ಕಾಲಜ್ಞಾನ ವಿಶ್ಲೇಷಣೆ :: ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮೈಲಾರನ ಅನುಗ್ರಹ ಇದೆ ಎಂದು ದೃಢಪಟ್ಟಿತು :: ಮುಕ್ಕಣ್ಣ ಕರಿಗಾರ

ಕಾಲಜ್ಞಾನ ವಿಶ್ಲೇಷಣೆ 

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮೈಲಾರನ ಅನುಗ್ರಹ ಇದೆ ಎಂದು ದೃಢಪಟ್ಟಿತು

ಮುಕ್ಕಣ್ಣ ಕರಿಗಾರ

ಪೀಠಾಧ್ಯಕ್ಷರು

ಮಹಾಶೈವ ಧರ್ಮಪೀಠ, ಗಬ್ಬೂರು

 

ಕಳೆದವಾರ ಅಂದರೆ ಜುಲೈ 14 ರಂದು ನಾನು ಮೈಲಾರದೇವರ ಕಾರಣಿಕ ನುಡಿಯನ್ನು ತಪ್ಪಾಗಿ ಅರ್ಥೈಸಿದ್ದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ನಡೆಯನ್ನು ಖಂಡಿಸಿ ‘ ಮೈಲಾರನ ಕಾರಣಿಕ ನುಡಿಯನ್ನು ತಪ್ಪಾಗಿ ಅರ್ಥೈಸಿದ ವೆಂಕಪ್ಪಯ್ಯ ಒಡೆಯರ್’ ಎನ್ನುವ ಲೇಖನ ಬರೆದಿದ್ದೆ.ಅದು ವಾಟ್ಸಾಪ್ ಗುಂಪುಗಳಲ್ಲಿ ಸುದ್ದಿಯಾಗಿದ್ದಲ್ಲದೆ ರಾಯಚೂರಿನಿಂದ ಪ್ರಕಟವಾಗುವ ‘ ಪ್ರಜಾಪ್ರಸಿದ್ಧ’ ಮತ್ತು ಕಾರವಾರದಿಂದ ಪ್ರಕಟವಾಗುವ ‘ ಸಾಗರ ಸಾಮ್ರಾಟ’ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು.’ ತುಂಬಿದ ಕೊಡ ತುಳುಕಿತಲೆ ಪರಾಕ್’ ಎನ್ನುವ ಈ ವರ್ಷದ ಮೈಲಾರದೇವರ ಕಾರಣಿಕ ನುಡಿಯನ್ನು ‘ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕಾರ ಕಳೆದುಕೊಳ್ಳಲಿದ್ದಾರೆ’ ಎಂದು ತಪ್ಪಾಗಿ ಅರ್ಥೈಸಿದ್ದ ವೆಂಕಪ್ಪಯ್ಯ ಒಡೆಯರ್ ಅವರ ಉದ್ದೇಶ ಪೂರ್ವಕ ಅನರ್ಥವನ್ನು ಕೆಡೆನುಡಿದು ಬರೆದ ಆ ಲೇಖನದಲ್ಲಿ ನಾನು ‘ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮೈಲಾರನ ಅನುಗ್ರಹವಿದೆ’ ಎಂದು ಬರೆದಿದ್ದೆ‌.ಈಗ ಇದು ಸಾಬೀತಾಗಿದೆ.ಸುಪ್ರೀಂಕೋರ್ಟ್ ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಧರ್ಮಪತ್ನಿ ಶ್ರೀಮತಿ ಪಾರ್ವತಿಯವರಿಗೆ ಇಡಿ ಜಾರಿ ಮಾಡಿದ್ದ ನೋಟೀಸ್ ಅನ್ನು ರದ್ದು ಪಡಿಸಿದ್ದಲ್ಲದೆ ಇಡಿಯು ರಾಜಕೀಯ ಪ್ರೇರಿತವಾಗಿ ವರ್ತಿಸುತ್ತಿದೆ ಎನ್ನುವರ್ಥದ ಅಭಿಪ್ರಾಯ ವ್ಯಕ್ತಪಡಿಸಿದೆ.ಕರ್ನಾಟಕ ಹೈಕೋರ್ಟ್ ಶ್ರೀಮತಿ ಪಾರ್ವತಿಯವರಿಗೆ ನೀಡಿದ್ದ ಇಡಿಯ ನೋಟೀಸ್ ಅನ್ನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಇಡಿ ಸುಪ್ರೀಂಕೋರ್ಟ್ ನ ಮೆಟ್ಟಿಲೇರಿತ್ತು.ಅಲ್ಲೂ ಕೂಡ ಇಡಿ ಗೆ ಹಿನ್ನಡೆ ಆಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕೈಮೇಲಾಗಿದೆ.ಇದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪರಮಾತ್ಮ ಹಾಗೂ ಮೈಲಾರನ ಅನುಗ್ರಹ ಇದೆ ಎನ್ನುವುದರ ಸ್ಪಷ್ಟ ದ್ಯೋತಕ.

 

ದೇಶದಾದ್ಯಂತ ಕಾರಣಿಕ ನುಡಿಯಿಂದ ಪ್ರಸಿದ್ಧವಾಗಿರುವ ಮೈಲಾರನ ಕ್ಷೇತ್ರದ ಧರ್ಮಕರ್ತರಾಗಿ ವೆಂಕಪ್ಪಯ್ಯ ಒಡೆಯರ್ ಸುಳ್ಳು ಹೇಳಬಾರದಿತ್ತು.ಧಾರ್ಮಿಕ ಕ್ಷೇತ್ರಗಳಲ್ಲಿ ಕುಳಿತ ವ್ಯಕ್ತಿಗಳು ದೈವನಿಷ್ಠರಾಗಿರಬೇಕು,ಸತ್ಯನಿಷ್ಠರಾಗಿರಬೇಕೇ ಹೊರತು ವ್ಯಕ್ತಿನಿಷ್ಠರಾಗಿರಬಾರದು.ಮುಖನೋಡಿ ಮಣೆಹಾಕುವ,ಸ್ವಾರ್ಥಪ್ರೇರಿತರಾಗಿ ನಡೆಯುವ ಬುದ್ಧಿ ಧಾರ್ಮಿಕ ಕ್ಷೇತ್ರಗಳ ವ್ಯಕ್ತಿಗೆ ಸಲ್ಲದು.

 

22.07.2025