ರಾಯಚೂರು : ಮಾತನಾಡುವ ಮಹಾದೇವ’ನ ನಿತ್ಯಲೀಲಾಕ್ಷೇತ್ರವಾದ ಗಬ್ಬೂರಿನ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜೂನ್ ೨೯ ರ ರವಿವಾರದಂದು ಒಂದು ನೂರ ಹನ್ನೊಂದನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಶಿವಾಭಯವನ್ನು ಅಪೇಕ್ಷಿಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರಾನುಗ್ರಹವನ್ನು ಕರುಣಿಸಿದರು.
ನೂರಾ ಹನ್ನೊಂದನೆಯ ಶಿವೋಪಶಮನದ ವಿಶೇಷವೆಂದರೆ ಮೂರು ಜನ ಪ್ರಸಿದ್ಧ ವೈದ್ಯರುಗಳು ಭವರೋಗವೈದ್ಯ ಶಿವನ ಸನ್ನಿಧಿಯನ್ನರಸಿ ಬಂದಿದ್ದು.ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಿದ್ಧಿ- ಪ್ರಸಿದ್ಧಿಗಳನ್ನು ಪಡೆದೂ ಈ ಮೂರು ಜನ ವೈದ್ಯರುಗಳು ಆಧ್ಯಾತ್ಮಿಕ ಅಭೀಪ್ಸೆಯಿಂದ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಬಳಿ ಬಂದಿದ್ದು ವಿಶೇಷವಾಗಿತ್ತು.ಉತ್ತರ ಪ್ರದೇಶದ ಅಮೋರಾ ಜಿಲ್ಲೆಯ ಗಾಜ್ರುಲಾದ ವೆಂಕಟೇಶ್ವರ ವಿಶ್ವವಿದ್ಯಾಲಯ ವೆಂಕಟೇಶ್ವರ ಮೆಡಿಕಲ್ ಕಾಲೇಜಿನ ಪ್ಯಾಥೋಲಜಿ ವಿಭಾಗದ ಮುಖ್ಯಸ್ಥರು ಮತ್ತು ಪ್ರೊಫೆಸರ್ ಆಗಿರುವ ಡಾಕ್ಟರ್ ಎಂ ಎಚ್ ಪ್ರಭು,ಕರ್ನೂಲಿನ ವಿಶ್ವಭಾರತಿ ಮೆಡಿಕಲ್ ಕಾಲೇಜಿನ ಪ್ಯಾಥೋಲಜಿ ವಿಭಾಗದ ಸಹಾಯಕ ಪ್ರೊಫೆಸರ್ ಡಾಕ್ಟರ್ ಮಹೇಶ ಸಾತಪುಟೆ ಮತ್ತು ಮಹಾಶೈವ ಧರ್ಮಪೀಠದೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ವಿಜಯಪುರದ ಪ್ರಸಿದ್ದ ರೇಡಿಯಾಲಾಜಿಸ್ಟ್ ಡಾಕ್ಟರ್ ವಿಶಾಲ್ ನಿಂಬಾಳ ಈ ಮೂವರು ವೈದ್ಯರುಗಳು ಇಂದು ಆತ್ಮಸಾಕ್ಷಾತ್ಕಾರದ ಪಥವನ್ನು ಅರಸಿ ಮಹಾಶೈವ ಧರ್ಮಪೀಠಕ್ಕೆ ಬಂದಿದ್ದರು.ಈ ಮೂವರು ವೈದ್ಯರುಗಳು ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ ಹೆಸರುಗಳಿಸಿದ್ದರೂ ಎಲ್ಲ ವೈದ್ಯರುಗಳಂತೆ ಭೌತಿಕ ಪ್ರಪಂಚವೇ ಸರ್ವಸ್ವ ಅಲ್ಲ,ಲೌಕಿಕ ಪ್ರಪಂಚದಾಚೆ ಇರುವ ಅಲೌಕಿಕ ಆನಂದದ ಮೂಲವನ್ನು ಹುಡುಕಿ,ಪಡೆಯಬೇಕು ಎನ್ನುವ ಉತ್ಕಟಾಕಾಂಕ್ಷೆ ಇರುವ ಅಪರೂಪದ ವೈದ್ಯರುಗಳು. ಸುಮಾರು ಹದಿನೇಳು ವರ್ಷಗಳ ವೈದ್ಯಕೀಯ ಸೇವಾ ಅನುಭವ ಹೊಂದಿರುವ ಡಾಕ್ಟರ್ ಎಂ ಎಚ್ ಪ್ರಭು ಅವರು ಆಧ್ಯಾತ್ಮಿಕ ತೀವ್ರ ಹಂಬಲದಿಂದ ದೇಶದೆಲ್ಲೆಡೆ ಗುರುಗಳು, ಸ್ವಾಮಿಗಳು, ಸಂತರುಗಳನ್ನು ಸಂದರ್ಶಿಸಿಯೂ ಅಲ್ಲಿಯ ಸತ್ತ್ವಹೀನ,ಡಾಂಭಿಕತೆಯಿಂದ ರೋಸಿ ಹೋದವರು.ಭೋಗಜೀವನವನ್ನಪ್ಪಿದ ಸಂನ್ಯಾಸಿ,ಮಠಾಧೀಶರುಗಳ ನಡೆ ನುಡಿ ಕಂಡು ಬೇಸರಗೊಂಡವರು.ಡಾಕ್ಟರ್ ಮಹೇಶ ಅವರು ಆಧ್ಯಾತ್ಮಿಕ ಸಾಧನೆಯ ಉತ್ಕಟೇಚ್ಛೆಯನ್ನು ಹೊಂದಿ ಸಮರ್ಥ ಮಾರ್ಗದರ್ಶಕರೊಬ್ಬರ ಅನ್ವೇಷಣೆಯಲ್ಲಿ ಇದ್ದವರು.ಮಹಾಶೈವ ಧರ್ಮಪೀಠದೊಂದಿಗೆ ಕಳೆದ ಎರಡು ವರ್ಷಗಳಿಂದ ನಿಕಟ ಸಂಪರ್ಕದಲ್ಲಿ ಇರುವ ವಿಜಯಪುರದ ಪ್ರಸಿದ್ಧ ರೇಡಿಯಾಲಾಜಿಸ್ಟ್ ಡಾಕ್ಟರ್ ವಿಶಾಲ್ ನಿಂಬಾಳ ಅವರು ಡಾಕ್ಟರ್ ಎಂ ಎಚ್ ಪ್ರಭು ಮತ್ತು ಡಾಕ್ಟರ್ ಮಹೇಶ ಸಾತಪುಟೆ ಅವರಿಬ್ಬರಿಗೆ ‘ ನಿಮ್ಮಿಬ್ಬರ ಆಧ್ಯಾತ್ಮಿಕ ಜ್ಞಾನಾಪೇಕ್ಷೆಯನ್ನು ತಣಿಸುವ,ಯೋಗಮಾರ್ಗದಲ್ಲಿ ಮುನ್ನಡೆಸುವ ಸಮರ್ಥಗುರುವೊಬ್ಬರು ಇಲ್ಲಿದ್ದಾರೆ ಬನ್ನಿ’ ಎಂದು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರತ್ತ ಪಥ ನಿರ್ದೇಶನ ಮಾಡಿದರಲ್ಲದೆ ಸ್ವತಃ ಅವರಿಬ್ಬರನ್ನು ಕರೆದುಕೊಂಡು ಮಹಾಶೈವ ಧರ್ಮಪೀಠದತ್ತ ಇಂದು ಹೊರಟು ಬಂದಿದ್ದರು.ಈ ಮೂವರು ವೈದ್ಯರುಗಳೊಂದಿಗೆ ಪ್ರಗತಿಪರ ನಿಲುವಿನ ವಿಚಾರವಾದಿಗಳು ಮತ್ತು ಸಿಂದಗಿ ತಾಲೂಕಿನ ಆಲಮೇಲದಲ್ಲಿ ಶಿಕ್ಷಕರಾಗಿರುವ ಅಮೋಘಸಿದ್ಧ ಪರಂಪರೆಯ ಇಂಡಿಯ ಮಲ್ಲಿಕಾರ್ಜುನ ಬಾಗಲವಾಡ ಅವರೂ ಕೂಡ ಬಂದಿದ್ದರು.ಮಲ್ಲಿಕಾರ್ಜುನ ಬಾಗಲವಾಡ ಅವರು ವೈಚಾರಿಕ ನಿಲುವನ್ನು ಹೊಂದಿರುವ ಶಿಕ್ಷಕರು ಆಗಿದ್ದು ಯಾರನ್ನೂ ಸುಲಭವಾಗಿ ಒಪ್ಪುವವರಲ್ಲ,ಆದರೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಲ್ಲಿ ಅತ್ಯಂತ ನಿಷ್ಠೆ, ಶ್ರದ್ಧೆ ಹೊಂದಿದ್ದಾರೆ.
ಇಂದು ನೂರಾ ಹನ್ನೊಂದನೆಯ ಶಿವೋಪಶಮನ ಕಾರ್ಯ ದ ದಿನಾಗಿದ್ದರಿಂದ ಶ್ರೀ ಮುಕ್ಕಣ್ಣ ಕರಿಗಾರ ಅವರು ಮಹಾಶೈವ ಧರ್ಮಪೀಠದ ಭಕ್ತರುಗಳನ್ನು ನೋಡುತ್ತಲೇ ಡಾಕ್ಟರ್ ಎಂ ಎಚ್ ಪ್ರಭು,ಡಾಕ್ಟರ್ ವಿಶಾಲ್ ನಿಂಬಾಳ ಮತ್ತು ಡಾಕ್ಟರ್ ಮಹೇಶ ಸಾತಪುಟೆ ಅವರುಗಳ ಆಧ್ಯಾತ್ಮಿಕ ಅಭೀಪ್ಸೆಗೆ ಉತ್ತರ ನೀಡುತ್ತಿದ್ದರು.’ ಆಧ್ಯಾತ್ಮ ಎನ್ನುವುದು ಶುದ್ಧ ವಿಜ್ಞಾನ.ವಿಜ್ಞಾನವು ಹೇಗೆ ವಿಜ್ಞಾನಿಗಳ ಪರಿಶ್ರಮದ ಫಲವೋ ಹಾಗೆಯೇ ಮಂತ್ರಗಳು,ಯೋಗಗಳು ಋಷಿಗಳ ದರ್ಶನ,ಕಾಣ್ಕೆ.ನಮ್ಮ ಋಷಿಗಳು ತಮ್ಮ ದರ್ಶನದಿಂದ ಕಂಡುಂಡ ಸತ್ಯವನ್ನೇ ದಾಖಲಿಸಿದ್ದಾರೆ.ಸಾಧನೆಯಿಂದ ಯಾರಾದರೂ ಸಾಕ್ಷಾತ್ಕರ ಪಡೆಯಬಹುದು’ ಎಂದು ವಿವರಿಸುತ್ತ ಶಿವೋಪಶಮನದ ಆಧ್ಯಾತ್ಮಿಕ ಅರ್ಥವಿವರಣೆ,ಹಿನ್ನೆಲೆ ಕೂಡ ವಿವರಿಸಿದರು.ನಂತರ ನಡೆದ ಆತ್ಮತತ್ತ್ವಚಿಂತನೆಯಲ್ಲಿ ನಾಮ ಜಪದಿಂದ ಕುಂಡಲಿನಿ ಯೋಗದವರೆಗೆ ಹಲವು ಯೋಗಪರಂಪರೆಗಳ ಬಗ್ಗೆ ವಿವರಿಸಿದರು.ಭವರೋಗ ವೈದ್ಯ ವಿಶ್ವೇಶ್ವರನ ಸನ್ನಿಧಿಯಲ್ಲಿ ಶಿವನ ಪ್ರತಿನಿಧಿ ನೀಡಿದ ಆಧ್ಯಾತ್ಮಿಕ ವಿವರಣೆಯಿಂದ ಮೂವರು ವೈದ್ಯರು ಮತ್ತು ಒಬ್ಬ ವಿಚಾರವಾದಿ ಸಂತೃಪ್ತರಾದರು. ಪೀಠಾಧ್ಯಕ್ಷರು ಈ ನಾಲ್ವರನ್ನು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.
ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಶರಣಗೌಡ ಮಾಲಿಪಾಟೀಲ್ ಹೊನ್ನಟಗಿ, ಚಿತ್ರ ಕಲಾವಿದ ಶರಣಪ್ಪ ಬೂದಿನಾಳ,ಶಿವಯ್ಯಸ್ವಾಮಿ ಮಠಪತಿ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ, ಏಳುಬಾವೆಪ್ಪಗೌಡ , ಸಿದ್ರಾಮಯ್ಯಸ್ವಾಮಿ ಹಳ್ಳಿ,ವೀರಭದ್ರಯ್ಯಸ್ವಾಮಿ,ಬಸವಲಿಂಗ ಪೂಜಾರಿ ಅಮರಾಪುರ,ಶಿವಪ್ಪ ಪೂಜಾರಿ, ವಿಶ್ವನಾಥ,ಯಲ್ಲಪ್ಪ ಕರಿಗಾರ,ರಂಗನಾಥ ಮಸೀದಪುರ, ಆಂಜನೇಯ ನಾಯಕ್ ಮಲದಕಲ್, ದಿಲೀಪಕುಮಾರ ಸುಲ್ತಾನಪುರ,ಬೂದಿಬಸವ ಶಾಂತಪ್ಪ ಕರಿಗಾರ,ಶಿವಾನಂದ ಮಸೀದಪುರ,ವೆಂಕಟೇಶ, ಆನಂದ ಬಾಡದ,ತಿಪ್ಪಯ್ಯ ಭೋವಿ,ಶಿವಕುಮಾರ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಉಪಸ್ಥಿತರಿದ್ದರು.