ಮೂರನೇ ಕಣ್ಣು
ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸಚಿವ ಸೋಮಣ್ಣನವರ ಕಾಲಿಗೆ ಬಿದ್ದದ್ದು ಸರಿಯಲ್ಲ
ಮುಕ್ಕಣ್ಣ ಕರಿಗಾರ
ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿಯವರು ಕೇಂದ್ರ ಸಚಿವ ವಿ ಸೋಮಣ್ಣನವರ ಕಾಲಿಗೆ ಬಿದ್ದು ನಮಸ್ಕರಿಸುವ ಮೂಲಕ ಸಾರ್ವಜನಿಕ ಸೇವಕರುಗಳಿಗೆ ತಕ್ಕುದಲ್ಲದ ನಡೆಯನ್ನು ಪ್ರದರ್ಶಿಸಿದ್ದಾರೆ.ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣನವರು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಕೋಡಿಮಠಕ್ಕೆ ಶನಿವಾರ ಭೇಟಿ ನೀಡಿದಾಗ ಸಚಿವರು ಬರುತ್ತಿದ್ದಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸಚಿವರ ಕಾಲುಗಳಿಗೆ ನಮಸ್ಕರಿಸಿದ್ದಾರೆ( ಪ್ರಜಾವಾಣಿ ಜೂನ್ ,23,2025 ಪುಟ 4 ರಾಜ್ಯ) ಜೊತೆಗೆ ಜಿಲ್ಲಾಧಿಕಾರಿಯವರು ‘ ಸರ್,ನಿಮ್ಮನ್ನು ನೋಡಿ ಖುಷಿಯಾಯಿತು. ನೀವು ನಮಗೆ ಬಹಳ ಬೇಕಾದವರು’ ಎಂದೂ ಮಾತನಾಡಿದ್ದಾರೆ.ಕೇಂದ್ರ ಸಚಿವರಾದ ವಿ.ಸೋಮಣ್ಣನವರು ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿಯವರಿಗೆ’ ಬಹಳ ಬೇಕಾದವರು’ ಆಗಿರಬಹುದು.ಹಾಗಿದ್ದಲ್ಲಿ ಜಿಲ್ಲಾಧಿಕಾರಿಯವರು ಖಾಸಗಿಯಾಗಿ ಸೋಮಣ್ಣನವರ ಮನೆಯಲ್ಲಿ ಅವರ ಪಾದಗಳಿಗೆ ನಮಸ್ಕರಿಸಿ,ತಮ್ಮ ಕೃತಜ್ಞತೆ ಸಲ್ಲಿಸಬಹುದಿತ್ತು.ಸಾರ್ವಜನಿಕರೆದುರು ಕೇಂದ್ರ ಸಚಿವ ವಿ.ಸೋಮಣ್ಣನವರ ಪಾದಗಳಿಗೆ ನಮಸ್ಕರಿಸುವ ಮೂಲಕ ಲತಾ ಕುಮಾರಿಯವರು ಜಿಲ್ಲಾಧಿಕಾರಿ ಹುದ್ದೆಗೆ ತಕ್ಕುದಲ್ಲದ ನಡೆಯನ್ನು ಪ್ರದರ್ಶಿಸಿದ್ದಲ್ಲದೆ ಐಎಎಸ್ ಅಧಿಕಾರಿಗಳಿಗೂ ಮುಜುಗರ ಉಂಟಾಗುವಂತೆ ಮಾಡಿದ್ದಾರೆ.
ಕರ್ನಾಟಕ ಆಡಳಿತ ಸೇವೆಯಿಂದ ಐಎಎಸ್ ಗೆ ಬಡ್ತಿ ಪಡೆದ ಕೆಲವು ಅಧಿಕಾರಿಗಳು ಆಗಾಗ ಸಾರ್ವಜನಿಕ ಸೇವಕರಿಗೆ ತರವಲ್ಲದ ಇಂತಹ ನಡೆಗಳನ್ನು ಪ್ರದರ್ಶಿಸುತ್ತಿದ್ದಾರೆ.ಐಎಎಸ್ ಗೆ ಬಡ್ತಿ ಹೊಂದುವುದೇ ಜೀವನದ ಸಾಧನೆ ಎಂದು ಭಾವಿಸಿರುವ ಕೆಎಎಸ್ ಅಧಿಕಾರಿಗಳು ಐಎಎಸ್ ಗೆ ಬಡ್ತಿ ಪಡೆದಾಗ ಕನಿಷ್ಟ ಐಎಎಸ್ ಸೇವೆಯ ಘನತೆ ಗೌರವಗಳನ್ನಾದರೂ ಎತ್ತಿ ಹಿಡಿಯಬೇಕು.ಹೇಗು ಹೇಗೋ ಐಎಎಎಸ್ ಗೆ ಬಡ್ತಿ ಪಡೆದ ಕೆಎಎಸ್ ಅಧಿಕಾರಿಗಳು ನೇರ ನೇಮಕಾತಿಹೊಂದಿರುವ ಐಎಎಸ್ ಅಧಿಕಾರಿಗಳ ಅವಜ್ಞೆಗೆ ಪಾತ್ರರಾಗಿರುವುದಲ್ಲದೆ ಇಂತಹ ಸಲ್ಲದ ನಡೆಗಳ ಮೂಲಕ ಸಾರ್ವಜನಿಕರ ಅತೃಪ್ತಿಗೂ ಕಾರಣರಾಗುತ್ತಾರೆ.
ಕೇಂದ್ರ ಸಚಿವರು ಹುದ್ದೆಯ ಬಲದಿಂದ ಹಿರಿಯರು,ಗೌರವಾರ್ಹರು.ಜಿಲ್ಲಾಧಿಕಾರಿಯವರು ಶಿಷ್ಟಾಚಾರ ನಿಯಮಗಳಲ್ಲಿ ಅವಕಾಶವಿದ್ದರೆ ಬೇಕಿದ್ದರೆ ಸಚಿವರನ್ನು ವಿಮಾನ ನಿಲ್ದಾಣ ಅಥವಾ ಅವರು ಬರುವ ಸ್ಥಳಕ್ಕೆ ಹೋಗಿ ರಿಸೀವ್ ಮಾಡಬಹುದಿತ್ತು.ಕೇಂದ್ರ ಸಚಿವರಿಗೆ ಸಲ್ಲಿಸಬಹುದಾದ ಶಿಷ್ಟಾಚಾರದ ಗೌರವ ಸಲ್ಲಿಸಬಹುದಿತ್ತು.ಅದನ್ನು ಬಿಟ್ಟು ಕೋಡಿಮಠಕ್ಕೆ ಬಂದ ಕೇಂದ್ರ ಸಚಿವ ವಿ.ಸೋಮಣ್ಣನವರ ಪಾದಗಳಿಗೆ ನಮಸ್ಕರಿಸುವ ಮೂಲಕ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿಯವರು ಸಾರ್ವಜನಿಕ ಸೇವಕರಿಗೆ ತಕ್ಕುದಲ್ಲದ ನಡೆ ತೋರಿದ್ದಾರೆ.
ಜಿಲ್ಲಾಧಿಕಾರಿಗಳಾದ ಐಎಎಸ್ ಅಧಿಕಾರಿಗಳೇ ಕೇಂದ್ರ ಸಚಿವರ ಪಾದಗಳಿಗೆ ನಮಸ್ಕರಿಸಿದ ಮೇಲೆ ನಾವು ನಮಸ್ಕರಿಸುವುದು ತಪ್ಪೇನು ಎಂದು ಜಿಲ್ಲಾಧಿಕಾರಿಗಳ ಅಧೀನದ ಅಧಿಕಾರಿಗಳು ಇತರ ಸಚಿವರುಗಳ ಪಾದಗಳಿಗೆ ನಮಸ್ಕರಿಸ ಹೊರಟು ಅದನ್ನೊಂದು ‘ಸರಕಾರಿ ಸಂಪ್ರದಾಯ’ ಮಾಡಬಹುದಲ್ಲ ! ಬಹಳಷ್ಟು ಜನ ರಾಜ್ಯ ಸೇವೆಯ ಅಧಿಕಾರಿಗಳು ಸಚಿವರುಗಳು,ಶಾಸಕರುಗಳ ಪಾದಗಳಿಗೆ ನಮಸ್ಕರಿಸಿ ಕೃತಾರ್ಥರಾಗುವ ‘ಘನಕಾರ್ಯ’ ಮಾಡುತ್ತಿದ್ದಾರೆ.ಈಗ ಐಎಎಸ್ ಅಧಿಕಾರಿಯಾಗಿರುವ ಲತಾಕುಮಾರಿಯವರೇ ಅಂತಹ ಸಂಪ್ರದಾಯ ಪ್ರಾರಂಭಿಸಲು ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಸೇವಕರಾಗಿರುವ ಸರಕಾರಿ ಅಧಿಕಾರಿಗಳು ಶಾಸಕರುಗಳು ಮತ್ತು ಸಚಿವರಾದವರುಗಳಿಗೆ ಗೌರವ ಕೊಡಬೇಕು.ಅವರುಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿಯಮಗಳ ಪರಿಮಿತಿಯಲ್ಲಿ ಮಾಡಿಕೊಡಬೇಕು.ಅದನ್ನು ಬಿಟ್ಟು ಶಾಸಕರುಗಳು,ಸಚಿವರುಗಳ ಪಾದಗಳಿಗೆ ನಮಸ್ಕರಿಸುವ ‘ ಅತಿ ವಿನಯ’ ಪ್ರದರ್ಶಿಸಬಾರದು.ಪ್ರಜಾಪ್ರಭುತ್ವ ಯುಗದಲ್ಲಿ ಬದುಕುತ್ತಿರುವ ,ಪ್ರಬುದ್ಧ ಸಂವಿಧಾನದ ಆಶಯಗಳಂತೆ ಜನಸಾಮಾನ್ಯರ ಹಿತವನ್ನು ಎತ್ತಿಹಿಡಿಯಬೇಕಾದ ಸರಕಾರಿ ಅಧಿಕಾರಿಗಳು ರಾಜಕಾರಣಿಗಳು ಅವರು ಯಾರೇ ಆಗಿರಲಿ,ಎಷ್ಟೇ ದೊಡ್ಡ ಹುದ್ದೆಗಳಲ್ಲಿ ಇರಲಿ ಅವರ ಪಾದಗಳಿಗೆ ನಮಸ್ಕರಿಸಬಾರದು.ರಾಜಕಾರಣಿಗಳ ಪಾದಗಳಿಗೆ ಮಾತ್ರವಲ್ಲ ಯಾವುದೇ ಸ್ವಾಮಿ -ಮಠಾಧೀಶರ ಪಾದಗಳಿಗೂ ನಮಸ್ಕರಿಸಬಾರದು.ಬೇಕಿದ್ದರೆ ಕೈಮುಗಿಯಬಹುದಷ್ಟೆ.ಜಿಲ್ಲಾಧಿಕಾರಿಗಳು ಜಿಲ್ಲಾ ದಂಡಾಧಿಕಾರಿಗಳೂ ಅಹುದು.ಅನಿವಾರ್ಯ ಸರಕಾರಿ ಶಿಷ್ಟಾಚಾರವನ್ನಲ್ಲದೆ ಮತ್ತೆ ಅಸಂಗತವಾದ ನಡೆ ನುಡಿಗಳನ್ನು ಅವರು ಪಾಲಿಸಬಾರದು.
ಸರಕಾರಿ ಅಧಿಕಾರಿಗಳು, ನೌಕರರುಗಳು ಸಾರ್ವಜನಿಕರ ತೆರಿಗೆಯ ಹಣದಲ್ಲಿ ತಮ್ಮ ಸಂಬಳ – ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ.ಸಾರ್ವಜನಿಕರ ಸೇವೆಯನ್ನು ನಿಷ್ಠೆ- ಪ್ರಾಮಾಣಿಕತೆಗಳಿಂದ ಮಾಡಬೇಕು.ಸಂವಿಧಾನದ ಆಶಯ,ಮೌಲ್ಯಗಳನ್ನು ಎತ್ತಿ ಹಿಡಿಯಬೇಕು.ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು.ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಕಾಲಮಿತಿಯಲ್ಲಿ ಮಾಡಿಕೊಡಬೇಕು.ಕಾಲಮಿತಿಯಲ್ಲಿ ಕಡತಗಳನ್ನು ವಿಲೆ ಮಾಡಬೇಕು.ನಿಗದಿತ ಅವಧಿಯಲ್ಲಿ ಸರಕಾರಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.ವರ್ಗಾವಣೆಗೆ ಹೆದರಬಾರದು; ಇಂಥಹದ್ದೆ ಹುದ್ದೆ ಆಗಬೇಕು ಎಂದು ಪಟ್ಟುಹಿಡಿಯಬಾರದು.ಆಯಕಟ್ಟಿನ ಹುದ್ದೆಗಳಿಗಾಗಿ ಹಾದಿತಪ್ಪಬಾರದು.ಸರಕಾರದಿಂದ ಅನ್ಯಾಯವಾದಾಗ ಸಮುಚಿತ ಮಾರ್ಗದ ಮೂಲಕ ಅನ್ಯಾಯ ಸರಿಪಡಿಸಲು ಕೋರಬೇಕು.ಇಲ್ಲದಿದ್ದರೆ ನ್ಯಾಯಾಲಯಗಳ ಮೂಲಕ ತಮ್ಮ ಹಕ್ಕು ಪಡೆಯಬೇಕು.ಅದನ್ನು ಬಿಟ್ಟು ರಾಜಕಾರಣಿಗಳ ಪಾದಮುಟ್ಟುವಂತಹ ಸಲ್ಲದ ಕಾರ್ಯ ಮಾಡಬಾರದು.
೨೩.೦೬.೨೦೨೫