ಶಹಾಪುರ : ತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುದೀರ್ಘ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಲ್ಲನಗೌಡ ಬಿರಾದಾರ ಅವರಿಗೆ ಹಳೆ ವಿದ್ಯಾರ್ಥಿಗಳ ನೂತನ ಸಂಘದಿಂದ ಸನ್ಮಾನ ಸಮಾರಂಭ ಇಂದು ನಡೆಯಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಹಿರಿಯ ಸದಸ್ಯ ಅಮರೇಶ ಗೋಲಗೇರಿ ಹೇಳಿದ್ದಾರೆ.ಗ್ರಾಮದ ಗ್ರಾಪಂ ಗ್ರಂಥಾಲಯದಲ್ಲಿ ಶುಕ್ರವಾರ ಪತ್ರಿಕೆಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು ನಮ್ಮ ದೋರನಹಳ್ಳಿ ಗ್ರಾಮದಲ್ಲಿ ಒಂದೇ ಒಂದು ಪ್ರೌಢಶಾಲೆ ಇದ್ದು ಇಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಕ್ಕಳು ಪ್ರೌಢಶಾಲಾ ಶಿಕ್ಷಣ ಮಾಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ವಿಷಯವನ್ನು ಬೋಧಿಸಿ ದಾರಿ ದೀಪವಾಗಿದ್ದಾರೆ.
ಅಂತಹ ಗುರುವಿನ ನಿವೃತ್ತಿಯನ್ನು ಗ್ರಾಮದ ಮತ್ತು ಪ್ರೌಢಶಾಲೆಯ ಹಳೆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಹಳೆ ವಿದ್ಯಾರ್ಥಿಗಳ ಸಂಘದಿಂದ ಗೌರವಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಾಸ್ಯ ಭಾಷಣಕಾರರು ಬಸವರಾಜ ಮಹಾಮನಿ ಮತ್ತು ಗುಂಡಣ್ಣ ಡಿಗ್ಗಿ ಹಾಸ್ಯದ ಬುಗ್ಗೆ ಹರಿಯಲಿದೆ.
ಕಾರ್ಯಕ್ರಮದಲ್ಲಿ ದೋರನಹಳ್ಳಿ ಹಿರೇಮಠದ ಶ್ರೀ ಅಭಿನವ ಮಹಾಂತೇಶ್ವರ ಶಿವಾಚಾರ್ಯರು , ಚಿಕ್ಕಮಠದ ಶ್ರೀ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಸಿದ್ದಾರೂಢ ಮಠದ ಶ್ರೀ ಭೀಮಾಶಂಕರಾನಂದ ಅವಧೂತರ ನೇತೃತ್ವ, ತಾಲೂಕು ಶಿಕ್ಷಣಾ ಸುಧಾರಣಾ ಸಮಿತಿ ಶಹಾಪುರದ ಅಧ್ಯಕ್ಷರಾದ ಶಾಂತಗೌಡ ಪಾಟೀಲ ಉದ್ಘಾಟನೆ, ಕ್ಷೇತ್ರ ಶಿಕ್ಷಣಾಧಿಕಾರಿ ವಾಯ್.ಎಸ್.ಹರಗಿ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ತಾ ಪಂ ಇಓ ಬಸವರಾಜ ಶರಬೈ, ಮದ್ರಿಕಿ ಪ್ರೌಢಶಾಲಾ ಮುಖ್ಯಗುರು ಅಮರೇಶ ಕೆ, ದೋರನಹಳ್ಳಿ ಪ್ರೌಢಶಾಲಾ ಮುಖ್ಯಗುರು ಶಾಂತಪ್ಪ ಕೆರಟಗಿ, ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ದೊರೆ, ಉಪಾಧ್ಯಕ್ಷ ಈರಣ್ಣ ಕಸನ್, ಪಿಡಿಓ ದೇವರಾಜ ಮೌರ್ಯ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ನಾಗಯ್ಯ ಗುತ್ತೇದಾರ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮವು ಹಳೆ ವಿದ್ಯಾರ್ಥಿಗಳ ಸಂಘದ ಮೊದಲ ಕಾರ್ಯಕ್ರಮದ ಮೂಲಕ ಮುನ್ನಡಿ ಬರೆಯಲಿದ್ದು ಮುಂಬರುವ ದಿನಮಾನದಲ್ಲಿ ಗ್ರಾಮದ ಶಾಲೆಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದರು.