ಹೊಸಕೇರಾ,ವನದುರ್ಗ, ಚನ್ನೂರ, ಶೆಟ್ಟಿಕೇರಾ, ಕಾಡಂಗೇರ.ಬಿ, ಚಾಮನಾಳ ಗ್ರಾಮದ ವಿವಿಧ ಕಾಮಗಾರಿ ವೀಕ್ಷಿಸಿದ ಸಚಿವ ದರ್ಶನಾಪುರ

ವಿವಿಧ ಕಾಮಗಾರಿ ಪರಿಶೀಲಿಸಿದ ದರ್ಶನಾಪೂರ

ಶಹಾಪುರ: ರೈತಾಪಿ ವರ್ಗ ಹಾಗೂ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ಉತ್ತಮ ರಸ್ತೆಯ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಿದಕ್ಕೆ ಇಂದು ತಾಲೂಕಿನ ಬಹುತೇಕ ಹಳ್ಳಿಗಳ ರಸ್ತೆಗಳು ಸುಸಜ್ಜಿತವಾಗಿ ನಿರ್ಮಾಣವಾಗಿವೆ. ಕೆಲವು ರಸ್ತೆಗಳು ನಿರ್ಮಾಣದ ಹಂತದಲ್ಲಿವೆ. ಸರ್ಕಾರದ ಕೆಕೆಆರ್‌ಡಿಬಿ ಸೇರಿ ವಿವಿಧ ಅನುದಾನಗಳ ಸಂಪೂರ್ಣ ಸದ್ಬಳಕೆ ಮಾಡಿದ ಸಂತೃಪ್ತಿ ನಮಗಿದೆ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ತಾಲೂಕಿನ ಹೊಸಕೇರಾ, ವನದುರ್ಗ, ಚನ್ನೂರ, ಶೆಟ್ಟಿಕೇರಾ, ಕಾಡಂಗೇರ.ಬಿ, ಚಾಮನಾಳ ವಿವಿಧ ಗ್ರಾಮೀಣ ಭಾಗದ ರಸ್ತೆಗಳ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಹೊಸಕೇರಾ, ವನದುರ್ಗ ಆಗಲೀಕರಣದ ಚರಂಡಿ ಸಿಡಿ ರಸ್ತೆಯ ಕಾಮಗಾರಿ ಸೇರಿ 5 ಕೋಟಿ ರೂ. ವೆಚ್ಚದಲ್ಲಿ, 3 ಕಿ.ಮೀ. ರಸ್ತೆ ಕಾಮಗಾರಿ, ವನದುರ್ಗ, ಶೆಟ್ಟಿಕೇರಾ ರಸ್ತೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಶೆಟ್ಟಿಕೇರಾ ಗ್ರಾಮದ ಮುಂಭಾಗದಲ್ಲಿ ಸಿಸಿ ರಸ್ತೆ ಕಾಮಗಾರಿ, ಚನ್ನೂರು, ಚಾಮನಾಳ 15.50 ಕೋಟಿ ವೆಚ್ಚದಲ್ಲಿನ ರಸ್ತೆ ಕಾಮಗಾರಿಗಳು ತಾಲೂಕಾ ಕೇಂದ್ರಗಳಿಗೆ ತಲುಪಲು ಸಾಕಷ್ಟು ಅನುಕೂಲವಾಗಿದೆ ಎಂದರು.

ಚಾಮನಾಳ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. ಈಗಾಗಲೇ 42 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಭರದಿಂದ ನಡೆದಿದೆ. ಬರುವ ದಿನದಲ್ಲಿ ಇಡೀ ತಾಲೂಕಿನ ಹೋಬಳಿ ಗ್ರಾಮದಲ್ಲಿ ರಸ್ತೆಗಳ ಅಭಿವೃದ್ಧಿಪಡಿಸುವುದು ಮೊದಲ ಉದ್ದೇಶವಾಗಿದೆ ಎಂದರು. ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಶಾಸಕರ ಅನುದಾನಲ್ಲಿ 10 ಲಕ್ಷ ರೂ. ಕಾಯ್ದಿರಿಸಿದ್ದು, ಡಿಸಿ ಮತ್ತು ಜಿಪಂ ಸಿಇಒ ನೇತೃತ್ವದ ಜವಾಬ್ದಾರಿಯಾಗಿದೆ. ಅವಶ್ಯಕತೆ ಇದ್ದೆಡೆ ಸೂಕ್ತವಾಗಿ ಪರಿಶೀಲಿಸಿ ಕೊಳವೆಭಾವಿ ಕೊರೆಸುವುದು, ಪೈಪ್‌ ಲೈನ್ ರಿಪೇರಿ ಸೇರಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಗಮನಹರಿಸಲು ತಿಳಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಬಸವರಾಜಪ್ಪಗೌಡ ತಂಗಡಗಿ, ಶಿವುಮಹಾಂತ ಚಂದಾಪುರ ಇದ್ದರು.