆ. ಈಚೆಗೆ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಎಎಸ್ ಪರೀಕ್ಷೆ ಹಾಗೂ ಪಿಎಸ್‌ಐ ಹಗರಣಗಳ ವರದಿಯೇ ಸಾಕ್ಷಿಕರಿಸಲಿದೆ. ಹೀಗಾಗಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಪತ್ರಕರ್ತರು ರಾಜಕೀಯ ಪ್ರಥಮ ವಿರೋಧ ಪಕ್ಷವಿದ್ದಂತೆ. ವಿಶೇಷವಾಗಿ ನನ್ನನ್ನು ಸಮಾಜ ಗುರುತಿಸುವಂತೆ ಮಾಡಿದ್ದು ತಾಲೂಕಿನ ಪತ್ರಿಕೆಗಳು ಇಲ್ಲಿನ ಪತ್ರಕರ್ತರು ಎಂದು ಸ್ಮರಿಸಿದರು.

ಸಮಾರಂಭದ ಸಾನಿಧ್ಯವಹಿಸಿದ್ದ ಡಾ.ಶರಣು ಬಿ.ಗದ್ದುಗೆ ಮಾತನಾಡಿ, ಪತ್ರಕರ್ತರ ಕಾರ್ಯಚಟುವಟಿಕೆ ಹಿಂದಿನ ಹಾಗೂ ಪ್ರಸ್ತುತ ನಡೆ ಬಗ್ಗೆ ವಿವರಿಸಿದರು. ಅಲ್ಲದೆ ಇನ್ನುಳಿದ ಪತ್ರಕರ್ತರಿಗೆ ದೊರೆಯಬೇಕಾದ ನಿವೇಶನ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದರು.  

ರಾಜ್ಯ ಕಾನಿಪ ಕಾರ್ಯಕಾರಣಿ ಸದಸ್ಯ ರಾಘವೇಂದ್ರ ಕಾಮನಟಗಿ, ಸಾಹಿತಿ ಸಿದ್ರಾಮ ಹೊನ್ಕಲ್, ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಮಾತನಾಡಿದರು. ಜಿಲ್ಲಾ ಕಾನಿಪ ಕಾರ್ಯಕಾತಿ ಸಮಿತಿ ಸದಸ್ಯ ವಿಶಾಲ್ ಶಿಂಧೆ ಆಶಯ ನುಡಿ ವ್ಯಕ್ತಪಡಿಸಿದರು. ಕಾನಿಪ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಅಧ್ಯಕ್ಷತೆವಹಿಸಿದ್ದರು. ಸಾಮಾಜಿಕ ಚಿಂತಕ ಭೀಮಾಶಂಕರ ಬಿಲ್ಲವ್ ಇದ್ದರು. ಪತ್ರಕರ್ತ ಮಹೇಶ ಪತ್ತಾರ ನಿರೂಪಿಸಿದರು. ಪತ್ರಕರ್ತ ರಾಘವೇಂದ್ರ ಹಾರಣಗೇರ ಸ್ವಾಗತಿಸಿ ವಂದಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಬಸವರಾಜ ಕರೇಗಾರ ಮತ್ತು ಮಂಜುನಾಥ ಬಿರೆದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತರಾದ ಮಲ್ಲಯ್ಯ ಪೋಲಂಪಲ್ಲಿ, ಮಲ್ಲಿಕಾರ್ಜುನ ಮಳಿಕೇರಿ, ಕಾರ್ತಿಕ, ಚಂದ್ರು ಕಟ್ಟಿಮನಿ ಸೇರಿದಂತೆ ಮುಖಂಡ ಗುರು ಕಾಮಾ, ಉದ್ಯಮಿ ಡಾ.ಆನಂದಕುಮಾರ ಕರಕಳ್ಳಿ, ಉಮೇಶ ಗುತ್ತೇದಾರ, ಮಲ್ಲಿಕಾರ್ಜುನ ಬಾಗಲಿ, ಶಕೀಲ್ ಮುಲ್ಲಾ, ಇಕ್ಬಾಲ್ ಜೆಸ್ಕಾಂ, ಕಳಸಪ್ಪಗೌಡ ಶಖಾಪುರ ಇತರರಿದ್ದರು.

ಶಹಾಪುರಃ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಗೌರವಿಸಿದರು.

ರಾಜಕೀಯ ಶಕ್ತಿ ಪ್ರಬಲವಾದಾಗ ಪತ್ರಿಕಾ ಸ್ವಾತಂತ್ರ್ಯ ಹಾಗೂ ಸಂಸ್ಕೃತಿ ವಲಯ ಶಕ್ತಿ ಕುಸಿಯುವಂತೆ ಮಾಡಲಿದೆ. ಆದರೆ ಪತ್ರಕರ್ತರು ಪ್ರಾಮಾಣಿಕ ಕರ್ತವ್ಯನಿಷ್ಠೆಯೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ದುಷ್ಟ ಶಕ್ತಿಯನ್ನು ಸೋಲಿಸಬಹುದು. ಆ ಹಿನ್ನೆಲೆ ಪತ್ರಕರ್ತರ ಸಂಘ ಪ್ರಾಮಾಣಿಕ, ಮೌಲ್ಯಯುತ ನಡೆಯನ್ನು ಬೆಳೆಸಿಕೊಂಡಲ್ಲಿ ಯಾವ ದುಷ್ಟ ಶಕ್ತಿಗೂ ಹೆದರುವ ಹಂಗಿಲ್ಲ. ಪತ್ರಕರ್ತರಿಗೆ ಸಲಹೆ ನೀಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನನ್ನನ್ನು ಬೆಳೆಸಿದ್ದೆ ಪತ್ರಕರ್ತರು. ಸದಾ ಪತ್ರಕರ್ತರೊಂದಿಗೆ ನಾನು ಒಬ್ಬರಾಗಿ ಉತ್ತಮೋತ್ತಮತೆಗೆ ಸಹಕರಿಸುವೆ.

ಡಾ.ಮೋನಪ್ಪ ಶಿರವಾಳ. ಸಂಶೋಧಕರು, ಖಜಾನೆ ಇಲಾಖೆ ಅಧಿಕಾರಿಗಳು.

ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ವರ್ಗಕ್ಕೆ ಅನುಕೂಲವಾಗಿರುವ ನೀರಾವರಿ ಯೋಜನೆಗಳು ಜಾರಿಗೊಳ್ಳಬೇಕಾದರೆ ಪತ್ರಿಕೆಗಳ ಪಾತ್ರ ಮಹತ್ವವಿದೆ. ಅಲ್ಲದೆ ಕೆರೆ ತುಂಬಿಸುವ ಯೋಜನೆ ಸೇರಿದಂತೆ ರೈತರ ಅನ್ಯಾಯವಾದಾಗ, ಅವರ ಬದುಕಿಗೆ ಬೇಕಾದ ಆಯಾಮ ಕುರಿತು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಗಮನ ಸೆಳೆಯುವಂತ ಕೆಲಸ ಪತ್ರಿಕೆಗಳ ಮಾಡುತ್ತಾ ಬರುತ್ತಿವೆ. ಸ್ವಾತಂತ್ರ್ಯಕ್ಕಾಗಿ ಜೀವನವೇ ತ್ಯಾಗ ಮಾಡಿರುವ ಹಲವಾರು ಸ್ವಾತಂತ್ರ್ಯ ಹೋರಾಟಗಾರರ, ಮಹನೀಯರ ಮೇಲೆ ಬೆಳಕು ಚಲ್ಲುವ ಕೆಲಸವಾಗಬೇಕಿದೆ.

ರಾಘವೇಂದ್ರ ಕಾಮನಟಗಿ.ಕಾನಿಪ ರಾಜ್ಯ ಪರಿಷತ್ ಸದಸ್ಯರು.