ಶಹಾಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರನ್ನಾಗಿ ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಡಾ. ಭೀಮಣ್ಣ ಮೇಟಿ ಅವರಿಗೆ ಕರ್ನಾಟಕ ರಾಜ್ಯ ಪ್ರಚಾರ ಸಮಿತಿ ನೇಮಕ ಮಾಡಿ ಆದೇಶಿಸಿದೆ.
ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ವಿನಯ ಕುಮಾರ್ ಸೊರಕೆ ಅವರು ಆದೇಶಿಸಿದ್ದು, ಕೂಡಲೇ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಜಿಲ್ಲೆ, ಬ್ಲಾಕ್ ಕ್ಷೇತ್ರಗಳ ಪ್ರಚಾರ ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡಿ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಿ ಪ್ರವೃತ್ತರಾಗುವಂತೆ ಸೂಚಿಸಿದ್ದಾರೆ.
ಡಾ. ಭೀಮಣ್ಣ ಮೇಟಿಯವರು 2023ರ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜಿಲ್ಲೆಯಾದ್ಯಂತ ಹಲವಾರು ಜನಮನ ಕಾರ್ಯಗಳನ್ನು ಕೈಗೊಳ್ಳುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆಗೈದು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುರವರ ಹೆಸರಿನಡಿ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹಲವಾರು ಕಡೆ ಶಿಕ್ಷಣ ಕೇಂದ್ರಗಳನ್ನು ತೆಗೆದಿದ್ದಾರೆ. ಶೈಕ್ಷಣಿಕ ಕ್ರಾಂತಿಯನ್ನೆಗೈದ ಭೀಮಣ್ಣ ಮೇಟಿಯವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಒಬ್ಬ ನಿಷ್ಠಾವಂತ ಕಾರ್ಯಕರ್ತರಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದು, 2023ರ ವಿಧಾನಸಭಾ ಟಿಕೆಟ್ ತಪ್ಪಿದರೂ ಕೂಡ ಯಾದಗಿರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಕೈಗೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣಿಭೂತರಾಗಿದ್ದರು. ಪಕ್ಷಕ್ಕಾಗಿ ಅವರ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಪ್ರಚಾರ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಭೀಮಣ್ಣ ಮೇಟಿ ಅವರಿಗೆ ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ ಸ್ಥಾನ ನೀಡಿದ್ದಕ್ಕಾಗಿ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.