ನರೇಗಾ ಕೂಲಿ ದರ ಹೆಚ್ಚಳಕ್ಕೆ CEO ಸೂಚನೆ

ಯಾದಗಿರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ದಿನದ ಕೂಲಿ ದರವನ್ನು 370ರೂ ಗಳಿಗೆ ಹೆಚ್ಚಳ ಮಾಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊರಡಿಸಿದೆ ಎಂದು ಯಾದಗಿರಿ ಜಿಪಂ ಸಿಇಒ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ. ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ದಿನದ ಕೂಲಿ ದರ 349 ರು.ಗಳಿದ್ದು, 2025ನೇ ಸಾಲಿನ ಏಪ್ರಿಲ್‌ದಿಂದ 370 ರು.ಗಳ ದಿನದ ಕೂಲಿದರ ನಿಗದಿಪಡಿಸಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಅಕುಶಲ ಕೂಲಿ ಕೆಲಸ ಕೊಡಲಾಗುತ್ತದೆ. ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ 37 ಸಾವಿರ ರು.ಗಳ ಕೂಲಿ ಹಣ ಪಡೆದುಕೊಳ್ಳಬಹುದು. ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಗಂಡು ಹೆಣ್ಣಿಗೂ 370 ರು.ಗಳ ಸಮಾನ ಕೂಲಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Reply