ಕಾಲಜ್ಞಾನ : ಹೂವಿನ ಹಡಗಲಿ ಮೈಲಾರನ ಹೇಳಿಕೆ : ತುಂಬಿದ ಕೊಡ ತುಳುಕಿತಲೇ ಪರಾಕ್ : ಕಾರಣಿಕ ನುಡಿಯನ್ನು ತಪ್ಪಾಗಿ ಅರ್ಥೈಸಿದ ವೆಂಕಪ್ಪಯ್ಯ ಒಡೆಯರ್

  • ಕಾಲಜ್ಞಾನ : ಹೂವಿನ ಹಡಗಲಿ ಮೈಲಾರನ ಹೇಳಿಕೆ : ತುಂಬಿದ ಕೊಡ ತುಳುಕಿತಲೇ ಪರಾಕ್ : ಕಾರಣಿಕ ನುಡಿಯನ್ನು ತಪ್ಪಾಗಿ ಅರ್ಥೈಸಿದ ವೆಂಕಪ್ಪಯ್ಯ ಒಡೆಯರ್ 

ಮುಕ್ಕಣ್ಣ ಕರಿಗಾರ

 

ದೇಶದಾದ್ಯಂತ ಕಾರಣಿಕ ನುಡಿಯಿಂದ ಪ್ರಸಿಧ್ಧವಾಗಿರುವ ಹೂವಿನ ಹಡಗಲಿ ತಾಲೂಕಿನ ಮೈಲಾರನ ಕಾರಣಿಕ ನುಡಿ ಹೊರಬಿದ್ದಿದೆ.’ ತುಂಬಿದ ಕೊಡ ತುಳುಕಿತಲೇ ಪರಾಕ್’ ಎನ್ನುವುದು ಈ ವರ್ಷದ ಮೈಲಾರನ ಕಾರಣಿಕ ನುಡಿ.ಇದನ್ನು ಮೈಲಾರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ‘ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕಾರ ತ್ಯಜಿಸಿ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಸೂಚನೆ’ ಎನ್ನುವಂತೆ ಅರ್ಥೈಸಿದ್ದಾರೆ.ಇದು ಶುದ್ಧತಪ್ಪು ಮತ್ತು ಅರ್ಥಹೀನ ವ್ಯಾಖ್ಯಾನ.ವೆಂಕಪ್ಪಯ್ಯ ಒಡೆಯರ ಮೈಲಾರನ ಕಾರಣಿಕ ನುಡಿಗೆ ಅಪಾರ್ಥದ ಅಪಚಾರ ಎಸಗಿದ್ದಾರೆ‌.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮೇಲಿನ ಅಭಿಮಾನದಿಂದ ದೈವವಾಣಿಯ ಪಾವಿತ್ಯಕ್ಕೆ ಧಕ್ಕೆ ತಂದಿದ್ದಾರೆ.

 

ಮೈಲಾರನ ಈ ಬಾರಿಯ ಕಾರಣಿಕವು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗೆಗೆ ಹೇಳಲ್ಪಟ್ಟಿಲ್ಲ ಬದಲಿಗೆ ದೇಶ ಮತ್ತು ವಿಶ್ವದ ವಿದ್ಯಮಾನಗಳ ಬಗ್ಗೆ ನೀಡಿದ ಮುನ್ಸೂಚನೆಯಾಗಿದೆ.’ ತುಂಬಿದ ಕೊಡ ತುಳಿಕಿತಲೆ ಪರಾಕ್’ ಎನ್ನುವುದು ಈ ವರ್ಷ ದೇಶದಲ್ಲಿ ಘಟಿಸಲಿರುವ ಮಹಾಕಟಂಕಗಳ ಮುನ್ಸೂಚನೆ.ಕೇಂದ್ರದ ಆಡಳಿತಾರೂಢ ಬಿಜೆಪಿಯ ಇಬ್ಬರು ಪ್ರಮುಖ ನಾಯಕರುಗಳಿಗೆ ಈ ವರ್ಷ ಕಟಂಕ ಇದೆ.ಹಾಗೆಯೇ ಕಾಂಗ್ರೆಸ್ಸಿನ ಹಿರಿಯ ತಲೆಯೊಂದು ಉರುಳಲಿದೆ.ರಾಷ್ಟ್ರದ ಉನ್ನತ ಹುದ್ದೆಯಲ್ಲಿದ್ದ ಒಬ್ಬ ಹಿರಿಯ ರಾಜಕಾರಣಿ ಈ ವರ್ಷ ನಿಧನರಾಗಲಿದ್ದಾರೆ.ಜೊತೆಗೆ ವಿಶ್ವದ ಬಲಾಢ್ಯ ರಾಜಕಾರಣಿ ಒಬ್ಬರು ನಿಧನ ಹೊಂದಲಿದ್ದಾರೆ.ದೇಶದ್ರೋಹ,ಅಪರಾಧ ಕೃತ್ಯಗಳಲ್ಲಿ ತೊಡಗಿದವರು ದುರ್ಗತಿ ಹೊಂದಲಿದ್ದಾರೆ.ವಿಧ್ವಂಸಕಾರಿ ಶಕ್ತಿಗಳ ಬಲ ಕ್ಷೀಣಿಸಲಿದೆ.ಇದು ಈ ವರ್ಷದ ‘ ತುಂಬಿದ ಕೊಡ ತುಳಿಕಿತಲೆ ಪರಾಕ್’ ಕಾರಣಿಕ ನುಡಿಯ ಅರ್ಥ,ಮುನ್ಸೂಚನೆ.

 

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮುಖ್ಯಮಂತ್ರಿ ಹುದ್ದೆಗೂ ಈ ಬಾರಿಯ ಮೈಲಾರನ ಕಾರಣಿಕಕ್ಕೂ ಯಾವುದೇ ಸಂಬಂಧ ಇಲ್ಲ.ಹಾಗೆ ನೋಡಿದರೆ ಮೈಲಾರನ ಆಶೀರ್ವಾದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಇದೆ.ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದು ನಾನು ಹೇಳುತ್ತಿಲ್ಲ ಆದರೆ ಅದಕ್ಕೆ ಈಗ ಕಾಲ ಪಕ್ವವಾಗಿಲ್ಲ.ಕಾಲ ಪಕ್ವವಾಗದ ಹೊರತು ಯಾರೊಬ್ಬರ ರಾಜಕೀಯ ಮಹತ್ವಾಕಾಂಕ್ಷೆ ಈಡೇರದು.ನೊಣವಿನಕೆರೆಯ ಸ್ವಾಮಿಗಳು ಒಬ್ಬರು ಡಿ.ಕೆ.ಶಿವಕುಮಾರ ಅವರು ಈಗ ಮುಖ್ಯಮಂತ್ರಿ ಆಗುತ್ತಾರೆ,ಆಗ ಮುಖ್ಯಮಂತ್ರಿ ಆಗುತ್ತಾರೆ ಎನ್ನುವಂತೆ ಹೇಳುತ್ತಲೇ ಬಂದಿದ್ದಾರೆ.ನಾನು ಅವರ ಹೇಳಿಕೆ ಫಲಿಸದು ಎಂದು ಬರೆಯುತ್ತಲೇ ಬಂದಿದ್ದೇನೆ.ಇತ್ತೀಚೆಗೆ ರಂಭಾಪುರಿ ಜಗದ್ಗುರುಗಳು ಕೂಡ ಅವರಿಗೆ ಸಂಬಂಧಿಸದೆ ಇದ್ದ ವಿಷಯದಲ್ಲಿ ಅನಗತ್ಯವಾಗಿ ಮಾತನಾಡಿ ‘ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾಗಲಿ’ ಎಂದು ಆಶೀರ್ವಾದ ನೀಡಿದ್ದರು.ಸ್ವಾಮಿಗಳು, ಸಂತರು ಆದವರು ತಮ್ಮಲ್ಲಿ ಆಧ್ಯಾತ್ಮಿಕ ಶಕ್ತಿ ಇದ್ದರೆ,ನಿಗ್ರಹಾನುಗ್ರಹ ಸಾಮರ್ಥ್ಯ ಇದ್ದರೆ ಮಾತ್ರ ಇಂತಹ ಮಾತುಗಳನ್ನು ಆಡಬೇಕು.ಸುಮ್ಮನೆ ರಾಜಕಾರಣದ ಮಾತುಗಳನ್ನಾಡಿ ಲಘುವಾಗಬಾರದು.

 

ಒಂದು ಸಂಗತಿ ಎಲ್ಲರ ಗಮನದಲ್ಲಿರಬೇಕು ,ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆದದ್ದು ಕಾಂಗ್ರೆಸ್ ಪಕ್ಷದ ಶಾಸಕರ ಬಲದಿಂದ ಮತ್ತು ದೈವಾನುಗ್ರಹದಿಂದ.ದೇವರನ್ನು ನಂಬದ,ಪೂಜಿಸದ ಸಿದ್ಧರಾಮಯ್ಯನವರು ಹಿಂದಣ ಜನ್ಮಗಳ ಸತ್ಕರ್ಮಗಳ ಫಲವಾಗಿ ಮುಖ್ಯಮಂತ್ರಿ ಪದವಿಯನ್ನು ಅನುಭವಿಸುತ್ತಿದ್ದಾರೆ.ಅವರ ಮುಖ್ಯಮಂತ್ರಿ ಪದವಿ ಹೋಗಬೇಕು ಎಂದರೆ ದೈವ ಅವರ ವಿರುದ್ಧ ಮುನಿಸಿಕೊಳ್ಳಬೇಕು.ಆದರೆ ಪರಮಾತ್ಮನ ಅನುಗ್ರಹಬಲ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗಿದೆ.ವಿಶ್ವನಿಯಾಮಕನಾದ ವಿಶ್ವೇಶ್ವರ ಶಿವನ ಹೊರತು ಯಾವ ದೈವವೂ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗೆ ಇಳಿಸದು.

 

ಯೌಗಿಕ ಬಲದಿಂದ ಆರೈದು ಹೇಳುವುದಾದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾರದೇ‌ ಒತ್ತಡ,ಯಾವುದೇ ತಂತ್ರಕ್ಕೆ ಮಣಿದು ತಮ್ಮ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಲಾರರು.ಆದಾಗ್ಯೂ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಲಾಗದು.ಅವರ ಆರೋಗ್ಯ ಕೈಕೊಡಬಹುದು,ದೇಹಾರೋಗ್ಯ ವಿಷಮ ಸ್ಥಿತಿಗೆ ತಲುಪಬಹುದು. ಆಗ ಅವರಾಗಿಯೇ ಮುಖ್ಯಮಂತ್ರಿ ಪದವಿಯನ್ನು ಬಿಟ್ಟು ಕೊಡಬಹುದು. ಅಲ್ಲದೆ ಡಿ.ಕೆ.ಶಿವಕುಮಾರ ಅವರಿಗೆ ಇರುವ ಮುಖ್ಯಮಂತ್ರಿ ಯೋಗ ಬಹುದೀರ್ಘಕಾಲದ ಯೋಗವಲ್ಲ.ಹಾಗಾಗಿ ಡಿ.ಕೆ.ಶಿವಕುಮಾರ ಅವರು ಕಾಂಗ್ರೆಸ್ ಪಕ್ಷದ ಅಧಿಕಾರದ ಕೊನೆಯ ಭಾಗದಲ್ಲಿ ಮುಖ್ಯಮಂತ್ರಿ ಆಗಬಹುದು .ಆದರೂ ಅದಕ್ಕೂ ಸಾಕಷ್ಟು ಅಡ್ಡಿ ಆತಂಕಗಳಿವೆ ಎನ್ನುವುದನ್ನು ಅವರು ಮರೆಯಬಾರದು. ಪರಿವರ್ತನಾ ಶೀಲವಾದ ಕಾಲಗತಿಯಲ್ಲಿ ಪರಿವರ್ತನೆಯೊಂದೇ ಡಿ.ಕೆ.ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಆಗಲು ಇರುವ ಏಕೈಕ ಆಸರೆ.ಮನಸ್ಸುಗಳ ಪರಿವರ್ತನೆ ಆಗಬೇಕು.ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮನಸ್ಸು ಪರಿವರ್ತನೆ ಆಗಬೇಕು.ಡಿ.ಕೆ.ಶಿವಕುಮಾರ ಅವರು ಸಿದ್ಧರಾಮಯ್ಯನವರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿದರೆ ಅವರು ಸುಲಭವಾಗಿ ಮುಖ್ಯಮಂತ್ರಿ ಆಗುತ್ತಾರೆ.

 

14.07.2025