ಅಪ್ಪಟ ದೇಶಭಕ್ತ ಮಲ್ಲಿಕಾರ್ಜುನ ಖರ್ಗೆಯವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿದ್ದು ಸರಿಯಲ್ಲ, ಸಹ್ಯವೂ ಅಲ್ಲ

ಮೂರನೇ ಕಣ್ಣು

ಅಪ್ಪಟ ದೇಶಭಕ್ತ ಮಲ್ಲಿಕಾರ್ಜುನ ಖರ್ಗೆಯವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿದ್ದು ಸರಿಯಲ್ಲ, ಸಹ್ಯವೂ ಅಲ್ಲ.

ಮುಕ್ಕಣ್ಣ ಕರಿಗಾರ

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿದ್ದಕ್ಕೆ ಪ್ರತಿಭಟನಾರ್ಥವಾಗಿ ದೆಹಲಿಯ ಯುವ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ದೂರದರ್ಶನ ಪತ್ರಕರ್ತ ಅಶೋಕ ಶ್ರೀವಾಸ್ತವ ಅವರ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದು ನವದೆಹಲಿಯ ತುಘಲಕ್ ರಸ್ತೆಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಗ್ಗೆ ವರದಿಯಾಗಿದೆ.ಮೇ 08 ರಂದು ನಡೆದ ದೂರದರ್ಶನ ಕಾರ್ಯಕ್ರಮದಲ್ಲಿ ಅಶೋಕ ಶ್ರೀವಾಸ್ತವ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿದ್ದು ಅವರ ವಿರುದ್ಧ ಈಗ ದೆಹಲಿಯ ಯುವಕಾಂಗ್ರೆಸ್ ನಿಂದ ದೂರು ದಾಖಲಿಸಲಾಗಿದೆ.ಸರಕಾರಿ ಸ್ವಾಮ್ಯದ ದೂರದರ್ಶನ ಇಂತಹದ್ದೊಂದು ವರದಿ ಪ್ರಸಾರ ಮಾಡಿದ್ದು ಉಚಿತವಲ್ಲ ಮತ್ತು ಅದರ ವರದಿಗಾರ ಅಶೋಕ ಶ್ರೀವಾಸ್ತವ ಅವರ ಸಣ್ಣತನ ಖಂಡನಾರ್ಹ.

‘ಆಪರೇಶನ ಸಿಂಧೂರ’ ಹೆಸರಿನಲ್ಲಿ ಭಾರತೀಯ ಸೇನೆಯ ಅದ್ಭುತ ಸಾಹಸ ದೇಶದ ಪ್ರಜೆಗಳೆಲ್ಲರಲ್ಲಿ ಹೆಮ್ಮೆಯನ್ನುಂಟು ಮಾಡಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಜನರಲ್ಲಿ ಗೌರವಾದರಗಳು ಉಂಟಾಗಿವೆ.ಈ ಯಶಸ್ಸು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ನೇತೃತ್ವದಲ್ಲಿನ ಕೇಂದ್ರ ಬಿಜೆಪಿಗೆ ಸರಕಾರಕ್ಕೆ ಸಲ್ಲುತ್ತದೆ. ಅದನ್ನು ಯಾರೂ ಅಲ್ಲಗಳೆಯುವುದಿಲ್ಲ.ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೀರ್ತಿನೀಡುವ ಭರದಲ್ಲಿ ಅಶೋಕ ಶ್ರೀವಾಸ್ತವ ಮಲ್ಲಿಕಾರ್ಜುನ ಖರ್ಗೆಯವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿದ್ದು ಯಾಕೆ? ಮಲ್ಲಿಕಾರ್ಜುನ ಖರ್ಗೆಯವರೇನಾದರೂ ಪಾಕಿಸ್ತಾನವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರೆ ?ಅಥವಾ ಭಾರತೀಯ ವೀರ ಯೋಧರ ಕುರಿತು ಹಗುರವಾಗಿ ಮಾತನಾಡಿದ್ದರೆ?

ಪಹಲ್ಗಾಮನಲ್ಲಿ ಅಮಾಯಕ 26 ಜನರ ಹತ್ಯೆಯಾದಾಗಿನಿಂದ ಭಾರತ ಪಾಕಿಸ್ತಾನ ಕದನವಿರಾಮದ ಘಳಿಗೆಯವರೆಗಿನ ಮಲ್ಲಿಕಾರ್ಜುನ ಖರ್ಗೆಯವರ ಟ್ವೀಟ್ ಗಳನ್ನು, ಅವರ ಮಾತುಗಳನ್ನು ಕೇಳಿದ ಯಾರಿಗಾದರೂ ಮಲ್ಲಿಕಾರ್ಜುನ ಖರ್ಗೆಯವರು ಅಪ್ಪಟದೇಶಭಕ್ತರು ಎನ್ನುವುದು ಮನವರಿಕೆ ಆಗುತ್ತಿದೆ.ಆಪರೇಶನ್ ಸಿಂಧೂರ ಪ್ರಾರಂಭವಾದ ಕ್ಷಣದಲ್ಲೇ ಮಲ್ಲಿಕಾರ್ಜುನ ಖರ್ಗೆಯವರು ಭಾರತೀಯ ಯೋಧರ ಶೌರ್ಯ,ಸಾಮರ್ಥ್ಯಗಳನ್ನು ಪ್ರಶಂಸಿಸಿ ಅವರನ್ನು ಹುರಿದುಂಬಿಸುವ ಸ್ಫೂರ್ತಿದಾಯಕ ಟ್ವೀಟ್ ಮಾಡಿದ್ದರು.ಆನಂತರವೂ ಕೂಡ ಅವರು ‘ ದೇಶಮೊದಲು’ ಎನ್ನುವ ಅರ್ಥದ ಹಲವು ಸಂದೇಶಗಳನ್ನು ಶೇರ್ ಮಾಡಿದ್ದಾರೆ.ನೈಜರಾಷ್ಟ್ರಾಭಿಮಾನಿ ಆಗಿರುವ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಕ್ಷುಲ್ಲಕತನದ ಆರೋಪ ಮಾಡುವುದು ಸರಿಯಲ್ಲ.

ಸರಕಾರಿ ಸ್ವಾಮ್ಯದ ದೂರದರ್ಶನದ ಅಧಿಕಾರಿ ವರ್ಗದವರಿಗೆ ಮತ್ತು ಪತ್ರಕರ್ತ ಅಶೋಕ ಶ್ರೀವಾಸ್ತವ ಅವರಿಗೆ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮಾತ್ರವಲ್ಲ ರಾಜ್ಯಸಭಾ ಸದಸ್ಯರು ಎನ್ನುವ ಕನಿಷ್ಟ ಪ್ರಜ್ಞೆ ಬೇಡವೆ ? ಇಂತಹ ಬೇಜವಾಬ್ದಾರಿ ವರದಿಗಳಿಂದ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಂಸದೀಯ ಹಕ್ಕುಚ್ಯುತಿ ಆಗುವುದಿಲ್ಲವೆ ? ಯಾರನ್ನೋ ಮೆಚ್ಚಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರು ಆಗಿರುವ ದೇಶದ ದುರ್ಬಲರ ಪ್ರತೀಕವಾಗಿರುವ,ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತಿರುವ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕೆಟ್ಟದ್ದಾಗಿ ಬಿಂಬಿಸುವುದು ಕೆಟ್ಟಸಂಸ್ಕೃತಿಯ ಸಂಕೇತವಲ್ಲದೆ ಬೇರೇನೂ ಅಲ್ಲ.

‌‌‌ ‌ ೧೧.೦೫.೨೦೨೫