ಪುಣ್ಯಕ್ಷೇತ್ರಗಳ ಶುಚಿತ್ವ ,ಸಚಿವ ಈಶ್ವರ ಖಂಡ್ರೆಯವರ ಶ್ಲಾಘನೀಯ ಕಾರ್ಯ

 

ಪುಣ್ಯಕ್ಷೇತ್ರಗಳ ಶುಚಿತ್ವ ,ಸಚಿವ ಈಶ್ವರ ಖಂಡ್ರೆಯವರ ಶ್ಲಾಘನೀಯ ಕಾರ್ಯ

‌ ಮುಕ್ಕಣ್ಣ ಕರಿಗಾರ

ಜೀವಪರ,ಪರಿಸರ ಮತ್ತು ಅರಣ್ಯಪರ ತಮ್ಮ ಸ್ಪಷ್ಟ ನಿಲುವು ಮತ್ತು ನಡೆಗಳಿಂದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಂಪುಟದ. ‘ ವಿಶಿಷ್ಟ ಸಚಿವರು’ ಎಂದು ಗುರುತಿಸಿಕೊಂಡಿರುವ ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಈಶ್ವರ ಬಿ ಖಂಡ್ರೆಯವರು ಈಗ ಪುಣ್ಯಕ್ಷೇತ್ರಗಳ ಶುಚಿತ್ವ ಕಾಪಾಡುವ ಕಾಳಜಿ ತೋರಿಸುವ ಮೂಲಕ ರಾಜ್ಯದ ಜನತೆಯ ಗಮನ ಸೆಳೆದಿದ್ದಾರೆ.ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ’ ಪುಣ್ಯಕ್ಷೇತ್ರಗಳ ಬಳಿ ಸೋಪು,ಶ್ಯಾಂಪೂ ಮಾರಾಟ ನಿಷೇಧಿಸಿ’ ಎಂದು ಸೂಚಿಸುವ ಮೂಲಕ (ಪ್ರಜಾವಾಣಿ ಮಾರ್ಚ್ 10,2025) ಅವರು ತಮ್ಮ ಪರಿಸರಪರ ಪ್ರಾಮಾಣಿಕ ಕಾಳಜಿಯನ್ನು ಮೆರೆದಿದ್ದಾರೆ.

‘ ಪುಣ್ಯಕ್ಷೇತ್ರಗಳ ಬಳಿ ಇರುವ ಜಲಮೂಲಗಳಲ್ಲಿ ಭಕ್ತರು,ಪ್ರವಾಸಿಗರು ಸ್ನಾನಮಾಡಿ ಉಳಿದ ಶ್ಯಾಂಪೂ ಮತ್ತು ಸೋಪಿನ ಸ್ಯಾಷೆಗಳನ್ನು ದಂಡೆಯಲ್ಲಿ ಎಸೆದು ಹೋಗುತ್ತಿದ್ದಾರೆ.ಅಲ್ಲಿನ ಪರಿಸರದಲ್ಲಿ ಕಸದ ಪ್ರಮಾಣ ಹೆಚ್ಚುವುದಲ್ಲದೆ,ಈ ರಾಸಾಯನಿಕ ವಸ್ತು ಮತ್ತು ಪ್ಲಾಸ್ಟಿಕ್ ಜಲಮೂಲವನ್ನು ಸೇರುತ್ತಿವೆ.ಇದರಿಂದ ನೀರು ಕಲುಷಿತವಾಗುತ್ತಿದೆ.ಜಲಚರಗಳೂ ಸಾಯುತ್ತಿವೆ’ ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಈಶ್ವರ ಖಂಡ್ರೆಯವರು. ಈಶ್ವರ ಬಿ ಖಂಡ್ರೆಯವರು ಪುಣ್ಯಕ್ಷೇತ್ರಗಳು ಕೊಳೆತುನಾರುತ್ತಿರುವ,ಮಲಿನಗೊಳ್ಳುತ್ತಿರುವ ವಾಸ್ತವದತ್ತ ಗಮನಸೆಳೆದು ಆ ನಿಟ್ಟಿನಲ್ಲಿ ಇಲಾಖೆಯು ಸ್ಪಂದಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.ಮುಂದುವರೆದು ಈಶ್ವರ ಖಂಡ್ರೆಯವರು ಪುಣ್ಯಕ್ಷೇತ್ರಗಳ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಅಗ್ಗದ ಬೆಲೆಯಲ್ಲಿ ದೊರೆಯುವ ಶ್ಯಾಂಪು,ಸಾಬೂನುಗಳ ಮಾರಾಟವನ್ನು ನಿಷೇಧಿಸಬೇಕು’ ಎಂದು ನೀಡಿದ ಅವರ ಸೂಚನೆಯು ಸಮಸ್ಯೆಯಪರಿಹಾರಕ್ಕೆ ಸೂಕ್ತ ಕ್ರಮವಾಗಿದೆ.ಪುಣ್ಯಕ್ಷೇತ್ರಗಳಾದ ನದಿ,ಸರೋವರ,ಪುಷ್ಕರಣಿ ಮತ್ತು ಕಲ್ಯಾಣಿಗಳು ಜನರ ಅಜ್ಞಾನ ಮತ್ತು ಮೂಢನಂಬಿಕೆಗಳ ಕಾರಣದಿಂದ ಹಾಳಾಗುತ್ತಿರುವ ಬಗ್ಗೆ ವ್ಯಕ್ತಪಡಿಸಿರುವ ಸಚಿವರ ಕಾಳಜಿಯು ಶ್ಲಾಘನೀಯ. ತೀರ್ಥಕ್ಷೇತ್ರಗಳಲ್ಲಿ ಜನರು ತಾವು ಸ್ನಾನಮಾಡಿ ಬಟ್ಟೆಗಳನ್ನು ನೀರಿನಲ್ಲಿ ಹರಿಯಬಿಡುತ್ತಿರುವುದರಿಂದ ಆಗುವ ಮಾಲಿನ್ಯದ ಸಮಸ್ಯೆಯ ಬಗ್ಗೆಯೂ ಈಶ್ವರ ಬಿ ಖಂಡ್ರೆಯವರು ಗಮನಸೆಳೆದಿದ್ದಾರೆ.

ಪುಣ್ಯಕ್ಷೇತ್ರಗಳ ಜಲಮೂಲಗಳಿರುವ ಸ್ಥಳಿಯಾಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯತಿಗಳು ಮತ್ತು ನಗರಾಡಳಿತ ಸಂಸ್ಥೆಗಳು ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ಚರ ಬಿ ಖಂಡ್ರೆಯವರ ಈ ಜೀವಪರ ,ಪರಿಸರ ಕಾಳಜಿಗೆ ಪೂರಕವಾಗಿ ಸ್ಪಂದಿಸುವ ಕಾರ್ಯ ಮಾಡಿದರೆ ಪುಣ್ಯಕ್ಷೇತ್ರಗಳ ಶುಚಿತ್ವ ಕಾಪಾಡಬಹುದು.ಪುಣ್ಯಕ್ಷೇತ್ರಗಳ ಶುಚಿತ್ವ ಕಾಪಾಡುವುದು ಸ್ಥಳೀಯಾಡಳಿತ ಸಂಸ್ಥೆಗಳ ಕರ್ತವ್ಯವೂ ಹೌದು. ಸ್ಥಳಿಯಾಡಳಿತ ಸಂಸ್ಥೆಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯಂತಹ ಹಲವು ಇಲಾಖೆಗಳು ಕೈಜೋಡಿಸಬೇಕಿದೆ.

ವಾರಣಾಸಿಯಲ್ಲಿ ಗಂಗಾನದಿಯ ಸ್ನಾನದಲ್ಲಿ ಸಾಬೂನು ಮತ್ತು ಶ್ಯಾಂಪುಗಳ ಬಳಕೆಯನ್ನು ನಿಷೇಧಿಸಲಾಗಿದೆ. ವಾರಣಾಸಿಯ ಮುನ್ಸಿಪಾಲಿಟಿಯು ಈ ಬಗ್ಗೆ ನಿಗಾವಹಿಸಿದೆ.ಹಾಗೆಯೇ ಪುಣ್ಯಕ್ಷೇತ್ರಗಳು,ತೀರ್ಥಕ್ಷೇತ್ರಗಳು ಇರುವ ಸ್ಥಳಿಯಾಡಳಿತ ಸಂಸ್ಥೆಗಳು ಆಸಕ್ತಿ ವಹಿಸಿದರೆ ಅಲ್ಲಿಯ ಜಲಮೂಲಗಳ ಶುಚಿತ್ವ ಕಾಪಾಡುವುದು ಸಮಸ್ಯೆಯೇನಲ್ಲ.ಜೊತೆಗೆ ಪುಣ್ಯಕ್ಷೇತ್ರಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಕೂಡ ಸರಕಾರದೊಂದಿಗೆ ಕೈಜೋಡಿಸಬೇಕು.ಸ್ಥಳೀಯರು ಪುಣ್ಯಕ್ಷೇತ್ರಗಳ ಶುಚಿತ್ವಕ್ಕಾಗಿ ಕಾರ್ಯಪಡೆಗಳನ್ನು ರಚಿಸಿಕೊಂಡು ಜಲಮೂಲಗಳ ಶುಚಿತ್ವಕ್ಕೆ ಮುಂದಾಗಬೇಕು.ಯುವಕ ಸಂಘಟನೆಗಳು,ಸರ್ಕಾರೇತರ ಸಂಸ್ಥೆಗಳು ಪುಣ್ಯಕ್ಷೇತ್ರಗಳ ಜಲಮೂಲಗಳ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಮುಂದೆ ಬರಬೇಕು.ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡುವವರಿಗೆ ಸಾಬೂನು,ಶ್ಯಾಂಪುಗಳನ್ನು ಬಳಸದಂತೆ ಬದಲಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿ ಸ್ನಾನ ಮಾಡುವಂತೆ ತಿಳಿವಳಿಕೆ ನೀಡಬೇಕು.ನದಿ,ಸರೋವರಗಳಲ್ಲಿ ವಸ್ತ್ರಗಳನ್ನು ಬಿಡುವ ಬದಲು ಭಿಕ್ಷುಕರು ಮತ್ತು ನಿರ್ಗತಿಕರಿಗೆ ವಸ್ತ್ರದಾನ ಮಾಡುವಂತೆ ಪ್ರೇರೇಪಿಸಬೇಕು.ಪುಣ್ಯಕ್ಷೇತ್ರಗಳ ಶುಚಿತ್ವ ಕಾಪಾಡುವುದೇ ಪುಣ್ಯ ಕಾರ್ಯ ಎನ್ನುವ ಭಾವನೆ ಜನರಲ್ಲಿ ಮೂಡಬೇಕು.

ನೂರಾರು ಕೋಟಿ ಅನುದಾನದ ಅವಶ್ಯಕತೆಯ ಕಾಮಗಾರಿಗಳನ್ನು ಪ್ರಸ್ತಾಪಿಸದೆ ಈಶ್ವರ ಬಿ ಖಂಡ್ರೆಯವರು ಅಲ್ಪಸ್ವಲ್ಪ ಖರ್ಚಿನೊಂದಿಗೆ ಜನರ ಸಹಭಾಗಿತ್ವದಲ್ಲಿ ಕೈಗೊಳ್ಳಬಹುದಾದ ಜನೋಪಯೋಗಿ ಕಾರ್ಯಗಳತ್ತ‌ ಅರಣ್ಯ ಮತ್ತು ಪರಿಸರ ಇಲಾಖೆಯನ್ನು ತೊಡಗಿಸುತ್ತಿದ್ದಾರೆ.ಸರಕಾರಿ ಬೊಕ್ಕಸಕ್ಕೆ ಭಾರವಾಗದೆ ಪರಿಸರದ ಭಾರ ಇಳಿಸುವ ಸ್ತುತ್ಯಕಾರ್ಯದತ್ತ ಚಿಂತಿಸುತ್ತಿರುವ ಈಶ್ಚರ ಬಿ ಖಂಡ್ರೆಯವರ ಜೀವಪರ ಪರಿಸರಪರ ಕಾಳಜಿಗೆ ಅಭಿನಂದನೆಗಳನ್ನು ಸಲ್ಲಿಸೋಣ.

‌ ೧೦.೦೩.೨೦೨೫