ಮುಸ್ಲಿಮರಿಗೆ ನೀಡುವ 4% ಮೀಸಲಾತಿಯನ್ನು ವಿರೋಧಿಸುವುದು ಸಂವಿಧಾನಬಾಹಿರ ನಡೆ : ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು 

ಮುಸ್ಲಿಮರಿಗೆ ನೀಡುವ 4% ಮೀಸಲಾತಿಯನ್ನು ವಿರೋಧಿಸುವುದು ಸಂವಿಧಾನಬಾಹಿರ ನಡೆ

ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿನ ಕರ್ನಾಟಕ ಸರಕಾರವು ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿಯನ್ನು ನೀಡುವ ಮೂಲಕ ಐತಿಹಾಸಿಕ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ‘ ಇದು ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದ ಭಾಗವೆಂದೂ,ಮುಸ್ಲಿಂ ತುಷ್ಟೀಕರಣ ನೀತಿ ಎಂದೂ ಬಗೆದು ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ’ ಹೇಳಿದ್ದಾರೆ.ಮುಂದುವರೆದು ಅವರು ಇದು ಸಂವಿಧಾನ ವಿರೋಧಿ ನಡೆ ಎಂದು ತಮ್ಮ ಮೂಗಿನ ನೇರಕ್ಕೆ ಸಂವಿಧಾನವನ್ನು ಅರ್ಥೈಸಿದ್ದಾರೆ. ಮೀಸಲಾತಿಗೆ ಅರ್ಹರೇ ಅಲ್ಲದ,ಎಲ್ಲ ಸ್ಥಾನಮಾನ,ಹಕ್ಕು -ಅವಕಾಶಗಳನ್ನು ಹೊಂದಿರುವ ಮುಂದುವರೆದ ಬ್ರಾಹ್ಮಣರು,ಜೈನರು,ಪಾರ್ಸಿಗಳಂತಹ ಸಮುದಾಯಗಳ ಜನರಿಗೆ ಕೇಂದ್ರದ ಬಿಜೆಪಿ ಸರಕಾರವು Economically weaker section ಎಂದು ಪರಿಗಣಿಸಿ ಉದ್ಯೋಗ ಮತ್ತಿತರ ಅವಕಾಶಗಳಲ್ಲಿ 10% ಮೀಸಲಾತಿ ನೀಡಿರುವಾಗ ಕರ್ನಾಟಕ ಸರಕಾರವು ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲು ನೀಡುವುದು ಹೇಗೆ ಸಂವಿಧಾನ ವಿರೋಧಿ ನಡೆಯಾಗುತ್ತದೆಯೋ ಅವರೇ ವಿಚಾರಿಸಬೇಕು.

‌ ಕರ್ನಾಟಕದ ಎಲ್ಲ ಮುಸ್ಲಿಮರು ಶ್ರೀಮಂತರೇನಲ್ಲ.ಕರ್ನಾಟಕದ ಪ್ರಜೆಗಳಾಗಿ ಮುಸ್ಲಿಮರಿಗೂ ಉನ್ನತಿಯ, ಉದ್ಧಾರದ ಹಕ್ಕು ಇದೆ.ಪ್ರಜಾಪ್ರಭುತ್ವದಲ್ಲಿ ಮತಚಲಾಯಿಸುವ ಹಕ್ಕುಳ್ಳ ಮುಸ್ಲಿಂ ಸಮುದಾಯವು ತಾವು ಮತಚಲಾಯಿಸಿದ ಸರಕಾರ‌ ಒಂದರಿಂದ ತಮ್ಮ ಹಕ್ಕುಗಳನ್ನು ಕೇಳುವುದು ಹೇಗೆ ಸಂವಿಧಾನ ವಿರೋಧಿಯಾಗುತ್ತದೆ? ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳು ಮತ್ತು ‌ಇತರ ಹಿಂದುಳಿದ ವರ್ಗಗಳಿಗೆ ಸರಕಾರಿ ಗುತ್ತಿಗೆಗಳಲ್ಲಿ ಈಗಾಗಲೆ ಮೀಸಲಾತಿ ನೀಡಲಾಗಿದೆ.ಅದರಂತೆ ಈಗ ಮುಸ್ಲಿಮರಿಗೆ 4% ಮೀಸಲಾತಿ ನೀಡಲಾಗಿದೆ. ಸರಕಾರದ ಈ ಕ್ರಮವು ಮುಸ್ಲಿಂ ಸಮುದಾಯವು ಆರ್ಥಿಕವಾಗಿ ಮುಂದುವರೆಯಲು ನೆರವಾಗುತ್ತದೆಯೇ ಹೊರತು ಅದರಿಂದ ಇತರರಿಗೆ ನಷ್ಟವೇನೂ ಆಗುವುದಿಲ್ಲ.ಅಷ್ಟಕ್ಕೂ ಕರ್ನಾಟಕದ ಬೊಕ್ಕಸಕ್ಕೆ ಮುಸ್ಲಿಮರ ತೆರಿಗೆಯ ಕೊಡುಗೆಯೂ ಇದೆಯಲ್ಲ.ತೆರಿಗೆದಾರರಾಗಿ ಮುಸ್ಲಿಮರು ಸರಕಾರಿ ಗುತ್ತಿಗೆಗಳಲ್ಲಿ 4% ಮೀಸಲಾತಿ ಪಡೆಯುವುದು ಹೇಗೆ ಸಂವಿಧಾನಬಾಹಿರ ನಡೆಯಾಗುತ್ತದೆ?

ಮುಸ್ಲಿಮರೂ ಭಾರತದ ಪ್ರಜೆಗಳೇ ಅಲ್ಲವೆ? ಭಾರತೀಯ ಎಲ್ಲ ಜಾತಿ,ಜನಾಂಗಗಳಂತೆ ಮುಸ್ಲಿಮರಿಗೂ ಉದ್ಯೋಗ,ಉನ್ನತಿ ಮತ್ತಿತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಅವಕಾಶಗಳನ್ನು ನಮ್ಮ ಸಂವಿಧಾನವೇ ನೀಡಿದೆ.’ಧಾರ್ಮಿಕ ಅಲ್ಪಸಂಖ್ಯಾತರು ‘ಎನ್ನುವುದು ಸಂವಿಧಾನದ ಪರಿಕಲ್ಪನೆಯೇ ಹೊರತು ಅದನ್ನೇನು ರಾಹುಲ್ ಗಾಂಧಿಯವರಾಗಲಿ ಅಥವಾ ಸಿದ್ಧರಾಮಯ್ಯನವರ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರಕಾರವಾಗಲಿ ಹೊಸದಾಗಿ ‌ಪ್ರತಿಷ್ಠಾಪಿಸಿಲ್ಲ.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ಕೂಡ ತಮ್ಮ ಜೀವದ ಹಂಗು ತೊರೆದು ಹೋರಾಡಿದ್ದಾರೆ,ಪ್ರಾಣಕಳೆದುಕೊಂಡಿದ್ದಾರೆ.ಭಾರತದ ಸ್ವಾತಂತ್ರ್ಯ ಹೋರಾಟ ಕೇವಲ ಹಿಂದೂಗಳ ಹೋರಾಟವೇನೂ ಅಲ್ಲ,ಅದು ಸಮಸ್ತಭಾರತೀಯರನ್ನು‌ಒಳಗೊಂಡ ದೇಶಭಕ್ತಿಯ,ಭಾರತದ ದಾಸ್ಯ ವಿಮೋಚನೆಯ ಹೋರಾಟವಾಗಿತ್ತು.ವಾಸ್ತವ ಹೀಗಿರುವಾಗ ಮುಸ್ಲಿಮರನ್ನು ಭಾರತೀಯ ಪ್ರಜೆಗಳೇ ಅಲ್ಲವೇನೋ ಎಂಬಂತೆ ನೋಡುವ ಅಲ್ಪಬುದ್ಧಿ ಏಕೆ? ಸಣ್ಣತನವೇಕೆ ?

ಹಿಂದೂ ದೇವರುಗಳ ಜಾತ್ರೆ,ಉತ್ಸವ ಸಂದರ್ಭಗಳಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಗಳಿಗೆ ವ್ಯಾಪಾರನಿಷೇಧಿಸುವುದು ‘ ಘನಕಾರ್ಯ’ ಎಂಬಂತೆ ವರ್ತಿಸುವ ಮಾನವತೆಗೆ ಅಪಚಾರ ಎಸಗುವ ಧರ್ಮಬಾಹಿರ ನಡೆಯ ಜನರು ಕರ್ನಾಟಕ ಸರಕಾರ ಮುಸ್ಲಿಮರ ಉನ್ನತಿಗಾಗಿ 4% ಮೀಸಲಾತಿ ನೀಡಿದ್ದನ್ನು ಪ್ರಶ್ನಿಸುವ ನೈತಿಕ ಹಕ್ಕು ಹೊಂದಿಲ್ಲ.ಸಂವಿಧಾನವನ್ನು ತಮ್ಮ‌ಮನಸ್ಸಿಗೆ ತೋಚಿದಂತೆ ಅರ್ಥೈಸುವವರ ಕೈಗಳಲ್ಲಿ ಸಿಕ್ಕು ಸಂವಿಧಾನವು ನಲಗುತ್ತಿರುವ ದಿನಗಳಲ್ಲಿ ಮುಸ್ಲಿಮರು ಸೇರಿದಂತೆ ದೀನ ದುರ್ಬಲ ಸಮುದಾಯಗಳು ಬದುಕುವುದೇ ದುಸ್ತರವಾಗಿದೆ.ಸಂವಿಧಾನದ ಕಾರಣದಿಂದಲೇ ಉನ್ನತ ಸ್ಥಾನಮಾನಗಳನ್ನು ಅನುಭವಿಸಿ,ಆನಂದಿಸುವವರು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ತಮ್ಮ ಬದ್ಧತೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

‌16.10.2025