ಶಹಾಪುರ : ಜನರಲ್ಲಿ ಅಧ್ಯಾತ್ಮಿಕ ಚಿಂತನೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತಿ ಅವರ ಬದುಕನ್ನು ಸುಧಾರಿಸುವಲ್ಲಿ ಮಠಗಳು ಮಹತ್ತರವಾದ ಕಾರ್ಯನಿರ್ವಹಿಸುತ್ತಿವೆ ಎಂದು ಬೀದರನ ಡಾ. ಶಿವಕುಮಾರ ಸ್ವಾಮಿಜಿ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಭೀಮರಾಯನಗುಡಿಯಲ್ಲಿ ಸಾಧಕಾಶ್ರಮ ಸಿದ್ಧಾರೂಢ ಮಠದಲ್ಲಿ ಜರುಗಿದ ೩೯ನೇ ವರ್ಷದ ಜ್ಞಾನದಾಸೋಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ತನ್ನ ತಾನರಿದಂಗೆ ಭಿನ್ನ ಭಾವನೆಯಿಲ್ಲ ಎಂಬ ಸದ್ಗುರು ಸಿದ್ಧಾರೂಢ ವಿಚಾರಗಳನ್ನು ಆಧರಿಸಿ ಪ್ರವಚನ ನೀಡಿದ ಅವರು ಶ್ರೇಷ್ಟ ಮನುಷ್ಯ ಜನ್ಮದ ಸಾರ್ಥಕತೆಗೆ ಕಾರಣಿಕರ್ತನಾದ ಭಗವಂತನನ್ನು ಮತ್ತು ಸದ್ಗುರುವನ್ನು ಸದಾ ಸ್ಮರಿಸಬೇಕು, ಪ್ರಾರ್ಥಿಸಬೇಕು, ನಾಮಸ್ಮರಣೆ ಮಾಡಬೇಕು ಎಂದು ಹೇಳಿದರು. ಗುರುವಿನ ದರ್ಶನ-ಮಾರ್ಗದರ್ಶನ ಸಿಗದ ಹೊರತು ಯಾರೊಬ್ಬರ ಬದುಕು ಪರಿಪೂರ್ಣವಾಗಲಾರದು. ಭಗವಂತ ಮತ್ತು ಸದ್ಗುರುವಿನ ಅನುಗ್ರಹದಿಂದ ಭಕ್ತಿ ಮಾರ್ಗದಲ್ಲಿ ಸಾಗಿದರೆ ಮನುಷ್ಯನ ಬದುಕಿಗೆ ಶ್ರೇಷ್ಠತೆ ದೊರೆಯುತ್ತದೆ ಎಂದು ಹಲವಾರು ನಿದರ್ಶನಗಳ ಮೂಲಕ ತಿಳಿಸಿದರು.
ಮಾತೋಶ್ರೀ ಲಕ್ಷ್ಮಿ ತಾಯಿಯವರು ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾತೋಶ್ರೀ ಜ್ಞಾನೇಶ್ವರಿದೇವಿ ತಾಯಿ, ಅದ್ವೆತಾನಂದ ಸ್ವಾಮಿಜಿ, ಸೋಮೇಶ್ವರಾನಂದ ಸ್ವಾಮಿಜಿ, ಮಾತೋಶ್ರೀ ಸಂಪೂರ್ಣಾನಂದಮಯಿ, ಮಾತೋಶ್ರೀ ನಿರಂಜನಾನಂದಮಯಿ ತಾಯಿ, ಗೋಪಾಲರಾವ್ ಶಾಸ್ತ್ರಿಗಳು ಮುಂತಾದ ಪೂಜ್ಯರು ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಿ ದುರ್ಗಪ್ಪ ಉಕ್ಕಿನಾಳ, ಸಾಯಬಣ್ಣ ಶಾಂತಪ್ಪ ಕಾಚಾಪೂರ, ಜ್ಯೋತಿ ಶಿವಪ್ಪ ನರಬೋಳಿ, ಭೀಮರಾಯ ಅಮಲಪ್ಪ ಬೇವಿನಕಟ್ಟಿ ಮುಂತಾದ ಭಕ್ತರು ಡಾ. ಶಿವಕುಮಾರ ಸ್ವಾಮಿಜಿಯವರಿಗೆ ತುಲಾಭಾರ ಸೇವೆ ಸಲ್ಲಿಸಿದರು.
ಸಿದ್ಧಾರೂಢ ಮಠದ ಸಮಿತಿಯ ಸದಸ್ಯರಾದ ಎಸ್.ಎಸ್. ದೇಸಾಯಿ, ಸಿದ್ಧಯ್ಯಸ್ವಾಮಿ ಬಂಡೆಗೊಳ ಮಠ, ಎಸ್.ಬಿ. ಹಾದಿಮನಿ, ಮಲ್ಲಿಕಾರ್ಜುನ ಕಲಬುರ್ಗಿ, ಮುಕುಂದ ಯಾಳಗಿ, ಮಲ್ಲಿಕಾರ್ಜುನ ದಿಗ್ಗಿ, ಗೌಡಪ್ಪಗೌಡ ಉಮರದೊಡ್ಡಿ, ದುರ್ಗಪ್ಪ ಉಕ್ಕಿನಾಳ, ಶಾಂತಪ್ಪ ಹಳ್ಳಳ್ಳಿ, ಸುನೀಲ ಅರಿಕೇರಿ ಸಗರ ಮುಂತಾದವರು ಉಪಸ್ಥಿತರಿದ್ದರು.
Post Views: 38